ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಕೆಲವರನ್ನು ಅರ್ಥ ಮಾಡಿಕೊಳ್ಳಲು ಅವರ ಜತೆ 20-30 ವರ್ಷ ಒಡನಾಡಬೇಕಿಲ್ಲ. ಮುಖತಃ ಭೇಟಿ ಮಾಡಿ ಅರ್ಧ ಗಂಟೆ ಮಾತಾಡಿದರೂ ಸಾಕು. ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರು ನಿವೃತ್ತರಾಗುವುದಕ್ಕಿಂತ (2007 ರಲ್ಲಿ) ಕೆಲ ದಿನಗಳ ಮೊದಲು, ಪತ್ರಕರ್ತ ಮತ್ತು ಸಾಹಿತಿ ಖುಷವಂತ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಆ ಭೇಟಿಯ ಬಗ್ಗೆ ಖುಷವಂತ್ ಸಿಂಗ್ ತಮ್ಮ ಅಂಕಣದಲ್ಲಿ ಬರೆದಿದ್ದರು.
ಇತ್ತೀಚೆಗೆ ನನ್ನ ಹಳೆಯ ಕಡತದಲ್ಲಿ ಸಿಂಗ್ ಬರೆದ ಆ ಬರಹ ಸಿಕ್ಕಿತು. ಅವರು ಡಾ.ಕಲಾಂ ಕುರಿತು ಹೀಗೆ ಬರೆದಿದ್ದರು: ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿ ಐದು ವರ್ಷ ಪೂರ್ಣ ಅವಧಿ ಅಧಿಕಾರ ಪೂರೈಸಲಿರುವ ಡಾ.ಅಬ್ದುಲ್ ಕಲಾಂ ನಿವೃತ್ತರಾಗಲಿದ್ದಾರೆ.
ಈ ಹುದ್ದೆಯನ್ನು ಅಲಂಕರಿಸಿದ ಮುಸ್ಲಿಮರ ಪೈಕಿ ಡಾ.ಕಲಾಂ ಮೂರನೆಯವರಾಗಿದ್ದಾರೆ. ಸೆಕ್ಯುಲರ್ ಡೆಮಾಕ್ರಸಿ ಎಂದು ಭಾರತ ಕರೆಯಿಸಿಕೊಂಡಿದ್ದು ಸಾರ್ಥಕವಾಯಿತು. ಅಲ್ಲದೇ ಇದರಿಂದ ನಮ್ಮ ನೆರೆಹೊರೆಯವರಿಗೆ ಒಂದು
ಉತ್ತಮ ಸಂದೇಶವೂ ಹೋದಂತೆ ಆಗಿದೆ. ನಿವೃತ್ತರಾದ ಬಳಿಕ ಡಾ.ಕಲಾಂ ತಮ್ಮ ವೈಜ್ಞಾನಿಕ ಸಂಶೋಧನೆಯನ್ನು ಮುಂದುವರಿಸುತ್ತಾರಾ, ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ ಸೇವೆ ಕೈಗೆತ್ತಿಕೊಳ್ಳುತ್ತಾರಾ ಅಥವಾ ಸನ್ಯಾಸತ್ವ
ಹೊಂದುತ್ತಾರಾ ಎಂಬ ಬಗ್ಗೆ ನನಗೇನೂ ಗೊತ್ತಿಲ್ಲ.
ನನಗೆ ಅವರ ಜತೆ ಅರ್ಧ ಗಂಟೆ ಕಳೆಯುವ ಸದವಕಾಶ ಸಿಕ್ಕಿತ್ತು. ಅವರು ನಾನು ವಾಸಿಸುವ ಅಪಾರ್ಟ್ಮೆಂಟಿಗೆ ಬಂದಿದ್ದು ನನಗೆ ನೀಡಿದ ಗೌರವ ಎಂದು ಭಾವಿಸುವೆ. ನನ್ನಂಥ ಪೆನ್ನು-ಪುಸ್ತಕ ನೆಚ್ಚಿಕೊಂಡಿರುವವನ ಮನೆಗೆ ಈ ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ರಾಷ್ಟ್ರದ ಮುಖ್ಯಸ್ಥರೊಬ್ಬರು ಬರುವುದು ಅವರ ನಮ್ರತೆಯನ್ನು ತೋರಿಸು ತ್ತದೆ. ನಮ್ಮಿಬ್ಬರ ನಡುವೆ ಸಾಮಾನ್ಯ ಎನಿಸುವ ಸಂಗತಿಗಳು ಕೆಲವೇ ಕೆಲವಿರಬಹುದು. ಅವರು ತಮಿಳಿಗ. ನನಗೆ ‘ವಣಕ್ಕಮ್’ ಮತ್ತು ‘ಅಯ್ಯಯ್ಯೋ’ ಎಂಬ ಎರಡು ತಮಿಳು ಪದಗಳು ಮಾತ್ರ ಗೊತ್ತು.
