Sunday, 21st April 2024

ಕಾಲನಿಗೆ ಸೆಡ್ಡು ಹೊಡೆದು ನಿಂತಿರುವ ಪಿರಮಿಡ್ಡುಗಳು!

ಈಜಿಪ್ಟ್ ಡೈರಿ – ಪ್ರವಾಸದ ಒಳ-ಹೊರಗಿನ ಕಥನ – ೫

ವಿಶ್ವೇಶ್ವರ ಭಟ್

ಪಿರಮಿಡ್ಡುಗಳು ಇರದಿದ್ದರೆ ಈಜಿ ಹೇಗಿರುತ್ತಿತ್ತು? ಈ ಪ್ರಶ್ನೆಗೆ ಸರಳ ಉತ್ತರ – ಖಂಡಿತವಾಗಿಯೂ ಈಗಿನಂತೆ ಇರುತ್ತಿರಲಿಲ್ಲ. ಅನೇಕ ರಿಗೆ ಈಜಿಗೆ ಹೋಗುವ ಏಕೈಕ ಕಾರಣ ಅಥವಾ ನೆಪ ಅಂದರೆ ಪಿರಮಿಡ್ಡುಗಳು.

ಮನುಷ್ಯ ಯಾವತ್ತೂ ಕಳೆದು ಅಥವಾ ಸರಿದು ಹೋಗುತ್ತಿರುವ ಕಾಲಕ್ಕೆ ಹೆದರುತ್ತಾನಂತೆ. ಆದರೆ ಸರಿದು ಹೋಗುವ ಕಾಲ ಇದೆ ಯಲ್ಲ, ಅದು ಯಾವತ್ತೂ ಪಿರಮಿಡ್ಡುಗಳನ್ನು ನೋಡಿ ಹೆದರುತ್ತದಂತೆ. ಇಂಥ ಒಂದು ನಂಬಿಕೆ ಈಜಿನಲ್ಲಿದೆ. ಕಾಲನ ಮುಂದೆ ಎಲ್ಲವೂ ಕಾಲಿಗೆ ಸಮಾನ. ಆದರೆ ಕಾಲ ತಲೆ ಬಾಗುವುದು ಪಿರಮಿಡ್ಡಿಗೆ ಮಾತ್ರವಂತೆ.

ಕಾರಣ, ಕಾಲನ ಎಲ್ಲಾ ಹೊಡೆತಗಳನ್ನು ಅನುಭವಿಸಿ, ನುಂಗಿ, ನೀರು ಕುಡಿದು, ಕಾಲನನ್ನು ಹಂಗಿಸುವಂತೆ, ಇಂದಿಗೂ ಗಟ್ಟಿ ಯಾಗಿ ನಿಂತು ಆಕಾಶಕ್ಕೆ ಮುಖ ಮಾಡಿ ನಿಂತಿರುವುದು ಪಿರಮಿಡ್ಡುಗಳೊಂದೇ. ಐದು ಸಾವಿರ ವರ್ಷಗಳ ಕಾಲನ ಎಲ್ಲಾ ಧಡಕಿ ಗಳನ್ನು ಅನುಭವಿಸಿ, ಇಂದಿಗೂ ಆಧುನಿಕತೆಯನ್ನೂ ಅಣಕಿಸುವಂತೆ ಪಿರಮಿಡ್ಡುಗಳು ಸ್ಥಿರವಾಗಿ ನಿಂತಿರುವುದು ಸಹ ಅಚ್ಚರಿ ಗಳಂದು. ಅಂದರೆ ಒಂದು ರೀತಿಯಲ್ಲಿ ಕಾಲನಿಗೇ ಸೆಡ್ಡು ಹೊಡೆಡಿದ್ದು ಪಿರಮಿಡ್ಡುಗಳು ಮಾತ್ರ.

ಜಗತ್ತಿನ ಏಳು ಅದ್ಭುತಗಳು ಎಂದು ಕರೆಯಿಸಿಕೊಂಡಿರುವ ಎಲ್ಲವೂ ಕಾಲನ ಹೊಡೆತಕ್ಕೆ ನಾಶವಾಗಿವೆ. ಆದರೆ ಆ ಪೈಕಿ ಈಗ ಉಳಿದಿರುವುದು ಪಿರಮಿಡ್ ಮಾತ್ರವೇ. ಕಾಲನ ಮುಂದೆ ಮನುಷ್ಯ ನಿರ್ಮಿಸಿzಲ್ಲವೂ ಅಶಾಶ್ವತವಾದರೂ ಅದಕ್ಕೆ ಪಿರಾಮಿಡು ಗಳು ಅಪವಾದ.

