Thursday, 12th December 2024

Ananth Ambani: 15 ಕೋಟಿ ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ಗಣೇಶನಿಗೆ ತೊಡಿಸಿದ ಅನಂತ್ ಅಂಬಾನಿ!

Ananth Ambani

ಮುಂಬೈ: ಅದ್ಧೂರಿ ಮದುವೆ ಕಾರಣದಿಂದ ಭಾರೀ ಸುದ್ಧಿಯಾಗಿದ್ದ ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ ಇದೀಗ ಮತ್ತೊಮ್ಮೆ ಸುದ್ಧಿಯಾಗಿದ್ದಾರೆ. ಇದೀಗ ಅನಂತ್ ಅಂಬಾನಿ (Ananth Ambani) ರಿಲಯನ್ಸ್ ಫೌಂಡೇಶನ್ ಪರವಾಗಿ 20 ಕೆಜಿ ಚಿನ್ನದ ಕಿರೀಟವನ್ನು ಗಣೇಶನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಎಲ್ಲೆಡೆ ವೈರಲ್‌ ಆಗಿದೆ.

ಅನಂತ್ ಅಂಬಾನಿಯವರು ಹಾಗೂ ರಿಲಯನ್ಸ್ ಫೌಂಡೇಶನ್ 20 ಕೆಜಿ ಚಿನ್ನದ ಕಿರೀಟವನ್ನು ಗಣೇಶನಿಗೆ ನೀಡಿರುವ ಚಿನ್ನದ ಕಿರೀಟದ ಬೆಲೆ ಸುಮಾರು 15 ಕೋಟಿ ರೂ. ಎನ್ನಲಾಗಿದೆ. ನಿನ್ನೆ ಗಣೇಶನ ವಿಗ್ರಹವನ್ನು ಅನಾವರಣಗೊಳಿಸುತ್ತಿದ್ದಂತೆ, 20 ಕೆಜಿ ಚಿನ್ನದ ಕಿರೀಟವನ್ನು ಗಣೇಶನಿಗೆ ಅವರು ದೇಣಿಗೆ ರೂಪದಲ್ಲಿ ತೊಡಿಸಿದ್ದಾರೆ.

ಮುಂಬೈನ ಅತ್ಯಂತ ಜನಪ್ರಿಯ ಗಣೇಶ ಮೂರ್ತಿಯಾದ ʼಲಾಲ್‌ಬಾಗ್‌ಚಾ ರಾಜಾʼ ಗಣೇಶ ಚತುರ್ಥಿಯ ಮುನ್ನ ಗುರುವಾರ ಅನಾವರಣಗೊಂಡಿತು. 10 ದಿನಗಳ ಗಣೇಶನ ಹಬ್ಬದಲ್ಲಿ ಭಕ್ತರು ಗಣೇಶನ ದರ್ಶನಕ್ಕಾಗಿ ಭಾರಿ ಕುತೂಹಲದಿಂದ ಕಾಯುತ್ತಾರೆ. ಗಣೇಶ ಹಬ್ಬದ ದಿನ ಮಹಾರಾಷ್ಟ್ರದಾದ್ಯಂತ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ಅನಂತ್ ಅಂಬಾನಿ ಮತ್ತು ಇಡೀ ಅಂಬಾನಿ ಕುಟುಂಬವು ಕಳೆದ ಹಲವಾರು ವರ್ಷಗಳಿಂದ ಗಣೇಶ ಮಂಡಳಿಯ ಜೊತೆ ಸೇರಿ ಪ್ರತಿಬಾರಿ ಗಣೇಶನ ಪೂಜೆ, ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ.

ಇದನ್ನೂ ಓದಿ:ಇಬ್ಬರ ಜೀವ ತೆಗೆದ ಶ್ರೀಮಂತ ಮಹಿಳೆಯಿಂದ ಹಣ ಪಡೆದು ಸಂತ್ರಸ್ತ ಕುಟುಂಬದಿಂದ ಕ್ಷಮಾದಾನ!

ಲಾಲ್‌ಬಾಗ್‌ಚಾ ರಾಜಾ ಗಣೇಶ ಮಂಡಲದ ಅಧ್ಯಕ್ಷ ಬಾಳಾಸಾಹೇಬ ಕಾಂಬಳೆ ಮಾತನಾಡಿ, “20 ಕೆಜಿ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಲಾಗಿದೆ. ಇದನ್ನು ಮೊದಲ ಬಾರಿಗೆ ಗಣೇಶನಿಗೆ ತೊಡಿಸಲಾಗಿದೆ. ಅಂಬಾನಿ ಕುಟುಂಬವು ಮಂಡಲದೊಂದಿಗೆ ಬಹಳ ಹಿಂದಿನಿಂದಲೂ ಒಡನಾಟ ಹೊಂದಿದ್ದು, ಗಣೇಶನ ಮೇಲೆ ಅವರಿಗಿರುವ ಭಕ್ತಿಯ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತದೆ” ಎಂದು ಹೇಳಿದ್ದಾರೆ.