Thursday, 12th December 2024

ಕೃಷಿ ತ್ಯಾಜ್ಯ ಮಣ್ಣಿಗೆ ಸೇರಲಿ

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಭತ್ತ, ಕಬ್ಬು, ಬಾಳೆ ಕಟಾವು ಮುಗಿದಿದೆ. ಭೂಮಿ ಹಸನುಗೊಳಿಸುವ ಕ್ರಿಯೆ ಆರಂಭ ವಾಗಿದೆ. ಈ ವೇಳೆ ಕೃಷಿ ಭೂಮಿಯಲ್ಲಿ ಸಂಗ್ರಹವಾಗಿ ರುವ ತರಗು, ಹುಲ್ಲು, ಸೋಗು ಮತ್ತಿತರ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಇಟ್ಟು ಭಸ್ಮ ಮಾಡಲಾ ಗುತ್ತಿದೆ. ಈ ಪದ್ಧತಿಯಿಂದ ಭೂಮಿ ಮಣ್ಣಿನ ಆರೋಗ್ಯ ಕುಸಿದು, ಮುಂದಿನ ದಿನಗಳಲ್ಲಿ ಇಳುವರಿ ಕುಸಿಯುವ ಆತಂಕವಿದೆ.

ಪ್ರತಿ ಹೆಕ್ಟೇರ್‌ಗೆ ಸರಾಸರಿ ನಾಲ್ಕು ಟನ್ ಕೃಷಿ ತ್ಯಾಜ್ಯ ಸಂಗ್ರಹವಾಗುತ್ತದೆ. ಇದರಲ್ಲಿ ಎಲ್ಲ ರೀತಿಯ ಪೋಷಕಾಂಶಗಳಿರುತ್ತವೆ. ಸಾರಜನಕ, ಪೊಟ್ಯಾಸಿಯಂ, ರಂಜಕದ ಪ್ರಮಾಣ ಹೇರಳವಾಗಿರುತ್ತದೆ. ಇಂತಹ ಅಮೂಲ್ಯ ಸವಕಳಿಗೆ ಅಗ್ನಿ ಸ್ಪರ್ಶಿಸುವು ದರಿಂದ ಅಪಾರ ಪ್ರಮಾಣದ ಸಾವಯವ ಅಂಶ ಹಾಳಾಗುವುದಲ್ಲದೆ, ಭೂ ಮೇಲ್ಪದರದ ಮಣ್ಣಿನಲ್ಲಿ ಬದುಕುವ ಸೂಕ್ಷ್ಮಾಣು ಜೀವಿಗಳೂ ನಾಶ ಆಗುತ್ತವೆ.

ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚದೆ ಭೂಮಿಯಲ್ಲಿ ಸೇರಿಸಿದರೆ ರಾಸಾಯನಿಕ ಗೊಬ್ಬರದ ಹೆಚ್ಚುವರಿ ಖರ್ಚು ರೈತರಿಗೆ ಉಳಿಯುತ್ತದೆ. ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಟ್ಟರೆ ಇಂಗಾಲ, ವಿಷಕಾರಕ ಅನಿಲಗಳು ವಾತಾವರಣಕ್ಕೆ ಸೇರುತ್ತವೆ. ಮಣ್ಣಿನ ಆರೋಗ್ಯ ಕುಸಿದು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಕುಸಿಯುತ್ತದೆ. ಹಾಗಾಗಿ, ಕೃಷಿಯಲ್ಲಿ ಅನುಪಯುಕ್ತ ಎಂಬುದು ಯಾವುದೂ ಇಲ್ಲ ಎಂಬುದನ್ನು ರೈತರು ತಿಳಿದುಕೊಳ್ಳಬೇಕು.

ಹುಲ್ಲು, ಕಡಲೆಗಿಡ, ನಾರು, ಸೋಗು ಮೊದಲಾದ ತ್ಯಾಜ್ಯವನ್ನು ಬೆಂಕಿಯಲ್ಲಿ ಸುಡುವ ಬದಲು ನೀರಿನಲ್ಲಿ ಕೊಳೆಸಬೇಕು. ನಂತರ ಮಣ್ಣಿನಲ್ಲಿ ಸೇರಿಸಬೇಕು. ಆಗ ಪ್ರತಿ ಟನ್‌ಗೆ ೫.೫ ಕೆಜಿ ಸಾರಜನಕ, ೨.೫ ಕೆಜಿ ರಂಜಕ, ೨೫ ಕೆಜಿ ಪೊಟ್ಯಾಸಿಯಂ
ಅನಾಯಾಸ ವಾಗಿ ರೈತರ ಬಳಕೆಗೆ ಬರುತ್ತದೆ. ತ್ಯಾಜ್ಯ ಹೊತ್ತಿ ಉರಿದರೆ ಒಂದೂವರೆ ಟನ್ ಮಿಥೇನ್, ಇಂಗಾಲದ ಮಾನೋ ಕ್ಸೈಡ್, ನೈಟ್ರಸ್ ಆಕ್ಸೈಡ್ ಮತ್ತಿತರ ವಿಷಕಾರಕಗಳು ನೇರವಾಗಿ ವಾತಾವರಣಕ್ಕೆ ಸೇರುತ್ತವೆ.

ಮಣ್ಣಿನ ಆರೋಗ್ಯಕ್ಕೆ ಕಾರಣವಾಗುವ ಎರೆಹುಳು ಮತ್ತು ಸೂಕ್ಷ್ಮಾಣು ಜೀವಿ ನಾಶವಾಗುತ್ತವೆ. ಹಾಗಾಗಿ ಕೃಷಿ ತ್ಯಾಜ್ಯವನ್ನು ಮಣ್ಣಿಗೆ ಸೇರಿಸುವತ್ತ ರೈತರು ಮುಂದಾಗಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಅಧಿಕ ಇಳುವರಿ ತೆಗೆಯಬೇಕು.

 
Read E-Paper click here