Wednesday, 9th October 2024

ಆ ಕರ್ಣನಂತೆ ದಾನಿ, ಇನ್ನೊಂದು ಜೀವಕೆ ಆಧಾರ ವಿಷ್ಣುವರ್ಧನ್ !

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 90

ಕ್ಲಬ್‌ಹೌಸ್‌ನಲ್ಲಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನದಾಳ

ಸಿನಿಮಾ ಪಯಣ ಅರ್ಧದಲ್ಲಿಯೇ ಬಿಟ್ಟು ಹೋಗಿದ್ದು ಬೇಸರದ ಸಂಗತಿ

ಬೆಂಗಳೂರು: ಮನುಷ್ಯನಲ್ಲಿ ಏನೇ ಯೋಗ್ಯತೆ ಇದ್ದರೂ ಅವನೆಷ್ಟೇ ಬುದ್ಧಿವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ. ಕರ್ಣನಂತೆ ಬದುಕಿನಲ್ಲಿ ಸವಾಲುಗಳನ್ನು ಎದುರಿಸಿದವರು ನಟ ವಿಷ್ಣುವರ್ಧನ್ ಅವರು.

ಸಿನಿಮಾ ಪಯಣ ಅರ್ಧದಲ್ಲಿಯೇ ಬಿಟ್ಟು ಹೋಗಿದ್ದು ಬೇಸರದ ಸಂಗತಿ. ಆದರೆ, ಅವರ ಪ್ರತಿಭೆಗೆ, ವ್ಯಕ್ತಿತ್ವಕ್ಕೆ ಸಿಗಬೇಕಾದ ಗೌರವ ಸಿಗಲಿಲ್ಲವಲ್ಲ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ವಿಷ್ಣುವರ್ಧನ್ ಅವರ ಜತೆಗಿನ ಒಡನಾಟವನ್ನು ಕೇಳುಗರ ಮುಂದಿಟ್ಟರು. ಹಾಗೆಯೇ ಕೆಲವೊಂದು ನೋವಿನ ಸಂಗತಿಗಳನ್ನು ತಿಳಿಸಿಕೊಟ್ಟರು. ಅನೇಕ ಜನರಿಗೆ ಇವರ ಜೀವನದಕಥೆ ಸ್ಫೂರ್ತಿ ದಾಯಕ. ಯಾರ ಮನಸಿಗೂ ನೋವುಂಟು ಮಾಡಿ ದವರಲ್ಲ, ಕನ್ನಡಿಗರ ಮನಗೆದ್ದ ನಾಯಕ ಎಂದು ಅಭಿಪ್ರಾಯಪಟ್ಟರು.

ನಮ್ಮ ಬಂಧನ ಸಿನಿಮಾರಂಗದಲ್ಲಿ ಸೇರಿತು. ವಿಷ್ಣುವರ್ಧನ್ ಬಗ್ಗೆ ತಿಳಿದುಕೊಂಡಿರುವವರು ಕಡಿಮೆ. ಬೇರೆ ರೂಪದಲ್ಲಿ ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಕ್ಕೆ ಯಾರೂ ಮುಂದಾಗಲಿಲ್ಲ. ಕರ್ಣ ಸಿನಿಮಾದಂತೆ ಆಯಿತು ಅವರ ಜೀವನದ ದುರಂತ ಘಟನೆಗಳು. 40 ವರ್ಷದಿಂದ ವಿಷ್ಣುವರ್ಧನ್ ನಡುವಿನ ಅಭಿಮಾನ ಅವಿಸ್ಮರಣೀಯ. ಸಿನಿಮಾ ಹಾಗೂ ಅನೇಕ ಅವಕಾಶಗಳ ಸಂದರ್ಭದಲ್ಲಿ ಇಬ್ಬರದ್ದೂ ಸ್ನೇಹಮಯ ಎಂದು ಅವರು ತಿಳಿಸಿದರು.

