Sunday, 8th September 2024

ಒಂದೊಮ್ಮೆ ಈಶ್ವರಪ್ಪ ದೇಶದ್ರೋಹಿ ಎಂದಾದರೆ ಕೇಸು ಹಾಕಿ, ಸದನದ ಅಮೂಲ್ಯ ಸಮಯವನ್ನೇಕೆ ಹಾಳು ಮಾಡುತ್ತೀರಿ ?

ವಿಶ್ವವಾಣಿ ಕಳಕಳಿ: ರಾಧಾಕೃಷ್ಣ ಭಡ್ತಿ ಬೆಂಗಳೂರು

ಶಾಸನ ಸಭೆಯಲ್ಲೂ ರಾಜಕೀಯ 

ಸದನದ ಸಮಯ, ಜನರ ತೆರಿಗೆ ಮೌಲ್ಯವನ್ನರಿಯದ ನಾಯಕರು

ಪ್ರಜಾಪ್ರಭುತ್ವದಲ್ಲಿ ಶಾಸನಸಭೆಗೆ (ವಿಧಾನಸಭೆ, ವಿಧಾನ ಪರಿಷತ್) ತನ್ನದೇ ಆದ ಮಹತ್ವ ಇದೆ. ಭಾರತದಂಥ ಬಹುದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅದಕ್ಕೊಂದು ಒಳ್ಳೆಯ ಇತಿಹಾಸವೂ ಇದೆ. ಆದರೆ, ಈಗಲ್ಲಿ ನಡೆಯುತ್ತಿರವುದೇನು? ಪರಸ್ಪರ ರಾಜಕೀಯ ಕೆಸರೆರಚಾಟ, ತೋಳೇರಿಸಿ ಜಗಳಕ್ಕಿಳಿಯು ವುದು, ವೈಯಕ್ತಿಕ ನಿಂದನೆ… ಇದಕ್ಕೆ ಶಾಸನಸಭೆಯೇ ಬೇಕೇ? ಛೀ, ನಾಚಿಕೆಯಾಗಬೇಕು.

ಅವರಿಗಲ್ಲ, ಅಂಥವರನ್ನು ನಮ್ಮ ಪ್ರತಿನಿಧಿಗಳೆಂದು ಆರಿಸಿ ಕಳುಹಿಸಿದ ನಮಗೆ! ಅಲ್ಲದಿದ್ದರೆ ಮತ್ತೇನು? ರಾಜ್ಯ ವಿಧಾನಮಂಡಲದಲ್ಲಿ ನಡೆಯುತ್ತಿರುವ ಎರಡು ದಿನಗಳ ಕಲಾಪ ಗಮನಿಸಿದಾಗ ಇವರು ಜನಪ್ರತಿನಿಧಿಗಳೇ ಅಥವಾ ಅನಾಗರಿಕರೇ? ಎಂಬ ಅನುಮಾನ ಮೂಡದಿರದು. ಸದನದಂಥ ಪವಿತ್ರ ಸ್ಥಾನವನ್ನೂ ಲೆಕ್ಕಿಸಿದೇ ‘ಅಪ್ಪ’ನ ಹೆಸರಲ್ಲಿ ಕಿತ್ತಾಡುವ, ವೈಯಕ್ತಿಕ ನಿಂದನೆಗಿಳಿಯುವ, ರೌಡಿಗಳಂತೆ ತೋಳೇರಿಸಿಕೊಂಡು ಹೋಗುವ ಪರಿ ಕಂಡ ಯಾರೊಬ್ಬರಿಗೂ ಮರುಕ, ಅಸಹ್ಯ ಹುಟ್ಟದೇ ಇರದು.

