Saturday, 5th October 2024

Vishweshwar Bhat Column: ಪ್ರಧಾನಿ ಸಂದರ್ಶಿಸಿದ ಮೊದಲ ಪತ್ರಕರ್ತ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಪ್ರಧಾನಿಯಾಗಿ ಯಾರೇ ಅಧಿಕಾರ ವಹಿಸಿಕೊಂಡಾಗ, ರಾಜಧಾನಿ ದಿಲ್ಲಿಯಲ್ಲಿರುವ ಹಿರಿಯ, ಅನುಭವಿ ಪತ್ರಕರ್ತರ ವಲಯದಲ್ಲಿ ತನ್ನಷ್ಟಕ್ಕೆ ಒಂದು ಪೈಪೋಟಿ ಆರಂಭವಾಗುತ್ತದೆ. ನೂತನ ಪ್ರಧಾನಿಯವರ ಮೊದಲ ಸಂದರ್ಶನ‌ ವನ್ನು ನಾನೇ ಮಾಡಬೇಕು ಎಂದು ಗುಟ್ಟಾಗಿ ಲಾಬಿ ಶುರುವಿಟ್ಟುಕೊಳ್ಳುತ್ತಾರೆ. ಯಾವ ಪ್ರಧಾನಿಯೂ ಅಧಿಕಾರ ಸ್ವೀಕರಿಸಿದ ತಕ್ಷಣ ಸಂದರ್ಶನವನ್ನು ನೀಡುವುದಿಲ್ಲ. ನೂತನ ಹೊಣೆಗಾರಿಕೆಯನ್ನು ವಹಿಸಿಕೊಂಡ ಮೂರು-ನಾಲ್ಕು ತಿಂಗಳ ಬಳಿಕ ಪತ್ರಿಕಾ ಸಂದರ್ಶನ ಅಥವಾ ಟಿವಿ ಸಂದರ್ಶನವನ್ನು ನೀಡಿದರಾಯಿತು ಎಂದು ಅಂದು ಕೊಳ್ಳುತ್ತಾರೆ.

ಆದರೆ ಪತ್ರಕರ್ತರ ವಲಯದಲ್ಲಿ ಮೊದಲ ದಿನದಿಂದಲೇ ಸ್ಪರ್ಧೆ ಆರಂಭವಾಗಿರುತ್ತದೆ. ನೂತನ ಪ್ರಧಾನಿಯವರ ಸಂದರ್ಶನವನ್ನು ಯಾರು ಮಾಡುತ್ತಾರೋ, ಅವರು ಪತ್ರಕರ್ತರ ವಲಯದಲ್ಲಿ, ಅಧಿಕಾರದ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಸ್ವಾಭಾವಿಕವಾಗಿ ‘ಅತ್ಯಂತ ಪ್ರಭಾವಿ ಪತ್ರಕರ್ತ’ ಎಂದು ಕರೆಯಿಸಿಕೊಳ್ಳುತ್ತಾರೆ. ಅದು ಯಾವುದೇ ಪತ್ರಕರ್ತನ ಪಾಲಿಗೆ ವೃತ್ತಿಯ ಉನ್ನತ ಕ್ಷಣಗಳು. ಅದರ ಮುಂದೆ ಎಲ್ಲ ಪ್ರಶಸ್ತಿಗಳು ನಗಣ್ಯ.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರನ್ನು ಮೊದಲು ಯಾರು ಸಂದ ರ್ಶನ ಮಾಡುತ್ತಾರೆ ಎಂಬ ಬಗ್ಗೆ ಕುತೂಹಲವಿತ್ತು. ವಾಜಪೇಯಿ ಈ ವಿಷಯದಲ್ಲಿ ಜಾಣ್ಮೆಯನ್ನು ಮೆರೆದರು. ಒಂದು ಕಾಲಕ್ಕೆ ತಾವೇ ಸಂಪಾದಕರಾಗಿದ್ದ ‘ಪಾಂಚಜನ್ಯ’ ಪತ್ರಿಕೆಗೆ ಸಂದರ್ಶನ ನೀಡಲು ನಿರ್ಧರಿಸಿದರು. ಅವರು ಆ ಪತ್ರಿಕೆಯ ಆಗಿನ ಸಂಪಾದಕ ತರುಣ್ ವಿಜಯ್ ಅವರಿಗೆ ಪ್ರಪ್ರಥಮ ಸಂದರ್ಶನವನ್ನು ನೀಡಿದರು. ಆ ಸಂದರ್ಶನ ಅವರ ಅದೃಷ್ಟವನ್ನೇ ಬದಲಾಯಿಸಿಬಿಟ್ಟಿತು.

ಅಲ್ಲಿಯ ತನಕ ತರುಣ್ ವಿಜಯ್ ಅವರು ‘ಪಾಂಚಜನ್ಯ’ ಓದುಗರಿಗೆ ಮತ್ತು ಹಿಂದಿ ಪತ್ರಕರ್ತರ ವಲಯದಲ್ಲಷ್ಟೇ ಪರಿಚಿತರಾಗಿದ್ದರು. ಯಾವಾಗ ವಾಜಪೇಯಿ ಅವರ ಮೊದಲ ಸಂದರ್ಶನವನ್ನು ಮಾಡಿದರೋ, ರಾತ್ರಿ ಬೆಳಗಾಗು ವುದರೊಳಗೆ ಪರಿಚಿತರಾಗಿಬಿಟ್ಟರು. ಎಲ್ಲಿ ಹೋದರೂ, ಅವರನ್ನು ‘ಪ್ರಧಾನಿ ವಾಜಪೇಯಿ ತಮ್ಮ ಮೊದಲ ಸಂದ ರ್ಶನವನ್ನು ಇವರಿಗೇ ನೀಡಿದ್ದು, ವಾಜಪೇಯಿ ಮೊದಲ ಸಂದರ್ಶನವನ್ನು ಮಾಡಿದ ಪತ್ರಕರ್ತ’ ಎಂದೇ ಸಂಬೋ ಧಿಸಲಾಗುತ್ತಿತ್ತು.