ವಿಷ್ಣುವರ್ಧನ್ ನಡುವಿನ ಸ್ನೇಹ ಚಿಕ್ಕಂದಿನಿಂದ ಶುರುವಾಯಿತು. ನಾಗರಾಹಾವು ಸಿನಿಮಾ ಮೂಲಕ ಮುಂದು ವರಿಯಿತು. ಸಿನಿಮಾ ಪ್ರಯಾಣದಲ್ಲಿ ಅವರಿಗೆ ತೃಪ್ತಿ ಸಿಗಲಿಲ್ಲ. ಬೇಕಾದಷ್ಟು ಚಿತ್ರ ಮಾಡಿದ್ದರೂ ಮನಸ್ಸಿನಲ್ಲಿ ಉಳಿಯುವ ಪಾತ್ರ, ಒಳ್ಳೊಳ್ಳೆ ಕಥೆಗಳು ಸಿಗ ಬೇಕೆಂಬ ಹಂಬಲ ಅವರಲ್ಲಿತ್ತು. ಗಂಧದ ಗುಡಿ ಸಿನಿಮಾ ಸಂದರ್ಭದಲ್ಲಿ ಅನೇಕ ಘಟನೆಗಳು ನಡೆದವು. ಅಂಬರೀಶ್ ಮತ್ತು ವಿಷ್ಣುವರ್ಧನ್ ನಡುವಿನ ಸ್ನೇಹ ಭಿನ್ನ. ಅಂಬಿ ಅವರ ಇಷ್ಟದಂತೆ ಸಿನಿಮಾ ಇರಬೇಕಿತ್ತು. ಆದರೆ, ವಿಷ್ಣುವರ್ಧನ್ ಉತ್ತಮ ನಟ. ನನ್ನನ್ನು ಚಲನಚಿತ್ರ ನಿರ್ದೇಶಕರನ್ನಾಗಿ ಕ್ಯಾಮೆರಾ ಮುಂದೆ ಇರಿಸು ತ್ತಿದ್ದರು. ಇವತ್ತು ಕನ್ನಡ ಇಂಡಸ್ಟ್ರಿನಲ್ಲಿ ಮೇಸಿ ಥರಾ ಆಗಿದ್ದಾರೆ. ಯಾವುದೇ ನಿರ್ದೇಶಕರಿಗೆ ಹೆಚ್ಚು ಗೌರವ ನೀಡುತ್ತಿದ್ದರು. ಅವರಿಗೆ ಚಿತ್ರ ಇಷ್ಟ ಆಗಿಲ್ಲವೆಂದರೆ ಸುಮ್ಮನೆ ಇರುತ್ತಿರಲಿಲ್ಲ ಎಂದು ಮಾಹಿತಿ ನೀಡಿದರು. ಮುತ್ತಿನ ಹಾರ, ಬಂಧನ ಸಿನಿಮಾಗಳ ತಯಾರಿಕೆಯಲ್ಲಿ ಎದುರಾದ ಸವಾಲುಗಳ ಕುರಿತು ವಿವರಿಸಿದರು.

ವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ, ಅತ್ಯಂತ ಸುಸಂಸ್ಕೃತ ವ್ಯಕ್ತಿ ವಿಷ್ಣುವರ್ಧನ್. ಹೃದಯವಂತಿಕೆ ಇವರಿಂದ ಕಲಿಯಬೇಕು. ಬಂಧನ ಸಿನಿಮಾ ದಲ್ಲಿ ವೈದ್ಯರಾಗಿ ನಟಿಸಿದ್ದು ಪ್ರೇರೇಪಣೆ ನೀಡಿದಂತಾಗಿದೆ ಎಂದು ಹೇಳಿದರು. ಗಾಯಕರಾದ ಅನನ್ಯ ಭಾರ್ಗವ್ ಅವರು ವಿಷ್ಣುವರ್ಧನ್ ಅವರ ಮುಂದೆ ಪ್ರಸ್ತುತ ಪಡಿಸಿದ್ದ ಒಂದು ಹಾಡನ್ನು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೊಗಸಾಗಿ ಹಾಡಿದರು. ಅವರೊಂದಿಗಿನ ಒಡನಾಟದ ಕೆಲವೊಂದು ವಿಷಯಗಳನ್ನು ಹೇಳಿದರು.
ವಿಷ್ಣುವರ್ಧನ್ ಅವರ ಕುರಿತು ಕ್ಲಬ್‌ಹೌಸ್‌ನಲ್ಲಿ ಅನೇಕ ವ್ಯಕ್ತಿಗಳು  ಅಭಿಪ್ರಾಯ ಹಂಚಿಕೊಂಡರು.

ಕನ್ನಡಿಗರನ್ನು ಗೆಲ್ಲುವ ಚಿತ್ರಗಳು ಬರುತ್ತಿಲ್ಲ: ಪ್ಯಾನ್ ಇಂಡಿಯಾ ಎಂದು ಹೊರ ಭಾಷೆಗಳ ಮೇಲೆ ಹೆಚ್ಚು ಒಲವು ತೋರುತ್ತಿದ್ದರು. ಜನಕ್ಕೆ ಬೇಕಾಗಿರುವ ಸಿನಿಮಾ ಬರುತ್ತಿಲ್ಲ. ಸಾಮಾಜಿಕ ಐತಿಹಾಸಿಕ ಸೈದ್ಧಾಂತಿಕ, ಹಳ್ಳಿ ಸೊಗಡಿನ ಚಿತ್ರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ವಿಷ್ಣು ಅವರು ೨೦೦ ಸಿನಿಮಾಗಳಲ್ಲಿ ನಟಿಸಿದ್ದು ದೊಡ್ಡ ಸಂಗತಿ. ಅವರು ಸಿನಿಮಾದಲ್ಲಿ ಸಂಭಾವನೆ ನಿರೀಕ್ಷಿಸುತ್ತಿರಲಿಲ್ಲ, ಜನತೆಗೆ ಏನು ಸಂದೇಶ ಕೊಡಬೇಕೆಂದು ಯೋಚಿಸುತ್ತಿದ್ದರು. ಇತ್ತೀಚಿಗಿನ ಚಿತ್ರಗಳನ್ನು
ನೋಡಿದರೆ ಕನ್ನಡಿಗರನ್ನು ಮನಗೆಲ್ಲುವಂತಿಲ್ಲ ಎಂದು ರಾಜೇಂದ್ರ ಸಿಂಗ್ ಬಾಬು ಬೇಸರ ವ್ಯಕ್ತಪಡಿಸಿದರು.

