ವಿಶ್ವವಾಣಿ ಕ್ಲಬ್‌ಹೌಸ್ ಕ್ಲಬ್ ಹೌಸ್ ಸಂವಾದ – 112
ಇಳಿ ವಯಸ್ಸಿನಲ್ಲಿ ಅಧ್ಯಾತ್ಮ ಕಡೆ ಚಿಂತನೆ ಮಾಡಬೇಕು
ನಮ್ಮ ಚಿಂತನೆಗಳು ಧನಾತ್ಮಕವಾಗಿರಲಿ: ಲತಿಕಾ ಭಟ್
ಬೆಂಗಳೂರು: ಆಧುನಿಕ ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ವಿಪರ್ಯಾಸ. ಕಾರಣಾಂತರಗಳಿಂದ ಮಕ್ಕಳಿಂದ ದೂರವಾದ
ತಂದೆ- ತಾಯಿಯರನ್ನು ನೋಡಿಕೊಳ್ಳುವ ಹೊಸ ವೃದ್ಧಾಶ್ರಮಗಳು ಪ್ರತಿ ಊರಿನಲ್ಲಿ ಎಂಬಂತೆ ಹುಟ್ಟಿಕೊಳ್ಳುತ್ತಿವೆ. ಮಾನವೀಯ ನೆಲೆಯಲ್ಲಿ ಹುಟ್ಟಿ ಕೊಳ್ಳುವ ವೃದ್ಧಾಶ್ರಮಗಳು ಅತ್ಯಂತ ವಿರಳ. ಹೆಚ್ಚಿನ ವೃದ್ಧಾಶ್ರಮಗಳು ವ್ಯಾಪಾರಿ ನೆಲೆಯಲ್ಲಿಯೇ ವ್ಯವಹಾರ ನಡೆಸುವಂತಹವು ಎಂದು ಸಾಮಾಜಿಕ ಕಾರ್ಯಕರ್ತೆ ಲತಿಕಾ ಭಟ್ ತಿಳಿಸಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಮನುಷ್ಯನು ಸಂಕುಚಿತನಾಗುತ್ತಾನೆ. ಕೂಡು ಕುಟುಂಬದಿಂದ ಹೊರಬಂದು ಕೇವಲ ತಾನು, ತನ್ನ ಹೆಂಡತಿ ಎಂಬ ತನ್ನದೇ ಆದ ಗೂಡನ್ನು ಕಟ್ಟಲು ಬಯಸುತ್ತಾನೆ. ಕೂಡು ಕುಟುಂಬ ಛಿದ್ರವಾಗುತ್ತಿದೆ. ಕುಟುಂಬದ ರೋಗಿ, ಅಶಕ್ತ, ಅಸಹಾಯಕ, ಅಂಗವಿಕಲ ವೃದ್ಧರ ಜವಾಬ್ದಾರಿಯನ್ನು ಹೊರಲು ಯಾರೂ ತಯಾರಿಲ್ಲ. ಇದರ
ಪರಿಣಾಮವಾಗಿಯೇ ವೃದ್ಧಾಶ್ರಮಗಳು ಅನಿವಾರ್ಯವಾಗಿ ತಲೆ ಎತ್ತುತ್ತಿವೆ.
