ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ನಮ್ಮ ಹವ್ಯಾಸಗಳು ನಮ್ಮ ಬದುಕನ್ನು ರೂಪಿಸುತ್ತವೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಜಪಾನಿಯರು ತಮ್ಮ ಸಾರ್ಥಕ ಮತ್ತು ಯಶಸ್ವಿ ಬದುಕಿಗೆ ಎಂಟು ಹವ್ಯಾಸಗಳು ಪ್ರಮುಖ ಎಂದು ಭಾವಿಸುತ್ತಾರೆ. ಅವುಗಳ ಪೈಕಿ ಟಾಯ್ಲೆಟ್‌ನ್ನು ಸ್ವಚ್ಛಗೊಳಿಸುವುದೂ ಒಂದು. ಜಪಾನಿನ ಅತ್ಯಂತ ಯಶಸ್ವಿ ವ್ಯಕ್ತಿಗಳು, ಸಾಧಕರುಗಳ ಜೀವನವನ್ನು ನೋಡಿದಾಗ ಅವರೆಲ್ಲರೂ ಪ್ರತಿನಿತ್ಯ ಅತ್ಯಂತ ನಿಷ್ಠೆಯಿಂದ, ಚಾಚೂತಪ್ಪದೇ ಟಾಯ್ಲೆಟ್ ಸ್ವಚ್ಛಗೊಳಿಸುವುದನ್ನು ತಮ್ಮ ಕಾಯಕವನ್ನಾಗಿ ಮಾಡಿಕೊಂಡ ಸಂಗತಿ ಗೊತ್ತಾಗುತ್ತದೆ.
ಉದಾಹರಣೆಗೆ, ಪ್ಯಾನಸೋನಿಕ್ ಕಂಪನಿಯ ಸಂಸ್ಥಾಪಕ ಕೊನೊಸುಕೆ ಮತ್ಸುಶಿತಾ, ಸಿನಿಮಾ ನಿರ್ದೇಶಕ ಮತ್ತು ಕಾಮಿಡಿಯನ್ ಟಾಕೇಶಿ ಕಿಟನೋ, ಹೋಂಡಾ ಕಂಪನಿಯ ಸಂಸ್ಥಾಪಕ ಸೋಇಚಿರೊ ಹೋಂಡಾ ಮುಂತಾ
ದವರು ತಮ್ಮ ಯಶಸ್ಸಿಗೆ ಟಾಯ್ಲೆಟ್ ಸ್ವಚ್ಛಗೊಳಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದು ಸಹ ಒಂದು ಕಾರಣ ಎಂದು ಹೇಳಿರುವುದು ಗಮನಾರ್ಹ. ಟಾಯ್ಲೆಟ್ ಸ್ವಚ್ಛಗೊಳಿಸುವುದಕ್ಕೂ, ಯಶಸ್ಸಿಗೂ ಏನು ಸಂಬಂಧ? ಇದಕ್ಕೆ ಕಾರಣಗಳಿವೆ. ಮೊದಲನೆಯದಾಗಿ, ಜಪಾನಿನಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದರೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ.
ಜಪಾನಿಯರ ಫೆಂಗ್ ಶುಯಿ ತತ್ವದ ಪ್ರಕಾರ, ಯಾರು ಪ್ರತಿನಿತ್ಯ ಟಾಯ್ಲೆಟ್‌ನ್ನು ಮಚ್ಛಗೊಳಿಸುತ್ತಾರೋ, ಅವರಿಗೆ ಹಠಾತ್ ಅದೃಷ್ಟ ಒಲಿಯುವುದಂತೆ.
ಯಾರು ನಿತ್ಯವೂ ಟಾಯ್ಲೆಟ್‌ನ್ನು ಸ್ವಚ್ಛಗೊಳಿಸುತ್ತಾರೋ, ಅವರ ಮನಸ್ಸು ಮತ್ತು ಯೋಚನೆ ಸ್ವಚ್ಛವಾಗಿ ಉತ್ತಮ ಚಿಂತನೆ ಅವರ ಮನಸ್ಸನ್ನು ಆವರಿಸಿಕೊಳ್ಳುವುದಂತೆ. ಜಪಾನಿನಲ್ಲಿ ಟಾಯ್ಲೆಟ್‌ಗಾಗಿಯೇ ಒಬ್ಬ ದೇವರು ಇದ್ದಾನೆ.
ಆತನ ಹೆಸರು ಉಸುಸಮ ಮ್ಯೂ. ಕೆಲವು ಮನೆಗಳಲ್ಲಿ ಆತನ ವಿಗ್ರಹ ಮತ್ತು ಫೋಟೋಗಳನ್ನಿಟ್ಟು ಆರಾಧಿಸುತ್ತಾರೆ. ಆತನನ್ನು ಬುದ್ಧನ ಒಂದು ಅವತಾರ ಎಂದು ನಂಬಲಾಗಿದೆ. ಟಾಯ್ಲೆಟ್‌ನ್ನು ಸ್ವಚ್ಛಗೊಳಿಸಿದರೆ ಬುದ್ಧನನ್ನು ಆರಾಧಿಸಿದಂತೆ ಎಂಬ ಭಾವನೆ ಜಪಾನಿಯರಲ್ಲಿದೆ.
