ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – ೧೨೮
ಬೆಂಗಳೂರು: ಜೀವನದಲ್ಲಿ ಒಮ್ಮೆ ಸೋತಾಗ ಮತ್ತೆ ಏಳಲು ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಆತ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಕತ್ತಲೆ ಕಳೆದ ನಂತರ ಸೂರ್ಯ ಉದಯಿಸುತ್ತಾನೆ ಎಂಬ ನಂಬಿಕೆ ಇರಬೇಕು. ಪೂರ್ಣ ವಿರಾಮವೇ ಕೊನೆ ಎಂದು ಭಾವಿಸದೆ ಮತ್ತೊಂದು ವಾಕ್ಯ ರಚನೆ ಮಾಡಬಹುದು ಎಂಬ ಸತ್ಯ ಅರಿತುಕೊಂಡಿರಬೇಕು. ಏಕೆಂದರೆ, ಸೋತು ಸುಣ್ಣವಾದವರು ಸಾಮ್ರಾಜ್ಯ ಕಟ್ಟಿ ಮೆರೆದ ಉದಾಹರಣೆಗಳು ನಮ್ಮಲ್ಲಿವೆ. ಒಬ್ಬ ವ್ಯಕ್ತಿ ಹೇಗೆ ಸಾಧಿಸಿ ತೋರಿಸಬಹುದು ಎಂಬ ಬಗ್ಗೆ ಪರಿಶ್ರಮ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಈಶ್ವರ್ ಶನಿವಾರ ವಿಶ್ವವಾಣಿ ಕ್ಲಬ್ ಹೌಸ್ ವಿಶೇಷ ಕಾರ್ಯಕ್ರಮದಲ್ಲಿ ಹೇಳಿದ್ದು ಹೀಗೆ.
ನಮ್ಮ ಬಗ್ಗೆ ಕರ್ನಾಟಕವೇ ಓದುವ ಹಾಗೆ ನಾವು ಓದಬೇಕು. ನಮ್ಮನ್ನು ಕಂಡರ ಆಗದೇ ಇರುವವರು ನಮ್ಮನ್ನು ಬೇಟಿಯಾಗಲು ಮನೆಯ ಬಾಗಿಲಿಗೆ ಬರುವ ಹಾಗೆ ಓದಬೇಕು. ನಾವು ಇಷ್ಟ ಪಟ್ಟು ಓದುವ ವಿಚಾರದ ಕುರಿತಾಗಿ ಅನೇಕರು ಅನೇಕ ರೀತಿಯಲ್ಲಿ ಹೇಳುತ್ತಾರೆ. ಆಗ ಕಿವಿ ಮುಚ್ಚಿಕೊಂಡಿದ್ದು, ಸಾಧನೆಯನ್ನು ಮಾಡಿದ ನಂತರ ಅವರ ಬಾಯಿ ಮುಚ್ಚಬೇಕು ಎಂದು ಹೇಳಿದರು.
ಸಾಧನೆಯ ಹಾದಿಯಲ್ಲಿ: ನಾವು ಸಾಧನೆ ಮಾಡಲು ಹೊರಟಾಗ ಅನೇಕರು ಹೀಗಳೆ ಯುತ್ತಾರೆ. ಕಾಲೆಳೆಯುವ ಪ್ರಯತ್ನದಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ಹೇಳುವವರ ಎದುರೇ ನಾವು ಸೋತಾಗ ಜೀವನವೇ ಸಾಕು ಎನ್ನುವ ನಿರ್ಧಾರವನ್ನೂ ಮಾಡಿ ಬಿಡುತ್ತೇವೆ. ಆ ಸಮಯದಲ್ಲಿ ನಾವು ನಂಬಬಹುದಾದದ್ದು ನಮ್ಮ ಕುಟುಂಬವನ್ನು ಮಾತ್ರ ಎಂದರು.
