Monday, 16th September 2024

ಆತ್ಮನಿರ್ಭರಕ್ಕೆ ಬೂಸ್ಟ್ ನೀಡುವ ದೂರದೃಷ್ಟಿಯ ಬಜೆಟ್‌

ಬಜೆಟ್ ಆತ್ಮನಿರ್ಬರ ಸಂಕಲ್ಪಕ್ಕೆ ಅವಕಾಶ ಒದಗಿಸುವ ಒಂದು ಹೊಸ ಪ್ರಯೋಗದಂತಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಅನೇಕ
ಯೋಜನೆಗಳು ಮುಂದಿನ ನಾಲ್ಕೈದು ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಉತ್ತೇಜಿಸುವ ಅವಕಾಶಗಳಾಗಿವೆ. ಬ್ಯಾಟರಿ ಚಾಲಿತ ವಾಹನಗಳಿಗೆ ಹೆಚ್ಚಿನ ಅವಕಾಶ, ವಂದೇಭಾರತ್ ರೈಲುಗಳ ಘೋಷಣೆ, ವಿದ್ಯಾಭ್ಯಾಸಕ್ಕೆ ಡಿಜಿಟಲ್ ಸ್ಪರ್ಶ ನೀಡುವ ಮೂಲಕ ಅತ್ಯುತ್ತಮ ಬಜೆಟ್ ಮಂಡನೆಯಾಗಿದೆ ಎನ್ನುತ್ತಾರೆ ಅವರು.

ಮೋಹನ್ ವಿಶ್ವ, ಆರ್ಥಿಕ ತಜ್ಞ

ಸ್ವತಂತ್ರಪೂರ್ವ ಭಾರತದಲ್ಲಿ ಕಳೆದೆರಡು ವರ್ಷದಿಂದ ಕಂಡುಬಂದಂತಹ ಸವಾಲುಗಳನ್ನು ಯಾವ ಪ್ರಧಾನಿಯೂ ಹಿಂದೆ ಕಂಡಿರಲಿಲ್ಲ, ೨೧ ದಿನಗಳ ಕಾಲ ಇಡೀ ದೇಶವೇ ಸ್ತಬ್ದವಾಗಿತ್ತು. ಕರೋನ ಮಹಾಮಾರಿಯಿಂದ ಇಡೀ ದೇಶದ ಆರ್ಥಿಕತೆಯೇ ನಲುಗಿ ಹೋಗಿತ್ತು, ಒಂದೆಡೆ ಆರ್ಥಿಕ ಹಿಂಜರಿತ
ಮತ್ತೊಂದೆಡೆ ಜನರ ಅರೋಗ್ಯ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ’ಬಜೆಟ್’ಮಂಡಿಸುವುದು ಸಾಹಸಮಯ ಕೆಲಸ.

ವಿತ್ತ ಸಚಿವೆ ’ನಿರ್ಮಲಾ ಸೀತಾರಾಮನ’ ಕರೋನಾ ಸಂದರ್ಭದ ಸತತ ಎರಡನೇ ಬಜೆಟ್ ಮಂಡಿಸುವುದರ ಮೂಲಕ ದೇಶದ ಆರ್ಥಿಕತೆಯ ವೇಗವನ್ನು ಹೆಚ್ಚಿಸಿದ್ದಾರೆ. ೨೦೨೨ ರ ಕೇಂದ್ರ ಬಜೆಟ್ ಕೇವಲ ೯೦ ನಿಮಿಷದಲ್ಲಿ ಮುಗಿದು ಹೋಗಿತ್ತು. ಈ ಹಿಂದೆ ನೀಡಿದ ಬಹುತೇಕ ಯೋಜನೆಗಳನ್ನು ಮುಂದು ವರಿಸುವ ಬಜೆಟ್ ಇದಾಗಿತ್ತು. ಕಳೆದ ೮ ವರ್ಷಗಳಿಂದ ಮೂಲಭೂತ ಸೌಕರ್ಯಗಳೆಡೆಗೆ ಹೆಚ್ಚಿನ ಗಮನ ಹರಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ೨೦೨೨-೨೩ ರಲ್ಲಿ ೨೫,೦೦೦ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಬಜೆಟಿನಲ್ಲಿ ಘೋಷಿಸಿದೆ, ೪೦೦ ’ವಂದೇ ಭಾರತ್’ ರೈಲುಗಳನ್ನು ಮೂರು ವರ್ಷಗಳಲ್ಲಿ ದೇಶದಾದ್ಯಂತ ಸಂಚ ರಿಸುವ ಯೋಜನೆಯ ಘೋಷಣೆಯಾಯಿತು, ಖಂಡಿತವಾಗಿಯೂ ಈ ಯೋಜನೆಗಳಲ್ಲಿ ಕರ್ನಾಟಕದಲ್ಲಿನ ಹೆದ್ದಾರಿ ಹಾಗು ರೈಲುಗಳಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