ವೃದ್ಧರಾಗಲು ಯಾರೂ ಬಯಸಲ್ಲ. ಚಿರ ಯುವಕ ಯುವತಿಯರಾಗಲು ಇಷ್ಟ ಪಡುತ್ತಾರೆ. ವೃದ್ಧಾಪ್ಯ ನಮ್ಮೆ ಲ್ಲರ ಜೀವನದ ಕೊನೆಯ ಘಟ್ಟ. ಜೀವನದಲ್ಲಿ ಎಲ್ಲವೂ ಸರಿಯಾಗಿದ್ದರೆ ಪರವಾಗಿಲ್ಲ. ಕೆಲವೊಮ್ಮೆ ಹಣ ಇಲ್ಲದಿದ್ದರೂ ಆರೋಗ್ಯ ಸರಿ ಇದ್ದರೆ ಜೀವನ ನಡೆದು ಹೋಗುತ್ತದೆ. ಆರೋಗ್ಯ ಕೆಟ್ಟರೆ ನೋಡಿಕೊಳ್ಳುವವರೂ ಇಲ್ಲದಿದ್ದಾಗ, ಹಣ ಇಲ್ಲದಿದ್ದಾಗ ಅವರ ಜೀವನ ನರಕ. ಇಂತಹವರಿಗೆ ವೃದ್ಧಾಶ್ರಮ ಅವಶ್ಯಕ. ಕೆಲವರು ಎಲ್ಲವೂ ಸರಿಯಾಗಿದ್ದರೂ ವೃದ್ಧಾಶ್ರಮಕ್ಕೆ ಬರುತ್ತಾರೆ ಎಂದು ಹೇಳಿದರು.
ವೃದ್ಧಾಶ್ರಮ ದೇಶದ ಸಂಸ್ಕೃತಿಗೆ ವಿರುದ್ಧ: ಹಿರಿಯರನ್ನು ಗೌರವದಿಂದ ನೋಡಿಕೊಳ್ಳಬೇಕು. ತಂದೆ- ತಾಯಿ ವಯಸ್ಸಾದಾಗ ಮಕ್ಕಳ ತರಹ ಆಗುತ್ತಾರೆ. ಹಿಂದಿನ ಕಾಲದಲ್ಲಿ ಒಟ್ಟು ಕುಟುಂಬದಲ್ಲಿ ಪೋಷಕರನ್ನು ನೋಡಿಕೊಳ್ಳುತ್ತಿದ್ದರು. ಕುಟುಂಬಗಳು ವಿಭಜನೆ ಆದಾಗ, ಆಸ್ತಿ ಪಾಲಾದಾಗ ಮನಸ್ಸುಗಳು ಪಾಲಾಗುತ್ತವೆ. ಇದರಿಂದ ತೊಂದರೆ ವೃದ್ಧರಿಗೆ ಆಗುತ್ತಿದೆ. ಇಳಿ ವಯಸ್ಸಿನಲ್ಲಿ ಮಕ್ಕಳು ದೂರವಿದ್ದು, ಶಕ್ತಿ ಇಲ್ಲದಿದ್ದಾಗ ಕಂಗಾಲಾಗುತ್ತಾರೆ. ಇದರಿಂದ ವೃದ್ಧಾಶ್ರಮ ಅವಶ್ಯಕ. ಮುಳುಗುವ ಸೂರ್ಯನಂತೆ ವೃದ್ದರು. ನಾನು ವೃದ್ಧಾಶ್ರಮ ಸ್ಥಾಪಿಸಿದ್ದು ಅನಿರೀಕ್ಷಿತ ಎಂದು ವಿವರಿಸಿದರು.
ನಮ್ಮ ವೃದ್ಧಾಶ್ರಮದಲ್ಲಿ ವೃದ್ಧರು ಕೊಡುವ ಪ್ರೀತಿ ನನಗೆ ತೃಪ್ತಿ ಕೊಡುತ್ತದೆ. ವೃದ್ಧರಿಗಿರುವ ಚಟ ಬಿಡಿಸಲು ಅನೇಕ ಪ್ರಯೋಗಗಳನ್ನು ಮಾಡಲಾಗು ತ್ತದೆ. ಹಾಗೆಯೇ ಅವರಿಗೆ ಅನುಕೂಲವಾದ ಆಹಾರ ನೀಡಲಾಗುತ್ತದೆ. ಪ್ರತಿ ಜನ್ಮವೂ ಯಾವುದೋ ಉದ್ದೇಶಕ್ಕಾಗಿ ಬಂದು ತನ್ನ ಕಾರ್ಯ ಮುಗಿಸಿ ಹೋಗುತ್ತದೆ. ನನಗೆ ದೇವರು ವಹಿಸಿದ ಕೆಲಸ ವೃದ್ಧಾಶ್ರಮ. ಇಂತಹ ಕಾಯಕ ನನಗೆ ಸಂತೋಷ, ಪರಮ ನೆಮ್ಮದಿ ನೀಡುತ್ತಿದೆ. ಈ ಸೇವೆಗೆ ಅವಕಾಶ ನೀಡಿದ ವೃದ್ಧರಿಗೆ ಪ್ರಶಂಸೆ ಸಮರ್ಪಿಸುತ್ತೇನೆ ಎಂದರು.
