ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಸಾಮಾನ್ಯವಾಗಿ ನಾನು ಯಾರಿಗೂ ನನ್ನ ವಿಸಿಟಿಂಗ್ ಕಾರ್ಡ್ ಕೊಡುವುದಿಲ್ಲ. ಯಾರಾದರೂ ನನ್ನ ಮೊಬೈಲ್ ನಂಬರ್ ಬಯಸಿದರೆ ಕೊಡುತ್ತೇನೆ. ನನ್ನ ಪತ್ರಿಕೆಯೇ ನನ್ನ ವಿಸಿಟಿಂಗ್ ಕಾರ್ಡ್. ಆದರೆ ಜಪಾನಿಗೆ ಹೋದಾಗ, ವಿಸಿಟಿಂಗ್ ಕಾರ್ಡ್ ತರಬೇಕಿತ್ತು ಎಂದು ಮೊದಲ ಬಾರಿಗೆ ನನಗೆ ಅನಿಸಿದ್ದು ಸುಳ್ಳಲ್ಲ.
ಅಷ್ಟೂ ಸಾಲದೆಂಬಂತೆ, ‘ಈ ದೇಶದಲ್ಲಿ ಮೊದಲ ಬಾರಿಗೆ ಭೇಟಿಯಾದವರು ವಿಸಿಟಿಂಗ್ ಕಾರ್ಡ್ ಕೊಟ್ಟು ಪರಿಚಯಿಸಿಕೊಳ್ಳುವುದು ಪದ್ಧತಿ’ ಎಂದು ಜಪಾನಿನಲ್ಲಿ ಸುಮಾರು ಹದಿನೈದು ವರ್ಷಗಳಿಂದಿರುವ ಸ್ನೇಹಿತ ರೊಬ್ಬರು ಹೇಳಿದಾಗ ನನ್ನಲ್ಲಿ ಸಣ್ಣ ಕೊರತೆ ಕಾಡಲಾರಂಭಿಸಿತು.
ಕೊನೆಗೆ ಗೊತ್ತಾಗಿದ್ದೇನೆಂದರೆ, ಜಪಾನಿನಲ್ಲಿ ವಿಸಿಟಿಂಗ್ ಕಾರ್ಡ್ (ಮೇಯಿಶಿ) ಕೊಡುವುದು ಅಥವಾ ಸ್ವೀಕರಿಸುವುದು ಅತ್ಯಂತ ಗಂಭೀರ ಮತ್ತು ಸಂಸ್ಕೃತಿಯೊಂದಿಗೆ ಸಂಬಂಧಿಸಿದ ಪ್ರಕ್ರಿಯೆ. ಇದು ಬಿಸಿನೆಸ್ ಸಂಸ್ಕೃತಿಯ ಮಹತ್ವದ ಭಾಗವಾಗಿದೆ. ವಿಸಿಟಿಂಗ್ ಕಾರ್ಡ್ ವಿನಿಮಯ ಪ್ರಕ್ರಿಯೆಯನ್ನು ಮೇಯಿಶಿ ಶೋಕಾಯ್ (Meishi Shokai) ಎಂದು ಕರೆಯತ್ತಾರೆ. ಇದನ್ನು ಗೌರವ ಮತ್ತು ಸರಿಯಾದ ಶಿಷ್ಟಾಚಾರದೊಂದಿಗೆ ಕೈಗೊಳ್ಳಬೇಕು. ಅವರು ವಿಸಿಟಿಂಗ್ ಕಾರ್ಡ್‌ಗಳ ಗುಣಮಟ್ಟದ ಬಗ್ಗೆ ಗಮನಕೊಡುತ್ತಾರೆ.
ಅದರ ಕಾಗದದ ಗುಣಮಟ್ಟದ ಬಗ್ಗೆಯೂ ನಿಗಾ ವಹಿಸುತ್ತಾರೆ. ಅವರ ಪಾಲಿಗೆ ವಿಸಿಟಿಂಗ್ ಕಾರ್ಡ್‌ಗಳು ವ್ಯಕ್ತಿಯ ಉದ್ಯೋಗ ಮತ್ತು ಸಂಸ್ಥೆಯ ಪ್ರಾತಿನಿಧ್ಯವನ್ನು ತೋರಿಸುವ ಮಹತ್ವದ ಪ್ರಾತಿನಿಧಿಕ ವಸ್ತು. ವಿಸಿಟಿಂಗ್ ಕಾರ್ಡ್‌ಗಳು ಎಲ್ಲಿಯೂ ಕೊಂಚವೂ ಮಡಚಿರಬಾರದು, ಸುಕ್ಕಾಗಿರಬಾರದು. ಶುದ್ಧ, ಗರಿಗರಿ, ಉತ್ತಮ ಗುಣಮಟ್ಟದ ಕಾಗದ ಮತ್ತು ಸ್ಪಷ್ಟ ಮುದ್ರಣ ಹೊಂದಿರಬೇಕು. ಅದನ್ನು ಸೂಕ್ತವಾದ ಪಾಕೀಟು ಅಥವಾ ಪೌಚಿನಲ್ಲಿ ಇಟ್ಟುಕೊಂಡಿರ ಬೇಕು.
