Sunday, 15th December 2024

ಕಣಿವೆಯಲ್ಲೂ ತ್ರಿವರ್ಣದ ಹೆಮ್ಮೆ

ಭಾರತ ಗಣರಾಜ್ಯವಾಗಿ 73 ವರ್ಷಗಳಾದ ನಂತರ ನಿಜವಾಗಿ ಗಣತಂತ್ರಕ್ಕೆ ಅರ್ಥ ಬಂದಂತಾಗಿದೆ. ಹಲವು ರೀತಿಯಿಂದ ಇಂದಿನ ಗಣರಾಜ್ಯೋತ್ಸವ ವಿಶೇಷ ವಾದದ್ದು. ಮೊದಲ ಬಾರಿಗೆ ಯೋಧರ ರಾಷ್ಟ್ರೀಯ ಸ್ಮಾರಕವೊಂದು ದೇಶದಲ್ಲಿ ತಲೆ ಎತುತ್ತಿದೆ ಎಂಬುದು ಒಂದೆಡೆ ಯಾದರೆ, ದೇಶದ ಪ್ರಧಾನಿಯೊಬ್ಬರು ಧ್ವಜಾರೋಹಣಕ್ಕೂ ಮುನ್ನ ಅಲ್ಲಿಗೆ ತೆರಳಿ, ಯೋಧರಿಗೆ ನಮನಗಳನ್ನು ಸಲ್ಲಿಸಿದ ನಂತರ ಕಾರ್ಯಕ್ರಮಕ್ಕೆ ಚಾಲನೆ ದೊರೆತದ್ದು ಅರ್ಥಪೂರ್ಣ.

ಸೇನಾ ಬಲಪ್ರದರ್ಶನಕ್ಕೆಂದೇ ನಿಗದಿಯಾದ ದಿನದಂದು ಇದು ಜರುಗಿದ್ದು ಹೆಮ್ಮೆ ಮೂಡಿಸಿದೆ. ಇನ್ನು ಸ್ವಾತಂತ್ರ್ಯಕ್ಕೆ ನೈಜ ಹೋರಾಟ ನಡೆಸಿ, ಭಾರತದ್ದೇ ಆದ ದೇಸಿ ಆರ್ಮಿಯನ್ನು ಸಂಘಟಿಸಿ, ಬಲಿದಾನಗೈದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಪ್ರತಿಮೆಯನ್ನು ದೇಶದ ಹೆಬ್ಬಾಗಿಲಿನಲ್ಲೇ ಸ್ಥಾಪಿಸುತ್ತಿರುವುದು, ಹಾಗೂ ಮುಂದಿನ ಗಣರಾಜ್ಯೋ ತ್ಸವದ ವೇಳೆ ದೇಶದ ನೈಜ ಯೋಧ ನೇತಾಜಿಗೆ ಗೌರವಾರ್ಪಣೆಯಾಗುವುದು ಇನ್ನೊಂದು ವಿಶೇಷ.

ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ತ್ರಿವರ್ಣ ಧ್ವಜವನ್ನು ಶ್ರೀನಗರದ ಪ್ರಸಿದ್ಧ ಲಾಲ್ ಚೌಕ್ ಪ್ರದೇಶದ ಗಡಿಯಾರ ಗೋಪುರದ ಮೇಲೆ ಹಾರಿಸುವಂಥ ವಾತಾವರಣ ನಿರ್ಮಾಣವಾಗಿದೆ. ಭಾರತದ ಸ್ವಾತಂತ್ರ್ಯದ ನಂತರ ಗಡಿಯಾರ ಗೋಪುರದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿರುವುದು ಇದೇ ಮೊದಲು. ಸ್ವಾತಂತ್ರ್ಯದ ನಂತರ, ಗಡಿಯಾರ ಗೋಪುರದ ಮೇಲೆ ಕಣಿವೆಯಲ್ಲಿ ಶಾಂತಿಯನ್ನು ಕದಡಲು ಬಯಸಿದ ಪಾಕಿಸ್ತಾನಿ ಪ್ರಾಯೋಜಿತ ಘಟಕಗಳು ಪಾಕಿಸ್ತಾನದ ಧ್ವಜ ಹಾರಿಸುವುದನ್ನು ಮಾತ್ರ ನೋಡಿದ್ದೆವು. ಆದರೆ ಕಣಿವೆ ರಾಜ್ಯದಲ್ಲಿ 370ನೇ ಕಲಂ ರದ್ದಾದ ನಂತರ ರಾಷ್ಟ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ.

‘ನಯಾ ಕಾಶ್ಮೀರ’ ಎಂದರೆ ಏನು ಎಂಬುದಕ್ಕೆ ಇಂದಿನ ಧ್ವಜಾರೋಹಣ ಉತ್ತರ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಜನತೆ ಬಯಸಿದ್ದು ಇದನ್ನೇ ಆಗಿತ್ತು. ಕಣಿವೆ ರಾಜ್ಯದ ಜನ ಎಂದಿಗೂ ಪಾಕ್ ಪರವಾಗಿರಲಿಲ್ಲ. ಆದರೆ ಅದನ್ನು ಗಟ್ಟಿ ದನಿಯಲ್ಲಿ ಹೇಳುವ ವಾತಾವರಣ ಇರಲಿಲ್ಲ. ಇಂದು ಅಂಥ ಆತಂಕ ತೆರೆದು ಸ್ವಚ್ಛ ಬಾಂದಳದಲ್ಲಿ ತ್ರಿವರ್ಣ ಧ್ವಜರೋಹಣ ನೆರವೇರಿದೆ. ನೈಜ ಅರ್ಥದಲ್ಲಿ ಶಾಂತಿ-ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ಏಕೆಂದರೆ ಲಾಲ್ ಚೌಕ್‌ನ ಗಡಿಯಾರ ಗೋಪುರವು ರಾಜಕೀಯವಾಗಿ ಹೆಚ್ಚಿನ ಪ್ರಾಮುಖ್ಯ ಪಡೆದುಕೊಂಡಿತ್ತು. ದೇಶದ ಮತ್ತು ಜಮ್ಮು ಮತ್ತು ಕಾಶ್ಮೀರದ ಎಲ್ಲಾ ದೊಡ್ಡ ನಾಯಕರು ಗಡಿಯಾರ
ಗೋಪುರದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಸ್ವಾತಂತ್ರ್ಯ ಪಡೆದ ಬಳಿಕವೂ ರಾಷ್ಟ್ರಧ್ವಜವನ್ನು ಹೊಂದಿರದ ಏಕೈಕ ಸ್ಥಳವಾಗಿತ್ತು. ಭಾರತ ಸಬಲವಾಗಿದೆ, ದಿಟ್ಟವಾಗಿದೆ ಎಂಬುದಕ್ಕೆ ಇನ್ನೇನು ಬೇಕು?