ವಿಷ್ಣು ಕುರಿತು ಕೆಲವೊಂದು ಹಿತನುಡಿಗಳು
ವಿಷ್ಣುವರ್ಧನ್ ಸತ್ತ ಮೇಲೂ, ಬದುಕಿದ್ದಾಗಲೂ ಪೈಟ್

ಅಂಬರೀಶ್ ಹಾಗೂ ನನಗೆ ಭಾವನಾತ್ಮಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.

ಟಿಪ್ಪು ಸುಲ್ತಾನ್ ರೀತಿ ಒಂದು ಸಿನಿಮಾದಲ್ಲಿ ನಡೆಸಬೇಕು ಎಂಬ ಆಸೆ ಅವರದ್ದು

ಕ್ಯಾಮೆರಾ ಮುಂದೆಯಲ್ಲ, ಹಿಂದೆಯೂ ಕಾಮಿಡಿ ಮಾಡುತ್ತಿದ್ದರು ವಿಷ್ಣು

ವಿಷ್ಣುವರ್ಧನ್ ಅವರಿಗೆ ಕುಟುಂಬ ಹಾಗೂ ಮಹಿಳಾ ಅಭಿಮಾನಿಗಳೇ ಹೆಚ್ಚು

ಶೂಟಿಂಗ್ ನಡೆಯುವ ಸಂದರ್ಭದಲ್ಲಿನ ತೊಂದರೆಗಳನ್ನು ತುಂಬಾ ಸರಳವಾಗಿ, ಸಮಾಧಾನದಿಂದ ಎದುರಿಸುತ್ತಿದ್ದರು.

ವಿಷ್ಣು ಅವರು ಯಾರ ನಟನೆಯನ್ನೂ ನಕಲು ಮಾಡುತ್ತಿರಲಿಲ್ಲ, ಅವರದೇ ಆದ ಅದ್ಭುತ ಶೈಲಿಯಲ್ಲಿ ನಟನೆ ಮಾಡಿದ ಮಹಾನ್ ನಾಯಕ

***

ಪ್ರಸಿದ್ಧ ಚಲನಚಿತ್ರ ನಿರ್ದೇಶಕರಲ್ಲಿ ರಾಜೇಂದ್ರ ಸಿಂಗ್ ಬಾಬು ಒಬ್ಬರು. ನಮ್ಮ ಸಾಹಿತ್ಯಕ್ಕೆ ಅನುಗುಣವಾದ ಸಿನಿಮಾ ನೀಡಿದ್ದಾರೆ. ಕಾದಂಬರಿ ಆಧರಿಸಿ ಸಿನಿಮಾ ಜನತೆಯ ಮುಂದಿಟ್ಟಿದ್ದಾರೆ. ವಿಷ್ಣುವರ್ಧನ್ ಅವರು ಹಸನ್ಮುಖಿ. ನಡೆ, ನುಡಿ ವ್ಯಕ್ತಿತ್ವ ಮೆಚ್ಚುಗೆಗೆ ಪಾತ್ರವಾಗಿದೆ.

– ವಿಶ್ವೇಶ್ವರ ಭಟ್ ವಿಶ್ವವಾಣಿ
ಪ್ರಧಾನ ಸಂಪಾದಕರು

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಅಭಿಮಾನಿ ನಾನು. ಜನನಾಯಕ ಸಿನಿಮಾ ನೋಡಿ ವಿಷ್ಣುವರ್ಧನ್ ಅವರನ್ನು ಇಷ್ಟಪಟ್ಟೆ. ಅವರು ಅನುಭವಿಸಿದ ನೋವು, ಸವಾಲುಗಳು ಕೇಳಿದಾಗ ಮನಸೋತಿದ್ದೆ. ಅವರ ಸಾಕಷ್ಟು ವೈಯಕ್ತಿಕ ಅಂಶಗಳನ್ನು ನಾನು ಜೀವನದಲ್ಲಿ ಅಳವಡಿಸಿಕೊಂಡೆ.
– ವೀರಕಪುತ್ರ ಶ್ರೀನಿವಾಸ್