Saturday, 7th September 2024

ಕೇಳಬಾರದು, ಕೊಡಬೇಕು ಎಂದು ಹೇಳಿಕೊಟ್ಟ ರಾಯರು

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 64

ಕ್ಲಬ್‌ಹೌಸ್‌ನಲ್ಲಿ ರಾಯರ ಮಹಾತ್ಮೆ: ಅರಿವಿನ ಉಪನ್ಯಾಸ

ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯರ ಅನುಭವದಲ್ಲಿ ಶ್ರೀ ಗುರು ರಾಘವೇಂದ್ರ ವೈಭವ

ಬೆಂಗಳೂರು: ರಾಯರನ್ನು ಅವರ ವಿದ್ಯೆಯಿಂದ ಅಳೆಯಬೇಕೆ ವಿನಾ ಪವಾಡಗಳಿಂದಲ್ಲ. ರಾಯರ ಆರಾಧನೆ ಎಂಬುದು ಜ್ಞಾನದ ಸಮಾರಾಧನೆ. ಅವರ ಜೀವನವೇ ಒಂದು ಗ್ರಂಥ ಎಂದು ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಾತನಾಡಿದ ಅವರು, ಮಠ ಎಂದರೆ ಪಾಠ. ಬೆಳಗಿನಿಂದ ಮಧ್ಯಾಹ್ನದವರೆಗೆ ಪಾಠ ಹೇಳುವುದು ಹಾಗೂ ಕೇಳುವುದು. ರಾಯರು ಅವರ ಗುರುಗಳ ಮುಂದೆ ಎಂದೂ ತಮ್ಮ ದಾರಿದ್ರ್ಯ ಹೇಳಲಿಲ್ಲ. ಇನ್ನೊಬ್ಬರ ಮುಂದೆ ಕೈ ಚಾ ಚಬಾರದು ಎಂದು ತಿಳಿಸಿದರು. ದೇವರನ್ನು ನಂಬಿ ಬದುಕಬೇಕು. ಅವರು ಶಾಸ್ತ್ರಗಳನ್ನು ಬರಿ ಓದಲಿಲ್ಲ, ಅನುಷ್ಠಾನಕ್ಕೆ ತಂದರು. ಎಲ್ಲ ಪ್ರತಿಕೂಲ ಸ್ಥಿತಿ ಇದ್ದಾಗ ಧರ್ಮಾಚಾರಣೆ ಮಾಡುವುದು ಬಲು ಕಷ್ಟ. ಪಾಠ ಪ್ರವಚನ ಅತಿ ಮುಖ್ಯ. ಲೌಕಿಕ ಹಾಗೂ ವೈದಿಕ ಕೆಲಸ ಕಡಿಮೆ ಮಾಡಿ ಪಾಠ ಪ್ರವಚನದಲ್ಲಿ ತೊಡಗಿಸಿಕೊಳ್ಳಿ ಎಂದು ರಾಯರು ತಿಳಿಸಿದ್ದಾರೆ ಹೇಳಿದರು.

ವೈದಿಕ ಸಾಹಿತ್ಯದಿಂದ, ಲಿಪಿ ಪಾಂಡಿತ್ಯ, ಅಲಂಕಾರ ಶಾಸ, ಮೀಮಾಂಸೆ, ನಾಟಕ, ಕಾವ್ಯ ಸಂಗೀತ, ತರ್ಕಶಾಸ್ತ್ರ ತಿಳಿದ ಅವರು ಸಮುದ್ರಪ್ರಾಯ ವ್ಯಕ್ತಿತ್ವ ಉಳ್ಳವರು. ವಿದ್ಯೆಯಿಂದ ಘನತೆ ಹೆಚ್ಚಾಗುತ್ತದೆ. ವಿದ್ಯೆ ಬೆಳೆದರೆ ಚೈತನ್ಯ ಬೆಳೆಯುತ್ತದೆ. ಅವರು ಅನೇಕ ವಿದ್ವಾಂಸರನ್ನು ತಯಾರು ಮಾಡಿದರು. ಅವರ ಗ್ರಂಥಗಳನ್ನು ಮುದ್ರಣ ಮಾಡಲು ಸಾಧ್ಯವಿಲ್ಲ, ಅಷ್ಟೊಂದು ಗ್ರಂಥಗಳಿವೆ. ಕತ್ತಲಲ್ಲಿ ಬೆಳಕು ಕಂಡರು, ಅದನ್ನು ಜಗತ್ತಿಗೆ ಕೊಟ್ಟರು. ವಿದ್ಯೆ ಎಂಬುದು ಪ್ರವಾಹ, ಚಿರಂತನ ಎಂದು ಹೇಳಿದರು.