ಅಪ್ಪ, ಅಮ್ಮ ಮತ್ತು ಸಾಧನೆ: ಹಲವರು ಹೇಳುತ್ತಾರೆ, ನಮ್ಮ ಅಮ್ಮನೇ ನನ್ನ ಸಾಧನೆಗೆ ಕಾರಣ ಎಂದು. ಆದರೆ, ಅಮ್ಮನ
ಸಾಧನೆಗೆ ಅಪ್ಪ ಕಾರಣ ಎಂಬುದನ್ನು ಮರೆಯಬಾರದು. ಸಾಮಾಜಿಕ ಜಾಲಣಗಳಲ್ಲಿ ನಮಗೆ ಲಕ್ಷಾಂತರ ಅನುಯಾಯಿಗಳು ಇರಬಹುದು. ಆದರೆ, ನಮಗೆ ಏನಾದರೂ ಅಪಘಾತವಾದಾಗ ಆಸ್ಪತ್ರೆಯಲ್ಲಿ ನಮ್ಮೊಂದಿಗೆ ಇರುವವರು ಅಪ್ಪ, ಅಮ್ಮ ಅನ್ನುವುದನ್ನು ಮಾತ್ರ ನಾವು ಎಂದಿಗೂ ಮರೆಯಬಾರದು.
ಜೀವನದಲ್ಲಿ ನಾವು ಅದೆಷ್ಟೋ ಬಾರಿ ಅಪ್ಪ, ಅಮ್ಮನಿಗೆ ತಿರುಗಿ ಮಾತನಾಡಿರುತ್ತೇವೆ. ಆದರೆ, ನಮ್ಮ ಏಳಿಗೆಗೆಂದೇ ಶ್ರಮಿಸುವ
ಪಾಲಕರನ್ನು ಯಾವತ್ತೂ ನಿಂದಿಸಬಾರದು. ಬಿಸಿ ರಕ್ತವಿದ್ದಾಗ ಅವರ ಮಹತ್ವ ಅರಿವಿಗೆ ಬರುವುದಿಲ್ಲ. ಬದಲಾಗಿ ನಮ್ಮ ಮಕ್ಕಳು ನಮ್ಮ ವಿರುದ್ಧವಾಗಿ ಹೇಳುವಾಗ ನಮ್ಮ ಅಪ್ಪ, ಅಮ್ಮ ಮಾಡಿದ್ದು ಸರಿ ಇತ್ತು ಅನ್ನುವ ಸತ್ಯ ಅರ್ಥವಾಗುತ್ತದೆ ಎಂದು ತಿಳಿಸಿದರು.
ಭಾಷೆ ಮತ್ತು ಸಾಧನೆ: ಅನೇಕರು ತಮಗೆ ಇಂಗ್ಲಿಷ್ ಬರುವುದಿಲ್ಲ ಎಂದು ಸಾಧನೆಯ ಹಾದಿಯಿಂದ ಹಿಂದುಳಿಯುತ್ತಾರೆ. ಆದರೆ, ಇಂಗ್ಲಿಷ್ ಇರುವುದೇ ತಪ್ಪು ಮಾತನಾಡುವು ದಕ್ಕೆ ಎಂದು ಭಾವಿಸಿ, ನಾವು ಆ ಭಾಷೆ ಮಾತನಾಡುವ ಅಭ್ಯಾಸದಲ್ಲಿ ತೊಡಗಬೇಕು. ಬರುವ ಭಾಷೆಯನ್ನು ಸ್ಪಷ್ಟವಾಗಿ ಉಚ್ಛರಿಸಬೇಕು ಎಂದು ಹೇಳಿದರು.