ಈಜಿನ ಪಿರಮಿಡ್ಡುಗಳ ಬಗ್ಗೆ ಒಂದು ಮಾತಿದೆ – The pyramid shape is said to hold many secrets and amazing properties. One of them is a sense of wonder. ನನಗೆ ಆಗ ನೆನಪಾದವರು ವೈಎನ್‌ಕೆ. ಅವರು ಸುಮಾರು ಹನ್ನೆರಡು ವರ್ಷಗಳ ಕಾಲ ’ವಂಡರ್-ಕಣ್ಣು’ ಎಂಬ ಅಂಕಣ ಬರೆದರು. wonderment ಅವರ ಚಿಂತನೆಯ ಮೂಲದ್ರವ್ಯವಾಗಿತ್ತು. ಈ ಪಿರಮಿಡ್ಡು ಗಳನ್ನು ನೋಡುವಾಗ, ನಮ್ಮ ಮೈಮನಸ್ಸುಗಳನ್ನು ಆವರಿಸುವುದು ಈ ವಂಡರಮೆಂಟ್!

ಅವರು ಈ ಪಿರಮಿಡ್ಡುಗಳನ್ನು ನೋಡಿದ್ದರೆ ಏನು ಅನ್ನುತ್ತಿದ್ದರೋ? 1798 ರಲ್ಲಿ ಈಜಿನ್ನು ವಶಪಡಿಸಿಕೊಂಡ ನೆಪೋಲಿಯನ್ ಕೂಡ ಪಿರಮಿಡ್ಡುಗಳನ್ನು ನೋಡಿ ಸೋಜಿಗಗೊಂಡಿದ್ದ. From the heights of these pyramids, forty centuries look down on us ಎಂದು ಆತ ಉದ್ಗರಿಸಿದ್ದ. ಆತ ಈಜಿ ನ್ನು ವಶಪಡಿಸಿಕೊಳ್ಳಲು ಪಿರಮಿಡ್ಡು ಸಹ ಒಂದು ಕಾರಣವಾಗಿತ್ತು. ಅದರೊಳಗೆ ಸಂಪತ್ತನ್ನು ಹುದುಗಿಸಿ ಇಟ್ಟಿರಬಹುದು ಎಂಬುದು ಅವನ ಕಲ್ಪನೆಯಾಗಿತ್ತು. ಆದರೆ ಪಿರಮಿಡ್ಡ ಗಳನ್ನು ನೋಡಿದ ಬಳಿಕ, ‘ಒಂದು ವೇಳೆ ಪಿರಮಿಡ್ಡುಗಳ ಒಳಗೆ ಸಂಪತ್ತನ್ನು ಹುದುಗಿಸಿ ಇಟ್ಟಿದ್ದರೂ ನನಗೆ ಬೇಡ. ನಾನು ಪಿರಮಿಡ್ಡಿನ ಒಂದು ಕಲ್ಲನ್ನು ಮುಟ್ಟಲಾರೆ’ ಎಂದು ಆತ ಹೇಳಿದನಂತೆ.

ಆತ ಪಿರಮಿಡ್ಡುಗಳನ್ನು ನೋಡಿ, ಒಂದು ವೇಳೆ ನಾನು – ದೇಶದ ಸುತ್ತ ಮೂರು ಅಡಿ ಎತ್ತರದ ಕಲ್ಲಿನ ಗೋಡೆಯನ್ನು ನಿರ್ಮಿಸ ಬೇಕು ಎಂದು ನಿರ್ಧರಿಸಿದರೆ, ಈಜಿನ ಪಿರಮಿಡ್ಡುಗಳಿಗೆ ಎಷ್ಟು ಕಲ್ಲುಗಳನ್ನು ಬಳಸಲಾಗಿದೆಯೋ ಅಷ್ಟು ಕಲ್ಲುಗಳು ಬೇಕು. ಹೀಗಾಗಿ ನಾನು ಅಂಥ ಕೆಲಸಕ್ಕೆ ಮುಂದಾಗಲಾರೆ’ ಎಂದು ಹೇಳಿದ್ದನಂತೆ.