ಪ್ಯಾಂಟಿನ ಹಿಂಭಾಗದ ಜೇಬಿನಿಂದ ಕಾರ್ಡ್ ತೆಗೆದುಕೊಡುವುದು ಒಳ್ಳೆಯ ಅಭ್ಯಾಸವಲ್ಲ. ಸಾಮಾನ್ಯವಾಗಿ
ಮೇಯಿಶಿ ವಿನಿಮಯವನ್ನು ಮೊದಲ ಪರಿಚಯದಲ್ಲಿ ನೀಡುವುದು ವಾಡಿಕೆ. ಕಾರ್ಡ್ ಅನ್ನು ಎರಡೂ ಕೈಗಳಲ್ಲಿ ಸರಿಯಾಗಿ ಹಿಡಿದು ಸೌಜನ್ಯದಿಂದ, ಉಡುಗೊರೆಯಂತೆ ನೀಡಬೇಕು. ಹೆಸರು ಮತ್ತು ಸಂಸ್ಥೆಯ ಹೆಸರು ಕಾಣುವಂತೆ ಅದನ್ನು ಹಿಡಿದಿರಬೇಕು. ಈ ಸಂದರ್ಭದಲ್ಲಿ ಎದುರು ಇರುವ ವ್ಯಕ್ತಿಯೂ ಕಾರ್ಡ್ ನೀಡುವುದು ಸಂಪ್ರದಾಯ. ಆಗ ಎದುರಿನ ವ್ಯಕ್ತಿಯ ಕಾರ್ಡ್ ಅನ್ನು ಕೂಡಾ ಎರಡೂ ಕೈಗಳಿಂದ ಸ್ವೀಕರಿಸಬೇಕು.
ಅದನ್ನು ಸ್ವೀಕರಿಸಿದ ಬಳಿಕ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ತಕ್ಷಣ ಓದಬೇಕು. ಓದದೇ ಜೇಬಿನಲ್ಲಿಟ್ಟು ಕೊಳ್ಳ ಬಾರದು. ಇದು ವ್ಯಕ್ತಿಯ ಬಗ್ಗೆ ನೀವು ಆಸಕ್ತರಾಗಿರುವಿರಿ ಮತ್ತು ಗೌರವ ನೀಡುತ್ತಿರುವಿರಿ ಎಂಬುದನ್ನು ಸೂಚಿಸು ತ್ತದೆ. ನೀವು ಹೆಚ್ಚು ಹಿರಿಯ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದರೆ, ಮೊದಲು ಹಿರಿಯ ವ್ಯಕ್ತಿಯ ಕಾರ್ಡ್ ಅನ್ನು ಸ್ವೀಕರಿಸಬೇಕು. ಶ್ರೇಯಾಂಕದ ಪ್ರಕಾರ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಳ್ಳುವುದು ಶಿಷ್ಟಾಚಾರ. ಕಾರ್ಡ್‌ನ್ನು ನೀಡುವಾಗ ಅಥವಾ ಸ್ವೀಕರಿಸುವಾಗ ತಲೆಯನ್ನು ಮತ್ತು ಸೊಂಟವನ್ನು ತುಸು ಬಗ್ಗಿಸಿ ಎದುರಿನವರಿಗೆ ಗೌರವ ಸೂಚಿಸಬೇಕು. ಆಗ ಮಂದಸ್ಮಿತವಾದನರಾಗಿ, ಆತ್ಮೀಯತೆಯನ್ನು ವ್ಯಕ್ತಪಡಿಸಬೇಕು. ಮೀಟಿಂಗ್ ಸಂದರ್ಭ ದಲ್ಲಿ ಕಾರ್ಡನ್ನು ಸ್ವೀಕರಿಸಿದ ನಂತರ ಅವುಗಳನ್ನು ಕಾನರೆ ಟೇಬಲ್‌ನ ಮೇಲೆ ಇಟ್ಟಿರಬೇಕು ಇದರಿಂದ ಯಾವ ಕಾರ್ಡ್ ಯಾರದ್ದು ಎಂಬುದು ಸ್ಪಷ್ಟವಾಗುತ್ತದೆ.
ಕಾರ್ಡ್ ನೀಡುವಾಗ ಅಥವಾ ಸ್ವೀಕರಿಸುವಾಗ ನಿರ್ಲಕ್ಷ್ಯದಿಂದ ವರ್ತಿಸಬಾರದು. ಕಾರ್ಡ್‌ನ್ನು ಒಂದೇ ಕೈಯಿಂದ ಕೊಡುವಂತಿಲ್ಲ ಅಥವಾ ಒದ್ದೆ ಕೈಯಿಂದ ಸ್ವೀಕರಿಸುವಂತಿಲ್ಲ. ಜಪಾನಿನ ವಿಸಿಟಿಂಗ್ ಕಾರ್ಡ್ ಸಂಸ್ಕೃತಿ ಕೇವಲ ವ್ಯಾವಹಾರಿಕ ನಡೆವಳಿಕೆಯಲ್ಲ, ಇದು ಜನರ ನಡುವಿನ ಸಂಬಂಧ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಮಾರ್ಗವಾಗಿದೆ. ಶ್ರದ್ಧೆ, ಶಿಷ್ಟತೆ ಮತ್ತು ಜವಾಬ್ದಾರಿ ಅಲ್ಲಿನ ಬಿಸಿನೆಸ್ ಸಂಸ್ಕೃತಿಯ ಆಧಾರಸ್ಥಂಭಗಳು ಎಂಬುದು ಗಮನಾರ್ಹ. ವಿಸಿಟಿಂಗ್ ಕಾರ್ಡ್ ನೀಡಲು ಅಥವಾ ಸ್ವೀಕರಿಸಲು ಇಷ್ಟೆಲ್ಲ ಬಡಿವಾರವಾ ಎನಿಸಬಹುದು, ಆದರೆ ಅವರು ಈ ವಿಷಯದಲ್ಲಿ ಉಳಿದವರಿಗಿಂತ ತುಸು ಭಿನ್ನ ಮತ್ತು ಕಟ್ಟುನಿಟ್ಟು.
ಇದನ್ನೂ ಓದಿ: Vishweshwar Bhat Column