Sunday, 15th December 2024

ಅಜೆಂಡಾವೇ ಇಲ್ಲದ ಪ್ರಚಾರ

ಮೇ ೧೦ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಧುಮುಕಿವೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಬಹುತೇಕ ರಾಷ್ಟ್ರೀಯ ನಾಯಕರು ಕರ್ನಾಟಕ್ಕೆ ಲಗ್ಗೆ ಇಟ್ಟಿದ್ದರೆ, ಜೆಡಿಎಸ್ ತಾನೇನೂ ಕಡಿಮೆ ಇಲ್ಲ ಎಂಬಂತೆ ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ತೆಲಂಗಾಣದ ಸಿಎಂ ಕೆ.ಸಿ.ಚಂದ್ರಶೇಖರ್ ಅವರನ್ನು ಪಕ್ಷದ ಪರ ಪ್ರಚಾರಕ್ಕೆ ಕರೆಸುತ್ತಿದೆ.

ಪ್ರಚಾರದ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಸೈದ್ಧಾಂತಿಕ ಮತ್ತು ಅಭಿವೃದ್ಧಿಪರ ವಿಚಾರಗಳು ಮೂಲೆಗೆ ಸರಿಯುತ್ತಿವೆ. ಇಷ್ಟು ದಿನದ ಪ್ರಚಾರದುದ್ದಕ್ಕೂ ಪೈಪೋಟಿ ಕಂಡು ಬಂದದ್ದು ಪಕ್ಷಗಳ ಹಾಗೂ ಅಭ್ಯರ್ಥಿಯ ಬಲ ಪ್ರದರ್ಶನದಲ್ಲಿಯೇ ಹೊರತೂ ವಿಷಯ ಕೇಂದ್ರಿತ ಪ್ರಚಾರವಾಗಲೀ, ಪ್ರತಿಪಾದನೆಯಾಗಲೀ ಯಾರಿಂದಲೂ ನಡೆಯುತ್ತಿಲ್ಲ. ಹಾಗೆ ನೋಡಿದರೆ ಈ ಬಾರಿಯ ಚುನಾವಣೆಗೆ ಒಂದು ನಿರ್ದಿಷ್ಟ ಅಜೆಂಡಾ ಎಂಬುದು ಯಾವ ಪಕ್ಷದಿಂದಲೂ ನಿಗದಿ ಆದಂತಿಲ್ಲ.

ಮೀಸಲಿನಂಥ ವಿಚಾರಗಳು ಚರ್ಚೆಗೆ ಬರುತ್ತಿದೆಯಾದರೂ, ಮತ್ತದು ಲಿಂಗಾಯತ-ಮುಸ್ಲಿಂ ಎಂಬಿತ್ಯಾದಿಯಾಗಿ ಧರ್ಮ-ಜಾತಿ ಆಧಾರಿತ ಬಣ್ಣವನ್ನು ಪಡೆದುಕೊಂಡು, ಆಯಾ ಸಮುದಾಯದ ವೋಟ್‌ಬ್ಯಾಂಕ್ ಸೆಳೆಯಲು ನಡೆಸುತ್ತಿರುವ ತಂತ್ರವಾಗಿಯೇ ಮಾರ್ಪಡು ತ್ತಿದೆ. ಹೀಗಾಗಿ ಮತದಾರರ ಎದುರು ಆಯ್ಕೆ ಮತ್ತು ಆದ್ಯತೆಗಳು ಸ್ಪಷ್ಟವಾಗುತ್ತಿಲ್ಲ. ರಾಜ್ಯ ಚುನಾವಣೆಯಾದು ದರಿಂದ ಸಹಜವಾಗಿ ಅಭ್ಯರ್ಥಿಗಳೇ ಪ್ರಧಾನವಾಗುತ್ತಾರಾದರೂ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಸಬಲ್ಲ, ಸಂವಿಧಾನದ ಆಶೋತ್ತರಗಳನ್ನು ಎತ್ತಿಹಿಡಿಯಬಲ್ಲ ನಾಯಕರಿಗಿಂತಲೂ ಎಲ್ಲರೂ ಹಣಬಲ, ಜಾತಿಬಲದಂಥ ವಿಚಾರಗಳಲ್ಲಿ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸುತ್ತಿದ್ದಾರಷ್ಟೆ.