ಇಂಥವರಿಂದ  ಆಳಿಸಿಕೊಳ್ಳುವ ದುರವಸ್ಥೆ ನಮಗೆ ಬಂತೇ ಎಂಬ ಪ್ರಶ್ನೆ ಉದ್ಭವಿಸದಿರದು. ರಾಜಕಾರಣಿಗಳೆಂದರೆ ಮೊದಲೇ ನಿಕೃಷ್ಟ ಭಾವ ಮೂಡಿರುವ ಸನ್ನಿವೇಶದಲ್ಲಿ, ಇಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ಕಂಡರೆ ಪ್ರಜಾಪ್ರಭುತ್ವದ ಭವಿಷ್ಯದ ಬಗೆಗೇ ಅನುಮಾನ ಹುಟ್ಟುವಂತಾಗಿದೆ. ಇವರನ್ನು ಮತಹಾಕಿ ಕಳುಹಿಸಿದ್ದು ಜನರ, ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡಲೆಂದೇ ಅಥವಾ ವೈಯಕ್ತಿಕ ಪ್ರತಿಷ್ಠೆ, ಲಾಭ, ಅಧಿಕಾರಕ್ಕಾಗಿ ಕಚ್ಚಾಡಲೆಂದೇ?
ಯಾವ ಪುರುಷಾರ್ಥಕ್ಕೆ ಸದನದ ಕಲಾಪ ನಡೆಸಲಾಗುತ್ತಿದೆಯೆಂಬುದೇ ಅರ್ಥವಾಗುತ್ತಿಲ್ಲ. ಸದನದ ಕಲಾಪದ ಔಚಿತ್ಯವೇ ಪ್ರಶ್ನೆಗೊಳಗಾಗು ವಂತಾಗಿದೆ. ವಿಧಾನಮಂಡಲದ ಹೊರಗೆ ನಡೆಯುತ್ತಿರುವುದಕ್ಕಿಂತ ಹೆಚ್ಚಿನ ರಾಜಕೀಯ ಸಂಘರ್ಷ ಒಳಗೆ ನಡೆಯುತ್ತಿದೆ. ನಿಂದನೆ, ವೈಯಕ್ತಿಕ ಆರೋಪ- ಪ್ರತ್ಯಾ ರೋಪಗಳೇ ಅಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಶಾಸನ ರಚನೆ, ಅಭಿವೃದ್ಧಿ ಕುರಿತ ಚರ್ಚೆಗಳು ಗೌಣವಾಗುತ್ತಿದೆ. ಕೆಲವೊಮ್ಮೆಯಂತೂ ರಣಾಂಗಣ ವಾಗಿ ಮಾರ್ಪಾಡಾಗುತ್ತಿದೆ. ಒಂದೇ ಒಂದು ಮೌಲಿಕ ಚರ್ಚೆಗಳಿಲ್ಲ. ಅಧ್ಯಯನ, ಸಂಶೋಧನೆಗಳ ಕಾಗುಣಿತವೂ ಬಹುತೇಕರಿಗೆ ಗೊತ್ತಿಲ್ಲ. ಏನೋ ಹತ್ತು ದಿನ ಕಲಾಪ ನಡೆಯುತ್ತದೆ; ಹೋಗಿ ತಮ್ಮ ನಾಯಕರು ಹೇಳಿದ್ದಕ್ಕೆ ದನಿಗೂಡಿಸಿ ಗದ್ದಲ ಎಬ್ಬಿಸಿದರಾಯಿತು. ಮಾತಿನ ಸರದಿ ಬಂದರೆ, ಬಂದಾಗ ಬಾಯಿಗೆ ಬಂದ ಏನ್ನೋ ಬಡಬಡಿಸಿ ಬಂದರಾ ಯಿತು ಎಂಬ ಧೋರಣೆಯಲ್ಲಿ ಕೆಲವರಿದ್ದರೆ, ಈ ಬಾರಿ ಮಾಧ್ಯಮಗಳ ಗಮನ ಸೆಳೆದು ಸುದ್ದಿಯಾಗಲು ಏನು ಸರ್ಕಸ್ ಮಾಡಿದರೊಳಿತು ಎಂಬ ಲೆಕ್ಕಾಚಾರದಲ್ಲಿ ಇನ್ನು ಕೆಲವರಿದ್ದಂತೆ ತೋರುತ್ತಿದೆ. ಇವೆಲ್ಲವುಗಳ ನಡುವೆಯೇ ಪೂರ್ವ ನಿಗದಿಯಂತೆ ಬಹುಮತ ಇದ್ದವರು ಒಂದಷ್ಟು ವಿಧೇಯಕ ಗಳನ್ನು ಟೇಬಲ್ ಮಾಡಿ, ಅದ್ಯಾವಾಗಲೋ ಅಂಗೀಕಾರ ಪಡೆದುಬಿಡುತ್ತಾರೆ!

