ರಾಜು ಅಡಕಳ್ಳಿ
ಪ್ರತಿಯೊಂದಕ್ಕೂ ಜಾನಪದೀಯ ತಳಹದಿಯ ಮೇಲೆ ನಿದರ್ಶನ ನೀಡುತ್ತಾರೆ. ಹೀಗಾಗಿ ಇವರ ಮಾತು- ಜೀವನಾನುಭವದ ಕೇಸರಿ ಬಾತು. ಸುಮ್ಮನೆ ಶೆಟ್ಲಿ, ಬಂಗುಡೆ ತಿಂದುಕೊಂಡು ಕಾಲ ಕಳೆಯದೇ, ಹಲವು ಸೃಜನಶೀಲ ಹವ್ಯಾಸಗಳನ್ನು ಬೆಳೆಸಿಕೊಂಡು ಶಾಂತಿ ನಾಯಕರು ಹಲವು ಸಾಧನೆಗಳ ನಾಯಕಿ ಯಾಗಿರುವುದು ವಿಶೇಷ.
ಉತ್ತರ ಕನ್ನಡದಲ್ಲಿ ಏನುಂಟು ಏನಿಲ್ಲ. 81 ವರ್ಷದ ಈ ಶಾಂತಕ್ಕನಿಗೆ ಕೇಳಿದರೆ ಈ ಜಿಲ್ಲೆಯ ವಿಶ್ವಕೋಶದಂತೆ ಮಾತನಾಡುತ್ತಾರೆ. ತಂಬುಳಿಯಿಂದ ಹಿಡಿದು ಕಂಬಳಿಯವರೆಗೆ ಜಿಲ್ಲೆಯ ಜಾನಪದದ ದರ್ಶನ ಮಾಡಿಸುತ್ತಾರೆ. ಇವರ ಈ ಅಪರೂ ಪದ ಸಾಧನೆಗಾಗಿ ಇತ್ತೀಚೆಗೆ ಜಾನಪದ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ವಿಶೇಷ.
ಹೊನ್ನಾವರದಲ್ಲಿರುವ ಈ ಶಾಂತಿ ನಾಯಕರ ಮನೆಗೆ ಹೋದರೆ ಅದು ಮನೆಯಲ್ಲ. ಜಾನಪದ ಜಗತ್ತು. ಮನೆ
ಯಲ್ಲಿ ಇವರೊಬ್ಬರೇ ಜಾನಪದ ತಜ್ಞೆಯಲ್ಲ. ಇವರ ಪತಿ ಡಾ.ಎನ್.ಆರ್. ನಾಯಕರೂ ಜಾನಪದ ವಿದ್ವಾಂಸರು.
ಮಗಳು ಸವಿತಾ ಉದಯ್ ಜಾನಪದದ ಸಾಧಕಿ. ಇವರ ಮನೆಯ ಗೋಡೆಯ ಮೇಲೆ ಜಾನಪದದ ಕಲಾ
ಚಿತ್ತಾರ, ಹಸೆಗಳ ವಿಸ್ತಾರ, ಮಸ್ತಕಕ್ಕೆ ಬಿಸಿ ನೀಡುವ ಪುಸ್ತಕಗಳ ನಾಗಂತಿಗೆ, ಮಾಡ್ಗುಳಿಯ ತುಂಬೆಲ್ಲ ಹಳೆ
ಕಾಲದ ಬೀಸಣಿಕೆಯಿಂದ ಹಿಡಿದು ಬಾಚಣಿಕೆಯವರೆಗೆ ಅಪಾರ ಪುರಾತನ ವಸ್ತುಗಳ ಸಂಗ್ರಹಾಲಯ.