ನಾನು ಪಿರಮಿಡ್ಡುಗಳನ್ನು ನೋಡುವಾಗ ನನ್ನ ಮುಂದೆ ಹಾದು ಹೋಗಿದ್ದು ಗ್ರೀಕ್ ದೇಶದ ಮಹಾನ್ ಮಹಾ ಪಥಿಕ, ಮಹಾ ಯಾತ್ರಿಕ ಎಂದೇ ಕರೆಯಿಸಿಕೊಳ್ಳುವ ಹೆರೋಡೊಟಸ್‌ನ ಮಾತುಗಳು. ‘ನಾನು ಇಲ್ಲಿಗೆ ಇನ್ನೂ ಮುಂಚೆಯೇ ಬರಬೇಕಿತ್ತು.. ಇದಕ್ಕಿಂತ ಮೊದಲೇ ಪಿರಮಿಡ್ಡುಗಳನ್ನು ನೋಡಿದ್ದರೆ, ನನ್ನಲ್ಲಿ ಇನ್ನಷ್ಟು ವಿವೇಕ ಮೂಡುತ್ತಿತ್ತೇನೋ?’ ಎಂದು ಆತ ಹೇಳಿರು ವುದು ನೆನಪಾಯಿತು.

ಪಿರಮಿಡ್ಡುಗಳು ನಿರ್ಮಾಣಗೊಂಡು ಎರಡು ಸಾವಿರ ವರ್ಷಗಳ ನಂತರ, ಆತ ಅದರ ಮುಂದೆ ನಿಂತಿದ್ದ. ಆತನ ಮಾತುಗಳನ್ನು
ನೆನಪಿಸಿಕೊಂಡಾಗ ನನಗೆ ಅನಿಸಿದ್ದೂ ಅದೇ, ನಾನೇಕೆ ಇಷ್ಟು ತಡವಾಗಿ ಇಲ್ಲಿಗೆ ಆಗಮಿಸಿದೆ ಎಂದು. ಅಂದು ಹೆರೋಡೊಟಸ್‌ಗೆ ಸಾಧ್ಯವಾಗಿದ್ದು, ನನಗೆ ಸಾಧ್ಯವಾಗಲು ಇಷ್ಟು ವರ್ಷಗಳು ಬೇಕಾದವು ಅನ್ನೋದು ಬೇರೆ ಮಾತು.

ಹೆರೋಡೊಟಸ್ ಪಿರಮಿಡ್ಡುಗಳನ್ನು ನೋಡಿ ಸನಿಹದಲ್ಲಿಯೇ ಗುಡಿಸಲು ಕಟ್ಟಿಕೊಂಡು ನೆಲೆಸಿ, ಅದರ ರಚನೆಯ ಬಗ್ಗೆ ತನ್ನ ಶೋಧನೆ ಆರಂಭಿಸುತ್ತಾನೆ. ಪಿರಮಿಡ್ಡುಗಳ ರಹಸ್ಯಗಳನ್ನು ಅರಿಯಲು ಶುರು ಮಾಡುತ್ತಾನೆ. ಸುತ್ತಲಿನ ಜನರನ್ನು ಮಾತಾಡಿಸಿ, ಲಭ್ಯವಿರುವ ಮಾಹಿತಿ ಕಲೆ ಹಾಕುತ್ತಾನೆ. ಆತನ ಪ್ರಕಾರ, ಈಜಿನ ನೆರೆ ದೇಶಗಳಾದ ಲಿಬಿಯಾ ಮತ್ತು ಸೌದಿ ಅರೇಬಿಯಾದ ಕಲ್ಲು ಗಣಿಗಳಿಂದ ಪಿರಮಿಡ್ಡುಗಳಿಗೆ ಬೇಕಾಗುವ ಕಲ್ಲುಗಳನ್ನು ಮರಳುಗಾಡಿನಲ್ಲಿ ಎಳೆದು ತರಲಾಯಿತು. ನಂತರ ಈ ಕಲ್ಲುಗಳನ್ನು ಸಾಗಿಸಲು ನೈಲ್ ನದಿಯ ಹರವಿಗೆ, ಇನ್ನೊಂದು ಮುಖ ಮಾಡಿ, ನದಿ ಹರಿವನ್ನು ತಿರುಗಿಸಿ, ನಂತರ ಪಿರಮಿಡ್ಡುಗಳನ್ನು ಕಟ್ಟ ಬೇಕಾದ ಸ್ಥಳದ ಸನಿಹದವರೆಗೆ ಕಾಲುವೆಗಳನ್ನು ನಿರ್ಮಿಸಿ, ಆ ಮೂಲಕ ಕಲ್ಲುಗಳನ್ನು ಸಾಗಿಸಲಾಯಿತು.