ವಿಶ್ವದಲ್ಲೇ ಭಾರತೀಯ ಪ್ರಜಾಪ್ರಭುತ್ವಕ್ಕೆ ಮಹತ್ವದ ಸ್ಥಾನವಿದೆ. ಇದಕ್ಕೆ ಕಾರಣ ಹಿಂದಿನ ಜನ ಪ್ರತಿನಿಧಿಗಳು ನಡೆದುಕೊಂಡು ಬಂದ ರೀತಿ. ಶಾಸನ ರಚನೆ ಎಂದರೆ ಅದ್ಭುತ ಚರ್ಚೆಯ ವೇದಿಕೆ. ಸರಕಾರ ರೂಪಿಸಿದ ಅನೇಕ ವಿಧೇಯಕಗಳು ಈ ಚರ್ಚೆಯ ಆಧಾರದಲ್ಲಿ ತಿದ್ದುಪಡಿಯಾಗುತ್ತಿದ್ದವು. ಅದೇ ರೀತಿ ಬಜೆಟ್, ಇಲಾಖಾವಾರು ಚರ್ಚೆಗಳೆಂದರೆ ಅಲ್ಲಿ ಸರಕಾರದ ವೈಫಲ್ಯಗಳನ್ನು ಎತ್ತಿತೋರಿಸಲಾಗುತ್ತಿತ್ತೇ ಹೊರತು ‘ಪಕ್ಷಗಳ ರಾಜಕೀಯ’ದ ಚರ್ಚೆಯೇ ನಡೆಯುತ್ತಿರಲಿಲ್ಲ.

ಕೆಲವೊಮ್ಮೆ ದಿನಗಟ್ಟಲೆ, ಅಹೋರಾತ್ರಿ ಚರ್ಚೆಗಳು ನಡೆದದ್ದೂ ಇದೆ. ರಾತ್ರಿಯೆಲ್ಲ ಕುಳಿತು, ಕಡತಗಳನ್ನು ತಿರುವಿಹಾಕಿ, ಅಧ್ಯಯನ ಮಾಡಿ ಬಂದು ಚರ್ಚಿಸಿದವರೂ ಇದ್ದಾರೆ. ಕೆಲ ನಾಯಕರು ಮಾತನಾಡುತ್ತಾರೆಂದರೆ ಮಂತ್ರಮುಗ್ಧವಾಗಿ ಇಡೀ ಸದನ ಕೇಳಸಿಕೊಳ್ಳುವ ದಿನಗಳಿದ್ದವು. ಅಂಥ ಒಂದೇ ಒಂದು ಚರ್ಚೆ ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ಕಂಡಿಲ್ಲ. ಎಂತೆಂಥಾ ಸಂಸದೀಯಪಟುಗಳನ್ನು, ವಾಕ್ಪಟುಗಳನ್ನು ಕರ್ನಾಟಕದ ಸದನ ಕಂಡಿದೆ.

