ನಾರದ ಸಂಚಾರ
ಕಲಹಪ್ರಿಯ
ಇದು ‘ಸುಳ್‌ಸುದ್ದಿ’ ಅಲ್ಲ, ದೇಶದ ಉತ್ತರದ ತುದಿಯಿಂದ ಬಂದಿರುವ ‘ಕಳ್‌ಸುದ್ದಿ’! ಅಂದರೆ, ಮೊಬೈಲ್ ಫೋನ್
ಕಳ್ಳತನದಲ್ಲಿ ಅಪ್ರಾಪ್ತರನ್ನು ಒಳಗೊಂಡ ದಂಧೆಯ ಸುದ್ದಿ. ದೆಹಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಅಂದ ಹಾಗೆ, ಈ ಕಳ್ಳತನದ ಜಾಲ ಕಾರ್ಯಾಚರಿಸುತ್ತಿದ್ದುದು ಹೀಗೆ: ಈ ‘ಕತ್ತರಿ ಕೆಲಸ’ದ ಮಾಸ್ಟರ್‌ಮೈಂಡ್ ಎನಿಸಿಕೊಂಡಾತ ಜಾರ್ಖಂಡ್ ರಾಜ್ಯದವನಂತೆ.
ಈತ ಅಲ್ಲಿನ ಬಾಲಾಪರಾಧಿಗಳಿಗೆ ಆಮಿಷವೊಡ್ಡಿ ದೆಹಲಿಗೆ ಕಳಿಸುತ್ತಿದ್ದನಂತೆ. ಅವರ ಕೆಲಸವೇನು ಗೊತ್ತೇ? ಜನರಿಂದ ತುಂಬಿ ಗಿಜಿಗಿಜಿ ಎನ್ನುತ್ತಿರುವ ಮಾರುಕಟ್ಟೆಗಳು-ಮಾಲ್‌ಗಳು, ರೈಲು-ಬಸ್ ನಿಲ್ದಾಣಗಳಿಗೆ ತೆರಳಿ, ಅಲ್ಲಿ ಅಮಾಯಕರಂತೆ ಓಡಾಡಿಕೊಂಡು, ‘ದುಡ್’ ಇರೋ ‘ದೊಡ್’ ಮನುಷ್ಯರು ತಮ್ಮ ‘ದೊಡ್ಡಸ್ತಿಕೆಯ’ ಸಂಕೇತವಾಗಿ
ಖರೀದಿಸಿ ಜೇಬಿನಲ್ಲಿಟ್ಟುಕೊಂಡಿರೋ ಅತ್ಯಾಧುನಿಕ ಮತ್ತು ಭಾರಿ ಬೆಲೆಬಾಳುವ ಸ್ಮಾರ್ಟ್-ನುಗಳನ್ನು ಕದಿಯೋದು!
ಹೀಗೆ ಭಾರಿ ಬೆಲೆಯ ಮಾಲನ್ನು ಆ ಬಾಲಾಪರಾಧಿಗಳು ಕದ್ದರೂ ಅದಕ್ಕೆ ಹೆಚ್ಚವರಿಯಾಗಿ ‘ಬೋನಸ್’ ಏನೂ ಅವರಿಗೆ ಸಿಗುತ್ತಿರಲಿಲ್ಲವಂತೆ; ಬದಲಿಗೆ, ಪ್ರತಿ ಕಳ್ಳತನಕ್ಕೆ ಆ ಮಾಸ್ಟರ್‌ಮೈಂಡ್ ‘ದೊಡ್ಡ ಕಳ್ಳ’ ಕೊಡುತ್ತಿದ್ದುದು ೩,೦೦೦ ರುಪಾಯಿ ಮಾತ್ರವಂತೆ. ಜಾರ್ಖಂಡ್‌ನಿಂದ ದೆಹಲಿಗೆ ರೈಲಿನಲ್ಲಿ ಟಿಕೆಟ್‌ರಹಿತವಾಗಿ ಪಯಣಿಸೋದು, ಬಿಡುವಿಲ್ಲದ ಚಟುವಟಿಕೆಗಳಲ್ಲಿ ವ್ಯಸ್ತವಾಗಿರುವ ಮಾರುಕಟ್ಟೆಗಳನ್ನು ನುಗ್ಗೋದು, ತಮ್ಮ ‘ಕೈಚಳಕ’ವನ್ನು ಮೆರೆದ
ನಂತರ, ಶಿವ ಎಂಬ ಆ ಮಾಸ್ಟರ್‌ಮೈಂಡ್‌ಗೆ ಕದ್ದ ಮಾಲುಗಳನ್ನು ಹಸ್ತಾಂತರಿಸಿ, ಜಾರ್ಖಂಡ್‌ಗೆ ತಣ್ಣಗೆ ಮರಳಿ ಬಿಡೋದು ಈ ಬಾಲಾಪರಾಧಿಗಳ ‘ಕುಕಾರ್ಯ’ಶೈಲಿ ಆಗಿತ್ತಂತೆ. ಎಂತೆಂಥಾ ಖತರ್ನಾಕ್‌ಗಳು ಇರ‍್ತಾರಲ್ವಾ?