ವಿಜ್ಞಾನಿಯಾದರೂ ಅವರು ಅಪ್ಪಟ ಧಾರ್ಮಿಕ ವ್ಯಕ್ತಿ. ನಾನು ನಾಸ್ತಿಕ. ವಿಜ್ಞಾನ ಮತ್ತು ಧರ್ಮ ಒಟ್ಟಿಗೆ ಹೋಗಲಾರವು ಎಂದು ನಂಬಿದವನು ನಾನು. ಒಂದು ಕಾರಣ (Reason) ಆಧರಿತ, ಮತ್ತೊಂದು ನಂಬಿಕೆ
(Faith) ಆಧರಿತ. ಅವರ ಬರಹಗಳನ್ನು ಓದಿದ ಮತ್ತು ಅವರೊಂದಿಗೆ ಮಾತಾಡಿದ ನಂತರ ನನಗೆ ಮಹಾತ್ಮ ಗಾಂಧಿಯವರ ಧಾರ್ಮಿಕ ನಂಬಿಕೆಗಳಂತೆ ಡಾ.ಕಲಾಂ ಅವರದ್ದೂ ಅದೇ ರೀತಿಯದ್ದು ಎಂದೆನಿಸಿತು. ಬಾಪು
ಅವರ ಎಲ್ಲ ವಿಚಾರಗಳನ್ನು ಸ್ವೀಕರಿಸಲು ಅಸಮರ್ಥನಾದರೂ, ನಾನು ನನ್ನನ್ನು ಗಾಂಧಿವಾದಿ ಎಂದು ಕರೆದುಕೊಳ್ಳುತ್ತೇನೆ. ಡಾ.ಕಲಾಂ ಅವರು ವಿಜ್ಞಾನ ಮತ್ತು ಧರ್ಮದ ಮಧ್ಯೆ ಯಾವ ವೈರುಧ್ಯ ಅಥವಾ ಸಂಘರ್ಷ ಗಳನ್ನು ಕಾಣುವುದಿಲ್ಲ. ಅವರೊಂದಿಗೆ ಮಾತಾಡುವಾಗ, ‘ಸ್ವರ್ಗ ಮತ್ತು ನರಕ ಎಂಬುದಿಲ್ಲ.
ಅವೇನಾದರೂ ಇದ್ದರೆ ನಮ್ಮ ಮನಸ್ಸಿನಲ್ಲಿ ಮಾತ್ರ’ ಎಂದು ಹೇಳಿದರು. ಹಾಗಾದರೆ ಡಾ.ಕಲಾಂ ಅವರ ಪ್ರಕಾರ ದೇವರು ಅಂದರೆ ಯಾರು? ಈ ಪ್ರಶ್ನೆಗೆ ಅವರಲ್ಲಿ ಸ್ಪಷ್ಟತೆ ಇದೆ. ಈಶ್ವರ-ಅಲ್ಲಾಹ್, ಖುದಾ-ಭಗವಾನ್ ಮತ್ತು
ಮಸೀದಿ-ದೇವಾಲಯ ಎಂಬ ದ್ವಂದ್ವ ಇಲ್ಲ. ಪ್ರೀತಿಯೊಂದೇ ಅವರ ಉದ್ದೇಶ. ಆದರೆ ನಾವು ದ್ವೇಷಕ್ಕೆ ನಮ್ಮ ಶಕ್ತಿಯನ್ನು ವ್ಯಯಿಸುತ್ತಿದ್ದೇವೆ. ನಮ್ಮ ನಮ್ಮ ಸಂತಸವನ್ನು ಕೊಂದು ಜೀವನವನ್ನು ಹೈರಾಣ ಮಾಡಿಕೊಳ್ಳು ತ್ತಿದ್ದೇವೆ.
ಖುದಾ ಮತ್ತು ರಾಮ ಇಬ್ಬರೂ ಒಂದೇ. ಪ್ರೀತಿಯಲ್ಲಿ ಮಾತ್ರ ಇವರಿಬ್ಬರೂ ಒಂದೇ ಆಗುತ್ತಾರೆ. ಇದನ್ನು ಡಾ.ಕಲಾಂ ಒಂದು ಕವಿತೆ ಮೂಲಕ ವಿವರಿಸಿದರು. ಡಾ.ಕಲಾಂ ಅವರ ದೈವತ್ವ ಕಲ್ಪನೆಗೆ ಯಾವ ರಾಷ್ಟ್ರೀಯ ವಾದಿಯೂ ತಕರಾರು ತೆಗೆಯಲಾರ. ಕೆಲವರು ದೇವರು ಅಂದ್ರೆ ಸತ್ಯ ಎಂದು ಪ್ರತಿಪಾದಿಸುತ್ತಾರೆ. ಉಳಿದವರು ಪ್ರೀತಿ ಅಂತಾರೆ. ಆದರೆ ಡಾ.ಕಲಾಂ ಪ್ರಕಾರ ದೇವರೆಂದರೆ ಕಾರುಣ್ಯ. ಡಾ.ಕಲಾಂ ವ್ಯಕ್ತಿತ್ವವನ್ನು ಖುಷವಂತ್ ಸಿಂಗ್ ಕೇವಲ ಐದಾರು ಪ್ಯಾರಗಳಲ್ಲಿ ಕಟ್ಟಿಕೊಟ್ಟಿದ್ದರು.
ಇದನ್ನೂ ಓದಿ:Vishweshwar Bhat Column: ಎರಡು ಭಾರತಗಳ ಮತದಾರರು