Thursday, 21st November 2024

Vishweshwar Bhat Column: ರಾಜೀವ್‌ – ವಿ.ಪಿ.ಸಿಂಗ್‌ ಮಾತುಕತೆ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

1987ರ ಜೂನ್. ಪ್ರಧಾನಿ ರಾಜೀವ್ ಗಾಂಧಿ ಮತ್ತು ಅವರ ಸಂಪುಟ ಸಹೋದ್ಯೋಗಿ ವಿ.ಪಿ.ಸಿಂಗ್ ಸಂಬಂಧ
ಹಳಸಿತ್ತು. ರಾಜೀವ್ ಸಂಪುಟದಿಂದ ಹೊರಬಿದ್ದ ಆರೀಫ್ ಮಹಮ್ಮದ್‌ ಖಾನ್, ಅರುಣ್ ನೆಹರು, ವಿ.ಸಿ.ಶುಕ್ಲ ಮುಂತಾದವರು ಸಿಂಗ್ ಬಣ ಸೇರಿದ್ದರು. ಅಂದಿನ ರಾಷ್ಟ್ರಪತಿ ಜೈಲ್‌ಸಿಂಗ್ ರಾಜೀವ್ ವಿರೋಧಿ ಬಣದವರೊಂದಿಗೆ ಸಂಪರ್ಕದಲ್ಲಿದ್ದರು. ಜೈಲ್‌ಸಿಂಗ್ ರಾಜೀವ್ ಸಂಪುಟವನ್ನು ಕಿತ್ತೆಸೆಯುವ ಸಾಧ್ಯತೆಯಿದೆ ಎಂಬ ಗುಲ್ಲೆದ್ದಿತ್ತು.

ರಾಜೇಶ್ ಪೈಲಟ್‌ರು ರಾಜೀವರ ಪರವಾಗಿ ಸಿಂಗ್‌ರನ್ನು ಭೇಟಿ ಮಾಡಿ ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಯತ್ನಿಸಿದ್ದರು. ಈ ಮಧ್ಯೆ ರಾಜೀವ್ ಮತ್ತು ಸಿಂಗ್ 2 ಬಾರಿ ಭೇಟಿ ಮಾಡಿದ್ದರು. ಆದರೆ ಮನಸ್ಸಿನಲ್ಲಿ ಹಳೆಯ ಘಟನೆಗಳೇ ಮೆಲುಕು ಹಾಕುತ್ತಿದ್ದರೆ, ಸಂಬಂಧ ಸುಧಾರಿಸುವ ಬದಲು ಹಾಳಾಗುತ್ತದೆ ಎಂಬುದಕ್ಕೆ ಅವರಿಬ್ಬರ ಭೇಟಿಯೇ ನಿದರ್ಶನ. ಮೊದಲ ಸಲ ಭೇಟಿಯಾದಾಗ ಸಿಂಗ್, ‘ನಾವಿಬ್ಬರು ನಮ್ಮ ನಮ್ಮ ಹುದ್ದೆ ಮರೆತು, ನಾನು ವಿಶ್ವನಾಥ ಆಗಿ, ನೀವು ರಾಜೀವ್ ಆಗಿ ಮಾತಾಡೋಣ.