ಸಾಧನೆಗೆ ಭಯದ ಹಂಗಿರಬಾರದು: ದೇವರ ಕಲ್ಲು ಮತ್ತು ನೆಲದ ಕಲ್ಲು, ಎರಡು ಕಲ್ಲುಗಳು ಜೊತೆಗೆ ಇದ್ದವಂತೆ. ಅನೇಕ ವರ್ಷಗಳ ನಂತರ ಒಂದು ಕಲ್ಲು ದೇವರ ವಿಗ್ರಹ ವಾಗಿತ್ತು. ಇನ್ನೊಂದು ಕಲ್ಲು ದೇವಸ್ಥಾನದಲ್ಲಿ ಎಲ್ಲರೂ ಮೆಟ್ಟುವ ಕಲ್ಲಾಗಿಯೇ
ಉಳಿದು ಹೋಯಿತು. ಆಗ ನೆಲದ ಕಲ್ಲು ದೇವರ ವಿಗ್ರಹವನ್ನು ಕುರಿತು, ನಾನು ನೀನು ಇಬ್ಬರೂ ಒಟ್ಟಿಗೇ ಇದ್ದರೂ ನೀನು ಹೇಗೆ ದೇವರ ವಿಗ್ರಹವಾದೆ ಎಂದು ಕೇಳಿತ್ತಂತೆ. ಅದಕ್ಕೆ ದೇವರ ವಿಗ್ರಹ, ನಾನು ಉಳಿ ಪೆಟ್ಟುಗಳನ್ನು ಸಹಿಸಿಕೊಂಡೆ. ನೀನು ನೋವು ತಡೆಯದೆ ನೆಲದ ಕಲ್ಲಾದೆ ಎಂದು ಉತ್ತರಿಸಿತಂತೆ. ನಮ್ಮ ಸಾಧನೆಯೂ ಅದೇ ರೀತಿ. ಕಷ್ಟ ಸಹಿಸಿಕೊಳ್ಳದೇ ಇದ್ದರೆ ನೆಲದ ಕಲ್ಲಾಗಿಯೇ ಉಳಿಯುತ್ತದೆ ಎಂಬುದನ್ನು ಪ್ರತಿಯೊಬ್ಬರೂ ನೆನಪಲ್ಲಿಟ್ಟುಕೊಳ್ಳಬೇಕು ಎಂದರು.
ಎಲ್ಲವೂ ಸಾಧ್ಯ: ಹತ್ತನೇ ತರಗತಿ ಓದಿದ್ದ ಡಿ.ವಿ.ಜಿ. ಅವರ ಕಗ್ಗಗಳನ್ನು ನಾವಿಂದು ಪದವಿ ಪಠ್ಯದಲ್ಲಿ ಓದುತ್ತೇವೆ. ಆಲ್ ಇಂಡಿಯಾ ರೇಡಿಯೋದಲ್ಲಿ ಧ್ವನಿ ಚೆನ್ನಾಗಿಲ್ಲ ಎಂದು ತಿರಸ್ಕೃತರಾದ ಅಮಿತಾಬ್ ಬಚ್ಚನ್ ಇವತ್ತು ದೇಶದ ಬಿಗ್ ಬಿ ಆಗಿ
ಬೆಳೆದಿದ್ದಾರೆ. ಯಾವುದೋ ಚಿಕ್ಕ ಹಳ್ಳಿಯಿಂದ ಬಂದ ಶ್ರೀದೇವಿ ದೇಶದ ಸೂಪರ್ ಸ್ಟಾರ್ ಆಗುತ್ತಾರೆ. ಚಹಾ ಮಾರುತ್ತಿದ್ದ ವ್ಯಕ್ತಿ
ದೇಶದ ಪ್ರಧಾನಿಯಾಗುತ್ತಾರೆ ಎಂದರೆ ಅದಕ್ಕೆಲ್ಲಾ ಸಾಧನೆ ಮತ್ತು ಪರಿಶ್ರಮ ಕಾರಣ ಎಂದು ಹೇಳಿದರು.