ಇದು ಅವರಿಗೆ ಎಲ್ಲೆಡೆ ಮುಕ್ತ ಪ್ರವೇಶ ಪರವಾನಿಗಿಯನ್ನು ನೀಡುತ್ತಿತ್ತು. ತರುಣ್ ವಿಜಯ್ ಇದನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡರು. ವಾಜಪೇಯಿ ಸಂಪುಟದ ಸಚಿವರ ಮನೆಗೆ, ಆಫೀಸಿಗೆ ಅವರು ರಾಜಾರೋಷವಾಗಿ ನುಗ್ಗುತ್ತಿದ್ದರು. ಎಲ್ಲ ಸಚಿವರು, ‘ನಮ್ಮ ಪ್ರಧಾನಿಯವರನ್ನು ಮೊದಲು ಸಂದರ್ಶಿಸಿದ ಪತ್ರಕರ್ತರಾಗಿದ್ದರಿಂದ ವಾಜಪೇಯಿ ಯವರಿಗೆ ತೀರಾ ನಿಕಟ, ಆಪ್ತ’ ಎಂದು ಭಾವಿಸುತ್ತಿದ್ದರು.

ಹೀಗಾಗಿ ಅವರಿಗೆ ಸರ್ವತ್ರ ಅಗ್ರತಾಂಬೂಲ. ಇದನ್ನೇ ತರುಣ್ ವಿಜಯ್ ಬಂಡವಾಳ ಮಾಡಿಕೊಂಡರು. ಸರಕಾರದ ಪ್ರಮುಖ ಸಮಿತಿಗಳಲ್ಲಿ ಸದಸ್ಯರಾಗಿ, ಸಲಹೆಗಾರರಾಗಿ ಸೇರಿಕೊಂಡರು. ಕೇಂದ್ರ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿಕೊಳ್ಳಲಾರಂಭಿಸಿದರು. ಪ್ರಧಾನಿ, ರಾಷ್ಟ್ರಪತಿಯವರ ವಿದೇಶ ಪ್ರವಾಸಗಳಲ್ಲಿ ಕಾಯಂ ಸದಸ್ಯರಾದರು. ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಕೈಯಾಡಿಸಲಾ ರಂಭಿಸಿದರು. ಸ್ವಂತ ಕೆಲಸಗಳನ್ನು ಮಾಡಿಸಿಕೊಳ್ಳಲು ಲಾಬಿ ಮಾಡುವುದು, ಪ್ರಭಾವ ಬೀರುವುದನ್ನು ರೂಢಿಸಿ ಕೊಂಡರು.

ಈ ನಡುವೆ ಅವರಿಗೆ ರಾಜಕೀಯ ಆಸೆಯೂ ಚಿಗುರಿತು. ಬಿಜೆಪಿ ಕಾರ್ಯಾಲಯಕ್ಕೆ ನಿತ್ಯವೂ ಎಡತಾಕಲಾ ರಂಭಿಸಿದರು. ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರನ್ನು ಒಲಿಸಿಕೊಂಡು ರಾಜ್ಯಸಭೆಯ ಸದಸ್ಯರೂ ಆದರು. ಅವರಿಗಿರುವ ವೃತ್ತಿ ನೈಪುಣ್ಯ, ಸಾಮರ್ಥ್ಯಕ್ಕಿಂತ ಹೆಚ್ಚಾಗಿ, ‘ಪ್ರಧಾನಿ ವಾಜಪೇಯಿ ಅವರನ್ನು ಸಂದರ್ಶಿಸಿದ ಮೊದಲ ಪತ್ರಕರ್ತ’ ಎಂಬ ಬಿರುದೇ ಎಲ್ಲೆಡೆ ಕೆಲಸ ಮಾಡುತ್ತಿತ್ತು. ರಾಜ್ಯಸಭೆ ಸದಸ್ಯರಾಗಿದ್ದ ಅವಧಿಯಲ್ಲಿ, ಅತ್ಯಂತ ಮಹತ್ವದ ರಕ್ಷಣೆ, ವಿದೇಶಾಂಗ ಇಲಾಖೆಗಳ ಸ್ಥಾಯಿ ಮತ್ತು ಸಲಹಾ ಸಮಿತಿಗಳಲ್ಲಿ ಅವರು ಸದಸ್ಯ ರಾದರು.

ಆ ದಿನಗಳಲ್ಲಿ ಅವರು ಕೇಂದ್ರದ ಬಹುತೇಕ ಸಚಿವರಿಗೆ ‘ಅಘೋಷಿತ ಸಲಹೆಗಾರ’ರಾಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ‘ಪ್ರಧಾನಿ ವಾಜಪೇಯಿ ಅವರನ್ನು ಸಂದರ್ಶಿಸಿದ ಮೊದಲ ಪತ್ರಕರ್ತ’ ಎಂಬ ಸಂಗತಿಯೇ ಅವರಿಗೆ ವರದಾನವಾಗಿ ಬಿಟ್ಟಿತು.

ಇದನ್ನೂ ಓದಿ: Vishweshwar Bhat Column: ಇನ್ನೂ ಯಾಕ ಬರಲಿಲ್ಲ ಈಜಲೂ ಹೋಂದಾವ..!