Thursday, 12th December 2024

‌Vishweshwar Bhat Column: ಈ ದೇಶದ ಹೆಸರು ಕೇಳಿದ್ದೀರಾ ?

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ್ ಭಟ್

ನಾನು ಇಲ್ಲಿ ತನಕ ಆಫ್ರಿಕಾ ಖಂಡದಲ್ಲಿರುವ ಚಾಡ್ ಎಂಬ ದೇಶಕ್ಕೆ ಹೋಗಿದ್ದೇನೆ, ನೋಡಿದ್ದೇನೆ ಎಂದು ಹೇಳಿ ದ್ದನ್ನು ಕೇಳಿಲ್ಲ. ಪತ್ರಿಕೆಗಳಲ್ಲೂ ಈ ದೇಶದ ಬಗ್ಗೆ ಪ್ರಕಟವಾದ ಪರಿಚಯಾತ್ಮಕ, ಪ್ರವಾಸೋದ್ಯಮ ಸಂಬಂಧಿ ಲೇಖನಗಳನ್ನು ಓದಿಲ್ಲ. ಈ ದೇಶದ ವಿದ್ಯಮಾನದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯನ್ನೂ ಓದಿದ ನೆನಪಿಲ್ಲ. ಆ ದೇಶ ಯಾವ ಕಾರಣಕ್ಕೂ ಸುದ್ದಿಯಾದದ್ದಿಲ್ಲ. ಅದು ಒಳ್ಳೆಯ ಕಾರಣವಿರಬಹುದು, ಕೆಟ್ಟದ್ದಿರಬಹುದು (2 ವರ್ಷಗಳ ಹಿಂದೆ ಆ ದೇಶದ ಅಧ್ಯಕ್ಷನ ಹತ್ಯೆಯಾದಾಗ ಸಣ್ಣ ಸುದ್ದಿ ಓದಿದ ನೆನಪು).

ಚಾಡ್ ಹೊರಜಗತ್ತಿಗೆ ಅಪರಿಚಿತವೇ. ಆಫ್ರಿಕಾ ಖಂಡದಲ್ಲೂ ಅದು ಅಷ್ಟು ಪರಿಚಿತವಲ್ಲ. ಒಂದು ದೇಶ ಈ ರೀತಿ ಅeತವಾಗಿರುವುದು ಸೋಜಿಗವೇ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಸುಡಾನ್, ಆಲ್ಜೀರಿಯಾ, ಈಜಿ, ಲಿಬಿಯಾ,‌ ಅಂಗೊಲಾವನ್ನು ಬಿಟ್ಟರೆ ಭೂಪ್ರದೇಶದಲ್ಲಿ ಚಾಡ್ ದೊಡ್ಡದು. ಅದು ಬೇರೆ ದೇಶಗಳಿಂದ ಸುತ್ತುವರಿ ದಿರುವ ದೇಶ. ಇದನ್ನು Land-locked Country ಎಂದು ಕರೆಯುತ್ತಾರೆ.

ಅಂದರೆ ಆ ದೇಶವನ್ನು ಲಿಬಿಯಾ, ಸುಡಾನ್, ನೈಜೀರಿಯಾ, ನಿಗರ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಕ್ಯಾಮರೂನ್ ದೇಶಗಳು ಆವೃತವಾಗಿವೆ. ಎಂಜಮೀನ (N’Djamena) ಎಂಬ ನಗರ ಚಾಡ್ ದೇಶದ ರಾಜಧಾನಿ. ಅದು ಆ ದೇಶದ ದೊಡ್ಡ ನಗರವೂ ಹೌದು. ಲೇಕ್ ಚಾಡ್‌ನಿಂದಾಗಿ ಆ ದೇಶಕ್ಕೆ ಆ ಹೆಸರು ಬಂದಿದೆ. ಆಫ್ರಿಕಾ ಖಂಡದಲ್ಲಿ 6ನೇ ಅತಿ ದೊಡ್ಡ ದೇಶವಾದರೂ, ಅಲ್ಲಿನ ಜನಸಂಖ್ಯೆ ಕೇವಲ 1 ಕೋಟಿ 60 ಲಕ್ಷ. ಅಲ್ಲಿನ ಅಧಿಕೃತ ಭಾಷೆ ಅರೇಬಿಕ್ ಮತ್ತು ಫ್ರೆಂಚ್.

ಇದರ ಹೊರತಾಗಿ ನೂರಕ್ಕೂ ಹೆಚ್ಚು ಭಾಷೆಗಳನ್ನು ಮಾತಾಡುವ ಜನಾಂಗಗಳಿವೆ. ಇಸ್ಲಾಂ (55.1%) ಮತ್ತು ಕ್ರಿಶ್ಚಿ ಯಾನಿಟಿ (41.1%) ಪ್ರಮುಖ ಧರ್ಮಗಳು. ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯಿಂದ 2ನೇ ಸ್ಥಾನ. ಅತಿ ಬಡತನ ಮತ್ತು ಅತಿ ಭ್ರಷ್ಟಾಚಾರದಿಂದ ಕಂಗೆಟ್ಟಿರುವ ಆ ದೇಶ ಸದ್ಯೋಭವಿಷ್ಯದಲ್ಲಿ ಅಭಿವೃದ್ಧಿಯಾಗುವ ಯಾವ ಸೂಚನೆ ಗಳಿಲ್ಲ. ದೇಶದ ಶೇ.80ರಷ್ಟು ಜನ ಬಡತನದಲ್ಲಿ ದಯನೀಯವಾದ ಬದುಕನ್ನು ಸಾಗಿಸುತ್ತಿದ್ದಾರೆ.

ಈ ಕಾರಣದಿಂದ ಅಲ್ಲಿಗೆ ಯಾರೂ ಹೋಗಲು ಬಯಸುವುದಿಲ್ಲ. 2 ದಶಕಗಳ ಹಿಂದೆ, ತೈಲನಿಕ್ಷೇಪ ಕಂಡು ಬಂತು. ಅದೇ ರಫ್ತಿನ ಪ್ರಾಥಮಿಕ ಗಳಿಕೆ ಮೂಲ. ಅದನ್ನು ಬಿಟ್ಟರೆ ಸಾಂಪ್ರದಾಯಿಕ ಹತ್ತಿ ಉದ್ಯಮ ಪ್ರಮುಖವಾದುದು.
ಕೊಲೆ, ಸುಲಿಗೆ, ಅತ್ಯಾಚಾರ ಸಾಮಾನ್ಯ. ಸಶಸ್ತ್ರಧಾರಿ ಪೊಲೀಸರು ಮತ್ತು ಸೈನಿಕರ ಉಪಟಳವೂ ಅಷ್ಟಿಷ್ಟಲ್ಲ. ಅಂತಾರಾಷ್ಟ್ರೀಯ ಒತ್ತಡ, ಕ್ಷಿಪ್ರ ಕ್ರಾಂತಿ ಮತ್ತು ನಾಗರಿಕ ಯುದ್ಧಗಳ ನಡುವೆಯೂ ಇದ್ರಿಸ್ ಡೆಬಿ ಎಂಬಾತ 1990 ರಿಂದ 31 ವರ್ಷಗಳ ಕಾಲ ಚಾಡ್ ದೇಶವನ್ನು ಆಳಿದ. ನಂತರ ಸಂಭವಿಸಿದ ನಾಗರಿಕ ಯುದ್ಧದಲ್ಲಿ ಅವನನ್ನು ಹತ್ಯೆ ಮಾಡಲಾಯಿತು.

ಪ್ರಗತಿಯ ಸೂರ್ಯ ಆ ದೇಶದ ಮೇಲೆ ಉದಯವಾಗದಿರುವುದು ದುರ್ದೈವ. 1987ರಲ್ಲಿ ಆ ದೇಶದಲ್ಲಿ ಕೇವಲ 30 ಕಿ.ಮೀ. ಡಾಂಬರ್ ರಸ್ತೆಯಿತ್ತು. ಈಗ 2000 ಕಿ.ಮೀ. ರಸ್ತೆಯಿದೆ. ಚಾಡ್‌ನಲ್ಲಿ 50 ವಿಮಾನ ನಿಲ್ದಾಣಗಳಿದ್ದರೂ, ಸಿಮೆಂಟ್ ರನ್ ವೇ ಇರುವುದು 10 ನಿಲ್ದಾಣಗಳಲ್ಲಿ ಮಾತ್ರ. ರಾಜಧಾನಿಯಲ್ಲಿರುವ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಫ್ರಿಕಾದ ಕೆಲವು ದೇಶಗಳಿಗೆ ಮತ್ತು ಪ್ಯಾರಿಸ್‌ಗೆ ವಿಮಾನ ಸಂಚಾರವಿದೆ. ಭಾರತೀಯರು ಇಲ್ಲದ ದೇಶವಿಲ್ಲ.

ಆಫ್ರಿಕಾದ ಬಹುತೇಕ ದೇಶಗಳಲ್ಲಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಚಾಡ್‌ನಲ್ಲಿ ಹೆಚ್ಚೆಂದರೆ 500 ಜನರಿರಬಹುದು. ಅವರೆಲ್ಲ ತೈಲ ಕಂಪನಿಗಳಲ್ಲಿ, ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತ ಮತ್ತು ಚಾಡ್ ಮಧ್ಯೆ ದ್ವಿಪಕ್ಷೀಯ ಸಂಬಂಧವಿದೆ. ಆದರೆ ಅದು ಸಾಂಪ್ರದಾಯಿಕ ಮಟ್ಟಕ್ಕೆ ಮಾತ್ರ ಸೀಮಿತವಾಗಿದೆ. ಚಾಡ್‌ನಲ್ಲಿ ಒಂಟೆ ರೇಸ್ ಬಹಳ ಜನಪ್ರಿಯ. ಒಂಟೆ ರೇಸ್ ಸಮಯದಲ್ಲಿ ಬೇರೆ ದೇಶಗಳಿಂದ ಜನ ಬರುವುದುಂಟು.

ಇದನ್ನೂ ಓದಿ: @vishweshwarbhat