ಪರಿಶ್ರಮ ಅಕಾಡೆಮಿಯ ಗುರಿ: ೩ ವರ್ಷಗಳ ಹಿಂದೆ ೬೦ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಪರಿಶ್ರಮ ಅಕಾಡೆಮಿ ಕಳೆದ
ವರ್ಷ ತನ್ನ ಮೌಲ್ಯಾಧಾರಿತ ಶಿಕ್ಷಣದ ಮೂಲಕ ೨೪೦ ಜನರನ್ನು ಹೊಂದಿತ್ತು. ಸತ್ವಯುತ ಶಿಕ್ಷಣದ ಮೂಲಕ ೫೦೦ ವಿದ್ಯಾರ್ಥಿಗಳಿಗೆ ಉನ್ನತ ಕ್ಷೇತ್ರದಲ್ಲಿ ಸೀಟು ನೀಡುವ ಗುರಿ ಹೊಂದಿದೆ ಎಂದರು.
ವಿಶ್ವೇಶ್ವರ ಭಟ್ ಅವರೊಂದು ಶಕ್ತಿ
ವಿಶ್ವೇಶ್ವರ ಭಟ್ ಅವರೊಂದು ಶಕ್ತಿ. ನನ್ನ ಜೀವನ ಬೀದಿಗೆ ಬಂದಾಗ, ನನ್ನ ತಂದೆ ತಾಯಿ ಮರಣವನ್ನು ಹೊಂದಿದಾಗ ನನ್ನನ್ನು ಕಾಪಾಡಿದ್ದು ವಿಶ್ವೇಶ್ವರ ಭಟ್. ಸಿದ್ಧಗಂಗಾ ಶ್ರೀಗಳು, ನನ್ನ ತಂದೆ ತಾಯಿಯರನ್ನು ಬಿಟ್ಟರೆ ನನ್ನ ಪಾಲಿಗೆ ಇವರೇ ದೇವರು. ವಿಶ್ವೇಶ್ವರ ಭಟ್ ಅವರಂತಹ ವ್ಯಕ್ತಿತ್ವ ರೂಪುಗೊಳ್ಳಬೇಕು ಎಂದರೆ ಅದು ಕಷ್ಟಸಾಧ್ಯ. ಹೀಗೆಂದು ಭಾವನಾತ್ಮಕವಾಗಿ ಮಾತನಾಡಿದ್ದು ಪ್ರದೀಪ್ ಈಶ್ವರ್. ನನಗೆ ಇವತ್ತು ಅನಾಥ ಎನ್ನುವ ಯಾವುದೇ ನೋವಿಲ್ಲ. ಏಕೆಂದರೆ, ನನ್ನ ಜತೆ ಇವತ್ತು ವಿಶ್ವವಾಣಿಯ ವಿಶ್ವ ಕುಟುಂಬ ಇದೆ. ನಾನು ಅದೆಷ್ಟೋ ಬಾರಿ ಐಎಎಸ್‌ನಂತಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ
ವಿದ್ಯಾರ್ಥಿಗಳಿಗೆ ವಿಶ್ವವಾಣಿ ಸಂಪಾದಕೀಯ ಓದಿ ಎಂದು ಹೇಳುತ್ತೇನೆ ಎಂದು ಅವರು ಹೇಳಿದರು.
