Monday, 25th November 2024

ಬೇಸಿಗೆ ಬೇಗೆಯಿಂದ ದಣಿವಾರಿಸಿಕೊಳ್ಳಲು ಇಲ್ಲಿದೆ ವೈದ್ಯರು ಸಲಹೆ ನೀಡುವ ಪಾನೀಯಗಳು

ಬೇಸಿಗೆ ಕಾಲ ಬಂತೆಂದರೆ ಸಾಕು ಬಿಸಿಲ ಬೇಗೆ ನಮ್ಮನ್ನು ಬಳಲುವಂತೆ ಮಾಡುತ್ತದೆ . ವಾತಾವರಣದಲ್ಲಿ ಹೆಚ್ಚಳವಾಗುವ ಉಷ್ಣಾಂಶದಿಂದ ದೇಹವು ನಿರ್ಲಲೀಕರಣಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ದೇಹವನ್ನು ತಂಪಾಗಿಟ್ಟುವುದು ಹೆಚ್ಚು ಅನಿವಾರ್ಯ. ಬೇಸಿಗೆ ಕಾಲದಲ್ಲಿ ಕೇವಲ ನೀರು ಕುಡಿದರೆ ಸಾಲದು. ನೀರಿನ ಅಂಶವಿರುವ ತಾಜಾ ಹಣ್ಣಿನ ರಸವನ್ನು ಕುಡಿಯುವುದು ಅನಿವಾರ್ಯ. ಹಾಗಿದ್ದರೆ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಟ್ಟು ಗೊಳ್ಳಲು ಯಾವೆಲ್ಲಾ ಆಹಾರ ಹಾಗೂ ಪಾನೀಯಗಳನ್ನು ಸೇವಿಸ ಬಹುದು ಎಂಬುದರ ಬಗ್ಗೆ ಫೊರ್ಟಿಸ್‌ ಆಸ್ಪತ್ರೆ ಆಹಾರ ತಜ್ಞರಾದ ಡಾ. ಅನುಷ್ಕಾ ಬೈಂದೂರು ಸಲಹೆ ನೀಡಿದ್ದಾರೆ.

ಮಜ್ಜಿಗೆ: ಇದು ಪ್ರೋಬಯಾಟಿಕ್ ಪಾನೀಯವಾಗಿದ್ದು, ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯ ಬೆಳವಣಿಗೆ ಯನ್ನು ಉತ್ತೇಜಿಸುತ್ತದೆ, ಇದರಿಂದಾಗಿ ಬೇಸಿಗೆಯಲ್ಲಿ ಉಂಟಾಗಬಹುದಾದ ಹೊಟ್ಟೆಯ ಸೋಂಕನ್ನು ತಡೆಬಹುದು. ಒಂದು ಲೋಟ (200 ಮಿಲಿ) ಮಜ್ಜಿಗೆ ಸುಮಾರು 30 ಕ್ಯಾಲೋರಿ ಹೊಂದಿರುತ್ತದೆ. ಊಟದ ಬಳಿಕ ಮಜ್ಜಿಗೆ ಸೇವನೆ ಒಳ್ಳೆಯದು. ಮಜ್ಜಿಗೆಯನ್ನು ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿಡುವುದರಿಂದ ನೈಸರ್ಗಿಕವಾಗಿ ತಂಪಾಗಲಿದ್ದು, ಇದು ದೇಹಕ್ಕೆ ಒಳ್ಳೆಯದು.
ಎಳನೀರು ಕಡಿಮೆ ನೈಸರ್ಗಿಕ ಸಕ್ಕರೆ ಹೊಂದಿರುವ ಎಳನೀರು ಹೆಚ್ಚು ಆರೋಗ್ಯಕರ. ಪ್ರತಿ ಗ್ಲಾಸ್ ತೆಂಗಿನ ನೀರು ಕೇವಲ 30 ಕ್ಯಾಲೊರಿ ಹೊಂದಿದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹ ಸಹಾಯ ಮಾಡುತ್ತದೆ.