ವಿಷಯ ಕುರಿತು, ಸೈದ್ಧಾಂತಿಕವಾಗಿ ಶರಂಪರ ಸದನ ದಲ್ಲಿ ಕಿತ್ತಾಡುವ ವಿಭಿನ್ನ ಪಕ್ಷಗಳ ಸದಸ್ಯರು ಹೊರಗೆ ಅತ್ಯಂತ ಗೌರವಯುವ ಸ್ನೇಹಿತರಾಗಿ ವರ್ತಿಸುತ್ತಿದ್ದರು. ಯಾವತ್ತಿಗೂ ವೈಯಕ್ತಿಕ ಕಿತ್ತಾಟ, ನಿಂದನೆ ನಡೆದದ್ದೇ ಇಲ್ಲ. ಅಂಥ ‘ಮೌಲ್ಯಧಾರಿತ ರಾಜಕಾರಣ’ ಹೆಗಡೆ ಅವಧಿಗೇ ಕೊನೆಗೊಂಡು ಬಿಟ್ಟವೇ? ಇತ್ತೀಚೆಗಂತೂ ಬಜೆಟ್, ಅಭಿವೃದ್ಧಿ ಕುರಿತ ಚರ್ಚೆಗಳೆಂದರೆ ಅದು ಸರಕಾರದ ಟೀಕೆಗಿಂತ ಆಡಳಿತದಲ್ಲಿರುವ ಪಕ್ಷದ ಕುರಿತಾದ ಟೀಕೆಗೆ ವೇದಿಕೆಯಾಗುತ್ತಿದೆ.

ವಿರೋಧಿಸುವುದೇ ಪ್ರತಿಪಕ್ಷದ ಒನ್‌ಪಾಯಿಂಟ್ ಅಜೆಂಡಾ ಅಂದುಕೊಂಡಂತಿದೆ. ಇನ್ನು ಆಡಳಿತ ಪಕ್ಷದವರು ಪ್ರತಿಪಕ್ಷದ ಕುರಿತಾಗಿಯೂ ಅದೇ
ರೀತಿಯ ಮಾತುಗಳನ್ನು ಆಡುತ್ತಾರೆಯೇ ಹೊರತು ವಿಷಯಾಧಾರಿತ ಚರ್ಚೆ ಬಗ್ಗೆ ಯೋಚಿಸುವುದು ಕೂಡ ಇಲ್ಲ. ಇನ್ನು, ಜನರಿಂದ ಆಯ್ಕೆಯಾಗಿ ದ್ದನ್ನು ಹೊಣೆಯೆಂದು ಭಾವಿಸಿದ್ದಕ್ಕಿಂತ, ಅಧಿಕಾರದ, ಲೋಲುಪತೆಯ ಅವಕಾಶವೆಂದೇ ಕೆಲವರು ಭಾವಿಸಿದಂತಿದೆ.

ಶಾಸನಸಭೆಗೆ ಬರುವವರಿಗೆ ಜನರ ತೆರಿಗೆ ಹಣ ಗಣನೆಗೇ ಇಲ್ಲ. ಪ್ರಮುಖ ಕರ್ತವ್ಯಗಳಾದ ಶಾಸನಗಳ ರಚನೆ, ಅಭಿವೃದ್ಧಿ ಯೋಜನೆಗಳನ್ನು ರೂಪಿಸು ವುದು, ತಮ್ಮ ಕ್ಷೇತ್ರದ ಸಮಸ್ಯೆಗಳು, ಜನರ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆದು ಅವುಗಳಿಗೆ ಪರಿಹಾರ ಕಲ್ಪಿಸುವುದು…ಇತ್ಯಾದಿಗಳ ಅರಿವೂ ಇದ್ದದಂತಿಲ್ಲ. ಆದರೆ, ಈ ಬಗ್ಗೆ ಬಹುತೇಕ ಶಾಸಕರಿಗೆ ಆಸಕ್ತಿ ಇಲ್ಲ. ಪ್ರತಿಪಕ್ಷದಲ್ಲಿದ್ದರೆ ಆಡಳಿತ ಪಕ್ಷವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸುವುದು ಎಂಬ ಯೋಚನೆಯಾದರೆ, ಆಡಳಿತ ಪಕ್ಷದಲ್ಲಿರುವವರಿಗೆ ತಮ್ಮನ್ನು ಸಮರ್ಥಿಸಿಕೊಂಡು ಪ್ರತಿಪಕ್ಷಗಳ ಮೇಲೆ ಮುಗಿಬೀಳುವುದೇ ಕೆಲಸ ಎನ್ನುವಂತಾ ಗಿದೆ.

