Thursday, 21st November 2024

ರಾಜ್ಯದಲ್ಲಿ ಮತ್ತೊಂದು ಬಾಲ ಸನ್ಯಾಸ ವಿವಾದ

ಕುಪ್ಪೂರು ಸಂಸ್ಥಾನಕ್ಕೆ 15 ವರ್ಷದ ಬಾಲಕ ನೇಮಕ, ವಿವಾದ

ಶಿರೂರು ಮಠಕ್ಕೆ ನೇಮಕವಾದಾಗಲೂ ಭಾರಿ ವಿರೋಧ

ಬೆಂಗಳೂರು: ಕರೋನಾ ಎರಡನೇ ಅಲೆ ಸಮಯದಲ್ಲಿ ಶಿರೂರು ಮಠಕ್ಕೆ ಬಾಲಸನ್ಯಾಸಿಯನ್ನು ನೇಮಿಸಿ ವಿವಾದಕ್ಕೆ ಕಾರಣವಾಗಿದ್ದ ಘಟನೆ ಮಾಸುವ ಮುನ್ನವೇ ತುಮಕೂರಿನ ಕುಪ್ಪೂರು ಸಂಸ್ಥಾನಕ್ಕೆ ಬಾಲ ಸನ್ಯಾಸಿ ನೇಮಕವಾಗಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಚಿಕ್ಕನಾಯಕನಹಳ್ಳಿಯಲ್ಲಿರುವ ಕುಪ್ಪೂರು ಗದ್ದುಗೆ ಪೀಠದ ಸ್ವಾಮೀಜಿ ಅವರು ನಿಧನರಾದ ಬಳಿಕ ಈ ಜಾಗಕ್ಕೆ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ 15 ವರ್ಷದ ತೇಜಸ್ ಎಂಬುವವರನ್ನು ನೇಮಿಸಲಾಗಿದೆ. ಆದರೆ ಬಾಲಸನ್ಯಾತ್ವವನ್ನೇ ನಿಷೇಧಿಸಬೇಕು ಎಂದು ಹಲವು ಸ್ವಾಮೀಜಿಗಳು ಈಗಾಗಲೇ ಧ್ವನಿ ಎತ್ತಿರುವಾಗ ಈ ಘಟನೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಇನ್ನು ಕುಪ್ಪೂರು ಗದ್ದುಗೆ ಪ್ರಕರಣದಲ್ಲಿ ತೇಜಸ್ ಅವರ ಸನ್ಯಾಸ ಸ್ವೀಕಾರಕ್ಕೆ ಅವರ, ಪೋಷಕರ ಒಪ್ಪಿಗೆ ಇತ್ತೇ ಎನ್ನುವ ಪ್ರಶ್ನೆಗಳು ಇದೀಗ ಎದ್ದಿವೆ. ಏಕೆಂದರೆ, ಸನ್ಯಾಸಕ್ಕೆ ಮಗನನ್ನು ಕಳಿಸುವಾಗ ಪೋಷಕರ ರೋದನೆ ಮುಗಿಲು ಮುಟ್ಟಿತ್ತು. ಆದ್ದರಿಂದ ಇದೀಗ ಈ ಪ್ರಕರಣ ವಿವಾದ ತಿರುವು ಪಡೆದಿದೆ.

ಹೈಕೋರ್ಟ್‌ನಲ್ಲಿ ಕೇಸ್: ಈಗಾಗಲೇ ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಬಾಲ ಸನ್ಯಾಸಿಗಳ ನೇಮಕವಾಗಿ ರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿದೆ. ಅಂದಿನ ಮುಖ್ಯ ನಾಯ್ಯಮೂರ್ತಿ ಎ.ಎಸ್.ಓಕಾ, ನ್ಯಾ.ಎನ್.ಎಸ್.ಸಂಜಯ್ ಗೌಡ ಅವರ ಪೀಠ ಬಾಲ ಸನ್ಯಾಸಿಗಳ ಸಮ್ಮತಿಗೆ ಕಾನೂನಿನಲ್ಲಿ ಅವಕಾಶ ಎಲ್ಲಿದೆ? ಮಗನ ಸನ್ಯಾಸಕ್ಕೆ ಪೋಷಕರು ಒಪ್ಪಿಗೆ ನೀಡಲು ಸಾಧ್ಯವೇ? ಎಂದು ಪ್ರಶ್ನೆ ಹಾಕಿತ್ತು.

ಈ ಅಂಶಕ್ಕೆ ಸಂಬಂಧಿಸಿದ ಕಾನೂನಿನ ಅಂಶಗಳ ಬಗ್ಗೆ ಪರಿಶೀಲಿಸಬೇಕಿದ್ದು, ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಪೀಠ ಸೂಚನೆ ನೀಡಿತ್ತು. ಈ ಪ್ರಕರಣ ಹೈಕೋರ್ಟ್‌ನಲ್ಲಿರುವಾಗಲೇ, ಇದೇ ರೀತಿಯ ಮತ್ತೊಂದು ಪ್ರಕರಣ ನಡೆದಿರುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

***

ಈಗಾಗಲೇ ಬಾಲ ಸನ್ಯಾಸತ್ವವನ್ನು ನಿಷೇಧಿಸಬೇಕು ಎಂದು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಕೆಯಾಗಿದೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ
ಸರಕಾರಗಳಿಗೂ ಈ ಸಂಬಂಧ ಮನವಿ ಮಾಡಲಾಗಿದೆ. ಇಷ್ಟಾದರೂ ಕರ್ನಾಟಕದಲ್ಲಿ ಮತ್ತೊಂದು ಬಾಲಸನ್ಯಾಸ ದೀಕ್ಷೆ ಕಾರ್ಯ ನಡೆದಿರುವುದು ಖಂಡನೀಯ.
ಶ್ರೀ ವಿಶ್ವ ವಿಜಯ ತೀರ್ಥರು, ಪೇಜಾವರ ಪೀಠದ ಮಾಜಿ ಉತ್ತರಾಧಿಕಾರಿ