Saturday, 4th January 2025

Loud Music danger: ಅಬ್ಬರದ ಸಂಗೀತ ತಂದೀತು ಅಪಾಯ !

ಡಾ. ಕರವೀರಪ್ರಭು ಕ್ಯಾಲಕೊಂಡ

ಶ್ವಾಸಕೋಶಗಳು ತಮ್ಮ ಕೆಲಸವನ್ನು ಸರಾಗವಾಗಿ ಮಾಡಬೇಕೆಂದರೆ, ಭಾರಿ ಶಬ್ದಗಳ ಡಿ.ಜೆ. ಮ್ಯೂಸಿಕ್‌ನಿಂದ ದೂರವಿರಿ.

ಭಾರತದಲ್ಲಿ ಮೊದಲಿನಿಂದಲೂ ಸಂಗೀತಕ್ಕೆ ಗೌರವಯುತ ಸ್ಥಾನವಿದೆ. ಸಂಗೀತದಿಂದ ವ್ಯಕ್ತಿ ತನ್ನ ಜೀವನದ ದಿಕ್ಕನ್ನೇ ಬದಲಿಸಿಕೊಳ್ಳಬಲ್ಲ . ಆಧುನಿಕ ಚಿಕಿತ್ಸಾ ಪದ್ಧತಿಯಿಂದ ಸಾಧ್ಯವಾಗದ ವಾಸಿಯಾಗುವಿಕೆಯನ್ನು ಮ್ಯೂಸಿಕ್ ಥೆರಪಿ ಮೂಲಕ ನೀಡಬಹುದು. ಆದರೆ, ಇಂದಿನ ಯುವಕರು ಸಂಗೀತ ಸುಧೆಯ ಗಂಧ ಗಾಳಿ ತಿಳಿಯದೇ, ಕಿವಿ ಗಡಚಿಕ್ಕುವ ಡಿ.ಜೆ.ಸೌಂಡಿಗೆ ಮಾರು ಹೋಗುತ್ತಿರುವುದು ದುರ್ದೈವದ ಸಂಗತಿ! ಹಬ್ಬ ಹರಿದಿನಗಳಲ್ಲಿ , ಜಾತ್ರೆ
ಉತ್ಸವಗಳಲ್ಲಿ, ಹೊಸ ವರ್ಷದ ಆಚರಣೆಯಲ್ಲಿ, ಮದುವೆ ಮುಂಜಿವೆಗಳಲ್ಲಿ ಡಿ.ಜೆ. ಸೌಂಡಿಗೆ ಕುಣಿದು ಕುಪ್ಪಳಿಸು ವುದು ಹೊಸ ಬೆಳವಣಿಗೆ.

ಇಂದಿನ ಯುವಕರು ಕಾರಿನಲ್ಲಿ ಕೂತು ಇಗ್ನಿಷನ್ ಕೀ ತಿರುವಿದಾಕ್ಷಣ ದೊಡ್ಡ ಸದ್ದು ಅಪ್ಪಳಿಸುತ್ತಿರುತ್ತದೆ. ಕೇವಲ ಆ ಶಬ್ದಕ್ಕೆ ಹೃದಯದಲ್ಲಿ ಬಿರುಕು ಮೂಡುತ್ತದೆ. ಕಿವಿಗಳು ಗುಂಯ್ ಗುಡುತ್ತಿರುತ್ತವೆ. ಈ ಬಗೆಯ ದೊಡ್ಡ ಸದ್ದು ಕೇಳುವುದರಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆಯೆಂಬ ವಿಷಯ ಈ ನಮ್ಮ ಯುವಕರಿಗೆ ಗೊತ್ತಿಲ್ಲದಿರುವುದು ದುರ್ದೈವದ ಸಂಗತಿ.

