Monday, 25th November 2024

ನಗರದಲ್ಲಿ ಹೆಚ್ಚುತ್ತಿರುವ ಅಸ್ತಮಾ ಪ್ರಕರಣಗಳು? ಇದಕ್ಕೆ ಕಾರಣ ಏನು?

ಇಲ್ಲಿದೆ ವೈದ್ಯರಿಂದ ಮಾಹಿತಿ ಮತ್ತು ಸಲಹೆ.!

ಕಳೆದೆರಡು ವರ್ಷದಿಂದ ಕೋವಿಡ್‌ನಿಂದಾಗಿ ಇಡೀ ವಿಶ್ವವೇ ವರ್ಕ್‌ ಫ್ರಾಮ್‌ ಹೋಮ್‌ ಕಾನ್ಸೆಪ್ಟ್‌ಗೆ ಒಗ್ಗಿಕೊಂಡಿತ್ತು. ಇದರಿಂದ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರಿಂದ ವಾತಾವರಣದಲ್ಲಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿದ್ದರಿಂದ ಅಸ್ತಮ, ವೀಸಿಂಗ್‌, ಸೈನಸ್‌, ಕೆಮ್ಮು, ಉಸಿರಾಟದಂಥ ಸಮಸ್ಯೆಗಳೇ ಕುಸಿದಿತ್ತು. ಆದರೀಗ, ಬಹುತೇಕ ಎಲ್ಲಾ ಕಂಪನಿಗಳು ವಾರದಲ್ಲಿ ಎರಡರಿಂದ ಮೂರು ದಿನ ಕಡ್ಡಾಯವಾಗಿ ಕಚೇರಿಗೆ ಬರಲು ಆಹ್ವಾನಿಸಿದ್ದೇ ತಡ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗುತ್ತಿದೆ. ಇದರ ಪರಿಣಾಮ ಅದೆಷ್ಟೋ ಜನರಲ್ಲಿ ಮತ್ತದೇ ಅಸ್ತಮಾ, ವೀಸಿಂಗ್‌ ಸೈನಸ್‌ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಹೌದು, ಕೋವಿಡ್‌ ಕಾರಣದಿಂದಾಗಿ ಜನ ಪೊಲ್ಯೂಷನ್‌ಗೆ ತೆರೆದುಕೊಳ್ಳದ ಕಾರಣ ಶ್ವಾಸಕೋಶದ ಸಮಸ್ಯೆಗಳು ಇಳಿಮುಖವಾಗಿತ್ತು. ಇದೀಗ ಪ್ರತಿಯೊಬ್ಬರು ತಮ್ಮ ಖಾಸಗಿ ವಾಹನಗಳಿಂದ ರಸ್ತೆಗಿಳಿ ಯುತ್ತಿರುವ ಕಾರಣ ಎಲ್ಲಾ ವಾಯು ಮಾಲಿನ್ಯ ಹಿಂದಿಗಿಂತಲೂ ದುಪ್ಪಟ್ಟಾಗುತ್ತಿದೆ. ಇದರ ಪರಿಣಾಮ ಬಹುತೇಕರಲ್ಲಿ ಅಸ್ತಮಾದಂಥ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಲು ಫೋರ್ಟಿಸ್‌ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಡಾ. ವಿವೇಕ್‌ ಆನಂದ್‌ ಪಡೇಗಲ್‌ ಕೆಲ ಸಲಹೆ ನೀಡಿದ್ದಾರೆ.

ಮಾಸ್ಕ್‌ ಧರಿಸುವುದನ್ನು ನಿಲ್ಲಿಸದಿರಿ: ಕೋವಿಡ್‌ ಕಾರಣದಿಂದಾಗಿ ಎಲ್ಲರೂ ಮಾಸ್ಕ್‌ ಧರಿಸುವುದನ್ನು ಸರ್ಕಾರವೇ ಕಡ್ಡಾಯ ಮಾಡಿತ್ತು. ಇದು ಕೇವಲ ಕೋವಿಡ್‌ ಅಷ್ಟೇ ಅಲ್ಲದೇ ಇತರೆ ಆರೋಗ್ಯ ಸಮಸ್ಯೆ ಗಳಿಂದ ರಕ್ಷಾ ಕವಚವಾಗಿ ಕೆಲಸ ಮಾಡುತ್ತಿದೆ. ಇದೀಗ ಬೇಸಿಗೆ ಆಗಿರುವ ಕಾರಣ ಎಲ್ಲೆಡೆ ಧೂಳು, ಪ್ರದೂಷಣೆ ಹೆಚ್ಚು. ಇದನ್ನು ನಿಯಂತ್ರಿಸಲು ಕಡ್ಡಾಯವಾಗಿ ಎನ್‌೯೬ ಮಾಸ್ಕ್‌ ಧರಿಸುವುದು ಮೊದಲ ಮುನ್ನೆಚ್ಚರಿಕೆಯಾಗಿದೆ. ಇದರಿಂದ ಡಸ್ಟ್‌ ಹಾಗೂ ಶ್ವಾಸಕೋಶಕ್ಕೆ ಅಲರ್ಜಿ ಉಂಟು ಮಾಡುವ ಕಣಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೀಗಾಗಿ ಕೋವಿಡ್‌ ಕಡಿಮೆಯಾದರೂ ಅಸ್ತಮ, ಉಸಿರಾ ಟದ ಸಮಸ್ಯೆ ಇರುವವರು ಮಾಸ್ಕ್‌ ಧರಿಸಿ.

