Sunday, 15th December 2024

ತೈಲ ಬೆಲೆ ಇಳಿಸಲು ಜಿಎಸ್‌ಟಿ ಅನಿವಾರ್ಯ

ದೇಶಾದ್ಯಂತ ಇಂಧನ ದರ ಭಾನುವಾರ ಮತ್ತೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ ಲೀಟರಿಗೆ 105.95 ರು., ಡೀಸೆಲ್ 96.34 ರು. ಆಗಿದೆ. ವಾರದಲ್ಲಿ ಐದನೇ ಬಾರಿ ಪೆಟ್ರೋಲ್ ದರ ಹೆಚ್ಚಳವಾಗಿದ್ದು, ಡೀಸೆಲ್ ದರ ಕೂಡ ಹತ್ತು ದಿನಗಳಲ್ಲಿ ಎಂಟು ಬಾರಿ ಹೆಚ್ಚಳವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಗರಿಷ್ಠ ಮಟ್ಟದಲ್ಲಿ ಇದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏನಿಲ್ಲ. ಆದರೂ ದೇಶದಲ್ಲಿ ಪೆಟ್ರೋಲ, ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸುವ ಮೂಲಕ ಬೆಲೆ ಏರಿಸಲಾಗುತ್ತಿದೆ. ಲಾಕ್‌ಡೌನ್ ಕಾರಣದಿಂದಾಗಿ ವರಮಾನದಲ್ಲಿ ಆದ ಕೊರತೆಯನ್ನು ತುಂಬಿಕೊಳ್ಳುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚುವರಿಯಾಗಿ ತೆರಿಗೆ ವಿಧಿಸುತ್ತಿರುವುದರಿಂದಲೇ ತೈಲ ಬೆಲೆ ಈ ಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಜನರ ಜೇಬಿಗೆ ಕತ್ತರಿ ಹಾಕಬಾರದು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಮನಸ್ಸು ಮಾಡಿ, ತೆರಿಗೆ ಇಳಿಸಿದರೆ, ಅದನ್ನೇ ರಾಜ್ಯಗಳು ಬಳಸಿಕೊಂಡು ತೆರಿಗೆ ಹೆಚ್ಚಿಸುವ ಮೂಲಕ ಬೆಲೆ ಇಳಿಕೆಯ ಲಾಭ ಜನರಿಗೆ ತಲುಪದಂತೆ ನೋಡಿಕೊಳ್ಳುವ ಅಪಾಯವೂ ಇದೆ. ಆದ್ದರಿಂದ ಪೆಟ್ರೋಲ್, ಡೀಸೆಲ್‌ನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದೊಂದೇ ಇದಕ್ಕೆ ಪರಿಹಾರ. ಆಗ ಗರಿಷ್ಠ ಶೇ.೨೮ರಷ್ಟಕ್ಕಿಂತ ಹೆಚ್ಚಿನ ತೆರಿಗೆ ವಿಧಿಸಲು ಅವಕಾಶ ಇರುವುದಿಲ್ಲ. ತೆರಿಗೆಯು ದೇಶದಾದ್ಯಂತ ಒಂದೇ ಪ್ರಮಾಣದಲ್ಲಿ ಇರುತ್ತದೆ. ಆಗ ತೈಲ ಬೆಲೆಯು ದೇಶಿ ಮಾರುಕಟ್ಟೆ ಯಲ್ಲಿ ತಗ್ಗುತ್ತದೆ. ಆದರೆ ರಾಜ್ಯ ಸರಕಾರ ಇಚ್ಛಾಶಕ್ತಿಯೂ ಅಗತ್ಯವಿದೆ.

ತೀರಾ ದುಬಾರಿ ಆಗಿರುವ ಪೆಟ್ರೋಲ್, ಡೀಸೆಲ್ ದರವನ್ನು ಇಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೀರ್ಮಾನಿಸಬೇಕಿದೆ. ತೈಲ ಬೆಲೆ ತಗ್ಗಿಸಿ, ಇತರ ವಸ್ತುಗಳ ಬೆಲೆಯಲ್ಲಿಯೂ ಕೊಂಚ ಇಳಿಕೆ ಆದರೆ ಜನರ ಕೈಯಲ್ಲಿ ಒಂದಿಷ್ಟು ಹೆಚ್ಚು ಹಣ ಉಳಿಯಬಹುದು. ಅದನ್ನು ಅವರು ತಮ್ಮ ಸಾಲ ತೀರಿಸಲು ಅಥವಾ ಹೊಸ ಖರೀದಿಗಳಿಗೆ ಬಳಸಿಕೊಳ್ಳಬಹುದು. ಅದರ ಪ್ರಯೋಜನ ಸಿಗುವುದು ದೇಶದ ಅರ್ಥ ವ್ಯವಸ್ಥೆಗೆ. ಜನರ ಮೇಲೆ ತೆರಿಗೆ ಹೊರೆ ಹೆಚ್ಚಿಸುವುದಕ್ಕಿಂತ ಜನರ ಕೈಯಲ್ಲಿ ಹೆಚ್ಚು ಹಣ ಇರುವಂತೆ ಮಾಡಿ ವ್ಯವಸ್ಥೆಯನ್ನು ಕಟ್ಟುವುದು ಒಳಿತು.