Saturday, 14th December 2024

ಚುನಾವಣೆ ನಡೆಸಲು ಮುಂದಾಗಿ

ಪ್ರಜಾಪ್ರಭುತ್ವದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಬುನಾದಿ ರೂಪದಲ್ಲಿರುವುದು ಸ್ಥಳೀಯ ಸಂಸ್ಥೆ. ಅದು ಗಟ್ಟಿಗೊಂಡಷ್ಟೂ ಪ್ರಜಾ ಪ್ರಭುತ್ವ ಗಟ್ಟಿಗೊಳ್ಳುತ್ತದೆ. ಆದರೆ, ಆಡಳಿತ ವ್ಯವಸ್ಥೆಯ ಮೊದಲ ಮೆಟ್ಟಿಲಿನಂತಿರುವ ಸ್ಥಳೀಯ ಸಂಸ್ಥೆಗಳನ್ನು ಶಿಥಿಲ ಗೊಳಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆಯನ್ನು ಒಂದು ವರ್ಷದಿಂದ ಮುಂದೂಡುತ್ತಾ ಬರಲಾ ಗಿದೆ. ೨೦೨೦ರ ಸೆಪ್ಟೆಂಬರ್‌ನಲ್ಲಿಯೇ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆ ಇದುವರೆಗೆ ನಡೆದಿಲ್ಲ. ಸಕಾಲದಲ್ಲಿ ಚುನಾವಣೆ ಯನ್ನು ನಡೆಸದ ಸರಕಾರ, ಆ ಮೂಲಕ ಮತದಾರನ ಹಕ್ಕನ್ನು ಮೊಟಕುಗೊಳಿಸಿದೆ. ಸ್ಥಳೀಯ ಮಟ್ಟದಲ್ಲಿ ತಮ್ಮದೇ ರಾಜ್ಯಭಾರ ನಡೆಯು ವಂತಾಗಲು ಹಲವು ಶಾಸಕರಿಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವುದು ಬೇಕಾಗಿಲ್ಲ.

ಅವರ ತಾಳಕ್ಕೆ ತಕ್ಕಂತೆ ಸರಕಾರ ಕೂಡ ಕುಣಿಯುತ್ತಿದೆ. ಚುನಾವಣೆಯನ್ನು ಮುಂದೂ ಡಲು ಮೀಸಲು ನಿರ್ಧಾರವಾಗದೇ ಇರುವುದು ಕಾರಣ ಎಂಬ ನೆಪವನ್ನು ಸರಕಾರ ಹೇಳುತ್ತಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿ ದಿರುವಿಕೆಯನ್ನು ಗುರುತಿಸಿ, ಮೀಸಲು ಖಾತರಿಪಡಿಸುವ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿ ಹಿಂದುಳಿದ ವರ್ಗಗಳಿಗೂ ಅನ್ಯಾಯ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಈಗ ಸೃಷ್ಟಿಯಾಗಿರುವ ಎಲ್ಲ ಬಿಕ್ಕಟ್ಟುಗಳಿಗೂ ರಾಜ್ಯ ಸರಕಾರವೇ ನೇರ ಹೊಣೆ. ಮೀಸಲಿಗೆ ಸಂಬಂಧಿಸಿದ ತೊಡಕುಗಳನ್ನು ನಿವಾರಣೆಗೆ ಸಾಕಷ್ಟು ಅವಕಾಶವಿದ್ದರೂ ಕಾಲಹರಣ ಮಾಡಿ, ಈಗ ಮೀಸಲಿನ ಜಪ ಮಾಡುವುದು ಹೊಣೆಯಿಂದ ನುಣುಚಿಕೊಳ್ಳುವ ಯತ್ನವಷ್ಟೇ.

ಮೀಸಲು ಕುರಿತು ನಿರ್ಣಯಿಸಲು ಈಗಷ್ಟೇ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆದರೆ ವರದಿ ಸಲ್ಲಿಸಲು ಮೂರು ತಿಂಗಳು ಸಮಯ ನೀಡಿರುವುದು ಮತ್ತಷ್ಟು ಕಾಲಹರಣ ಮಾಡುವ ಉದ್ದೇಶದಿಂದಲೇ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಆಡಳಿತ ಪಕ್ಷ ಚುನಾವಣೆಗೆ ಸನ್ನದ್ಧವಾಗುವವರೆಗೂ ಚುನಾವಣೆ ನಡೆಸಬಾರದು ಎಂಬ ನಿರ್ಣಯಕ್ಕೆ ಬಂದಂತಿದೆ. ಈ ವಿಳಂಭ ಧೋರಣೆಯನ್ನು ಬಿಟ್ಟು ಕಾಲಮಿತಿಯಲ್ಲಿ ಮೀಸಲು ನಿಗದಿ ಮಾಡಿ, ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಲೂ ಬಿಡದೆ ಚುನಾವಣೆ ನಡೆಸಲು ಸರಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಆ ಮೂಲಕ ತನ್ನ ಸಾಂವಿಧಾನಿಕ ಹೊಣೆಗಾರಿಯನ್ನು ನಿಭಾಯಿಸ ಬೇಕಿದೆ.