Tuesday, 15th October 2024

ಸೆಲ್ಫಿ ಅಪಾಯ ಮೈಮೇಲೆ ಎಳೆದುಕೊಂಡರೆ ಕಿಲ್ಫಿ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೆಲ್ಫಿ ಎಂಬ ಡೇಂಜರ್ ಗೀಳು-ಜನ ಜಾಗೃತಿ ಕುರಿತು ಸಂವಾದ

ಬೆಂಗಳೂರು: ಅತಿಯಾದರೆ ಅಮೃತ ಕೂಡ ವಿಷವಾಗುವಂತೆ ತಂತ್ರಜ್ಞಾನವು ಕೂಡ ಈ ಹಂತಕ್ಕೆ ತಲುಪುತ್ತಿದೆ. ಸೆಲ್ಫಿ ಹಸ್ತಾಕ್ಷರದ ದೃಶ್ಯರೂಪ, ಆದರೆ ಈಗ ಸೆಲ್ಫಿ ಅನ್ನೋದು ಒಂದು ವ್ಯಸನವಾಗಿ, ಚಟವಾಗಿ, ಒಂದು ಗೀಳಾಗಿ, ನಮ್ಮ ಜೀವನ ಹಾಗೂ ಜೀವಕ್ಕೆ ಮಾರಕ ವಾಗಿ ಮಾರ್ಪಟ್ಟಿದೆ.

ಐದು ವರ್ಷಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಜನರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವಾಗ ಪ್ರಾಣ ಕಳೆದು ಕೊಳ್ಳುವವರ ದೇಶದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ರಷ್ಯಾ, ಅಮೆರಿಕ ಹಾಗೂ ಪಾಕಿಸ್ತಾನ ಇದೆ ಎಂದು ಮನೋಶಾಸ್ತ್ರಜ್ಞ ಡಾ.ವಿನಯ್ ಎಚ್.ಆರ್. ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಹಮ್ಮಿಕೊಂಡಿದ್ದ ಸೆಲ್ಫಿ ಎಂಬ ಡೇಂಜರ್ ಗೀಳು ಜನ ಜಾಗೃತಿ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿ, ಒಬ್ಬ ವ್ಯಕ್ತಿ ತನ್ನದೇ ಆದ ಫೋಟೊವನ್ನು ತೆಗೆದುಕೊಂಡು ಸೋಶಿಯಲ್ ಮೀಡಿಯಾ ಗಳಲ್ಲಿ ಅಪ್ಲೋಡ್ ಮಾಡುವುದಕ್ಕಾಗಲಿ ಅಥವಾ ಸ್ಟೋರ್ ಮಾಡಿ ಇಟ್ಟುಕೊಳ್ಳುವುದಕ್ಕಾಗಲಿ ಸೆಲ್ಫಿ ತೆಗೆದು ಕೊಳ್ಳುತ್ತಾನೆ. ಆದರೆ ಸೆಲಿ ತೆಗೆದುಕೊಳ್ಳುವುದೇ ಒಂದು ಕಾಯಿಲೆಯಲ್ಲ. ಸೆಲ್ಫಿ ಗೀಳಾಗುವುದು ಯಾವಾಗ ಎಂದರೆ, ಸೆಲ್ಫಿ ನಿತ್ಯದ ಸಾಮಾಜಿಕ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವುದು ಅಥವಾ ಹತ್ತಿರದ ಸಂಬಂಧಿ ಗಳಿಗೆ ಒಂದು ರೀತಿಯ ಹಿಂಸೆ ಉಂಟಾಗುವುದು, ಅಪಾಯಕಾರಿ ಸನ್ನಿವೇಶವಿದ್ದರೂ ಪರಿಜ್ಞಾನವಿಲ್ಲದೆ ಸೆಲ್ಫಿ ತೆಗೆದುಕೊಳ್ಳುವ ಗೀಳಾಗಿ ಮಾರ್ಪಡುವುದು ಅಪಾಯಕಾರಿ ಎಂದರು.

ಎಲ್ಲ ಜನರು ಕೂಡ ಸೆಲ್ಫಿ ಗೀಳಿಗೆ ಒಳಗಾಗುವುದಿಲ್ಲ, ಕೆಲವೊಬ್ಬರು ಮಾತ್ರ ಇಂತಹ ಗೀಳಿಗೆ ಒಳಗಾಗುವ ಸೂಕ್ಷ್ಮತೆಯನ್ನು ಬೆಳೆಸಿಕೊಂಡಿರುತ್ತಾರೆ. ಈ ವ್ಯಕ್ತಿತ್ವದ ಅಸ್ವಸ್ಥತೆ ಕೆಲವೊಬ್ಬರಲ್ಲಿ ಇರುತ್ತೆ. ಇದು ಅತಿರೇಕವಾಗಿ ತೊಂದರೆ ಮಟ್ಟಕ್ಕೆ ತಲುಪಿದಾಗ ಮಾತ್ರ ಅದು ಕಾಯಿಲೆ ಅಂಶವಾಗುತ್ತದೆ ಎಂದು ತಿಳಿಸಿದರು.

ಇಂತಹ ಗೀಳಿಗೆ ಕಾರಣ
ಸೆರೆಟೋನಿನ್: ಮಿದುಳಿನಲ್ಲಿ ಸೆರೆಟೋನಿನ್ ಅಂಶ ಕಡಿಮೆಯಾಗುವುದರಿಂದ ಒಸಿಡಿ ಉಂಟಾಗುತ್ತದೆ. (ಅತಿಯಾಗಿ ತೊಂದರೆ ಕೊಡುವುದು). ಈ ಅಂಶಗಳ
ಏರುಪೇರಿನಿಂದಾಗಿ ಈ ಗೀಳು ಉಂಟಾಗುತ್ತದೆ. ಈ ಗೀಳು ಬೆಳವಣಿಗೆ ಹಂತದಲ್ಲಿ ಅಥವಾ ವಂಶ ಪಾರಂಪರೆಯಿಂದ, ಸ್ವಭಾವತಃ ಉಂಟಾಗಬಹುದು.

***

ಜನರು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸೆಲ್ಫಿಯಿಂದಾಗುವ ದುರಂತದ ಬಗ್ಗೆ ಜನರಿಗೆ ಅರಿವು ಮೂಡಿಸುವುದ
ಕ್ಕಾಗಿ ಗ್ರೂಫಿ ಸಿನಿಮಾ ಚಿತ್ರೀಕರಿಸಿದ್ದೇವೆ.
– ಡಿ.ರವಿ ಅರ್ಜುನ್ ಗ್ರೂಫಿ ಚಿತ್ರದ ನಿದೇಶಕ