ಶ್ರೀ ಕೃಷ್ಣ ದೇವರಾಯನಿಗೆ ರಾಯರ ತಾತ ಪಾಠ ಹೇಳಿಕೊಡುತ್ತಿದ್ದರು. ಸಂಗೀತದ ಮನೆತನ. ವೀಣೆಯ ಪರಿಕಲ್ಪನೆ ಸಾರ್ಥಕ ಮಾಡಿದ ಮನೆತನ. ರಾತ್ರಿ ಹೊತ್ತಿನಲ್ಲಿ ಎಡಗೈಯಲ್ಲಿ ಒಣಗಿದ ಎಲೆ ಉರಿಸಿ ಬಲಗೈಯಿಂದ ಬರೆದರು. ತಾಳೆಗರಿ, ಒಣಗಿಸಿ ಮಶಿ ತಾವೇ ತಯಾರಿಸಿ ಬರೆದರು. ಸಣ್ಣಪುಟ್ಟ ಪವಾಡ ಮಾಡಿದವರು ದೇವರು ಎಂದು ಕರೆಸಿಕೊಳ್ಳುತ್ತಾರೆ. ರಾಯರ ಜೀವನ ಪವಾಡವಲ್ಲ, ಅವರ ಹೆಸರು, ಜೀವನದ ಪ್ರತಿ ಮಟ್ಟವೂ ಪವಾಡ. ಒಬ್ಬ ಮುಸಲ್ಮಾನ ರಾಜ ಮೀನವನ್ನು ನೈವೇದ್ಯವನ್ನಾಗಿ ಇಟ್ಟರು. ರಾಯರು ಕಣ್ಣು ಬಿಟ್ಟು ನೋಡಿದಾಗ ಅದು ಹಣ್ಣು ಹಂಪಲು ಆಯಿತು.

ಇದು ಅವರಲ್ಲಿನ ಪವಾಡ. ಪವಾಡದ ಮೂಲಕ ದೇವರನ್ನು ನಂಬಿಸಿದವರು, ಕುರುಡನಿಗೆ ಕಣ್ಣು, ಕಿವುಡರಿಗೆ ಕಿವಿ, ದಡ್ಡನಿಗೆ ಜ್ಞಾನ ನೀಡಿದವರು ಎಂದು ತಿಳಿಸಿದರು. ತಿಮ್ಮಣ್ಣ, ವೆಂಕಣ್ಣ ಎಂಬುವವರು ಹನ್ನೆರಡು ಸಾವಿರ ಸಾಲಿಗ್ರಾಮ ತರಿಸಿದ್ದರು. ೧,೨೦೦ ಸಾಲಿಗ್ರಾಮ ಆಯ್ಕೆ ಮಾಡಿದ್ದರು ರಾಯರು. ಆಗ ತಲೆಮೇಲೆ ಹೊತ್ತು ಭಗವಂತನನ್ನು ಒಲಿಸಿಕೊಂಡವರು. ರೋಗಿಗಳಿಗೆ ಸ್ಪಂದಿಸದಿದ್ದರೆ ಅದು ಆಸ್ಪತ್ರೆಯಲ್ಲ, ನೊಂದವರಿಗ ಪ್ರವೇಶವಿಲ್ಲ ಎಂದರೆ ಅದು ಆಧ್ಯಾತ್ಮವಲ್ಲ ಎಂದವರು ರಾಯರು. ಭಗವಂತನಿಗೆ ಪ್ರಿಯವಾದ ಕೆಲಸ ಮಾಡಬೇಕು. ಜಗತ್ತಿನ ಎಲ್ಲರಿಗೂ ಹಿತ ಬಯಸುವುದು ದೊಡ್ಡ ಸೇವೆ. ಭಗವಂತನಿಗೆ ಕೊಟ್ಟ ತೆರಿಗೆ, ನೊಂದವರಿಗೆ ನಲಿವು ತಂದು ಕೊಡುವುದು ಇದೇ ಸಿದ್ಧಾಂತ ರಾಯರದ್ದು ಎಂದು ಮಾಹಿತಿ ನೀಡಿದರು.

ರಾಯರ ಬಾಲ್ಯ: ರಾಘವೇಂದ್ರರ ಅಜ್ಜರು ವಿಜಯನಗರ ಪ್ರಾಂತದವರು. ವೀಣೆಯ ಪಂಡಿತರು. ತಿಮ್ಮಣ್ಣ ಭಟ್ಟರು ತಂದೆ. ವಿಜಯೀಂದ್ರರ ಶಿಷ್ಯರು. ವೆಂಕಮ್ಮ ಹಾಗೂ ಗುರುರಾಜರು ಮೊದಲು ಇಬ್ಬರು ಮಕ್ಕಳು. ಪೂರ್ವಾಶ್ರಮದ ಹೆಸರು ವೆಂಕಟನಾಥ. ತಂದೆ ಕೆಲ ದಿನಗಳ ನಂತರ ವೈಕುಂಠ ಯಾತ್ರೆ ಮಾಡಿದರು. ತಾಯಿಯ ಆಶ್ರಯದಲ್ಲಿ ಬೆಳೆದರು. ಲಿಪಿಶಾಸ ಓದಿದರು ಎಂದು ರಾಯರ ಬಾಲ್ಯ ಕುರಿತು ವಿವರಿಸಿದರು.