ನಾನು ಸಿಐಎ ಏಜೆಂಟ್ ಎಂದು ಪ್ರತಿದಿನ ಕಲ್ಪನಾಥ ರೈ ಮತ್ತು ಕೆ.ಕೆ.ತಿವಾರಿ ಹೇಳಿಕೆ ನೀಡುತ್ತಿದ್ದಾರೆ, ಏನಿದು ಅಸಹ್ಯ?’ ಎಂದು ಖಾರವಾಗಿಯೇ ಕೇಳಿದರು. ಅದಕ್ಕೆ ರಾಜೀವ್, ‘ಪಕ್ಷದಲ್ಲಿ ವಿಪರೀತ ಆಕ್ರೋಶವಿದೆ. ಅದು ಆ ಆಕ್ರೋಶದ ಅಭಿವ್ಯಕ್ತಿಯಷ್ಟೇ’ ಎಂದರು. ಇದರಿಂದ ಕ್ರುದ್ಧರಾದ ಸಿಂಗ್, ‘ನಾನು ಇದನ್ನೆಲ್ಲ ನಿಮ್ಮ ತಾಯಿಯ ಕಾಲದಿಂದ ನೋಡುತ್ತಾ ಬಂದಿದ್ದೇನೆ. ಯಾವ ನಟ್-ಬೋಲ್ಟ್ ಯಾವ ತಂತಿಗೆ ಜಾಯಿನ್ ಆಗಿದೆ ಎಂಬುದು ನನಗೆ ಗೊತ್ತು. ತಿವಾರಿ ಮತ್ತು ರೈ ಲೌಡ್ ಸ್ಪೀಕರುಗಳು. ಈ ರೂಮಿನಲ್ಲಿ ಮೈಕ್ರೋಫೋನ್‌ಗಳನ್ನು ಅಳವಡಿಸಲಾಗಿದೆ ಎಂಬುದು ಗೊತ್ತು’ ಎಂದರು. ಸಿಂಗ್‌ರಿಂದ ಅಂಥ ತೀಕ್ಷ್ಣ ಪ್ರತಿಕ್ರಿಯೆ ನಿರೀಕ್ಷಿಸದ ರಾಜೀವ್, ‘ಅವರಿಬ್ಬರಿಗೆ ವಾಲ್ಯೂಮ್ ಕಡಿಮೆ ಮಾಡಿ ಎಂದು ಹೇಳುತ್ತೇನೆ’ ಎಂದರು.

‘ವಾಲ್ಯೂಮ್ ಕಡಿಮೆ ಮಾಡಿ ಅಂದ್ರೆ ಏನರ್ಥ? ರಾಜೀವ್, ನೀವು ನನ್ನೊಂದಿಗೆ ಆಟವಾಡಲು ಬಯಸಿದರೆ,
ನಮ್ಮಿಬ್ಬರ ಮಧ್ಯೆ ಫಲಪ್ರದ ಮಾತುಕತೆ ಸಾಧ್ಯವಿಲ್ಲ. ನೀವು ನನ್ನನ್ನು ನಿಷ್ಪ್ರಯೋಜಕ ಮಂತ್ರಿ/ನಾಯಕ ಎನ್ನಿ, ತಕರಾರಿಲ್ಲ. ಆದರೆ ನೀವು ನನ್ನ ರಾಷ್ಟ್ರಪ್ರೇಮವನ್ನು ಪ್ರಶ್ನಿಸಿದರೆ ನಾನು ಸುಮ್ಮನಿರುವುದಿಲ್ಲ. ಮುಂದೇನಾಗು
ತ್ತದೋ ಆಗಲಿ. ನಾನು ಅವಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು. ಮರುದಿನದ ಪತ್ರಿಕೆಗಳಲ್ಲಿ ಸಿಂಗ್ ಅವರೇ ದುಂಬಾಲು ಬಿದ್ದು ರಾಜೀವ್ ರನ್ನು ಭೇಟಿಯಾದರು ಎಂದು ಬರೆಯಿಸಲಾಯಿತು. ಈ ವಿಷಯದಲ್ಲಿ ಪ್ರಧಾನಿ ಕಾರ್ಯಾಲಯದಲ್ಲಿನ ವ್ಯಕ್ತಿಗಳು ಸುಳ್ಳುಸುದ್ದಿ ಹಬ್ಬಿಸಿದರು. ಕೆಲ ದಿನಗಳ ಬಳಿಕ ಖುದ್ದು ರಾಜೀವರೇ ತಮ್ಮ ನಿವಾಸಕ್ಕೆ ಆಗಮಿಸುವಂತೆ ಸಿಂಗ್ ರನ್ನು ಕರೆದರು. ಆಗ ರಾತ್ರಿ 11 ಗಂಟೆ. ಆ ವೇಳೆ ರಾಜೀವ್ ಹಳೆ ಘಟನೆ ಯನ್ನೇ ಮುಖ್ಯವಾಗಿ ಪ್ರಸ್ತಾಪಿಸಿದರು.