ಹೃದಯಗಳೇ ತತ್ತರಿಸಿ ಹೋಗುವ ಹಾಗೆ ಭಾರೀ ಪ್ರಮಾಣದ ಸಾವಿರಾರು ವ್ಯಾಟ್ ಸ್ಪೀಕರ್ ಗಳನ್ನಿಟ್ಟುಕೊಂಡು ಸಂಗೀತ ಆಸ್ವಾದಿಸುವುದು ಈ ತಲೆಮಾರಿನ ಯುವಕರಿಗೆ ಒಂದು ಮೋಜಿನ ವಿಷಯವಾಗಿ ಬಿಟ್ಟಿದೆ. ವಿಪರೀತ ಸೌಂಡು ಇಟ್ಟುಕೊಂಡು ಆಲಿಸುವುದರಿಂದ ಕಿವಿಯ ತಮ್ಮಟೆಯಲ್ಲಿ ಕಂಪನ ಹೆಚ್ಚಿ ಬಿರಿಯುವ ಸಂಭವ
ಉಂಟು. ಇದರಿಂದ ಕವಿಯ ತೊಂದರೆ, ಕಿವುಡುತನ ಅಪ್ಪಿಕೊಳ್ಳಬಹುದು.

ಇಷ್ಟೇ ಅಲ್ಲ, ಕೆಲವೊಮ್ಮೆ ವಿಪರೀತ ಸದ್ದಿನಿಂದ ನ್ಯೂಮೊಥೊರಾಕ್ಸ್ ಎಂಬ ಶ್ವಾಸಕೋಶದ ಸಮಸ್ಯೆ ತಲೆದೋರು ತ್ತದೆ. ಈ ವಿಷಯವನ್ನು ವೈದ್ಯರು ಪತ್ತೆ ಹಚ್ಚಿದ ರೀತಿಯೂ ಬಹಳ ಕುತೂಹಲಕಾರಿಯಾಗಿದೆ. ಕಾರಿನಲ್ಲಿ ಪ್ರತಿನಿತ್ಯ ೧೦೦೦ ವ್ಯಾಟ್‌ನ ಸ್ಪೀಕರ್‌ಗಳನ್ನಿಟ್ಟುಕೊಂಡು ಭಾರೀ ಶಬ್ದದೊಂದಿಗೆ ಸಂಗೀತವನ್ನು ಆಸ್ವಾದಿಸುತ್ತಿದ್ದ 19 ವರ್ಷದ ಯುವಕನಿಂದಲೇ ಈ ಸಮಸ್ಯೆ ಬೆಳಕಿಗೆ ಬಂದಿರುವುದು ಒಂದು ವಿಶೇಷ. ಆ ಯುವಕನಿಗೆ ಒಂದು ದಿನ ಇದ್ದಕ್ಕಿದ್ದ ಹಾಗೆ ಶ್ವಾಸಕೋಶ ತನ್ನ ಕಾರ್ಯವನ್ನು ನಿಲ್ಲಿಸಿಬಿಟ್ಟಂತಾಗಿ, ವಿಪರೀತ ನೋವಿನೊಂದಿಗೆ ಉಸಿರಾಡುವುದೇ ಕಷ್ಟ ಎಂಬ ಪರಿಸ್ಥಿತಿ ಉಂಟಾಯಿತು. ವೈದ್ಯರು ಬಹಳ ಎಚ್ಚರಿಕೆಯಿಂದ ಪರೀಕ್ಷಿಸಿ, ಈ ಸಮಸ್ಯೆ ‘ನ್ಯೂಮೊಥೊರಾಕ್ಸ’ ಎಂಬ ಸಮಸ್ಯೆಗೆ ಸಂಬಂಧಪಟ್ಟಿದೆ ಎನ್ನುವ ನಿರ್ಧಾರಕ್ಕೆ ಬಂದರು. ಆ ಯುವಕನನ್ನು ವಿಚಾರಣೆಗೊಳಪಡಿಸಿದಾಗ, ಆತ ಪ್ರತಿ ನಿತ್ಯ ಬಳಸುತ್ತಿದ್ದ ಸೌಂಡ್ ಬಾಕ್ಸ್‌ಗಳೇ ಇದಕ್ಕೆ ಕಾರಣವಾಗಿರ ಬಹುದೆಂದು ವೈದ್ಯರು ತರ್ಕಿಸಿದರು !