ಇಂದಿನ ಕಾಲಘಟ್ಟದಲ್ಲಿ ವೃದ್ಧಾಶ್ರಮಗಳು ಬೇಕು. ಜಗಳ ಮಾಡಿ ವೃದ್ಧಾಶ್ರಮಕ್ಕೆ ಬರುವ, ತಂದೆ- ತಾಯಿ ಕಿರಿ ಕಿರಿ ಮಾಡಿದರು ಎಂದು ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಅಸಹಾಯಕ ವೃದ್ಧರಿಗೆ ಆಶ್ರಯಬೇಕು. ಅವರಲ್ಲಿ ಶಕ್ತಿ, ಆರೋಗ್ಯ ಇರಲ್ಲ. ಅವಶ್ಯಕತೆ ಇದ್ದವರು ಮಾತ್ರ ವೃದ್ಧಾಶ್ರಮಕ್ಕೆ
ಬರಬೇಕು. ವೃದ್ಧಾಶ್ರಮಕ್ಕೆ ಕಳುಹಿಸುವ ಬದಲು ವೃದ್ಧಾಶ್ರಮಗಳಿಗೆ ಕೊಡುವ ದುಡ್ಡು ಒಬ್ಬರನ್ನು ನೋಡಿಕೊಳ್ಳಲು ನೇಮಿಸಿ, ಅವರಿಗೆ ಸಂಬಳ ಕೊಡಿ ಉಪಕಾರ ಆಗುತ್ತದೆ. ಮನೆಯೊಳಗೆ ಕಷ್ಟ ಆದರೆ ಚಿಕ್ಕದೊಂದು ಮನೆ ಮಾಡಿಸಿಕೊಡಿ ವೃದ್ಧರಿಗೆ ಎಂಬ ಸಲಹೆ ನೀಡಿದರು.
***
ಸುಯೋಗಾಶ್ರಯದ ಸೇವಾಕಾರ್ಯ
ಮಾನವೀಯ ಸಂಬಂಧಗಳು ನೆಲೆ ಕಳೆದುಕೊಂಡಿವೆ ಎಂಬುದನ್ನು ಊರೂರಲ್ಲೂ ತಲೆ ಎತ್ತಿರುವ ವೃದ್ಧಾಶ್ರಮಗಳು ಸಾಬೀತು ಪಡಿಸುತ್ತವೆ. ಆದರೆ ಅದೇ ಮಾನವೀಯ ಮೌಲ್ಯ ಅಲ್ಲಲ್ಲಿ ಇನ್ನೂ ಉಸಿರಾಡುತ್ತಿದೆ ಎಂಬುದನ್ನು ಸ್ವಾರ್ಥವನ್ನೆಲ್ಲ ಮರೆತು ವೃದ್ಧಾಶ್ರಮ ಕಟ್ಟಿ, ಸಂಬಂಧವೇ ಇಲ್ಲದ ವ್ಯಕ್ತಿಗಳನ್ನೂ ಪ್ರೀತಿಯಿಂದ ಸಲಹುತ್ತಿರುವ ಹಲವರು ತೋರಿಸಿಕೊಟ್ಟಿzರೆ. ಅಂಥವರಲ್ಲಿ ಉತ್ತರ ಕನ್ನಡ ಶಿರಸಿಯ ಲತಿಕಾ ಭಟ್ ಸಹ ಒಬ್ಬರು. ಬಡ ಮಕ್ಕಳಿಗೆ ಉಚಿತ ಟ್ಯೂಶನ್, ಉದ್ಯೋಗ ಜೊತೆಗೆ ಮದುವೆ ಮಾಡಿಸುವ ಕೆಲಸದಿಂದ ಆರಂಭವಾದ ಇವರ ಸೇವಾ ಕಾರ್ಯ ಇದೀಗ ಸುಯೋ ಗಾಶ್ರಯ ಎಂಬ ವೃದ್ಧಾ ಶ್ರಮ ನಿರ್ಮಾಣ ದವರೆಗೆ ವ್ಯಾಪಿಸಿದೆ.
