Thursday, 21st November 2024

Vishweshwar Bhat Column: ಲಿವಿಂಗ್‌ ಟುಗೆದರ್‌

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಇತ್ತೀಚೆಗೆ ‘ಕೋರಾ’ದಲ್ಲಿ ಒಬ್ಬರು, ‘ನಾನು 45ರ ವಿಚ್ಛೇದಿತ ವ್ಯಕ್ತಿ, ಮೈಸೂರು ನನ್ನ ವಾಸಸ್ಥಳ. ಲಿವಿಂಗ್ ಟುಗೆದರ್ (long life but
without marriage) ಇಷ್ಟಪಡುವ ಯಾರಾದರೂ ಮಹಿಳೆಯರು ಸಿಗಬಹುದಾ?’ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಕೆಲವರು ಉತ್ತರಿಸಿದ್ದು
ಸ್ವಾರಸ್ಯಕರವಾಗಿತ್ತು. ಆ ಪ್ರಶ್ನೆಗೆ ಬಾಲಕೃಷ್ಣ ಮಾನ್ಯ ಕೆಳಗಿನ ಮನೆ ಎಂಬುವವರು ಹೀಗೆ ಬರೆದಿದ್ದರು- “ತಮ್ಮ ಅಹ್ವಾನ ಪರಿಗಣಿಸಬಹುದು. ಆದರೆ ಈ ವಯಸ್ಸಿನವರ ಜತೆ ಇರಲು ಕೆಲವು ಸ್ಪಷ್ಟೀಕರಣ ಬೇಕು.

ನಿಮ್ಮ ಬಳಿ ಸ್ವಂತ ಐಷಾರಾಮಿ ಮನೆ/ಬಂಗಲೆ ಇದೆಯಾ? ಜಮೀನು, ಚಿನ್ನ, ವಜ್ರ ವೈಡೂರ್ಯ ಇವೆಯಾ? ಬ್ಯಾಂಕ್ ಬ್ಯಾಲೆ ಎಷ್ಟು ಕೋಟಿ ಇವೆ? ಸ್ವಂತ ಯಾವುದಾದರೂ ಬಿಸಿನೆಸ್? ಇವೆಲ್ಲವನ್ನು ನಿಮ್ಮ long life without marriage partner ಹೆಸರಿಗೆ ವರ್ಗಾಯಿಸುತ್ತೀರಾ ? ನೀತಿ ಕೆಟ್ಟರೂ ಪರವಾಗಿಲ್ಲ ಸುಖವಾಗಿರಬೇಕು ಎಂಬುದು ಗಾದೆ. ಅದನ್ನು ‘ಪರಮ ಸುಖ’ ಪಡಬೇಕು ಎಂಬುದು ಈಗ ಅನುಭವದಿಂದ ಬಂದಿದೆ. ಕಾರಣ ನಿಮಗೆ ಪತ್ನಿಯ ಅಗತ್ಯವಿಲ್ಲ. ಅದರೆ ನಿಮ್ಮ ಜತೆ ಬಾಳಲು ಒಬ್ಬಳು ಬೇಕು.

ಅವಳಿಗೆ ತಾವು ಬೇಡ. ತಮ್ಮ ಅವಶ್ಯಕತೆಯೂ ಬೇಡ. ಕೊನೆಯ ಮಾತು. ತಮ್ಮ ‘ಲಿವಿಂಗ್ ಟುಗೆದರ್’ ಅಂದರೆ ಬರೀ ಲಿವಿಂಗ್ ಟುಗೆದರ್ ನಿಮ್ಮ ಜತೆ ಅಷ್ಟೇ. ನಿಮ್ಮ ಮಾಜಿ ಪತ್ನಿಯ ಮಕ್ಕಳು, ನಿಮ್ಮ ಬಂಧುಗಳು, ತಂದೆ-ತಾಯಿ ಯಾವ ತಾಪತ್ರಯಗಳು, ಗೊಡವೆಗಳು ಇರಬಾರದು. ಅವರು ನಿಮ್ಮ ಮನೆ ಕಡೆ ಸುಳಿಯಬಾರದು. ಆಗಬಹುದಾ?”. ಬಿ.ಕೆ.ಮಹಾದೇವ ಸ್ವಾಮಿ(ನುಗು) ಎಂಬುವವರು ಹೀಗೆ ಪ್ರತಿಕ್ರಿಯಿಸಿದ್ದರು- “ಮರುವಿವಾಹವಾದರೆ ಹೀಗೆಲ್ಲ ಯೋಚಿಸುವ ಅಗತ್ಯವೇ ಇರುವುದಿಲ್ಲ. ನಿಮ್ಮ ಈ ಪ್ರಶ್ನೆಯಲ್ಲಿ ಏನೋ ದೋಷವಿದ್ದಂತೆ ಕಾಣಿಸುತ್ತಿದೆ. ನನ್ನ ಪ್ರಕಾರ, ನೀವು ಕಾನೂನಾತ್ಮಕವಾಗಿ ಇನ್ನೂ ವಿಚ್ಛೇದನ ಪಡೆದಿಲ್ಲ ಅಥವಾ ಗಂಡ-ಹೆಂಡಿರಲ್ಲಿನ ಯಾವುದೋ ಮನಸ್ತಾಪದಿಂದ ಬಹುಶಃ ದೂರಾಗಿರುವುದರಿಂದ ನಿಮಗೆ ಈ ರೀತಿಯ ದೂರಾಲೋಚನೆಯುಂಟಾಗಿರಬಹುದು. ನಾನೊಂದು ಮಾತು ಹೇಳುತ್ತೇನೆ.

