Sunday, 5th January 2025

MLA Pradeep Eshwar: ಕ್ಷೇತ್ರದ ಅಭಿವೃದ್ದಿಗೆ ಪ್ರದೀಪ್‌ ಹೊಸ ಸಂಕಲ್ಪ

ಸರಕಾರದ ಅನುದಾನವನ್ನು ಮಾತ್ರ ನೆಚ್ಚಿಕೊಳ್ಳದೇ ವೈಯಕ್ತಿಕವಾಗಿಯೂ ಅನೇಕರಿಗೆ ಸಹಾಯ

ಬೆಂಗಳೂರು: ಹಲವು ವಿನೂತನ ಯೋಜನೆಗಳ ಮೂಲಕ ‘ಮಾದರಿ’ ಎನಿಸಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು, ಹೊಸ ವರ್ಷಕ್ಕೆ ಹೊಸ ಆಲೋಚನೆಗಳೊಂದಿಗೆ ವರ್ಷ ಆರಂಭಿಸಲು ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುವುದು, ಚಿಕ್ಕಬಳ್ಳಾಪುರಕ್ಕೆ ಹೆಚ್ಚೆಚ್ಚು ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಯಾಣಿಕ ಪ್ರಯತ್ನ ಮಾಡುವುದು, ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿ ಗಳಿಗೆ ವಿಶೇಷ ಕೋಚಿಂಗ್ ನೀಡಲು ಕ್ರಮ ವಹಿಸುವುದು ಸೇರಿದಂತೆ ಹತ್ತು ಹಲವು ಹೊಸ ಸಂಕಲ್ಪಗಳನ್ನು ಮಾಡಿದ್ದಾರೆ.

ನಮ್ಮೂರಿಗೆ ನಮ್ಮ ಶಾಸಕ ಕನಸಿನ ಯೋಜನೆ ಯಶಸ್ವಿ: ಶಾಸಕರಾಗಿ ಆಯ್ಕೆಯಾದ ಕ್ಷಣ ಆರಂಭಿಸಿದ್ದ ‘ನಮಸ್ತೆ ಚಿಕ್ಕಬಳ್ಳಾಪುರ’ ಅಭಿಯಾನ ಮನೆಮಾತಾಗಿತ್ತು. ಅದಾದ ಬಳಿಕ ಆರಂಭಿಸಿದ ‘ನಮ್ಮೂರಿಗೆ ನಮ್ಮ ಶಾಸಕ ಕನಸಿನ ಯೋಜನೆ’ ಆರಂಭಿಸಿದ ಕೆಲವೇ ತಿಂಗಳಲ್ಲಿ ನೂರು ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಂಕಷ್ಟವನ್ನು ಆಲಿಸಿದ್ದಾರೆ. ಪ್ರದೀಪ್ ಈಶ್ವರ್ ಆರಂಭಿಸಿದ ನಮ್ಮೂರಿಗೆ ನಮ್ಮ ಶಾಸಕ ಅಭಿಯಾನವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಶ್ಲಾಸಿದ್ದರು. ಇದೀಗ ಈ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಲು ಪ್ರದೀಪ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಮ್ಮೂರಿಗೆ ನಮ್ಮ ಶಾಸಕ ಅಭಿಯಾನದಲ್ಲಿ ಕೇವಲ ಪ್ರದೀಪ್ ಈಶ್ವರ್ ಮಾತ್ರ ವಲ್ಲದೇ, ತಾಲೂಕಿನ ಎಲ್ಲ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಆದ್ದರಿಂದ ಗ್ರಾಮಗಳಲ್ಲಿರುವ ಶೇ.60ಕ್ಕೂ ಹೆಚ್ಚು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುತ್ತಿದೆ.

ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿ, ಸಾರಿಗೆ ಸಮಸ್ಯೆ ಇದ್ದಂತೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮವಹಿಸಲಾಗಿದೆ. ಈ ಮೂಲಕ ಜನತೆ ಅನುಭವಿಸುತ್ತಿರುವ ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವ
ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕವಾಗಿಯೂ ಸಹಾಯ: ಬಹುತೇಕ ಶಾಸಕರು ತಮ್ಮ ಕ್ಷೇತ್ರಕ್ಕೆ ಸರಕಾರದಿಂದ ಬರುವ ಅನುದಾನವನ್ನು ಪಡೆದು ಅಭಿವೃದ್ಧಿ ಪಡಿಸುತ್ತಾರೆ. ಆದರೆ ಇದಕ್ಕೆ ಅಪವಾದ ಎನ್ನುವ ರೀತಿಯಲ್ಲಿ ಪ್ರದೀಪ್ ಈಶ್ವರ್ ಅವರು ತಮ್ಮ
ವೈಯಕ್ತಿಕ ಹಣದಿಂದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ವಿಶೇಷ ತರಬೇತಿ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಬೇತಿ, ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ, ತಮ್ಮ ತಾಯಿಯ ನೆನಪಿನಲ್ಲಿ ‘ಅಮ್ಮ’ ಆಂಬ್ಯುಲೆನ್ಸ್ ಸೇವೆ, ಉಚಿತ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಯೋಜನೆಗಳನ್ನು ಕಳೆದ ವರ್ಷ ಕೈಗೆತ್ತಿಕೊಂಡಿದ್ದರು.