ಶಾಲಾ ಶಿಕ್ಷಕಿಯಾಗಿದ್ದ ಶಾಂತಕ್ಕ
ಶಾಂತಿ ನಾಯಕರು ಮೊದಲು ಕವಲಕ್ಕಿಯಲ್ಲಿ, ನಂತರ ಕರ್ಕಿಯ ಚನ್ನಕೇಶವ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿದ್ದರು. ಮುಂದೆ ಮುಖ್ಯ ಶಿಕ್ಷಕಿಯೂ ಆದರು. ಮಕ್ಕಳಿಗೆ ವ್ಯಾಯಾಮ, ಚಿತ್ರಕಲೆ, ಕನ್ನಡ, ಜನಪದ, ಆಟ, ಪಾಠ ಹೀಗೆ ಸಕಲ ವಿಷಯಗಳನ್ನೂ ಹೇಳಿಕೊಡುವ ಅಕ್ಕೋರಾಗಿದ್ದರು ಇವರು. ಸರಕಾರ ಬಿಸಿಯೂಟ ಯೋಜನೆ ಜಾರಿಗೊಳಿಸುವು ದಕ್ಕಿಂತ ಮುಂಚೆಯೇ ಅಲ್ಲಿಯ ವಿದ್ಯಾ ಕೇಂದ್ರದಲ್ಲಿ ಊಟದ ವ್ಯವಸ್ಥೆಗಾಗಿ ಪ್ರತ್ಯೇಕ ಹಣಕಾಸು ಸೌಲಭ್ಯವೊದಗಿಸಿ ದಾಸೋಹ ನೀಡುತ್ತಾ ಮಾದರಿಯಾಗಿದ್ದರು.
ಎಲಲ್ರ ಪ್ರೀತಿಯ ಅಕ್ಕ
ಐವತ್ತಕ್ಕೂ ಹೆಚ್ಚು ತಂಬುಳಿ, ಪಾನಕಗಳ ಬಗ್ಗೆ ಇವರು ಮಾಹಿತಿ ಸಂಗ್ರಹಿಸಿ, ದಾಖಲೆಗೊಳಿಸಿ ಸ್ಥಳೀಯ ಅಕ್ಕ
ಯ್ಯಂದಿರ, ಅತ್ತಿಗೆಯಂದಿರ ಪ್ರೀತಿ ಪಾತ್ರರಾಗಿದ್ದಾರೆ. ಉರಿಗೆ ಎಲೆ, ಬಾಯಿ ಬಡಕದ ಎಲೆ, ಯಲವರಿಗೆ ಕುಡಿ, ಪತ್ರೆ ಕುಡಿ, ಒಂದೆಲಗ, ಹುಳಿ ಚಿಪ್ಪಿ.. ಹೀಗೆ ಅಪರೂಪದ ಎಲೆ ಬಳ್ಳಿಗಳಿಂದ ತಂಬುಳಿ ಮಾಡುವ ಶಾಸ್ತ್ರೀಯ ಅಧ್ಯ
ಯನ ನಡೆಸಿದ್ದಷ್ಟೇ ಅಲ್ಲ, 60ಕ್ಕೂ ಹೆಚ್ಚು ಬಗೆಯ ಪಾನಕಗಳ ಮಾಹಿತಿ ಸಂಗ್ರಹಿಸಿ, ಹೊನ್ನಾವರದಲ್ಲಿ ಹಿಂದೆ ಪಾನಕದ ಹಬ್ಬವನ್ನೇ ನಡೆಸಿದ ಸಾಹಸ ಇವರದ್ದು. ಶಾಂತಕ್ಕನ ಈ ಪಾನಕ ಕ್ರಾಂತಿಗೆ ನನ್ನ ಹನಿಗವನದ ಗುಟುಕು.
ಉಳ್ಳವರು ಸ್ಕಾಚ್ ಕುಡಿತಾರಯ್ಯ…
ನಾನೇನು ಮಾಡಲಿ ಬಡವನಯ್ಯ..
ನನ್ನ ಪಾಲಿಗೆ ಬೆಲ್ಲ ಲಿಂಬು ಪಾನಕವೇ ಅಮೃತವ್ಯ.