ಟಾಯ್ಲೆಟ್‌ನ್ನು ಸ್ವಚ್ಛಗೊಳಿಸುವುದರಿಂದ ಬುದ್ಧನನ್ನು ಆಹ್ವಾನಿಸಿದಂತೆ ಹಾಗೂ ಇದರಿಂದ ಆರ್ಥಿಕ ಪ್ರಗತಿಗೂ ಸಹಾಯಕವಾಗುತ್ತದೆ ಎಂಬ ನಂಬಿಕೆ ಅವರಲ್ಲಿದೆ. ಜಪಾನಿನ ಲಯನ್ ಕಾರ್ಪೊರೇಷನ್ ನಡೆಸಿದ ಒಂದು ಕುತೂಹಲಕಾರಿ ಸಮೀಕ್ಷೆ ಪ್ರಕಾರ, ಸ್ವಚ್ಛ ಟಾಯ್ಲೆಟ್ ಮತ್ತು ಗಲೀಜಾದ ಟಾಯ್ಲೆಟ್ ಹೊಂದಿರುವ ಮನೆಯ ಆರ್ಥಿಕ ಪ್ರಗತಿಯನ್ನು ತಾಳೆ ಹಾಕಿ ನೋಡಿದಾಗ, ಸ್ವಚ್ಛವಾದ ಟಾಯ್ಲೆಟ್ ಹೊಂದಿರುವ ಮನೆಯ ಆರ್ಥಿಕ ಪ್ರಗತಿ ವಾರ್ಷಿಕ ಸುಮಾರು ಏಳು ಸಾವಿರ ಡಾಲರ್ ಜಾಸ್ತಿಯಿರುವುದು ಕಂಡು ಬಂದಿದೆ.
ಮನೆಯ ಟಾಯ್ಲೆಟ್‌ನ್ನು ಸ್ವಚ್ಛಗೊಳಿಸುವವರು ಹೆಚ್ಚು ವಾಸ್ತವವಾದಿಗಳೂ, ಯಾವ ಸಂದರ್ಭಕ್ಕಾದರೂ ಒಗ್ಗಿ ಕೊಳ್ಳುವ ಸ್ವಭಾವವನ್ನು ಹೊಂದಿದವರೂ ಆಗಿರುತ್ತಾರಂತೆ. ಜಪಾನಿನ ‘ಯಲ್ಲೋ ಹ್ಯಾಟ್’ ಕಂಪನಿಯ ಸಂಸ್ಥಾಪಕ ಮತ್ತು ಅತ್ಯಂತ ಯಶಸ್ವಿ ಉದ್ಯಮಿ ಶುಝಬೂರೊ ಕಾಜಿಯಾಮ ತಾನು ಕಳೆದ ಐವತ್ತಮೂರು ವರ್ಷಗಳಿಂದ ತನ್ನ ಮನೆಯ ಮತ್ತು ಆಫೀಸಿನ ಟಾಯ್ಲೆಟ್ ನ್ನು ಸ್ವಚ್ಛಗೊಳಿಸುತ್ತಿದ್ದೇನೆಂದು ಹೇಳುವ ಜಾಹೀರಾತು ಫಲಕ ಟೋಕಿಯೋ
ನಗರದಲ್ಲಿ ರಾರಾಜಿಸಿತ್ತು.
ಆ ಫಲಕವನ್ನು ನೋಡಿ ಲಕ್ಷಾಂತರ ಜನ ತಮ್ಮ ಮನೆ ಮತ್ತು ಆಫೀಸುಗಳ ಟಾಯ್ಲೆಟ್‌ಗಳನ್ನು ಸ್ವಚ್ಛಗೊಳಿಸಲು ಶುರು ಮಾಡಿದರು. ‘ಯಾರು ಟಾಯ್ಲೆಟ್ ಕ್ಲೀನ್ ಮಾಡುತ್ತಾರೋ, ಅವರಲ್ಲಿ ಹುದುಗಿರುವ ಅಹಂಕಾರ ಕಮ್ಮಿಯಾಗಿ, ವಿಧೇಯ ಗುಣವನ್ನು ಬೆಳೆಸಿಕೊಳ್ಳುತ್ತಾರೆ’ ಎಂಬ ಆತನ ಹೇಳಿಕೆ ಸಾಕಷ್ಟು ಜನರಲ್ಲಿ ಪ್ರೇರಣೆಯನ್ನು ಮೂಡಿಸಿತ್ತು.
ಸಾಮಾನ್ಯವಾಗಿ ಟಾಯ್ಲೆಟ್‌ಗಳು ಬಿಳಿ ಬಣ್ಣದಲ್ಲಿರುತ್ತದೆ. ಸಣ್ಣ ಗಲೀಜಿದ್ದರೂ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಯಾರು ದಿನ ತಮ್ಮ ಟಾಯ್ಲೆಟ್ ನ್ನು ಸ್ವಚ್ಛಗೊಳಿಸುತ್ತಾರೋ ಅವರಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ಜಾಗೃತಿ
ಮೂಡುತ್ತದೆ.
ಅವರು ಕ್ರಮೇಣ ಟಾಯ್ಲೆಟ್ ನಲ್ಲಿ ಮಾತ್ರವಲ್ಲ, ಎಡೆಯೂ ಸ್ವಚ್ಛತೆಯನ್ನು ನಿರೀಕ್ಷಿಸುತ್ತಾರೆ. ಬೇರೆಯವರಿಂದ ಸ್ವಚ್ಛತೆಯನ್ನು ನಿರೀಕ್ಷಿಸುವ ಮುನ್ನ ತಾವು ಸ್ವಚ್ಛವಾಗಿರುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಜಪಾನಿನಲ್ಲಿ ಟಾಯ್ಲೆಟ್ ಸ್ವಚ್ಛಗೊಳಿಸುವ ಹವ್ಯಾಸ ಒಂದು ಉತ್ತಮ ಗುಣವಾಗಿ ಬೆಳೆದು ಬಂದಿದೆ.
ಇದನ್ನೂ ಓದಿ: @vishweshwarbhat