’ಬ್ಯಾಟರಿ’ ಚಾಲಿತ ವಾಹನಗಳಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ’ಬ್ಯಾಟರಿ ವಿನಿಮಯ’ಕೇಂದ್ರಗಳ ಸ್ಥಾಪನೆ ಯ ಬಗ್ಗೆ ಯೋಜನೆಗಳನ್ನು ರೂಪಿಸುವ ಬಗ್ಗೆ ಘೋಷಣೆಯಾಗಿದೆ. ಒಂದು ದೇಶದ ಅಭಿವೃದ್ಧಿಯಲ್ಲಿ ಮೂಲ ಸೌಕರ್ಯಗಳ ಮೇಲಿನ ಖರ್ಚು ಬಹುದೊಡ್ಡ ಪರಿಣಾಮವನ್ನು ಬೀರುತ್ತದೆ. ’ಅಟಲ್ ಜೀ’ಯವರು ಪ್ರಧಾನ ಮಂತ್ರಿ ಯಾಗಿದ್ದಂತಹ ಸಂದರ್ಭದಲ್ಲಿ ’ಸುವರ್ಣ ಚತುಷ್ಪತ’ ಹೆದ್ದಾರಿಯನ್ನು ನಿರ್ಮಿಸಲಾಯಿತು. ಇದರ ಪರಿಣಾಮ ವಾಗಿ ದೇಶದಾದ್ಯಂತ ಅಭಿವೃದ್ಧಿಯ ದೊಡ್ಡ ಅಲೆಯೇ ಸೃಷ್ಟಿಯಾಯಿತು, ೬೦ ವರ್ಷದಲ್ಲಿ ಆಗದ ಅಭಿವೃದ್ಧಿ ಕೇವಲ ೧೦ ವರ್ಷದಳಯಿತು.

ಸುವರ್ಣ ಚತುಷ್ಪಥ’ದ ಕರ್ನಾಟಕ ಭಾಗವನ್ನೇ ತೆಗೆದುಕೊಂಡರೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ,ಹುಬ್ಬಳ್ಳಿ, ಬೆಳಗಾವಿ ಭಾಗಗಳು ಯಾವ ಮಟ್ಟದ ಅಭಿವೃದ್ಧಿ ಕಂಡಿವೆಯೆಂಬುದನ್ನು ನೀವೇ ನೋಡಿದ್ದೀರಿ,ಇದನ್ನರಿತಿರುವ ಮೋದಿ ಸರ್ಕಾರ ನಿನ್ನೆಯ ಬಜೆಟಿನಲ್ಲಿಯೂ ಸಹ ಅದೇ ಮಾದರಿಯ ಯೋಜನೆಗಳಿಗೆ ಮತ್ತಷ್ಟು ಒತ್ತು ನೀಡಿದೆ.

ಜನವರಿ ತಿಂಗಳಲ್ಲಿ ಅಂದಾಜು ೧,೪೮,೦೦೦ ಕೋಟಿ ಯಷ್ಟು ’ಜಿ.ಎಸ.ಟಿ’ ತೆರಿಗೆ ಸಂಗ್ರಹವಾಗಿರುವುದು ಕರೋನ ಹೊಡೆತದಿಂದ ಪಾತಾಳಕ್ಕೆ ತಲುಪಿ ದ್ದಂತಹ ಆರ್ಥಿಕತೆಯ ಚೇತರಿಕೆಯನ್ನು ತೋರಿಸುತ್ತದೆ,’ಜಿ.ಎಸ್.ಟಿ’ ಅನುಷ್ಠಾನಕ್ಕೆ ಬಂದ ದಿನದಿಂದ ಸಂಗ್ರಹವಾಗಿರುವ ಅತೀ ಹೆಚ್ಚಿನ ತೆರಿಗೆ  ಸಂಗ್ರಹ ಇದಾಗಿದೆ.

ಮತ್ತೊಂದೆಡೆ ಕರೋನಾ ಸಮಯದಲ್ಲಿ ಜಗತ್ತಿನ ದೊಡ್ಡಣ್ಣ ಅಮೆರಿಕ ಅಲ್ಲಿನ ಪ್ರಜೆಗಳ ಬ್ಯಾಂಕು ಖಾತೆಗಳಿಗೆ ಹಣವನ್ನು ಹಾಕುವ ಮೂಲಕ ಸಹಾಯ
ಮಾಡಿತ್ತು,ಅದೇ ಮಾದರಿಯಲ್ಲಿ ಭಾರತದಲ್ಲಿಯೂ ಮಾಡಬೇಕೆಂಬ ಠೀಕೆಗಳು ಕೇಳಿ ಬಂದಿದ್ದವು. ನೇರ ಹಣ ವರ್ಗಾವಣೆಯ ಪರಿಣಾಮವಾಗಿ ಅಮೇರಿಕಾ ದೇಶದಲ್ಲಿ ಹಣದುಬ್ಬರ ಏರುತ್ತಲಿದೆ,’ಜಿ.ಡಿ.ಪಿ ಕುಸಿದಿದೆ ಆರ್ಥಿಕತೆ ಮೇಲೆದ್ದಿಲ್ಲ. ಭಾರತದಲ್ಲಿ ನೇರ ಹಣ ವರ್ಗಾವಣೆ ಮಾಡದೆ ಉದ್ಯೋಗ ಸೃಷ್ಟಿಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದರ ಪರಿಣಾಮ ಆರ್ಥಿಕತೆ ಹಿಡಿತದಲ್ಲಿದೆ. ಪಕ್ಕದ ಚೀನಾ ದೇಶದ ’ಜಿ.ಡಿ.ಪಿ’ ಪಾತಾಳಕ್ಕೆ ಕುಸಿದಿದೆ, ಒಂದು ಕರೋನಾ ಲಸಿಕೆಗೆ ಸುಮಾರು ೧೦೦ ಡಾಲರ್ ನೀಡಬೇಕಾಗುತ್ತದೆಯೆಂದು ಹೇಳಲಾಗಿತ್ತು.