ಇದೀಗ ನಡೆಯುತ್ತಿರುವ ಅಧಿವೇಶನವನ್ನೇ ಗಮನಿಸಿ. ಸಚಿವ ಕೆ.ಎಸ್.ಈಶ್ವರಪ್ಪ ವಿಚಾರದಲ್ಲಿ ಗದ್ದ ಎಬ್ಬಿಸಿರುವ ಕಾಂಗ್ರೆಸ್, ಕಲಾಪಕ್ಕೆ ಅಡ್ಡಿ ಮಾಡಿ ದ್ದಲ್ಲದೇ ಆಹೋರಾತ್ರಿ ಧರಣಿಯನ್ನೂ ಆರಂಭಿಸಿದೆ. ಮತ್ತೊಂದೆಡೆ ಆಡಳಿತ ಪಕ್ಷ ಬಿಜೆಪಿ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡು ಹಳೆಯ ಪ್ರಕರಣ ಗಳನ್ನು ಕೆದಕಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ವಿವಾದದ ಬೆಂಕಿಗೆ ತುಪ್ಪ ಸುರಿಯುತ್ತಿರುವ ಬಿಜೆಪಿ ಸದಸ್ಯರು ಈ ಪ್ರಕರಣವನ್ನು ಕಾಂಗ್ರೆಸ್ ವಿರುದ್ಧ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಎಲ್ಲ ತಂತ್ರಗಳನ್ನೂ ಹೆಣೆಯುತ್ತಿದೆ. ಈ ಸಂದರ್ಭದಲ್ಲಿ ನಡೆದ ವಾಕ್ಸಮರ, ತೋಳೇರಿಸಿ ಕೊಂಡು ಜಗಳಕ್ಕೆ ಹೋಗಿ ದ್ದಂತೂ ಎಲ್ಲರಿಗೂ ನಾಚಿಕೆ ತರುವಂತಿತ್ತು.

ಇಷ್ಟೆಲ್ಲದರ ಪುರುಷಾರ್ಥವಾದರೂ ಏನು? ಈಶ್ವರಪ್ಪ ರಾಜೀನಾಮೆ ಕೊಡಿಸಲು ಸಾಧ್ಯವೇ? ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ಕೈಬಿಡು ವುದಿಲ್ಲ ಎಂಬುದು ಕಾಂಗ್ರೆಸಿಗೂ ಗೊತ್ತು. ಒಂದೊಮ್ಮೆ ಅವರನ್ನು ಕೆಳಗಿಳಿಸಿದರೂ ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಭಾರೀ ಕ್ರಾಂತಿ ಸಾಧನೆ ಯಾದೀತೇ? ಆಡಳಿತ-ಪ್ರತಿಪಕ್ಷಗಳೆರಡಕ್ಕೂ ಬೇಕಾಗಿರುವುದು ಈಶ್ವರಪ್ಪ ಪ್ರಕರಣದಲ್ಲಿ ರಾಜಕೀಯ ಲಾಭ. ಅದಕ್ಕಾಗಿ ಎಲ್ಲ ರೀತಿಯ ಕಸರತ್ತುಗಳನ್ನೂ ನಡೆಸುತ್ತಿದೆ ಎಂಬುದು ಗೊತ್ತಿರುವ ಸತ್ಯ. ಅದನ್ನು ಸದನ ಹೊರಗೆ ಮಾಡಬಹುದಿತ್ತಲ್ಲವೇ? ಇದರಿಂದ ಏನನ್ನೂ ಸಾಧಿಸುತ್ತಾರೆ? ಜನಸಾಮಾನ್ಯರಿಗೆ ಇದರಿಂದ ಏನು ಉಪಯೋಗ. ಹಾಗೂ ನಿಜವಾಗಿ ಈಶ್ವರಪ್ಪ ರಾಷ್ಟ್ರದ್ರೋಹವನ್ನೇ ಮಾಡಿದ್ದರೆ, ಕಾನೂನು ಹೋರಾಟದ ಅವಕಾಶವಿದೆ.