ಅಪರೂಪದ ಆಟಗಳ ಮಾಹಿತಿ ಪುಸ್ತಕ
ಹಲವು ಔಷಧಿಯ ಸಸ್ಯಗಳ ಬಗ್ಗೆ, ಹಣ್ಣಿನ ಗಿಡಮರಗಳ ಬಗ್ಗೆ, ಸ್ಥಳೀಯ ಬೆಳೆಗಳ ಬಗ್ಗೆ ಪರಂಪರಾಗತವಾಗಿರುವ ಮಾಹಿತಿಗಳನ್ನು ಸಂಗ್ರಹಿಸಿದ್ದಷ್ಟೇ ಅಲ್ಲ, ಅವುಗಳ ವೈಜ್ಞಾನಿಕ, ಬೊಟಾನಿಕಲ್ ಹೆಸರುಗಳನ್ನು ಇವರು ಪಟ್ಟಿ
ಮಾಡಿದ್ದಾರೆ.
ನೆಲದ ಮೇಲೆ ಕುಳಿತು ಆಡುವ ಚೆನ್ನೆಮಣೆ ಆಟದಿಂದ ಹಿಡಿದು ಮರದ ಮೇಲೆ ಆಡುವ ಗೆರೆ ಆಟಗಳವರೆಗೆ, ೧೪೦ಕ್ಕೂ ಹೆಚ್ಚು ಅಪರೂಪದ ಸ್ಥಳೀಯ ಆಟಗಳ ಬಗ್ಗೆ ಮಾಹಿತಿಯೊಂದಿಗೆ ಪುಸ್ತಕ ರಚಿಸಿzರೆ. ಹಾಗಂತ ಇದರಲ್ಲಿ ಹೊಸ ಹೊಸ ಇಸ್ಪೀಟು ಆಟಗಳೂ ಸೇರಿವೆಯೇ ಎಂದು ಕೇಳಬೇಡಿ. ಹತ್ತು ಸಾವಿರಕ್ಕೂ ಹೆಚ್ಚು ಅಪರೂಪದ
ಜಾನಪದ ಶಬ್ದಗಳನ್ನು ಇವರು ಕಲೆ ಹಾಕಿದ್ದಾರೆ. ನಾಡವರ, ಹವ್ಯಕರ, ಹಾಲಕ್ಕಿಗಳ ಸಮಾಜದಲ್ಲಿರುವ ರಸ ಪೂರ್ಣ ಕಥೆಗಳನ್ನು ಇವರು ಸಂಗ್ರಹಿಸಿ ತಮ್ಮ ಟ್ರಂಕಿನಲ್ಲಿ ಜೋಪಾನವಾಗಿ ಮಡಗಿಟ್ಟಿದ್ದಾರೆ.
ಮಗಳು ಸವಿತಾ ಎಂ. ಎ. ಓದುವಾಗ ಅವಳ ಪುಸ್ತಕಗಳನ್ನೇ ಓದುತ್ತಾ ಓದುತ್ತಾ ಅಮ್ಮ ಶಾಂತಿ ನಾಯಕರೂ ಮಗಳ ಜೊತೆಯೇ ಎಂ. ಎ. ಮುಗಿಸಿದವರು. ಮಗಳೇ ಇವರಿಗೆ ಉತ್ತಮ ಕ್ಲಾಸ್ಮೇಟ್.
ಜಾನಪದದ ಮೇಲೆ ಆಸಕ್ತಿ
ಇವರ ಜಾನಪದದ ಅರಿವು ಎಷ್ಟೊಂದಿತ್ತೆಂದರೆ, ಹಾವೇರಿಯ ಸಮೀಪ ಗೋಟಗೋಡಿಯಲ್ಲಿ ರಾಜ್ಯದ ಮೊದಲ
ಜಾನಪದ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿದಾಗ, ಇವರಿಂದ ಮಾರ್ಗದರ್ಶನ ಪಡೆಯಲಾಗಿತ್ತು. ಜೋಯ್ಡಾ
ದಲ್ಲಿ ಈ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಶಾಂತಿ ನಾಯಕರ ಪ್ರಯತ್ನ, ಕೊಡುಗೆಗಳೂ
ಅಮೂಲ್ಯ. ಈಗ ೮೦ ದಾಟಿದ್ದರೂ ಜೋಯ್ಡಾಕ್ಕೆ ಹೋಗಿ ಅಲ್ಲಿ ಜಾನಪದಕ್ಕೆ ಸಂಬಂಧಿಸಿದ ಇನ್ನಷ್ಟು ಚಟುವಟಿಕೆ ಗಳನ್ನು ಹೆಚ್ಚಿಸಿ, ಜಾನಪದ ಸಂಸ್ಕೃತಿಯನ್ನು ಮತ್ತಷ್ಟು ಬೆಳೆಸಬೇಕು ಎಂಬುದು ಈ ಅಜ್ಜಿಯ ಇಚ್ಛೆಯಾಗಿದೆ.