ಇದರೊಂದಿಗೆ ಇಡೀ ಕ್ಷೇತ್ರದ ಮಹಿಳೆಯರಿಗೆ ಸೀರೆಯನ್ನು ವಿತರಿಸಿದ್ದಾರೆ. ಪ್ರದೀಪ್ ಈಶ್ವರ್ ಕಾರ್ಯಚರಣೆ ಬಗ್ಗೆ
ರೇಣುಮಾಕಲಹಳ್ಳಿಯ ಮಾರಪ್ಪ ಮಾತನಾಡಿದ್ದು, ಈ ಹಿಂದೆ ಶಾಸಕರನ್ನು ಚುನಾವಣೆಯ ಸಮಯದಲ್ಲಿ ಮಾತ್ರ ನೋಡುತ್ತಿದ್ದೇವು. ಆದರೀಗ ಶಾಸಕರೇ ನಮ್ಮ ಮನೆಗೆ ಆಗಮಿಸಿ ಕಷ್ಟಗಳನ್ನು ಆಲಿಸುತ್ತಿದ್ದಾರೆ. ಇಂತಹ ಶಾಸಕ ರಿದ್ದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ರಾಜಕೀಯದಲ್ಲಿ ಇನ್ನಷ್ಟು ಎತ್ತರದ ಸ್ಥಾನ ಅವರಿಗೆ ಸಿಕ್ಕರೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

200 ಕೋಟಿ ರು. ಅನುದಾನ ಹಂಚಿಕೆ: ಶಾಸಕರಾಗಿ ಆಯ್ಕೆಯಾದ ದಿನದಿಂದ ವಿವಿಧ ಕಾಮಗಾರಿಗಳಿಗೆ ಸಂಬಂಧಿ ಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿರುವ ಅವರು, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 200 ಕೋಟಿ ರು.ಗೂ ಹೆಚ್ಚುವರಿ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಅನುದಾನ ಬಿಡುಗಡೆಯಾದ ಎಲ್ಲ ಯೋಜನೆಗಳು ಕಾಲಮಿತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕಳೆದ ಒಂದೂ ವರೆ ವರ್ಷದ ಅವಧಿಯಲ್ಲಿ ಸಿಎಂ, ಡಿಸಿಎಂ ಅವರೊಂದಿಗೆ 10ಕ್ಕೂ ಹೆಚ್ಚು ಬಾರಿ ಸಭೆ ನಡೆಸಿದ್ದಾರೆ.

ದಲಿತ ಕೇರಿಯಲ್ಲಿಯೇ ಊಟ, ತಿಂಡಿ ನಮ್ಮೂರಿಗೆ ನಮ್ಮ ಶಾಸಕ ಅಭಿಯಾನ ಕೇವಲ ನಾಮ್‌ಕೆವಾಸ್ತೆಗೆ ನಡೆಯು ತ್ತಿಲ್ಲ. ಶಾಸಕ ಪ್ರದೀಪ್ ಚಿಕ್ಕಬಳ್ಳಾಪುರದಿಂದ ಬೆಳಗ್ಗೆ 5 ಗಂಟೆಗೆ ಗ್ರಾಮಗಳಿಗೆ ಹೊರಟರೆ ಮಧ್ಯಾಹ್ನ ಒಂದು ಗಂಟೆ ಯವರೆಗೆ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ಈ ವೇಳೆ ಇಡೀ ತಾಲೂಕಿನ ಆಡಳಿತವೇ ಅವರೊಂದಿಗೆ ಇರುತ್ತದೆ. ಇನ್ನು ಗ್ರಾಮಗ ಳಿಗೆ ಭೇಟಿ ನೀಡಿದ ಸಮಯದಲ್ಲಿ ದಲಿತ ಕೇರಿಗಳಿಗೆ ತೆರಳಿ ಅಲ್ಲಿಯೇ ಊಟ, ತಿಂಡಿ, ಕಾಫಿಯನ್ನು ಸೇವಿಸುವುದು ಮತ್ತೊಂದು ವಿಶೇಷ.

*

ಚಿಕ್ಕಬಳ್ಳಾಪುರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಭವಿಷ್ಯದಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ
ಚಿಕ್ಕಬಳ್ಳಾಪುರವನ್ನು ಬೆಳೆಸುವುದು ನಮ್ಮ ಆಲೋಚನೆಯಾಗಿದೆ. ಇದಕ್ಕೆ ಬೇಕಿರುವ ಬುನಾದಿಯನ್ನು 2025ರಲ್ಲಿ ಹಾಕುವೆ.

  • ಪ್ರದೀಪ್ ಈಶ್ವರ, ಶಾಸಕ

*

ಹೊಸ ಆಲೋಚನೆಗಳೇನು?
ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಸರಕಾರಕ್ಕೆ ಮನವಿ; ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ
ಚಿಕ್ಕಬಳ್ಳಾಪುರಕ್ಕೆ ಹೆಚ್ಚೆಚ್ಚು ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಯಾಣಿಕ ಪ್ರಯತ್ನ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ನೀಡಲು ಕ್ರಮ

ಪ್ರಾಯೋಗಿಕವಾಗಿ ಇಸ್ರೇಲ್ ಮಾದರಿಯ ಕೃಷಿ ಆರಂಭ

2027ರ ವೇಳೆಗೆ ಎತ್ತಿನಹೊಳೆ ನೀರು ಚಿಕ್ಕಬಳ್ಳಾಪುರಕ್ಕೆ ಬರುವುದಕ್ಕೆ ಅಗತ್ಯ ತಯಾರಿ

ಸರಕಾರಿ ಮಕ್ಕಳನ್ನು ಏಮ್ಸ್, ಐಐಟಿಯಲ್ಲಿ ಪ್ರವೇಶ ಪಡೆಯುವಂತೆ ಮಾಡಲು ಉಚಿತ ಕೋಚಿಂಗ್

ವೈಯಕ್ತಿಕವಾಗಿ ಸಾವಿರ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಕೋಚಿಂಗ್ (ಪ್ರತಿಯೊಬ್ಬರಿಗೂ 50 ಸಾವಿರ ವೆಚ್ಚ).

ಇದನ್ನೂ ಓದಿ: #PradeepEshwar