ಅದನ್ನು ಮಾಡಬಹುದಿತ್ತು. ಸದನದ ಹೊರಗೆ ಹೋರಾಟ ರೂಪಿಸಬಹುದಿತ್ತು. ಜನಾಭಿಪ್ರಾಯ ಮೂಡಿಸಬಹುದಿತ್ತು. ಅದ್ಯಾವುದನ್ನೂ ಮಾಡದೇ
ಸದನದ ಅಮೂಲ್ಯ ಸಮಯವನ್ನು ಬಲಿತೆಗೆದುಕೊಳ್ಳುವ ಹುಂಭತನವೇಕೆ? ಒಟ್ಟಿನಲ್ಲಿ ಇವರನ್ನು ಕಳುಹಿಸಿದ ನಾವೇ ಪಾಪಿಗಳು. ಏಕೆಂದರೆ, ಮತ್ತೆ ಅವರು ಮತ ಕೇಳಿಕೊಂಡು ಬಂದಾಗಲೂ ಹಳೆಯದನ್ನೆಲ್ಲ ಮರೆತು ಅಂಥವರನ್ನೇ ಗೆಲ್ಲಿಸಿ ಕಳುಹಿಸುತ್ತೇವೆ. ತಪ್ಪೆಲ್ಲ ನಮ್ಮದೇ ಬಿಡಿ.

ಕಲಾಪಕ್ಕೆ ಬರುವುದೇ ಅಪರೂಪ
ಕೆಲವು ಸದಸ್ಯರಂತೂ ಕಲಾಪಕ್ಕೆ ಬರುವುದೇ ಅಪರೂಪ ಎನ್ನುವಂತಾಗಿದೆ. ತಾವು ಯಾವುದಾದರೂ ವಿಷಯ ಪ್ರಸ್ತಾಪಿಸಬೇಕಾದರೆ ಇಲ್ಲವೇ ಭಾಷಣ ಮಾಡಬೇಕಾದರೆ ಮಾತ್ರ ಕಲಾಪಕ್ಕೆ ಬರುವ ಶಾಸಕರಿದ್ದಾರೆ. ಬೇಸರದ ಸಂಗತಿ ಎಂದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ಸರಿಯಾಗಿ ಚರ್ಚೆಯೇ ನಡೆಯದ ಸದನಕ್ಕೇಕೆ ಬರಬೇಕು? ಅದಕ್ಕೇ ನಾನು ಹೋಗುತ್ತಿಲ್ಲ’ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಚರ್ಚೆ ನಡೆಸಬೇಕಾದ ಹಿರಿಯರೇ ಈ ಮಾತು ಹೇಳಿದರೆ ಇನ್ನುಳಿದ ಶಾಸಕರ ಪರಿಸ್ಥಿತಿ ಏನು? ಇನ್ನು ಕೆಲವು ಶಾಸಕರು ಅಧಿವೇಶನಕ್ಕೆ ಬಂದರೂ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ವಾಪಸ್ ಹೋಗುತ್ತಾರೆ. ಮತ್ತೆ ಕೆಲವರು ಸದನದಲ್ಲಿ ಇದ್ದರೂ ತಮ್ಮ ಪಾಡಿಗೆ ತಾವು ಎನ್ನುವಂತೆ ಇರುತ್ತಾರೆ. ಗೊರಕೆಯೊಂದಿಗೆ ಸುದೀರ್ಘ ವಿಶ್ರಾಂತಿಗೆ ಜಾರುವ ವರಿಗೂ ಕಡಿಮೆ ಇಲ್ಲ. ಇನ್ನು ನೀಲಿಚಿತ್ರಗಳನ್ನು ನೋಡಿದ, ಮಾಡಬಾರದ್ದೆಲ್ಲ ಮಾಡಿದ ಉದಾಹರಣೆಯೂ ನಮ್ಮಲ್ಲಿದೆ, ಬಿಡಿ.