ನಿಮ್ಮ ಹೆಂಡತಿಯ ಜತೆ ಸಂಸಾರ ಮಾಡುವ ತೀರ್ಮಾನಕ್ಕೆ ಮತ್ತೊಮ್ಮೆ ಏಕೆ ಬರಬಾರದು? ದುಡುಕದೇ ಸ್ವಲ್ಪ ಆಲೋಚಿಸಿ ನೋಡಿ”. ಎಸ್.ಶಿವಾನಂದ್ ಎಂಬುವವರು, “ಸ್ವಾಮಿ, ಕೋರಾ ಎಂಬುದು ಜ್ಞಾನ ವಿನಿಮಯಕ್ಕಾಗಿ ಏರ್ಪಡಿಸಿರುವ ಒಂದು ಮಂಚ. ನಿಮ್ಮ ಖಾಸಗಿ ಬೇಕು-ಬೇಡಗಳನ್ನು ಕೋರಿಕೊಳ್ಳುವ ಜಾಗವನ್ನಾಗಿ ಮಾಡಬೇಡಿ.

ನಿಮ್ಮ ಆವಶ್ಯಕತೆಯನ್ನು ಯಾವುದಾದರೂ ದಿನಪತ್ರಿಕೆಯ ಕ್ಲಾಸಿಫೈಡ್ ಅಂಕಣದಲ್ಲಿ ಮುಂದಿಡಿ! ಸಹಜೀವನದ ಬಗ್ಗೆ ಆಸಕ್ತಿಯಿರುವ ಮಹಿಳೆ ಯನ್ನು ಹುಡುಕುವುದು ಕಷ್ಟಕರವಾಗಬಹುದು. ಆದರೂ ನೀವು ಡೇಟಿಂಗ್ ಸೈಟುಗಳಿಗೆ ಭೇಟಿ ಕೊಡಬಹುದು. ಆದರೂ, ಸಂಬಂಧ ಆರಂಭಿಸುವ ಮೊದಲು ಪರಸ್ಪರ ಸಮಜಾಯಿಷಿ ಮತ್ತು ನಿರೀಕ್ಷೆಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದುವುದು ಅತ್ಯಂತ ಮುಖ್ಯ” ಎಂದು ಹೇಳಿದ್ದರು. ಸೌಮ್ಯ ಸುರೇಶ ಎಂಬುವವರು, “ನಿಮ್ಮ ಕಷ್ಟ ಅರ್ಥ ಆಗುತ್ತಿದೆ. ಆದರೆ ನಿಮಗೆ ಇನ್ನೊಂದು ಮದುವೆ ಆಗಲು ಯಾಕೆ ಮನಸ್ಸು ಆಗುತ್ತಿಲ್ಲ? ಗಂಡು ಹೆಣ್ಣಿನ ಸಂಬಂಧ ಮದುವೆ ಮೂಲಕ ಆದರೆ ಸಮಾಜ ಮತ್ತು ಕಾನೂನಿನ ಮಾನ್ಯತೆ ದೊರಕುತ್ತದೆ.

ಮನಃಶಾಂತಿ ಕೂಡ. ಯೋಚನೆ ಮಾಡಿ. ಆದರೂ ನಿಮ್ಮ ನಿಲುವು ಹಾಗೇ ಇದ್ದರೆ ಕೆಲವು ಡೇಟಿಂಗ್ ಸೈಟ್ ಗಳಲ್ಲಿ ನಿಮಗೆ ಸಂಗಾತಿ ಸಿಗಬಹುದು. ಅದಕ್ಕೆ ಅದರದೇ ಆದ ತೊಂದರೆಗಳು ಕೂಡ ಇರಬಹುದು. ದೇವರು ನಿಮಗೆ ಒಳ್ಳೆಯ ಸಂಗಾತಿ ಸಿಗುವ ಹಾಗೆ ಹರಸಲಿ. ಶುಭ ವಾಗಲಿ” ಎಂದು ಉತ್ತರಿಸಿದ್ದರು. ಬಿ.ಸಂಪತ್ ಕುಮಾರ್ ಎಂಬುವವರು, “ಸ್ವಾಮಿ, ನಿಮಗೆ ಕಟ್ಟಿಕೊಳ್ಳಲು ಇಷ್ಟವಿಲ್ಲ, ಇಟ್ಟುಕೊಳ್ಳಲು
ರೆಡಿಯಾಗಿದ್ದೀರಿ. ಇಲ್ಲಿಯವರೆಗಿನ ದಾಂಪತ್ಯ ಜೀವನ ನಿಮಗೆ ಇನ್ನೊಂದು ಮದುವೆಯಾಗುವ ಧೈರ್ಯವನ್ನು ಕೊಡುತ್ತಿಲ್ಲ. ಅಷ್ಟಕ್ಕೂ ನೀವು ಲಿವಿಂಗ್ ಟುಗೆದರ್ ಅಂದ್ರೆ ಜವಾಬ್ದಾರಿ ಇಲ್ಲದ ಸುಖ ಎಂದು ಭಾವಿಸಿದಂತಿದೆ. ಯಾವ ಸಂಬಂಧವೂ ಹಾಗೆ ಇರುವುದಿಲ್ಲ. ‘ಮದುವೆಯೇ ವಾಸಿ,
ಯಾಕಾದರೂ ಈ ಲಿವಿಂಗ್ ಟುಗೆದರ್‌ಗೆ ಒಪ್ಪಿದೆನೋ?’ ಎಂದು ಪರಿತಪಿಸುವವರೂ ಇzರೆ” ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: @vishweshwarbhat