ಇದನ್ನು ಕೇಳಿದರೆ, ಹೆರೋಡೊಟಸ್‌ನ ಮಾತುಗಳಲ್ಲಿ ಅತಿಶಯೋಕ್ತಿ ಇತ್ತಾ ಅಂತ ಅನಿಸಬಹುದು. ಆದರೆ ಕಾಲಕಾಲಕ್ಕೆ ಇತಿಹಾಸಕಾರರು ಕೂಡ ಹೆರೋಡೊಟಸ್‌ನ ಮಾತುಗಳನ್ನು ಪ್ರಸ್ತಾಪಿಸಿ ಚರ್ಚಿಸುವುದನ್ನು ನಿಲ್ಲಿಸಿಲ್ಲ. ಅಂದರೆ ನೈಲ್ ನದಿ
ಯನ್ನು ಜಲಹೆದ್ದಾರಿಯಂತೆ ಬಳಸಿ ಕಲ್ಲು ಸಾಗಿಸಿರಬಹುದು ಎಂಬುದು ಅವರ ತಾತ್ಪರ್ಯ.

ಹಾಗೆಂದು ಈ ವಾದವನ್ನು ಅಲ್ಲಗೆಳೆಯುವವರುಅಂಥ ಭಾರದ ಕಲ್ಲುಗಳನ್ನು ಹೇಗೆ ಸಾಗಿಸಿದ್ದಿರಬಹುದು ಎಂಬ ಬಗ್ಗೆ ಬೇರೆ ಬೆಳಕು ಚೆಲ್ಲುವುದಿಲ್ಲ. ಪಿರಮಿಡ್ಡುಗಳ ಅತ್ಯಂತ ಸುಂದರ ಮತ್ತು ಪುರಾತನವಾದ ಗಿಜಾ ಪಿರಮಿಡ್ಡುಗಳ ಆಕಾರದ ಬಗ್ಗೆ ಹಲವು ವಾದಗಳಿವೆ. ಅವುಗಳ ರಚನೆ ಬಗ್ಗೆ ಗಣಿತ, ಖಗೋಳ ವಿeನಗಳ ಸೂತ್ರ ಸಮ್ಮಿಳಿತವಾಗಿದೆ ಎಂದು ಹೇಳಲಾಗುತ್ತಿದೆ. ಈಜಿಪ್ಟ ಪುರಾಣದಲ್ಲಿ ಬರುವ ಸಿರಿಯಸ್ ಎಂಬ ಕಾಂತಿತೇಜ ನಕ್ಷತ್ರವೊಂದರ ಪ್ರತಿಕೃತಿಯೇ ಪಿರಮಿಡ್ಡು ಎಂದು ವಾದಿಸುವವರಿದ್ದಾರೆ.

ಈಜಿಪ್ಟಿನ ಜನ ನಿರ್ಮಿಸಿದ್ದ ಕ್ಯಾಲೆಂಡರಿಗೆ ಈ ನಕ್ಷತ್ರವೇ ಆಧಾರವಂತೆ. ಈ ನಕ್ಷತ್ರದ ಆಕಾರವೇ ಪಿರಮಿಡ್‌ಗೆ ಸ್ಪೂರ್ತಿ ಯಾಯಿತಂತೆ. ಆದರೆ ಗಣಿತ ಸೂತ್ರದ ಪ್ರಕಾರ ವಿಶ್ಲೇಷಿಸುವವರು ಬೇರೆ ವಾದ ಮಂಡಿಸುತ್ತಾರೆ. ಗಣಿತದ ಜ್ಯಾಮಿತಿ ಸೂತ್ರದ ಪ್ರಕಾರ ಇದನ್ನು ನಿರ್ಮಿಸಲಾಗಿದೆಯಂತೆ. ನೆಲಭಾಗದಿಂದ ಮೂರರಲ್ಲಿ ಒಂದರಷ್ಟು ಎತ್ತರದಲ್ಲಿ ಮತ್ತು ಮೇಲಿನಿಂದ ಮೂರರಲ್ಲಿ ಎರಡರಷ್ಟು ಕೆಲ ಭಾಗದಲ್ಲಿ ಪಿರಾಮಿಡ್ಡಿನ ಕೇಂದ್ರ ಭಾಗವೆಂದು ನಿರ್ಧರಿಸಿರುವುದು ಈ ವಾದಕ್ಕೆ ಪುಷ್ಟಿ ನೀಡುತ್ತದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