ಕೋಕಂ ಹಣ್ಣಿನ ರಸ: ಮಸಾಲೆ ಮತ್ತು ಹುಳಿ ಹೊಂದಿರುವ ಕೋಕಂ ಹಣ್ಣಿನ ರಸ ದೇಹಕ್ಕೆ ತಂಪು. ಗುಲಾಬಿ ಬಣ್ಣದಿಂದ ಕೂಡಿರುವ ಈ ರಸ ಗೋವಾ, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶದಲ್ಲಿ ಹೆಚ್ಚು ಲಭ್ಯ. ಕೋಕಮ್ ಹಣ್ಣಿನ ತೊಗಟೆಯು ಹೈಡ್ರಾ ಕ್ಸಿಸಿಟ್ರಿಕ್ ಆಮ್ಲವನ್ನು ಹೊಂದಿದ್ದು, ಇದು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ, ಜೊತೆಗೆ ಬೊಜ್ಜು ಕರಗಿಸಲು ಸಹಕಾರಿ.

ಜೀರಿಗೆ ನೀರು (ಜರ್ಲಿಜಾ): ಸಾಕಷ್ಟು ಜನರಿಗೆ ಜೀರಿಗೆ ನೀರಿನ ಪ್ರಯೋಜನ ತಿಳಿದಿಲ್ಲ. ಜೀರಿಗೆ, ಶುಂಠಿ, ಕರಿಮೆಣಸು, ಪುದೀನಾ ಮತ್ತು ಒಣ ಮಾವಿನ ಪುಡಿಯ ಮಸಾಲೆಯುಕ್ತ ಮಿಶ್ರಣದಿಂದ ತಯಾರಿಸುವ ಈ ರಸವನ್ನು ಬೇಸಿಗೆ ಕಾಲದಲ್ಲಿ ಕುಡಿಯುವುದು ಅತ್ಯುತ್ತಮ. ಇದು ಫೈಬರ್, ವಿಟಮಿನ್‌ಗಳು ಮತ್ತು ಆಹಾರದ ಖನಿಜಗಳನ್ನು ಒದಗಿಸುತ್ತದೆ. ಈ ರಸವನ್ನು ಸೇವಿಸುವುದರಿಂದ ವಾಕರಿಕೆ, ಹೊಟ್ಟೆ ಉಬ್ಬಸ, ಅಜೀರ್ಣಕ್ಕೆ ಸೂಕ್ತ ಮನೆ ಮದ್ದು.

ರಸಂ ಟೊಮ್ಯಾಟೊ, ಬೆಳ್ಳುಳ್ಳಿ, ಮೆಣಸು, ಅರಿಶಿನ ಪುಡಿ, ಕರಿಬೇವು, ಹುಣಸೆಹಣ್ಣಿನಿಂದ ತಯಾರಿಸಿದ ರಸ ಹೆಚ್ಚು ಆರೋಗ್ಯಕರ. ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರ ಸೇವನೆ ಸಾಕಷ್ಟು ಜನರಿಗೆ ಅಜೀರ್ಣಕ್ಕೆ ಕಾರಣವಾಗಲಿದೆ. ರಸಂ ಕುಡಿಯುವುದು ಒಳ್ಳೆಯದೇ.

ರಾಗಿ ಅಂಬಲಿ: ರಾಗಿ ಗಂಜಿಗೆ ಮೊಸರು ಸೇರಿಸಿ ತಯಾರಿಸಿದ ರಾಗಿ ಅಂಬ್ಲಿ ದಕ್ಷಿಣ ಭಾರತದ ಜನಪ್ರಿಯ ಆಯ್ಕೆಯಾಗಿದೆ, ಆದರೆ ಊಟದ ನಡುವೆ ಆರೋಗ್ಯಕರ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಫೈಬರ್‌ನಂತಹ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಇದು ಟ್ರಿಪ್ಟೊಫಾನ್, ಸಿಸ್ಟೀನ್ ಮತ್ತು ಮೆಥಿಯೋನಿನ್‌ನಂತಹ ವಿಶಿಷ್ಟವಾದ ಅಮೈನೋ ಆಸಿಡ್ ಪ್ರೊಫೈಲ್ ಅನ್ನು ಹೊಂದಿದೆ, ಅದು ನೈಸರ್ಗಿಕ ವಿಶ್ರಾಂತಿಯನ್ನು ನೀಡುತ್ತದೆ. ಖಿನ್ನತೆ, ನಿದ್ರಾಹೀನತೆ, ಆತಂಕ ಮತ್ತು ಮೈಗ್ರೇನ್ ದಾಳಿಯಂತಹ ಪರಿಸ್ಥಿತಿಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.