ಅಸ್ತಮಾದ ಲಕ್ಷಣಗಳು: ಸತತವಾಗಿ ಒಣಕೆಮ್ಮು ಬರುವುದು, ಉಸಿರಾಡಲು ಕಷ್ಟ ಎದೆಯ ಭಾಗದಲ್ಲಿ ಬಿಗಿದಂತಾಗುವುದು, ಕಫ ಹೆಚ್ಚಳ ಈ ಲಕ್ಷಣ ಕಂಡು ಬಂದರೆ ಇದು ಅಸ್ತಮಾ ಎನ್ನುವು ಖಚಿತ. ರಾತ್ರಿ ಸಂದರ್ಭದಲ್ಲಿ ಕೆಮ್ಮು ಹೆಚ್ಚಳವಾಗುತ್ತಿದ್ದರೆ ತಡ ಮಾಡದೇ ವೈದ್ಯರನ್ನು ಭೇಟಿ ಮಾಡಿ. ಇಲ್ಲವಾದರೆ ಇದು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು.

ಆಹಾರದಲ್ಲಿ ನಿಯಂತ್ರಣ ಇರಲಿ: ಇನ್ನು ಅಸ್ತಮಾ, ವೀಸಿಂಗ್‌ ಇರುವವರು ಎಣ್ಣೆ ಪದಾರ್ಥಗಳನ್ನು ಕಡ್ಡಾಯ ವಾಗಿ ನಿಯಂತ್ರಿಸಿಕೊಳ್ಳಬೇಕು. ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಲು ಕಾರಣವಾಗಬಹುದು, ಇನ್ನು ನಿಮ್ಮ ಆಹಾರ ಕ್ರಮದಲ್ಲಿ ಪೋಷ್ಠಿಕಾಂಶಯುಕ್ತ ಆಹಾರ, ವಿಟಮಿನ್‌ ಡಿ,ಸಿ ಇರುವ ಆಹಾರಗಳನ್ನು ಹೆಚ್ಚು ಸೇವಿಸಿ.

ವ್ಯಾಯಾಮ ಇರಲಿ: ವೀಸಿಂಗ್‌ ಸಮಸ್ಯೆ ಇರುವವರು ಬೆಳಗ್ಗಿನ ಸಮಯದಲ್ಲಿ ಯೋಗ, ಧ್ಯಾನ, ಪ್ರಾಣಯಾಮ ವನ್ನು ರೂಢಿಸಿಕೊಳ್ಳಿ ಇದು ಅಸ್ತಮಾ ವನ್ನು ಸುಧಾರಿಸಲಿದೆ.

ಓಮಿಕ್ರಾನ್‌ನಿಂದ ಅಸ್ತಮಾ ಹೆಚ್ಚಳ: ಕೋವಿಡ್‌ನಿಂದಾಗಿ ಕೆಲವಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿ ದ್ದರೂ ಕೋವಿಡ್‌ ಗುಣಮುಖವಾದ ಬಳಿಕ ಈ ಸಮಸ್ಯೆಗೂ ಸರಿ ಹೋಗುತ್ತಿತ್ತು. ಕೋವಿಡ್‌ ಎರಡೂ ಅಲೆಗಳಿಂದ ಅಸ್ತಮಾ ಹೆಚ್ಚಳ ಪ್ರಕರಣಗಳು ಕಾಣಿಸಿರಲಿಲ್ಲ. ಆದರೆ, ಓಮಿಕ್ರಾನ್‌ನಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರದೇ ಹೋದರೆ ಅಸ್ತಮ ರೋಗಿಗಳನ್ನು ಹೆಚ್ಚಳ ಮಾಡಿದೆ. ನಮ್ಮ ಆಸ್ಪತ್ರೆಗೆ ಓಮಿಕ್ರಾನ್‌ ಅಲೆ ಇರುವಾಗಲೇ ಅಸ್ತಮಾ, ವೀಸಿಂಗ್‌ ಸಮಸ್ಯೆ ಎಂದು ದಾಖಲಾದವರೇ ಹೆಚ್ಚು.

ಬೂಸ್ಟರ್‌ ಡೋಸ್‌ ತೆಗೆದುಕೊಳ್ಳುವುದು ಒಳ್ಳೆಯದು ಕೋವಿಡ್‌ ಪ್ರಕರಣ ಕಡಿಮೆಯಾಗುತ್ತಿರಬಹುದು, ಆದರೆ, ನಮ್ಮ ಇತರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಕೋವಿಡ್‌ ವ್ಯಾಕ್ಸಿನೇಷನ್‌ ಹೆಚ್ಚು ಕೆಲಸ ಮಾಡುತ್ತಿವೆ. ಹೀಗಾಗಿ ಎಲ್ಲರೂ ಬೂಸ್ಟರ್‌ ಡೋಸ್‌ ಪಡೆದರೆ ಅಸ್ತಮಾದಂಥ ರೋಗವನ್ನು ನಿಂತ್ರಣಕ್ಕೆ ತರಬಹುದು.