ವೃದ್ಧಾಶ್ರಮಗಳಿಗೆ ವೃದ್ಧರು ಬರದಂತಿರಲು ಏನು ಮಾಡಬೇಕು?
ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.
ಆಹಾರ-ವಿಹಾರ ಸಮತೋಲನದಲ್ಲಿಟ್ಟಿಕೊಳ್ಳಿ.
ಚಿಂತೆ ಮಾಡುವುದನ್ನು ಬಿಡಬೇಕು.
ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ. ಗೊಣಗಾಟ ಬೇಡ.
ಮಕ್ಕಳು ಗೌರವ ಕೊಟ್ಟರೆ ಉಳಿಸಿಕೊಳ್ಳಲು ಪ್ರಯತ್ನಿಸಿ.
ಬೇಕಾದಷ್ಟು ಸಂಪನ್ಮೂಲ ಇದ್ದರೂ ತಂದೆ-ತಾಯಿಯರನ್ನು ನೋಡಿಕೊಳ್ಳಲು ಆಗದ ಪರಿಸ್ಥಿತಿ ಬಂದಾಗ ವೃದ್ಧಾಶ್ರಕ್ಕೆ ಕಳುಹಿಸುವ ಸನ್ನಿವೇಶಗಳು
ಕಾಣಬಹುದಾಗಿದೆ. ವೃದ್ಧಾಶ್ರಮಗಳು ಜಾಸ್ತಿ ಆದರೂ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬುದನ್ನು ನಾವು ತಿಳಿಯಲೇಬೇಕು. ಲತಿಕಾ ಭಟ್ ಅವರು ಸುಯೋಗ ಪ್ರತಿಷ್ಠಾನ ಕಟ್ಟಿ ಬಡವರಿಗೆ, ನಿರ್ಗತಿಕರಿಗೆ ಶಿಕ್ಷಣ, ಉದ್ಯೋಗ ನೀಡುತ್ತಿದ್ದಾರೆ. ಶಿರಸಿ ಸಮೀಪ ಸ್ವತಃ ವೃದ್ಧಾಶ್ರಮ ಕಟ್ಟಿ ೧೭೦ ಕ್ಕೂ ಹೆಚ್ಚು ನಿರ್ಗತಿಕರಿಗೆ ಆಶ್ರಮ ನೀಡುತ್ತಿದ್ದಾರೆ.
-ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು
ವಯಸ್ಸು ದೇಹಕ್ಕೆ ಆಗಬೇಕು, ಮನಸ್ಸಿಗಲ್ಲ. ವೃದ್ಧಾಶ್ರಮಗಳು ಒಂದು ರೀತಿ ನರಕ. ಇಲ್ಲಿ ಬದುಕಲು ಕಷ್ಟ. ವೃದ್ಧರು ಮನೆಯಲ್ಲಿ ಹೊಂದಾಣಿಕೆ
ಯಿಂದ ಇರಬೇಕು. ಮಕ್ಕಳೊಂದಿಗೆ ವೃದ್ಧರು ಸಹಬಾಳ್ವೆ, ಪ್ರೀತಿಯಿಂದ ಇರಬೇಕು.
– ಲತಿಕಾ ಭಟ್