ಹಿಂದೆ ಸರಕಾರ ಇವರನ್ನು ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆಯಾಗಿ, ಶೈಕ್ಷಣಿಕ ಪರಿಷತ್ತಿನ ಸದಸ್ಯೆ
ಯಾಗಿ, ಜಾನಪದ ಅಕಾಡೆಮಿಯ ಸದಸ್ಯೆಯಾಗಿ, ಜಾನಪದ ಸಂಪುಟದ ಸಂಪಾದಕೀಯ ಮಂಡಳಿಯ ಸದಸ್ಯೆ
ಯಾಗಿಯೂ ನೇಮಿಸಿತ್ತು. ರಾಜ್ಯೋತ್ಸವ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವಿಸಲಾಗಿತ್ತು. ಅತ್ತಿಮಬ್ಬೆ ಪ್ರಶಸ್ತಿಗೂ
ಇವರು ಭಾಜನರಾಗಿದ್ದರು. ಕಳೆದ 50 ವರ್ಷಗಳಲ್ಲಿ ಇವರು 50ಕ್ಕೂ ಹೆಚ್ಚು ಜಾನಪದಕ್ಕೆ ಸಂಬಂಧಪಟ್ಟ ಪುಸ್ತಕಗಳ ರಚನೆ / ಸಂಗ್ರಹ ನಡೆಸಿರುವುದು, ಅನೇಕ ಸಂಶೋಧನಾ ಪ್ರಬಂಧಗಳನ್ನು ಪ್ರತಿಷ್ಠಿತ ಸಮಾರಂಭಗಳಲ್ಲಿ, ಸಂಕಿರಣ ಗಳಲ್ಲಿ ಮಂಡಿಸಿರುವುದು ಇವರ ಇತರ ಸಾಧನೆ.
ಸಂಘ ಸಂಸ್ಥೆಗಳಲ್ಲೂ ಪಾತ್ರ
ಹೊನ್ನಾವರದಲ್ಲಿ ಸಮತಾ ಪ್ರಗತಿಪರ ಸಂಘಟನೆಯನ್ನು ಸ್ಥಾಪಿಸಿದ್ದು ಮತ್ತು ಸಮತಾ ಮಹಿಳಾ ಪತ್ತಿನ ಸಹ
ಕಾರಿ ಸಂಸ್ಥೆ ಪ್ರಾರಂಭಿಸಿ ಸ್ಥಾಪಕ ಅಧ್ಯಕ್ಷೆಯಾಗಿ ಶಾಂತಿ ನಾಯಕರು ಸಾಕಷ್ಟು ಕೆಲಸ ಮಾಡಿದ್ದರು. ಭೂಮಿ
ಮಹಿಳಾ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷೆಯಾಗಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿ ಸಹಕಾರಿ
ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದರು. ಉತ್ತರ ಕನ್ನಡದಲ್ಲಿ ಸಾಕ್ಷರತಾ ಆಂದೋಲನ ಯಶಸ್ವಿಯಾಗುವಲ್ಲೂ ಇವರ
ಕೊಡುಗೆಯಿದೆ. ತಮ್ಮ ಪತಿ ಎನ್.ಆರ್. ನಾಯಕರ ಜೊತೆ ಸೇರಿ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, ಜಾನಪದ ಮತ್ತು
ಸಾಹಿತ್ಯಕ್ಕೆ ಸಂಬಂಽಸಿದ ಅನೇಕ ಮೌಲಿಕ ಕೃತಿಗಳನ್ನು ಪ್ರಕಟಿಸಿ ತಮ್ಮ ಪುಸ್ತಕ ಪ್ರೀತಿ ಮೆರೆದಿದ್ದಾರೆ.