ರಾಯರ ಮಹಿಮೆ ಅಮೋಘ

ಕ್ರಿಮಿ ಕೀಟಗಳಿಗೂ ನಾವು ಮಾಡುವ ಸೇವೆ ತಲುಪಬೇಕು ಎಂದವರು ರಾಯರು

ಹಸಿದವನಿಗೆ ಅನ್ನ ಹಾಕಿದರೆ ಸಾಲದು, ಅನ್ನ ಸಂಪಾದನೆ ಹೇಳಿಕೊಟ್ಟರೆ ಶಾಶ್ವತ ಪರಿಹಾರ

ಜೀವಾತ್ಮ-ಪರಮಾತ್ಮ ಸಂಬಂಧವನ್ನು ಮಧ್ವ ಸಿದ್ಧಾಂತ ಹೇಳುತ್ತದೆ. ಅದನ್ನು ರಾಯರು ತೋರಿಸಿಕೊಟ್ಟರು

ನೀರಿನಿಂದ ಮೀನು ತೆಗೆದಂತೆ, ಭಗವಂತ ನನ್ನು ಮರೆತ ಜೀವನ ಒದ್ದಾಟದ ಜೀವನ

ರಾಯರ ಚರಿತ್ರೆ ಪಠ್ಯಪುಸ್ತಕ ಆಗಲಿ. ಇದನ್ನು ಮತೀಯ ಭಾವನೆಯಿಂದ ನೋಡಬಾರದು

ವಾರಕ್ಕೆ ಅರ್ಧ ಹೊಟ್ಟೆ ಊಟ ಮಾಡುತ್ತಿದ್ದ ರಾಯರು, ಇವತ್ತು ಕೋಟ್ಯಂತರ ಜನರಿಗೆ ಊಟ ನೀಡುತ್ತಿದ್ದಾರೆ

ರಾಯರ ಹತ್ತಿರ ಹೋದ ಮನುಷ್ಯರಲ್ಲಿ ಬದಲಾವಣೆ ಕಾಣಬಹುದು

ರಾಯರ ಮಹಿಮೆಗೆ ಜಾತಿ, ಮತವಿಲ್ಲ. ಸರ್ವಜನರ ಹಿತ ಸಾಧನೆ ಅವರದ್ದು

ಗುರುಗಳಿಗೆ ಸಮಾಜದಲ್ಲಿ ದೊಡ್ಡ ಸ್ಥಾನ

ದೇಹಕ್ಕೆ, ಮನಸ್ಸಿಗೆ ಅಧ್ಯಾತ್ಮವೇ ಇಮ್ಯುನಿಟಿ

ದ್ವೇಷ, ಅಸಡ್ಡೆ ಇದ್ದರೆ ಮನುಷ್ಯ ಉದ್ಧಾರ ಆಗಲ್ಲ

***

ವಿಶ್ವೇಶ್ವರ ಭಟ್ ಅವರು ಪ್ರಸಕ್ತ ವಿಚಾರಗಳ ಬಗ್ಗೆ ಅಧ್ಯಯನ ರೂಪ ದಲ್ಲಿ ಬರೆಯುತ್ತಾರೆ. ವಿಶ್ವವಾಣಿ ದಿನಪತ್ರಿಕೆ ವಾರ್ತಾ ಪತ್ರಿಕೆಯಾಗದೆ, ನೂತನ ವಿಚಾರ ಗಳನ್ನು ಜನಮಾನಸಕ್ಕೆ ತಲುಪಿಸುತ್ತಿದೆ. ಕ್ಲಬ್‌ಹೌಸ್ ಮೂಲಕ ಹೊಸ ವಿಚಾರಗಳನ್ನು ಚರ್ಚೆ ಮಾಡುತ್ತಿರುವ ಹಾಗೆ ಸರಕಾರದ ವತಿಯಿಂದ ಇಂತಹ ಕಾರ್ಯಕ್ರಮ ಗಳಾದರೆ ಶೈಕ್ಷಣಿಕ ಕ್ರಾಂತಿ ಆಗುತ್ತದೆ. ಅನ್ನದಾನಕ್ಕಿಂತ ಜ್ಞಾನ ದಾನ ದೊಡ್ಡದು.
– ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಅಧ್ಯಾತ್ಮಿಕ ಚಿಂತಕರು

Leave a Reply

Your email address will not be published. Required fields are marked *

error: Content is protected !!