ಕರ್ನಾಟಕ ಸೇರಿದಂತೆ ದೇಶಾದ್ಯಂತ ಕರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಮೂರನೇ ಅಲೆಯ ಆತಂಕವಿದ್ದರೂ, ಲಸಿಕಾ ಅಭಿಯಾನ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದು, ಕರೋನಾದಿಂದ ಮೃತಪಡುವವರ ಸಂಖ್ಯೆಯೂ ಇಳಿಮುಖವಾಗಿರುವು ದರಿಂದ ಕೊಂಚ ನೆಮ್ಮದಿಯಿದೆ.
ಆದರೆ ಸೋಂಕು ಕಡಿಮೆಯಾಗಿದೆ ಎನ್ನುವ ಮಾತ್ರಕ್ಕೆ ಮೈಮರೆಯಬೇಕು ಎಂದಲ್ಲ. ಈ ಎಚ್ಚರಿಕೆಯನ್ನು ಮೀರಿ, ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ಸೋಂಕು ಇಳಿಕೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಬರುತ್ತಿರುವ ಈ ಹಂತದಲ್ಲಿ ಈ ರೀತಿಯ ಪ್ರತಿಭಟನೆ, ರ‍್ಯಾಲಿಗಳು ಸೋಂಕನ್ನು ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಈ ಪ್ರತಿಭಟನೆಗಳೇ ‘ಸೂಪರ್ ಸ್ಪ್ರೆಡರ್’ ಆದರೂ ಅಚ್ಚರಿ ಇಲ್ಲ. ಆದ್ದರಿಂದ ಈ ಹಂತದಲ್ಲಿ ರೈತರು ಭಾರತ್ ಬಂದ್ ಮಾಡಬೇಕಿತ್ತೇ? ಎನ್ನುವ ಪ್ರಶ್ನೆ ಗಳು ಎದ್ದಿವೆ.
ಕರೋನಾ ಸೋಂಕು ಹಬ್ಬುವುದು ಒಂದು ಭಾಗವಾದರೆ, ಈಗಷ್ಟೇ ವ್ಯಾಪಾರ, ವಹಿ ವಾಟು, ಶಾಲೆ-ಕಾಲೇಜುಗಳು ಆರಂಭಗೊಳ್ಳುತ್ತಿವೆ. ಕಳೆದ 18-20 ತಿಂಗಳು ಗಳಿಂದ ಕರೋನಾ ಕಾರಣಕ್ಕೆ ವ್ಯಾಪಾರ ವಹಿವಾಟು ಸಂಪೂರ್ಣ ನೆಲೆ ಕಚ್ಚಿವೆ. ಈಗ ಆರಂಭಗೊಂಡು ವ್ಯಾಪಾರ ಸಹಜ ಸ್ಥಿತಿಗೆ ಬರುತ್ತಿದ್ದು, ಪುನಃ ಬಂದ್ ಎಂದರೆ, ನಷ್ಟ ಆಗುವುದು ಖಚಿತ.
ಈ ಕಾರಣಕ್ಕಾಗಿಯೇ ಬಹುತೇಕ ಸಂಘಟನೆಗಳು, ಕೇವಲ ‘ನೈತಿಕ’ ಬೆಂಬಲಕ್ಕೆ ಸೀಮಿತವಾಗಿವೆ. ಕೇಂದ್ರ ಸರಕಾರದ ಕೃಷಿ ಕಾಯಿದೆ ಗಳನ್ನು ವಿರೋಧಿಸಿ ಹಾಗೂ ವಾಪಸು ಪಡೆಯಲು ಬಂದ್ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಉಭಯ ಸದನದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಪಾಸ್ ಆಗಿರುವ ಈ ಬಿಲ್ ಅನ್ನು ಹಿಂಪಡೆಯುವುದು ಸುಲಭವಲ್ಲ. ಸದ್ಯ ಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ ಎನ್ನುವುದು ರೈತರಿಗೂ ತಿಳಿದಿರುವ ವಿಚಾರ. ಆದರೂ ಪ್ರತಿಷ್ಠೆಗೆ ಬಿದ್ದು ಈ ರೀತಿಯ ಬಂದ್ ಮಾಡುವುದರಿಂದ, ಕರೋನಾ ಕಾಲದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದನ್ನು ಮರೆಯಬಾರದು.