ಮತ್ತೆ ಈ ಬಾರಿಯೂ ಜಾತಿ, ಸಂಪತ್ತು, ಅಧಿಕಾರ, ಹಣವೇ ಪ್ರಜಾಪ್ರಭುತ್ವದ ಅತಿದೊಡ್ಡ ಪರ್ವ ‘ಚುನಾವಣೆ’ಯನ್ನು ಆಳುತ್ತಿರುವುದು ವಿಷಾದನೀಯ. ಹೀಗಾಗಿ ಇದ್ದು ದರಲ್ಲಿ ‘ಉತ್ತಮ’ರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯದಲ್ಲಿ ಮತದಾರ
ಇದ್ದಾನೆ. ಒಬ್ಬೊಬ್ಬ ಅಭ್ಯರ್ಥಿಗಳೂ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಅಧಿಕೃತವಾಗಿ ಘೋಷಿಸಿರುವ ಆಸ್ತಿ-ಸಂಪತ್ತನ್ನು ನೋಡಿದರೆ, ವರ್ಷದಿಂದ ವರ್ಷಕ್ಕೆ ಅದು ಊಹೆಗೂ ಮೀರಿ ಹೆಚ್ಚಳವಾಗುತ್ತಿರುವುದನ್ನು ಗಮನಿಸಿದರೆ ರಾಜ್ಯದ ‘ಅಭಿವೃದ್ಧಿ’ ಗಿಂತಲೂ ನಾಯಕರೆನಿಸಿಕೊಂಡವರ ‘ಅಭಿವೃದ್ಧಿ’ ಆತಂಕ ಹುಟ್ಟಿಸುತ್ತದೆ. ಒಬ್ಬನೇ ಒಬ್ಬ ನಾಯನೂ ಕನಿಷ್ಠ ತನ್ನ ಪ್ರತಿಸ್ಪರ್ಧಿಯ ಆಸ್ತಿಯಲ್ಲಿನ ಹೆಚ್ಚಳ ಈ ಪರಿ ಹೇಗಾಯಿತು ಎಂದು ಪ್ರಶ್ನಿಸುವ ಗೋಜಿಗೇ ಹೋಗುತ್ತಿಲ್ಲ.

ಏಕೆಂದರೆ ಎಲ್ಲರಿಗೂ ಗೊತ್ತು, ಈ ಬಗ್ಗೆ ಸೊಲ್ಲೆತ್ತಿದರೆ ತಮ್ಮ ಬಂಡವಾಳವೂ ಬಯಲಾಗುತ್ತದೆ ಎಂಬುದು. ಹೋಗಲಿ  ಎಂದುಕೊಂಡರೆ ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ಹೊರತುಪಡಿಸಿ, ರಾಜ್ಯದ ಒಂದೇ ಸಮಸ್ಯೆಯ ಬಗ್ಗೆಯೂ ಯಾವ ಪಕ್ಷವೂ ಮಾತನಾಡುತ್ತಿಲ್ಲ. ಪಕ್ಷಗಳು ನೀಡುತ್ತಿರುವ ಉಚಿತ ಭರವಸೆ-ಗ್ಯಾರಂಟಿಗಳೂ ಮತ್ತೆ ವ್ಯಕ್ತಿ-ನಿರ್ದಿಷ್ಟ ಸಮುದಾಯ ಕೇಂದ್ರಿ ತವೇ ಹೊರತೂ ಸಾಮೂಹಿಕವಾಗಿ ರಾಜ್ಯದ ಅಭಿವೃದ್ಧಿಯ ಯಾವೊಂದು ಆಶ್ವಾಸನೆಗಳನ್ನೂ ನೀಡುವ ವಿಶ್ವಾಸದಲ್ಲಿ ರಾಜಕಾರಣಿ ಗಳಾಗಲೀ-ಪಕ್ಷಗಳಾಗಲೀ ಇಲ್ಲದಿರುವುದು ಪ್ರಜಾಪ್ರಭುತ್ವದ ದುರಂತ.