ಬೆಂಗಳೂರು: ತ್ರಿಪುರ ರಾಜ್ಯದ ಕಲ್ಯಾಣಸಾಗರ ಮಾತಾ ತ್ರಿಪುರಸುಂದರಿ ದೇಗುಲದ ಕಲ್ಯಾಣ ಆರತಿ ಮೈಸೂರು ಜಿಲ್ಲೆಯ ನಂಜನಗೂಡು ಪುರೋಹಿತರ ನೇತೃತ್ವದಲ್ಲಿ ಬೆಳಗಿ ಕನ್ನಡದ ಪರಿಮಳವನ್ನು ಪಸರಿಸಿದ್ದಾರೆ.
ತ್ರಿಪುರ ಮುಖ್ಯಮಂತ್ರಿ ಬಿಪ್ಲ ಕುಮಾರ್ ದೇಬ್ ಸೇರಿದಂತೆ ಲಕ್ಷಾಂತರ ಭಕ್ತರು ಅದಕ್ಕೆ ಸಾಕ್ಷಿಯಾದರು. ಉತ್ತರಭಾರತದ ಗಂಗಾರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೂ ಆರತಿ ಬೆಳಗಬೇಕೆಂಬ ಆಶಯದೊಂದಿಗೆ ಕಳೆದ ಮೂರು ವರ್ಷದಿಂದ ಯುವ ಬ್ರಿಗೇಡ್ ತಂಡ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ಕಪಿಲಾರತಿ, ಶ್ರೀರಂಗಪಟ್ಟಣ ದಲ್ಲಿ ಕಾವೇರಿ ಆರತಿ ಬೆಳಗಿ ಲಕ್ಷಾಂತರ ಭಕ್ತರ ಗಮನ ಸೆಳೆದಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ತ್ರಿಪುರ ಸರಕಾರ ಇದೇ ಮಾದರಿಯಲ್ಲಿ ಮಾತಾ ತ್ರಿಪುರ ಸುಂದರಿ ದೇಗುಲದ ಕಲ್ಯಾಣ ಆರತಿಗೆ ನಂಜನಗೂಡಿನ ಪುರೋಹಿತರನ್ನು ಆಹ್ವಾನಿಸಿ ಬೆಳಗಿಸಿದೆ.
ನಂಜನಗೂಡಿನ ವೇದಬ್ರಹ್ಮ ಕೃಷ್ಣ ಜೋಯಿಸ್, ಶ್ರೀಕಾಂತ್ ಜೋಯಿಸ್, ಎಸ್.ರವಿ, ಶ್ರೀರಂಗಪಟ್ಟಣದ ರಂಜಿತ್ ಜೋಯಿಸ್ ಅವರನ್ನು ತ್ರಿಪುರ ಸರಕಾರವೇ ವಿಮಾನ ವೆಚ್ಚ ಭರಿಸಿ ತಮ್ಮ ರಾಜ್ಯಕ್ಕೆ ಕರೆಸಿಕೊಂಡಿದೆ. ದೀಪಾವಳಿ ಹಬ್ಬದ ಅಂಗವಾಗಿ ನ.೪ ರಂದು ಗುರುವಾರ ಕಲ್ಯಾಣ ಆರತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ನಂಜನ ಗೂಡು ತಂಡ ನೆರೆದಿದ್ದ ಲಕ್ಷಾಂತರ ಭಕ್ತರ ಹೃನ್ಮನ ಸೆಳೆದಿದ್ದಾರೆ. ಸ್ವತಃ ಸಿಎಂ ಬಿಪ್ಲ ಕುಮಾರ್ ದೇಬ್ ದಂಪತಿ ಧಾರ್ಮಿಕ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ನಂಜನ ಗೂಡು ತಂಡಕ್ಕೆ ಶಹಬ್ಬಾಸ್ ಗಿರಿ ನೀಡಿದ್ದಾರೆ. ಜತೆಗೆ ದೀಪಾವಳಿ ಆತಿಥ್ಯ ನೀಡಿ ತಂಡವನ್ನು ಕರ್ನಾಟಕಕ್ಕೆ ಬೀಳ್ಕೊಟ್ಟಿದ್ದಾರೆ.
ಹೇಗಿತ್ತು ಕಲ್ಯಾಣ ಆರತಿ: ಪ್ರತಿ ವರ್ಷ ದೀಪಾವಳಿ ವೇಳೆ ಕಲ್ಯಾಣಸಾಗರ ಮಾತಾ ತ್ರಿಪುರಸುಂದರಿ ದೇಗುಲದಲ್ಲಿ ಧಾರ್ಮಿಕ ಕಾರ್ಯವಷ್ಟೇ ಜರುಗುತಿತ್ತು. ಕಪಿಲಾರತಿ, ಕಾವೇರಿ ಆರತಿಯನ್ನು ಕಂಡು ಇದೇ ಮಾದರಿಯಲ್ಲಿ ಕಲ್ಯಾಣ ನದಿಗೆ ಆರತಿ ಬೆಳಗಿ ಸುವ ನಿರ್ಧಾರಕ್ಕೆ ಬಂದ ತ್ರಿಪುರಾ ಸರ್ಕಾರ ಇದೇ ಮೊದಲ ಬಾರಿಗೆ ಕಲ್ಯಾಣ ಆರತಿ ಮಾಡಿಸಿದ್ದಾರೆ.