ಉಚಿತ ವೈದ್ಯಕೀಯ ಕಾಲೇಜು ಸ್ಥಾಪಿಸಿ
ಎನ್‌ಸಿಇಆರ್‌ಟಿ ಯಲ್ಲಿ ಉತ್ತಮ ಅಂಕ ಬಂದರೆ, ಏಮ್ಸ್ ಕಾಲೇಜಿನಲ್ಲಿ ಸೀಟ್ ದೊರೆತರೆ ಐದು ವರ್ಷಕ್ಕೆ ಶುಲ್ಕ ಕೇವಲ ೫,೫೦೦ ರು. ಜಿಪ್ಮೋರ್ ಕಾಲೇಜಿನಲ್ಲಿ ಸಿಕ್ಕರೆ ವರ್ಷಕ್ಕೆ ಕೇವಲ ೧೨ ಸಾವಿರ ರು. ಇಂತಹ ಉಚಿತ ವೈದ್ಯಕೀಯ ಕಾಲೇಜಿಗಳು ಕರ್ನಾಟಕ ದಲ್ಲೂ ಸ್ಥಾಪಿತವಾಗಬೇಕು. ಕನ್ನಡ ಶಾಲೆಯಲ್ಲಿ ಓದಿದವರಿಗೆ ಮಾತ್ರ ಆ ಕಾಲೇಜಿನಲ್ಲಿ ಸೀಟು ಎಂದು ವಿಶೇಷ ಕೋಟಾ
ನಿಗದಿಪಡಿಸಿದಾಗ ಕನ್ನಡ ಶಾಲೆಗಳು ತುಂಬುತ್ತವೆ. ಇದರಿಂದ ಅನೇಕರಿಗೆ ಸಹಾಯವೂ ಆಗುತ್ತದೆ. ಈಗಿನವರಿಗೆ ಸರಕಾರಿ ಶಾಲೆ ಬೇಡ. ಆದರೆ ಸರಕಾರಿ ಉದ್ಯೋಗ ಬೇಕು ಎಂದು ಹೇಳುತ್ತಿರುವುದು ವಿಷಾಧನೀಯ ಎಂದು ಪ್ರದೀಪ್ ಈಶ್ವರ್ ಅಭಿಪ್ರಾಯ ಪಟ್ಟರು.
ಬದುಕು ಮತ್ತು ಜೀವ ಎಂದರೆ….
ಕನಸನ್ನು ಹೊತ್ತವರು ದಿನಕ್ಕೆ ೧೦ ಗಂಟೆ ಓದಿ
ನಾಳೆ ಬೆಳಗ್ಗೆ ಏನಾಗುತ್ತೋ ಗೊತ್ತಿಲ್ಲ, ಇಂದು ಸಂತೋಷವಾಗಿರಿ
ಉಸಿರಾಡುತ್ತೇವೆ ಎನ್ನುವುದಕ್ಕಿಂತ, ಎಷ್ಟು ಜನ ಉಸಿರು (ಬದುಕು) ಕಟ್ಟಿ ಕೊಡುತ್ತೇವೆ
ಎಂಬುದು ಮುಖ್ಯ ದೇವರಿಗೆ ಸಿಟ್ಟು ಬಂದರೆ ವೈದ್ಯನ ಬಳಿಗೆ, ಆದರೆ ವೈದ್ಯನಿಗೆ ಸಿಟ್ಟು
ಬಂದರೆ ದೇವರ ಬಳಿಗೆ
***
೧೫ ವರ್ಷಗಳ ಹಿಂದೆ ಪ್ರದೀಪ್ ಭೇಟಿಯಾದಾಗ ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಊಹೆ ಮಾಡಿರಲಿಲ್ಲ. ಸರಕಾರಿ ವೈದ್ಯರ
ನಿರ್ಲಕ್ಷ್ಯದಿಂದಾಗಿ ತನ್ನ ಪೋಷಕರನ್ನು ಕಳೆದುಕೊಂಡಿದ್ದರು. ಇನ್ನು ಮುಂದೆ ಯಾರೂ ವೈದ್ಯರ ನಿರ್ಲಕ್ಷ್ಯದಿಂದ ಜೀವ ಕಳೆದುಕೊಳ್ಳಬಾರದು ಎಂಬ ನಿರ್ಧಾರ ಮಾಡಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಅವರಿಗಾಗಿಯೇ ಪರಿಶ್ರಮ ನೀಟ್ ಅಕಾಡೆಮಿ ಸ್ಥಾಪಿಸಿರುವುದು ದೊಡ್ಡ ಸಾಧನೆಯೇ ಸರಿ.
-ವಿಶ್ವೇಶ್ವರ್ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು