Wednesday, 20th November 2024

‌Vishweshwar Bhat Column: ದುಬೈ: ಮತ್ತಷ್ಟು ವೈಶಿಷ್ಟ್ಯಗಳು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ದುಬೈ ಬಗ್ಗೆ ಇನ್ನಷ್ಟು ಸ್ವಾರಸ್ಯಕರ ಸಂಗತಿಗಳಿವೆ. ವಿಶ್ವ ದಾಖಲೆ ಮುರಿಯುವುದು ಮತ್ತು ಹೊಸ ಹೊಸ ದಾಖಲೆಗಳನ್ನು ಕಟ್ಟುವುದು ದುಬೈಗೆ ಹೊಸತೇನಲ್ಲ. ಅದು ಆಗಾಗ ಅಂಥ ಸಾಹಸವನ್ನು ಮಾಡುತ್ತಿರುತ್ತದೆ. ಅಚ್ಚರಿಯ ಸಂಗತಿ ಅಂದ್ರೆ, ದುಬೈ ವಿಶ್ವ ದಾಖಲೆಗಳನ್ನು ಮುರಿಯುವ ಗೀಳನ್ನು ಹೊಂದಿರುವುದರಿಂದ, ಗಿನ್ನೆಸ್ ವಿಶ್ವ ದಾಖಲೆ ತನ್ನ ಕಚೇರಿಯನ್ನು ಅಲ್ಲಿ ತೆರೆದಿದೆ. ಪ್ರಸ್ತುತ ದುಬೈ 339 ವಿಶ್ವ ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ದುಬೈ ಶಾಪಿಂಗ್ ಫೆಸ್ಟಿವಲ್ ಅತಿ ದೀರ್ಘಾವಧಿಯ ಉತ್ಸವವಾಗಿದೆ. ಇದೂ ಗಿನ್ನೆಸ್ ವಿಶ್ವ ದಾಖಲೆಯೇ.

ಏಕೆಂದರೆ ದುಬೈ ಶಾಪಿಂಗ್ ಫೆಸ್ಟಿವಲ್ ಅನ್ನು 1996ರಿಂದ ನಡೆಸಲಾಗುತ್ತಿದೆ. ಈ ತಿಂಗಳ ಅವಧಿಯ ಉತ್ಸವವು ಚಿಲ್ಲರೆ ವ್ಯಾಪಾರ ಮತ್ತು ವ್ಯಾಪಾರೋದ್ಯಮವನ್ನು ಉತ್ತೇಜಿಸಲು ಪ್ರಾರಂಭವಾಯಿತು. ಆದರೆ ಇದು ಪ್ರಮುಖ ಪ್ರವಾಸಿ ಸಂಭ್ರಮವಾಗಿದೆ. ಈ ಉತ್ಸವದ ಪ್ರಮುಖ ಅಂಶವೆಂದರೆ ಈ ಶಾಪಿಂಗ್ ಫೆಸ್ಟಿವಲ್‌ನಲ್ಲಿ ಸಾಮಾನುಗಳನ್ನು ಖರೀದಿಸಿ ಗ್ರಾಹಕರು ಪ್ರತಿದಿನ ಒಂದು ಲಕ್ಷ ದಿರ್ಹಾಮ್ (22 ಲಕ್ಷ ರುಪಾಯಿ) ನಗದು, ಐಷಾರಾಮಿ ಕಾರುಗಳು, ಚಿನ್ನ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಬಹುಮಾನವಾಗಿ ಗೆಲ್ಲಬಹುದು.

ಈ ಫೆಸ್ಟಿವಲ್‌ನಲ್ಲಿ ಇಲ್ಲಿ ತನಕ 1.7 ಶತಕೋಟಿ ದಿರ್ಹಾಮ್ ಮೌಲ್ಯದ ಉಡುಗೊರೆಗಳನ್ನು ವಿತರಿಸಲಾಗಿದೆ. ಇತ್ತೀಚೆಗೆ ದುಬೈಯನ್ನು ‘ವಿಶ್ವದ ಏಳನೇ ಸುರಕ್ಷಿತ ನಗರ’ ಎಂದು ಘೋಷಿಸಲಾಗಿದೆ. ಕಟ್ಟುನಿಟ್ಟಾದ ಸ್ಥಳೀಯ ಕಾನೂನುಗಳು ಮತ್ತು ಉತ್ತಮ ಸಂಪರ್ಕ ಹೊಂದಿದ ಕಣ್ಗಾವಲು ವ್ಯವಸ್ಥೆ ದುಬೈಯನ್ನು ಸುರಕ್ಷಿತ ನಗರವನ್ನಾಗಿಸಿದೆ. ವಾಸ್ತವವಾಗಿ, ದುಬೈ ಏಕಾಂಗಿ ಮಹಿಳಾ ಪ್ರಯಾಣಿಕರಿಗೆ ವಿಶ್ವದ ಸುರಕ್ಷಿತ ನಗರ ಎಂದೂ ಹೆಸರುವಾಸಿಯಾಗಿದೆ. ಮಹಿಳೆಯರು ಭಯವಿಲ್ಲದೇ ಮಧ್ಯರಾತ್ರಿಯಲ್ಲಿ ಏಕಾಂಗಿ ಯಾಗಿ ಪ್ರಯಾಣಿಸಬಹುದು. ಡೆಡಿಕೇಟೆಡ್ ಸೈಬರ್ ಸೆಕ್ಯುರಿಟಿ ಟೀಮ್ಸ್ ಮತ್ತು ಲೆವೆಲ್ಸ ಆಫ್ ಟೆಕ್ನಾಲಜಿಯಲ್ಲಿ ದುಬೈ ಒಂದನೇ ಸ್ಥಾನದಲ್ಲಿದೆ. ಇದು ಡಿಜಿಟಲ್ ಸುರಕ್ಷಿತ ನಗರವೂ ಹೌದು. ಅತ್ಯಾಚಾರ, ಕೊಲೆ, ಮಾದಕವಸ್ತು‌ ಕಳ್ಳಸಾಗಣೆ ಮತ್ತು ಪರಿಸರ ಮಾಲಿನ್ಯದಂಥ ಗಂಭೀರ ಅಪರಾಧಗಳಿಗೆ ದುಬೈನಲ್ಲಿ ಮರಣದಂಡನೆ ನೀಡಲಾಗುತ್ತದೆ. ಇನ್ನೊಂದು ಸಂಗತಿಯೆಂದರೆ, ದುಬೈ ವಿಶ್ವದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದಾಗಿದೆ. ದುಬೈ ಒಂದು ಸಾಂಪ್ರದಾಯಿಕ ಸಮಾಜ ವ್ಯವಸ್ಥೆಗೆ ತನ್ನನ್ನು ರೂಪಿಸಿಕೊಂಡಿದೆ. ಆದರೆ ಆಧುನಿಕ ವಿಚಾರಗಳನ್ನು ಸ್ವೀಕರಿಸುತ್ತದೆ.

ದುಬೈಯಲ್ಲಿ ಜನರು ಇತರ ನಂಬಿಕೆಗಳನ್ನು ಗೌರವಿಸುತ್ತಾರೆ. ಇಸ್ಲಾಂ ಧರ್ಮ ಯುಎಇಯಲ್ಲಿ ಅಧಿಕೃತ ಧರ್ಮವಾಗಿದೆ. ದುಬೈ ಮಧ್ಯಪ್ರಾಚ್ಯದ ಅತ್ಯಂತ ಉದಾರ ನಗರಗಳಲ್ಲಿ ಒಂದಾಗಿದ್ದರೂ, ಎಲ್ಲ ಹೊಳಪು ಮತ್ತು ಗ್ಲಾಮರ್ ಹಿಂದೆ ಸಂಪ್ರದಾಯವಾದಿ ಮತ್ತು ಆಳವಾದ ಧಾರ್ಮಿಕ ಸಮಾಜವಿದೆ. ಪರವಾನಗಿ ಹೊಂದಿರುವ ರೆಸ್ಟೋರೆಂಟ್‌ಗಳು, ಬಾರುಗಳು ಮತ್ತು ಹೋಟೆಲ್‌ಗಳಲ್ಲಿ ಜನರು ಮದ್ಯಪಾನ ಅಥವಾ ಧೂಮಪಾನ ವನ್ನು ಮಾಡಬಹುದು. ಆದರೆ ಕಡಲತೀರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಸಾರಿಗೆಗಳಲ್ಲಿ ಮದ್ಯಪಾನ ಮಾಡುವಂತಿಲ್ಲ. ದುಬೈನಲ್ಲಿ ಸಲಿಂಗಕಾಮವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ಸಲಿಂಗ ಪ್ರಣಯ, ಕಾಮಕೇಳಿ ಸಂಪೂರ್ಣ ನಿಷಿದ್ಧ. ಹಂದಿಮಾಂಸವನ್ನು ನಿಷೇಧಿಸಲಾಗಿಲ್ಲವಾದರೂ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸುವಂತಿಲ್ಲ. ಹಂದಿ ಮಾಂಸವನ್ನು ಪೂರೈಸುವ ರೆಸ್ಟೋರೆಂಟ್‌ಗಳಿಗೆ ಅದನ್ನು ಪೂರೈಸಲು ವಿಶೇಷ ಪರವಾನಗಿ ಅಗತ್ಯ.

ದುಬೈ ಚಿನ್ನವನ್ನು ಖರೀದಿಸಲು ಹೇಳಿಮಾಡಿಸಿದ ನಗರ. ವಿಶ್ವದ ಅತಿದೊಡ್ಡ ಚಿನ್ನದ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿರುವ ದುಬೈನಲ್ಲಿ ಚಿನ್ನ
ವನ್ನು ವಿತರಿಸುವ ಅನೇಕ ಸೂಕ್‌ಗಳು ಮತ್ತು ಎಟಿಎಂಗಳಿವೆ. ಅಲ್ಲಿ ಚಿನ್ನವನ್ನು ಕಮ್ಮಿ ದರದಲ್ಲಿ ಖರೀದಿಸಬಹುದು. ಯಾರಾದರೂ ತೂಕವನ್ನು
ಕಳೆದುಕೊಳ್ಳುವ ಯೋಚನೆ ಹೊಂದಿದ್ದರೆ ಅಂಥವರಿಗೆ ದುಬೈ ಸೂಕ್ತ ಸ್ಥಳವಾಗಿದೆ. ದುಬೈ ಸರಕಾರವು ಪ್ರತಿ ನಾಗರಿಕರಿಗೆ 2 ಕಿಲೋಗ್ರಾಂ ಗಳಷ್ಟು ತೂಕವನ್ನು ಇಳಿಸಿದ್ದಕ್ಕಾಗಿ 2 ಗ್ರಾಂ ಚಿನ್ನವನ್ನು ಬಹುಮಾನವಾಗಿ ಪಾವತಿಸುತ್ತದೆ. ಅಲ್ಲಿ ಪ್ರತಿ ಕ್ಯಾಲೋರಿಗೂ ಬೆಲೆಯುಂಟು.

ಇದನ್ನೂ ಓದಿ: @vishweshwarbhat