ನಾಲ್ಕು ಸಮಾನ ಪಾದಗಳನ್ನು ಹೊಂದಿದ, ಮೇಲೇರುತ್ತಾ ಹೋದಂತೆ ನೀಳವಾಗುವ, ಶೃಂಗ ಭಾಗದಲ್ಲಿ ಏಕಮುಖವಾಗುವ ಪಿರಮಿಡ್ಡುಗಳು ಅನಂತತೆಗೆ ಚಾಚಿದ ನೋಟ ನೀಡುವ ಗರಿಷ್ಠ ರಚನೆ ಎಂಬ ವಾದವೂ ಇದೆ. ಸೃಷ್ಟಿಯ ಒಂದು ಅದ್ಭುತ ರಹಸ್ಯವಾಗಿರುವ ಪಿರಮಿಡ್ಡುಗಳ ಬಗ್ಗೆ ಇಂದಿಗೂ ಆಗಾಗ ಹೊಸ ವಾದ, ಥಿಯರಿಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಜಗತ್ತಿನಾದ್ಯಂತ ಆಸಕ್ತರು ಪಿರಮಿಡ್ ಸೊಸೈಟಿಗಳನ್ನು ಸಂಘಟಿಸಿಕೊಂಡಿದ್ದಾರೆ.

ಆ ಸೊಸೈಟಿ ಸದಸ್ಯರು ಒಂದು ಕಲ್ಲು, ಒಂದು ಲಿಪಿ, ಇತಿಹಾಸದ ಒಂದು ತುಣುಕು ಇಟ್ಟುಕೊಂಡು, ಹಿಂದಿನ ಸಂಶೋಧನೆಯ ಫಲಗಳನ್ನು ಆಧಾರವಾಗಿಟ್ಟುಕೊಂಡು, ಹೊಸ ಸಿದ್ಧಾಂತ ಅಥವಾ ಕಾಣ್ಕೆಯನ್ನು ನೀಡುವುದು ಹೊಸತೇನೂ ಅಲ್ಲ. ಪಿರಮಿಡ್ಡು ಗಳು ಅದೆಷ್ಟೇ ಅದ್ಭುತವಾಗಿರಬಹುದು, ಕಾಲನಿಗೆ ಸೆಡ್ಡು ಹೊಡೆದಿರಬಹುದು, ಆದರೆ ಅಷ್ಟಕ್ಕೂ ಅವುಗಳನ್ನು ನಿರ್ಮಿಸಿ ದವರು ಮನುಷ್ಯರೇ. ಅಂದರೆ ಮನುಷ್ಯ ಮನಸ್ಸು ಮಾಡಿದರೆ, ಕಾಲನಿಗೆ ಸೆಡ್ಡು ಹೊಡೆದು, ಅಸಾಮಾನ್ಯವಾದುದನ್ನೂ ಸಾಧ್ಯವಾಗಿಸ ಬಹುದು ಎಂಬುದಕ್ಕೆ ಪಿರಮಿಡ್ಡುಗಳೇ ನಿದರ್ಶನ ಎಂದು ವಾದಿಸುವವರೂ ಇದ್ದಾರೆ.

ಪಿರಮಿಡ್ಡುಗಳನ್ನು ಕಟ್ಟಿದವರಾರೂ ಇಷ್ಟೆ ಯೋಚಿಸಿರಲಿಕ್ಕಿಲ್ಲ. ಆದರೆ ಅವನ್ನು ಕಟ್ಟಿದವರು ಮಾತ್ರ ಅಂದಿನಿಂದ ಇಂದಿನ
ತನಕ ಜನರ ಮನಸ್ಸಿನಲ್ಲಿ ಹುಳು ಬಿಟ್ಟು ಹೋಗಿರುವುದಂತೂ ಸತ್ಯ.

error: Content is protected !!