ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರ ಸಂದಿಗ್ಧದಲ್ಲಿ ಸಿಲುಕಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಯೋಗದ ವರದಿ ಬಗ್ಗೆ ಚರ್ಚಿಸಿ, ಅಂತಿಮವಾಗಿ ಇದರ ಜಾರಿ ನಿರ್ಧಾರವನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ. ಇಂದಲ್ಲ, ನಾಳೆ ಸರಕಾರ ವೇತನ ಪರಿಷ್ಕರಣೆ ಮಾಡಲೇಬೇಕಾಗಿದೆ.
ಆದರೆ ಸದ್ಯ ಇದು ಜಾರಿಯಾದರೆ ಬೊಕ್ಕಸಕ್ಕೆ ವಾರ್ಷಿಕ ೧೨ ಸಾವಿರ ಕೋಟಿ ರೂ.ಗಳಿಂದ ೧೭ ಸಾವಿರ ರೂ. ಕೋಟಿ ರೂ. ತನಕ ಹೆಚ್ಚುವರಿ ಹೊರೆ ಬೀಳಲಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಸುಮಾರು ೬೦,೦೦೦ ಕೋಟಿ ರೂ. ಹೊಂದಿಸುವ ಅನಿವಾರ‍್ಯತೆಯಲ್ಲಿರುವ ಸರಕಾರ ಈಗಾಗಲೇ ಬೆಲೆ ಏರಿಕೆಯ ಮೊರೆ ಹೋಗಿದೆ. ಇದೀಗ ವೇತನ ಜಾರಿ ಪ್ರಸ್ತಾಪವನ್ನು ಒಪ್ಪಿಕೊಂಡರೆ, ನೌಕರರ ಸಂಬಳದ ಹಣ ಹೊಂದಿಸುವುದಕ್ಕಾಗಿಯೇ, ಸರಕಾರ ಬದಲಿ ಆದಾಯ ಮೂಲಗಳನ್ನು ಹುಡುಕಬೇಕಾಗಿದೆ.
ಜೂನ್ ತಿಂಗಳೊಳಗೆ ವೇತನ ಪರಿಷ್ಕರಣೆಯಾಗದಿದ್ದಲ್ಲಿ ಮುಷ್ಕರ ಹೂಡುವುದು ಅನಿವಾರ‍್ಯ ಎಂದು ರಾಜ್ಯ ಸರಕಾರಿ ನೌಕರರ ಸಂಘಟನೆ ಈಗಾಗಲೇ ಎಚ್ಚರಿಸಿದೆ. ಈ ಕಾರಣದಿಂದ ಸರಕಾರ ಏರಿಕೆ ವಿಚಾರದಲ್ಲಿ ತೀರಾ ವಿಳಂಬ ಮಾಡಲು ಸಾಧ್ಯವಿಲ್ಲ. ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್
ನೇತೃತ್ವದ ಆಯೋಗ ಕಳೆದ ಮಾರ್ಚ್ ೧೬ ರಂದು ಸಲ್ಲಿಸಿದ ವರದಿಯಲ್ಲಿ ಶೇ.೨೭.೫ರಷ್ಟು ವೇತನ ಹೆಚ್ಚಳಕ್ಕೆ ಶಿ-ರಸು ಮಾಡಿದೆ. ಇದರ ಪ್ರಕಾರ ನೌಕರರ ಮೂಲ ವೇತನ ಶೇ.೫೮.೫ ಹೆಚ್ಚಳವಾಗಲಿದೆ. ಪ್ರಸ್ತುತ ಆರಂಭಿಕ ವೃಂದದ ನೌಕರರ ಕನಿಷ್ಠ ವೇತನ ತಿಂಗಳಿಗೆ ೧೭ ಸಾವಿರ ರು. ಇದೆ.
ಇದನ್ನು ಗರಿಷ್ಠ ೨೭ ಸಾವಿರಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ. ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಠ ವೇತನ ಈಗ ೧,೦೪,೬೦೦ ರೂ. ಗಳಿದ್ದು ಇದನ್ನು ೧,೬೭,೨೦೦ ರು.ಗಳಿಗೆ ಏರಿಸಲು ಶಿಫಾರಸು ಮಾಡಲಾಗಿದೆ. ಪ್ರಸ್ತುತ ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತ ೧:೮.೮೬ ಇದ್ದು ಇದನ್ನು ೧:೮.೯೩ಕ್ಕೆ ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ. ಎಲ್ಲ ಶಿಫಾರಸುಗಳು ಯಥಾವತ್ತಾಗಿ ಜಾರಿಯಾದರೆ ೧೭,೪೪೦.೧೫ ರು. ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಭರಿಸಬೇಕಾಗುತ್ತದೆ. ಸರಕಾರ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣದ ಜತೆ ಮಿತವ್ಯಯಕ್ಕೂ ಒತ್ತು ನೀಡಬೇಕಾಗಿದೆ. ವಿವಿಧ ಇಲಾಖೆ ಗಳ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ವೇತನ ಹೆಚ್ಚಳದ ಜತೆ ನೌಕರರ ಕೆಲಸದ ಮಾಲ್ಯವೂ ಹೆಚ್ಚುವಂತೆ ಸರಕಾರ ನೋಡಿಕೊಳ್ಳ ಬೇಕಾಗಿದೆ.