60 ದಿನ ಕಲಾಪದ ಕನಸು
ವರ್ಷಕ್ಕೆ ಕನಿಷ್ಠ 60 ದಿನ ಕಲಾಪ ನಡೆಸಬೇಕು ಎಂಬ ನಿಯಮವಿದೆ. ಈ ಹಿಂದೆ ಅಂದರೆ 1960-70ರ ದಶಕದಲ್ಲಿ ವರ್ಷಕ್ಕೆ 80ಕ್ಕಿಂತ ಹೆಚ್ಚು, ಗರಿಷ್ಠ 98 ದಿನಗಳವರೆಗೆ ಕಲಾಪ ನಡೆಯುತ್ತಿತ್ತು. ನಂತರ ಕಲಾಪದ ದಿನ ಕಡಿಮೆಯಾಗಿದ್ದರಿಂದ ವಾರ್ಷಿಕ ಕನಿಷ್ಠ 60 ದಿನ ಕಲಾಪ ನಡೆಸಬೇಕು ಎಂದು 2002ರಲ್ಲಿ ನಿಯಮ ರೂಪಿಸಲಾಗಿತ್ತು. ವಿಶೇಷವೆಂದರೆ ನಿಯಮ ಇರುವುದೇ ಉಲ್ಲಂಸಲು ಎಂಬಂತೆ ಈ ನಿಯಮ ಜಾರಿಯಾದ ಮೇಲೆ ಇದುವರೆಗೂ ಕಲಾಪ 60 ದಿನ ನಡೆದಿಲ್ಲ. ಕಳೆದ ಐದು ವರ್ಷಗಳಲ್ಲಿ ಅಂದರೆ 2017ರಲ್ಲಿ 40 ದಿನ, 2018ರಲ್ಲಿ 28 ದಿನ, 2019ರಲ್ಲಿ 20 ದಿನ, 2020ರಲ್ಲಿ 33 ದಿನ ಮತ್ತು 2021ರಲ್ಲಿ 41 ದಿನ ಸದನ ನಡೆದಿದೆ.

ಸರಕಾರಕ್ಕಾಗಲೀ, ಪ್ರತಿಪಕ್ಷಗಳಿಗಾಗಲೀ ಕಲಾಪ ನಡೆಸುವುದು ಇಷ್ಟವಿಲ್ಲ ಎಂಬುದು ಇದರಿಂದಲೇ ತಿಳಿಯುತ್ತದೆ. ಕಳೆದೆರಡು ವರ್ಷಗಳಿಂದಲಂತೂ ಕರೋನಾ ಕಾರಣಕ್ಕೆ ಅಧಿವೇಶನವೇ ಸರಿಯಾಗಿ ನಡೆದಿಲ್ಲ ಎಂಬುದು ಗಮನಾರ್ಹ. ತೆರಿಗೆ ಹಣ ಪೋಲು ಬೆಂಗಳೂರಿನಲ್ಲಿ ಒಂದು ದಿನದ ಅಧಿವೇಶನಕ್ಕೆ
ಕನಿಷ್ಠ 50 ಲಕ್ಷ ರು. ವೆಚ್ಚವಾಗುತ್ತದೆ. ಅದೇ ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ಈ ಮೊತ್ತ 1 ಕೋಟಿ ರು.ನಿಂದ 1.50 ಕೋಟಿ ರು.ನಷ್ಟಾಗುತ್ತದೆ. ಈ ವೇಳೆ ಶಾಸಕರಿಗೆ ಅಧಿವೇಶನ ಭತ್ಯೆ, ಪ್ರಯಾಣ ವೆಚ್ಚ ಎಲ್ಲವನ್ನೂ ನೀಡಲಾಗುತ್ತದೆ. ಈ ಎಲ್ಲಾ ಹಣ ಬರುವುದು ಜನ ಸಾಮಾನ್ಯರು ಪಾವತಿಸುವ ತೆರಿಗೆಯಿಂದ.

error: Content is protected !!