ಆದರೆ ’ಆತ್ಮ ನಿರ್ಭರ ಭಾರತ’ದಡಿಯಲ್ಲಿ ಕರೋನಾ ಲಸಿಕೆಯನ್ನು ಭಾರತದಲ್ಲಿಯೇ ಉತ್ಪಾದಿಸುವ ಮೂಲಕ ಉಚಿತವಾಗಿ ೧೬೮ ಕೋಟಿ ಡೋಸ್ ಲಸಿಕೆ ನೀಡಲಾಯಿತು. ’ಅರೋಗ್ಯ’ ಹಾಗು ’ಆರ್ಥಿಕತೆ’ ಎರಡನ್ನೂ ಸಮತೋಲಿತವಾಗಿ ನಿಭಾಯಿಸುವಲ್ಲಿ ವಿತ್ತ ಸಚಿವೆ’ನಿರ್ಮಲ ಸೀತಾರಾಮನ’ ಯಶಸ್ವಿಯಾಗಿರುವುದನ್ನು ಈ ಬಜೆಟಿನಲ್ಲಿ ಕಾಣಬಹುದು. ಪಂಚರಾಜ್ಯಗಳ ಚುನಾವಣೆಯ ಹೊತ್ತಿನಲ್ಲಿ ಒಂದು ಚುನಾವಣಾ ಬಜೆಟ್ ಮಂಡನೆ ಯಾಗುತ್ತದೆಯೆಂದು ಹೇಳಲಾಗುತ್ತಿತ್ತು,ಆದರೆ ನಿರ್ದಿಷ್ಟ ರಾಜ್ಯಕ್ಕೆ ಸೀಮಿತವಾದಂತಹ ಘೋಷಣೆಯನ್ನು ಮಾಡದೆ, ಬಜೆಟ್ ಕೇವಲ ಚುನಾವಣೆಗೆ ಸೀಮಿತವಲ್ಲದೇ ಒಟ್ಟಾರೆ ಅಭಿವೃದ್ಧಿಯ ಒಂದು ಆಶಯವೆಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

’ಆತ್ಮನಿರ್ಭರ ಭಾರತ’ಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಳಿಗೆ ನೀಡಲಾಗಿದ್ದ ತುರ್ತು ಸಾಲವನ್ನು ಮತ್ತೊಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ೨೦೦ ನೂತನ ಕಲಿಕಾ ’ಟಿ.ವಿ’ ಚಾನೆಲ್ ಗಳ ಯೋಜನೆ ಯನ್ನು ಘೋಷಿಸಲಾಗಿದೆ, ’ಭಾರತೀಯ ರಿಸರ್ವ್ ಬ್ಯಾಂಕ್’ನೂತನ ’ಡಿಜಿಟಲ್ ಕರೆನ್ಸಿ’ ನೀಡುವ ಯೋಜನೆಯನ್ನು ಘೋಷಿಸಲಾಗಿದೆ. ಇವುಗಳ ಜೊತೆಗೆ ಈ ಹಿಂದೆ ಇದ್ದಂತಹ ಬಹುತೇಕ ಯೋಜನೆ ಗಳನ್ನು ಅನುಷ್ಠಾನಗೊಳಿಸುವತ್ತ ಹೆಚ್ಚು ಗಮನ ಹರಿಸಲಾಗಿದೆ.

ಕೇವಲ ಘೋಷಣೆಗಳನ್ನು ಕೇಳಿಕೊಂಡು ಬಂದವರಿಗೆ ಈ ಬಜೆಟ್ ಇಷ್ಟವಾಗಿರುವುದಿಲ್ಲ, ಬಜೆಟ್ ಘೋಷಣೆಗಳಿಗೆ ಸೀಮಿತವಾಗಿರಬಾರದು ಬದಲಾಗಿ ಅನುಷ್ಠಾನಗೊಳ್ಳಬೇಕು.ಒಟ್ಟಾರೆ ೨೦೨೨ರ ಬಜೆಟ್ ಸುಮಾರು ೨೫ ವರ್ಷದ ದೂರದೃಷ್ಟಿಯ ಅಭಿವೃದ್ಧಿಯ ಸ್ಪಷ್ಟ ಯೋಜನೆಯಿಂದ ಕೂಡಿದೆ.