‘ಟೆನ್ಷನ್-ಫ್ರೀ’ ಟ್ರಂಪ್!
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿಜಾರ್ಥದಲ್ಲಿ ‘ವರ್ಣರಂಜಿತ’ ವ್ಯಕ್ತಿ ಅನ್ನೋದು ನಿಮಗೆ ಗೊತ್ತಿರುವ ಸಂಗತಿಯೇ. ಅದರಲ್ಲೂ ‘ನೀಲಿ’ ಬಣ್ಣವನ್ನು ಒಳಗೊಂಡಿರುವ ವಸ್ತುಗಳೆಂದರೆ, ಅಂದರೆ ನೀಲಿ ಸೂಟು, ನೀಲಿ ಪೆನ್ನು, ನೀಲಿ ಕಾರು, ನೀಲಿ ಚಿತ್ರ… ಇತ್ಯಾದಿಗಳೆಂದರೆ ಅವರಿಗೆ ಶಾನೆ ಇಷ್ಟವಂತೆ ಎಂದೆಲ್ಲಾ ಅವರಿವರು ಬಾಯಿಗೆ ಬಂದಂತೆ ಮಾತಾಡುವುದು ಕಲಹಪ್ರಿಯ ನಾರದರ ಕಿವಿಗೂ ಬಿದ್ದಿದ್ದುಂಟು. ಈ ಮಾತಿಗೆ ಪುಷ್ಟಿ ನೀಡುವಂತೆ, ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆ ವೇಳೆ, “ನಮ್ಮಿಬ್ಬರ ನಡುವಿನ ಲೈಂಗಿಕ ಸಂಬಂಧದ
ಕುರಿತು ಮಾತಾಡ್‌ಬ್ಯಾಡ ಕಣಮ್ಮೀ…” ಅಂತ ಟ್ರಂಪ್ ಮಹಾಶಯರು ನೀಲಿಚಿತ್ರಗಳ ನಟಿಯೊಬ್ಬಳಿಗೆ ಪುಸಲಾಯಿಸಿ
ಹಣವನ್ನೂ ನೀಡಿದ್ದರು ಎಂಬ ಪ್ರಕರಣ ಅವರ ಮೇಲೆ ದಾಖಲಾಗಿದ್ದು ನಿಮಗೆ ಗೊತ್ತು. ಆದರೆ ಇದೀಗ ಬಂದಿರೋ
ಸುದ್ದಿಯ ಪ್ರಕಾರ, ಟ್ರಂಪ್ ಮಹಾಶಯರು ಈ ಪ್ರಕರಣದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆಯಂತೆ.
ಕಾರಣ, ಅಲ್ಲಿನ ಮ್ಯಾನ್‌ಹಟನ್ ಕ್ರಿಮಿನಲ್ ಕೋರ್ಟ್‌ನ ನ್ಯಾಯಾಧೀಶರು ಈ ಪ್ರಕರಣದಿಂದ ಟ್ರಂಪ್ ಅವರ ಬೇಷರತ್ ಬಿಡುಗಡೆಯನ್ನು ಘೋಷಿಸಿದ್ದಾರಂತೆ. ಇದರನ್ವಯ, ನಮ್ ಟ್ರಂಪಣ್ಣ ಜೈಲಿಗೂ ಹೋಗಂಗಿಲ್ಲ, ದಂಡವನ್ನೂ ಕಟ್ಟಂಗಿಲ್ಲ ಹೋಗ್ ಅತ್ಲಾಗೆ…! ಜತೆಗೆ ಈ ತೀರ್ಪಿನಿಂದಾಗಿ, ಸದ್ಯದಲ್ಲೇ ನಡೆಯಲಿರುವ ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಂಬಂಧಿಸಿ ಟ್ರಂಪಣ್ಣ ನಿರಾಳತೆಯನ್ನೂ ಅನುಭವಿಸಲಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲವಷ್ಟೇ. ಅಟ್ ಲೀಸ್ಟ್, ಅಧಿಕಾರ ಸ್ವೀಕರಿಸಿದ ನಂತರ ಕೂರೋ ಸಿಂಹಾಸನವಾದರೂ ‘ನೀಲಿಬಣ್ಣ’ದಲ್ಲಿ ಇರದಂತೆ ಟ್ರಂಪಣ್ಣ ನೋಡ್ಕೊಂಡ್ರೆ ಸಾಕು ಅನ್ನೋದು ನಾರದರ ಸಜೆಷನ್ನು!
ಇದನ್ನೂ ಓದಿ: Raghavendra Jois Column: ಮಾರುಕಟ್ಟೆ ಜಿಗಿತ, ಕರಡಿ ಕುಣಿತ