‘1977ರಲ್ಲಿ ಇಂದಿರಾ ಗಾಂಧಿಯವರು ಸೋತಾಗ, ನೀವು ಅವರನ್ನು ತೊರೆದಿರಿ’ ಎಂದು ರಾಜೀವ್ ಹೇಳಿದ್ದಕ್ಕೆ
ಸಿಂಗ್, ‘ನಿಮ್ಮ ಸುಳ್ಳುಗಳನ್ನು ಕೇಳಿದರೆ, ಭೂಮಿ ಬಾಯಿ ತೆರೆಯಬಹುದು’ ಎಂದರು ವ್ಯಂಗ್ಯವಾಗಿ. ಜತೆಗೆ ‘ನಾವು ನಿತ್ಯವೂ ಅವರ ವಿಲ್ಲಿಂಗ್ಡನ್ ಕ್ರೆಸೆಂಟ್ ನಿವಾಸಕ್ಕೆ ಹೋಗುತ್ತಿದ್ದೆವು. ಆಗ ಸಂಜಯ್ ಇರುತ್ತಿದ್ದರು. ಆದರೆ ನಿಮ್ಮನ್ನು
ನಾನಲ್ಲಿ ಎಂದೂ ನೋಡಿಲ್ಲ. ನಾನು ಅವರ ಜತೆಯಲ್ಲಿರಲಿಲ್ಲ ಎಂದು ಈಗ ಹೇಳುತ್ತಿದ್ದೀರಿ’ ಎಂದರು ತೀಕ್ಷ್ಣವಾಗಿ. ಆಗ ರಾಜೀವ್ ನಿರುತ್ತರರಾದರು. ‘ನೀವು ನನ್ನ ಬಗ್ಗೆ ಹೀಗೆ ಯೋಚಿಸುತ್ತೀರಿ ಎಂದಾದರೆ, ನಿಮ್ಮ ಪಾಲಿಗೆ
ವಿಶ್ವನಾಥ ಸತ್ತ ಎಂದೇ ತಿಳಿಯಿರಿ’ ಎಂದ ಸಿಂಗ್ ಹೊರಡಲು ಎದ್ದು ನಿಂತರು.

‘ನೋ..ನೋ.. ವಿಶ್ವನಾಥ… ಕುಳಿತುಕೊಳ್ಳಿ’ ಎಂದ ರಾಜೀವ್, ‘ಕಾಂಗ್ರೆಸ್ ಇಲ್ಲದೇ 3 ತಿಂಗಳು ಸಹ ನಿಮಗೆ ಕಳೆಯುವುದು ಕಷ್ಟ’ ಎಂದು ಹೇಳಿದರು. ಸಿಂಗ್ ‘ರಾಜೀವ್ ಜೀ, ಕಾಂಗ್ರೆಸ್ ಸಹಾಯವಿಲ್ಲದೇ 3 ತಿಂಗಳು ಕಳೆದರೆ
ಜೀವನವಿಡೀ ನನಗೆ ಅದರ ಅಗತ್ಯವಿಲ್ಲ’ ಎಂದವರೇ ಅಲ್ಲಿಂದ ನಿರ್ಗಮಿಸಿದರು. ಸಿಂಗ್ ನುಡಿದಂತೇ ಆಯಿತು. ಈ ವಿಷಯವನ್ನು ಪತ್ರಕರ್ತೆ ನೀರಜಾ ಚೌಧುರಿ ತಮ್ಮ ಪುಸ್ತಕ (How Prime Ministers Decide) ದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Vishweshwar Bhat Column: ಎರಡು ಭಾರತಗಳ ಮತದಾರರು