ಕಲ್ಯಾಣ ಆರತಿಯ ಕಾರ್ಯವನ್ನು ವೇದಬ್ರಹ್ಮ ಕೃಷ್ಣ ಜೋಯಿಸ್, ಶ್ರೀಕಾಂತ್ ಜೋಯಿಸ್, ಎಸ್.ರವಿ, ಶ್ರೀರಂಗಪಟ್ಟಣದ ರಂಜಿತ್ ಜೋಯಿಸ್ ನೇತೃತ್ವದಲ್ಲಿ ಸಾಂಗ ವಾಗಿ ನೆರವೇರಿದೆ. ಗಂಗಾಪೂಜೆ, ವೇದಘೋಷ, ಸಂಸ್ಕೃತ ಶ್ಲೋಕ ಪಠಣ ಬಳಿಕ ಕಲ್ಯಾಣ ಆರತಿ ನೆರವೇರಿದೆ. ನಂಜನಗೂಡು ತಂಡದೊಂದಿಗೆ ಸ್ವತಃ ಸಿಎಂ ಬಿಪ್ಲ ಕುಮಾರ್ ದೇಬ್ ಆರತಿ ಬೆಳಗಿದ್ದಾರೆ. ಅಚ್ಚು ಕಟ್ಟಾಗಿ ನಡೆಸಿಕೊಟ್ಟ ನಂಜನಗೂಡು ತಂಡವನ್ನು ಪ್ರತಿ ವರ್ಷ ಆಹ್ವಾನಿಸಿ ಕಲ್ಯಾಣ ಆರತಿ ಮಾಡುವುದಾಗಿ ತ್ರಿಪುರಾ ಸರಕಾರ ಘೋಷಿಸಿದೆ.
ವೇದಿಕೆ ರೂವಾರಿ ರವಿ
ಆರತಿ ಬೆಳಗಿಸಲು ಹರಿಯುವ ನದಿಯ ಮಧ್ಯಭಾಗದಲ್ಲಿ ವೇದಿಕೆ ನಿರ್ಮಾಣ ಮಾಡು ವುದು ಸುಲಭದ ಮಾತಲ್ಲ. ಆದರೆ ನೀರಿನ ಮಧ್ಯೆಯೇ ಸುಸಜ್ಜಿತ ವೇದಿಕೆ ನಿರ್ಮಾಣ ಮಾಡುವಲ್ಲಿ ನಂಜನಗೂಡಿನ ಸಾಹಸಿ ಎಸ್.ರವಿ ಗಮನ ಸೆಳೆದಿದ್ದರು. ಹಾಗಾಗಿ ಈ ಪುರೋಹಿತ ತಂಡದೊಂದಿಗೆ ರವಿ ಅವರನ್ನು ತ್ರಿಪುರ ಸರಕಾರ ಆಹ್ವಾನಿಸಿತ್ತು. ನಂಜನಗೂಡಿನ ಕಪಿಲ ನದಿ, ಶ್ರೀರಂಗಪಟ್ಟಣ ದಲ್ಲಿ ಕಾವೇರಿ ನದಿಯಲ್ಲಿ ಮಧ್ಯೆ ವೇದಿಕೆ ನಿರ್ಮಾಣ ಮಾಡಿ ರವಿ ತಂಡ ಯಶಸ್ಸು ಕಂಡಿತ್ತು.
***
ಕಪಿಲಾರತಿ, ಕಾವೇರಿ ಆರತಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ್ದ ತ್ರಿಪುರ ಸರಕಾರ ಕಲ್ಯಾಣ ಆರತಿಗಾಗಿ ನಂಜನಗೂಡು ತಂಡವನ್ನು ಆಹ್ವಾನಿಸಿದ್ದು ನಮ್ಮ ಸೌಭಾಗ್ಯ. ಸಿಎಂ ಬಿಪ್ಲ ಕುಮಾರ್ ದೇಬ್ ದಂಪತಿ ಆರತಿಯಲ್ಲಿ ಭಾಗವಹಿಸಿ ಪುಳಕಿತರಾಗಿ ಪ್ರತಿವರ್ಷ ಆರತಿಗೆ ನಮ್ಮ ತಂಡ ತ್ರಿಪುರ ರಾಜ್ಯಕ್ಕೆ ಆಗಮಿಸುವಂತೆ ಆಹ್ವಾನಿಸಿ ದ್ದಾರೆ. ಇದು ನಮ್ಮ ಇಡೀ ತಂಡಕ್ಕೆ ಸಿಕ್ಕ ಗೌರವ ಎಂದು ಭಾವಿಸಿದ್ದೇನೆ.
– ವೇದಬ್ರಹ್ಮ ಕೃಷ್ಣ ಜೋಯಿಸ್