ರಕ್ಷಾಕವಚದಲ್ಲಿ ಬಿರುಕು
ನಮ್ಮ ಶರೀರದೊಳಗಿನ ಶ್ವಾಸಕೋಶಗಳ ಸುತ್ತಲೂ ರಕ್ಷಣೆಯಾಗಿ ಪ್ಲೂರಾ ಎಂಬ ಕೋಮಲವಾದ ಪೊರೆ ಆವರಿಸಿ ರುತ್ತದೆ. ಈ ಪೊರೆ ಮತ್ತು ಶ್ವಾಸಕೋಶಗಳ ಮಧ್ಯೆ ಗಾಳಿ ಸೇರಿಕೊಂಡಾಗ, ನೋವು ಸಹಿತವಾದ ನ್ಯೂಮೊಥೊರಾಕ್ಸ ಸಮಸ್ಯೆ ಉದ್ಭವಿಸುತ್ತದೆ. ಶಕ್ತಿಯುತವಾದ ಭಾರಿ ಶಬ್ದಗಳು ಹಾಗೂ ಅವುಗಳ ತೀವ್ರ ಧ್ವನಿ ತರಂಗಗಳಿಂದಾಗಿ ಶ್ವಾಸಕೋಶಗಳ ಗೋಡೆಗಳು ಎಲ್ಲಾದರೂ ದುರ್ಬಲವಾಗಿದ್ದರೆ, ಬಿರುಕು ಬಿಡುತ್ತವೆ. ಅಲ್ಲಿಂದ ಗಾಳಿಯು ಪ್ಲೂರಾ ಪೊರೆಯೊಳಗೆ ನುಸುಳಿ, ಈ ಸಮಸ್ಯೆಯನ್ನು ಹುಟ್ಟುಹಾಕುತ್ತದೆಯೆಂದು ತಜ್ಞ ವೈದ್ಯರು ವಿವರಿಸಿದ್ದಾರೆ.

ರಸಮಂಜರಿ ಕಾರ್ಯಕ್ರಮಗಳಲ್ಲೂ, ಭಾರಿ ಸೌಂಡ್ ಬಾಕ್ಸಗಳ ಪಕ್ಕದಲ್ಲಿ ಸಂಗೀತ ಆಸ್ವಾದಿಸಿದ ಕೆಲವು ಮಂದಿ ಯಲ್ಲೂ ಇದೇ ಬಗೆಯ ಸಮಸ್ಯೆ ಕಂಡುಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಮಸ್ಯೆ ಸ್ತ್ರೀಯರಿಗಿಂತ ಪುರುಷರಲ್ಲಿ ಮೂರು ಪಟ್ಟು ಹೆಚ್ಚಾಗಿರುತ್ತದೆಯೆಂದು, ಹೊರಗಿನಿಂದ ಬರುವ ಭಾರಿ ಧ್ವನಿ ತರಂಗಗಳಿಗೆ ಶ್ವಾಸ ಕೋಶದಲ್ಲಿಯ ಗಾಳಿ ಮತ್ತು ಅಣುಕೋಶಗಳು ಬೇರೆ ಬೇರೆಯಾಗಿ ಸ್ಪಂದಿಸುವುದು ಮತ್ತು ಪ್ರಕಂಪಿಸುವುದು ಕೂಡಾ ಇದಕ್ಕೆ ಮುಖ್ಯ ಕಾರಣವಾಗಬಹುದೆಂದು ವೈದ್ಯರು ಹೇಳುತ್ತಿದ್ದಾರೆ. ನಮ್ಮ ಶ್ವಾಸಕೋಶಗಳು ತಮ್ಮ ಕೆಲಸವನ್ನು ಸರಾಗವಾಗಿ ಮಾಡಬೇಕೆಂದರೆ, ಭಾರಿ ಶಬ್ದಗಳ ಡಿ. ಜೆ.ಮ್ಯೂಸಿಕ್‌ನಿಂದ ದೂರವಿರಿ.

(ಲೇಖಕರು ವೈದ್ಯರು)