Sunday, 15th December 2024

ಬಿಬಿಎಂಪಿ ಚುನಾವಣೆ ನಡೆಯಲಿ

bbmp

ಬಿಬಿಎಂಪಿ ಚುನಾವಣೆ ನಡೆಸುವಂತೆ ನ್ಯಾಯಾಲಯ ಹಲವು ಬಾರಿ ಹೇಳಿದರೂ ವಾರ್ಡ್ ಪರಿಷ್ಕರಣೆ, ಮೀಸಲಾತಿ ನೆಪದಲ್ಲಿ ಚುನಾವಣೆ ಮುಂದೂಡಲಾಗುತ್ತಿದೆ. ಬಿಬಿಎಂಪಿ ಚುನಾವಣೆ ನಡೆಸುವುದು ಬೆಂಗಳೂರಿನ ಶಾಸಕರಿಗೆ ಬೇಕಾಗಿಲ್ಲ. ಅವರ ತಾಳಕ್ಕೆ ತಕ್ಕಂತೆ ಸರಕಾರವೂ ಕುಣಿಯುತ್ತಿದೆ.

ಬಿಬಿಎಂಪಿ ಆಡಳಿತದಲ್ಲಿ ಸುಧಾರಣೆ ತರುವ ನೈಜ ಕಾಳಜಿ ಇದ್ದಿದ್ದರೆ ವಾರ್ಡ್ ಮರುವಿಂಗಡನೆಗೆ ರಚಿಸಿದ್ದ ಸಮಿತಿ 20 ತಿಂಗಳು ಕಾಲಹರಣ ಮಾಡಲು ಅವಕಾಶ ನೀಡುತ್ತಿರಲಿಲ್ಲ. ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಆಡಳಿತದ ದೃಷ್ಟಿಯಿಂದ ಮಹತ್ತರ ಪ್ರಕ್ರಿಯೆ. ಆದರೆ ಅದು ಚುನಾವಣೆ ಮುಂದೂಡುವ ಅಸವಾಗಿ ಬಳಕೆಯಾಗುತ್ತಿರುವುದು ಅಕ್ಷಮ್ಯ. ಪಕ್ಷಪಾತಕ್ಕೆ ಸಂಬಂಧಿಸಿದ ಟೀಕೆಗಳು ಪ್ರತೀ ಸಲ ವಾರ್ಡ್ ಮರುವಿಂಗಡಣೆ ನಡೆದಾಗಲೂ ಕೇಳಿ ಬರುತ್ತಿವೆ.

ಆಡಳಿತ ಸುಧಾರಣೆ ಉದ್ದೇಶದಿಂದ ಕೈಗೊಳ್ಳುವ ಮಹತ್ವದ ಕಾರ್ಯಗಳು ವೈಜ್ಞಾನಿಕವಾಗಿ ಇರುವಂತೆ ನೋಡಿಕೊಳ್ಳಬೇಕಾದುದು ಸರಕಾರದ ಕರ್ತವ್ಯ. ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಆಡಳಿತವು ೨೦೨೦ರ ಸೆಪ್ಟೆಂಬರ್ ೧೦ರಂದೇ ಕೊನೆಗೊಂಡಿದೆ. ಹೊಸ ಕೌನ್ಸಿಲ್ ರಚಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ರಾಜಕಾರಣದಲ್ಲಿ ಸೋಲು-ಗೆಲುವು ಇದ್ದೇ ಇದೆ. ಅದನ್ನು ಬಂದಂತೆ ಸ್ವೀಕರಿಸುವ ಪ್ರಬುದ್ಧತೆಯನ್ನು ರಾಜಕೀಯ ಪಕ್ಷಗಳು ಬೆಳೆಸಿಕೊಳ್ಳಬೇಕು. ಇದೀಗ ಸುಪ್ರಿಂ ಕೋರ್ಟ್ ಒಂದು ವಾರದಲ್ಲಿ ಮೀಸಲು ಪಟ್ಟಿ ಸಲ್ಲಿಕೆ ಮಾಡುವಂತೆ ಸೂಚಿಸಿದೆ.

ಕಾಲಾವಕಾಶದಲ್ಲಿ ಈಗಾಗಲೇ ನಾಲ್ಕು ದಿನ ಕಳೆದಿದೆ. ಉಳಿದ ಮೂರು ದಿನದಲ್ಲಿ ಪಟ್ಟಿ ಸಲ್ಲಿಕೆಯಾಗ ಬೇಕು. ಆಕ್ಷೇಪಣೆ ನಂತರ ಚುನಾವಣೆ ಘೋಷಣೆ ಪ್ರಕ್ರಿಯೆ ಶುರುವಾಗ ಬೇಕಿದೆ. ಆದರೆ, ಮೀಸಲು ಪಟ್ಟಿ ಸಲ್ಲಿಕೆಯಲ್ಲಿಯೂ ಕಡ್ಡಿ ಆಡಿಸುವ
ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಹೇಗಾದರೂ ಮಾಡಿ, ಚುನಾವಣೆ ಮುಂದೂಡುವುದು ಅವರ ಉದ್ದೇಶ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗುತ್ತದೆ ಎಂಬ ಉದ್ದೇಶಕ್ಕೆ ಇಂತಹ ಪ್ರಯತ್ನ ನಡೆಯುತ್ತಿದೆ.

ಕಾನೂನಿನ ಪ್ರಕಾರ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸರಕಾರ ಪ್ರಯತ್ನಿಸಬೇಕು. ಈಗಲಾದರೂ ಸರಕಾರ ಚುನಾವಣೆಗೆ ಮುಂದಾಗಲಿ, ಇಲ್ಲವಾದಲ್ಲಿ ಸುಪ್ರಿಂನಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಅಪಾಯ ಇದೆ. ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕ ರಾಜ್ಯಕ್ಕೆ ಇದು ಶೋಭೆಯಲ್ಲ.