ಕೆಲವೇ ದಿನಗಳಲ್ಲಿ ಆಗಮಿಸಲಿರುವ ನಾಡಿನ ಸಂಭ್ರಮದ ಹಬ್ಬ ರಾಜ್ಯೋತ್ಸವಕ್ಕೆ ಕರೋನಾದ ಕರಿನೆರಳು ಅಡ್ಡಿಯಾಗುವುದೇ ಎಂಬ ಆತಂಕ ಕಾಡಲಾರಂಭಿಸಿದೆ. ಆದರೆ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಈಗಾಗಲೇ ಸರಕಾರಕ್ಕೆ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
ಒಂದೆಡೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆಯೇ ಇನ್ನೂ ಚಿಂತನೆ ಪೂರ್ಣಗೊಂಡಿಲ್ಲ. ಮತ್ತೊಂದೆಡೆ ಕೆಲವರಿಂದ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಸಹ ವ್ಯಕ್ತವಾಗುತ್ತಿವೆ. ಇಂಥ ವೇಳೆಯಲ್ಲಿ ಸರಕಾರದ ನಡೆ ಮಹತ್ವಪೂರ್ಣ. ಕರೋನಾ ಸಂಕಷ್ಟದ ಈ ದಿನಗಳಲ್ಲಿ ರಾಜ್ಯೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗ ದಿದ್ದರೂ, ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಆಚರಿಸಬೇಕಿರುವುದು ಮುಖ್ಯ. ಕಾರಣ ರಾಜ್ಯೋತ್ಸವ ಎಂಬುದು ನಮ್ಮ ನಾಡಿನ ಮಹತ್ವದ ಸಾಂಸ್ಕೃತಿಕ ಹಬ್ಬ. ಇದು ಇಡೀ ನಾಡಿನ ಸಂಸ್ಕೃತಿಯ ಪ್ರತೀಕ.
ಆದ್ದರಿಂದ ರಾಜ್ಯೋತ್ಸವ ಆಚರಣೆ ರಾಜ್ಯದ ಪಾಲಿಗೆ ಮುಖ್ಯ. ಅದೇ ರೀತಿ ರಾಜ್ಯೋತ್ಸವದ ಅಂಗವಾಗಿ ನಾಡಿನ ಹೆಮ್ಮೆಯ ಸಾಧಕರನ್ನು ಗೌರವಿಸುವ ಪರಂಪರೆಯನ್ನು ಮುಂದುವರಿಸುವುದು ಕೂಡ ಮುಖ್ಯ. ಕರ್ನಾಟಕ ಸರಕಾರದಿಂದ ನೀಡಲಾಗುವ ಎರಡನೇ ಅತ್ಯುನ್ನತ್ತ ನಾಗರೀಕ ಪ್ರಶಸ್ತಿ ಎಂದರೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. ಈ ಬಾರಿ ಪ್ರಶಸ್ತಿಗಾಗಿ ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಸಾಧಕರ ಆಯ್ಕೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕ್ರಿಯೆಗಳು ಆರಂಭಗೊಂಡಿವೆ.
ಈ ವೇಳೆ ಯಾವುದೇ ರೀತಿ ಅಪಸ್ವರಗಳು ಕೇಳಿಬಂದರೂ, ನಾಡಿನ ಸಂಭ್ರಮದ ಹಬ್ಬ ಆಚರಿಸುವ ಪರಂಪರೆಗೆ ಸರಕಾರ ಆದ್ಯತೆ ನೀಡಬೇಕಿರುವುದು ಅಗತ್ಯ. ಅದೇ ರೀತಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ನಾಡಿನ ಸಾಧಕರನ್ನು ಗೌರವಿಸಬೇಕಿರುವುದು ಮಹತ್ವ ಪೂರ್ಣ ಕಾರ್ಯ. ಆದ್ದರಿಂದ ಅದ್ಧೂರಿ ಆಚರಣೆ ನಡೆಸದಿದ್ದರೂ, ಪರಂಪರೆ ಮುಂದುವರಿಸಬೇಕಿರುವುದು ಮುಖ್ಯ.