ಜಾನಪದೀಯ ನಿದರ್ಶನ
ಪ್ರತಿಯೊಂದಕ್ಕೂ ಜಾನಪದೀಯ ತಳಹದಿಯ ಮೇಲೆ ನಿದರ್ಶನ ನೀಡುತ್ತಾರೆ. ಹೀಗಾಗಿ ಇವರ ಮಾತು- ಜೀವ
ನಾನುಭವದ ಕೇಸರಿ ಬಾತು. ಸುಮ್ಮನೆ ಶೆಟ್ಲಿ, ಬಂಗುಡೆ ತಿಂದುಕೊಂಡು ಕಾಲ ಕಳೆಯದೇ, ಹಲವು ಸೃಜನಶೀಲ
ಹವ್ಯಾಸಗಳನ್ನು ಬೆಳೆಸಿಕೊಂಡು ಶಾಂತಿ ನಾಯಕರು ಹಲವು ಸಾಧನೆಗಳ ನಾಯಕಿಯಾಗಿರುವುದು ವಿಶೇಷ.
ಜ್ಞಾನದ ಸಂಪತ್ತು
ಆನೆ ಕಾಲಿನಡಿ ಹಪ್ಪಳ ಇಟ್ಟರೆ ಸಪ್ಪಳ ಆಗದಂತೆ ನೋಡಿಕೊಳ್ಳುವಷ್ಟು ಸೂಕ್ಷ್ಮ ಮನಸ್ಸಿನವರಾದ ಶಾಂತಕ್ಕ, ಹೆಣೆಯುವ ಜಾನಪದದ ಬುಟ್ಟಿಯಲ್ಲಿ ಬೆಟ್ಟದಷ್ಟು, ಬೇಕಾದಷ್ಟು ಜ್ಞಾನ ನಿಧಿಗಳ ಸಂಗ್ರಹವಿದೆ. ಪತಿ ಎನ್.ಆರ್. ನಾಯಕರು ಕೂಡಾ ಜಾನಪದದಲ್ಲಿಯೇ ಅಪ್ರತಿಮ ವಿದ್ವಾಂಸರಾಗಿರುವುದರಿಂದ ಇವರ ಜೋಡಿಯೆಂದರೆ ತಂಬೂರಿಗೂ ತಂತಿಗೂ ಇರುವ ಅವಿನಾಭಾವ ಸಂಬಂಧದಂತೆ. ಮಗಳು ಸವಿತಾ ಉದಯ್ ಕೂಡಾ ಯಾಣದ
ಸಮೀಪದ ಕಾಡಿನ ಅಂಗಡಿ ಬೈಲಿನಲ್ಲಿ ಬುಡ ಎಂಬ ಸಂಸ್ಥೆ ಕಟ್ಟಿಕೊಂಡು, ನದಿ ಸಂಸ್ಕೃತಿ, ಅರಣ್ಯ ಸಂಸ್ಕೃತಿ,
ಜಾನಪದ ಕಲೆ, ಪರಿಸರದ ಅರಿವು, ದೇಶಿ ಆಹಾರ ಪದ್ಧತಿ ಎನ್ನುತ್ತಾ, ಆ ಬಗ್ಗೆ ಹೊರ ಜಗತ್ತಿಗೆ ಅರಿವು ಮೂಡಿಸು ತ್ತಿರುವ ವಿಭಿನ್ನ ಹೆಣ್ಣು ಮಗಳು. ಮಕ್ಕಳಿಗೆ ಜನ, ಜಾನುವಾರು, ಜಾನಪದಗಳ ಬಗ್ಗೆ ಆಗಾಗ ಪಾಠ, ತರಬೇತಿ ಶಿಬಿರಗಳನ್ನು ನಡೆಸುತ್ತಾ, ನಾಯಕ ದಂಪತಿಯಂತೆಯೇ ಹಳ್ಳಿ ಪ್ರೀತಿ ಬೆಳೆಸಿಕೊಂಡವರು.
ಇದನ್ನೂ ಓದಿ: Raju Adakalli Column: ಗಿಡ ಮರಗಳ ದೊಡ್ಡಮ್ಮ ಈ ತುಳಸಿ ಗೌಡಮ್ಮ