Thursday, 12th December 2024

ಸಂಸ್ಥೆಗಳ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ

rss

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕುರಿತಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಮಾಡಿರುವ ಆರೋಪ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಆರ್‌ಎಸ್‌ಎಸ್‌ನ ನಾಲ್ಕು ಸಾವಿರ ಜನ ಐಎಎಸ್, ಐಪಿಎಸ್‌ಗನ್ನು ಟ್ರೇನ್ ಮಾಡಿದೆ ಎನ್ನುವ ಮಾತು, ವಿವಾದಕ್ಕೆ ಕಾರಣವಾಗಿದೆ. ಕೇವಲ ಇಲ್ಲಿಗೆ ಈ ಹೇಳಿಕೆ ನಿಲ್ಲದೇ, ಮುಂದುವರಿದು, ಆರ್‌ಎಸ್‌ಎಸ್‌ನಲ್ಲಿ ಅನೈತಿಕ ತರಬೇತಿ ನೀಡಲಾಗುತ್ತಿದೆಯೇ ಎನ್ನುವ ಆರೋಪ ಇದೀಗ ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ. ಆದರೆ ೯೫ ವರ್ಷಗಳ ಇತಿಹಾಸ ಇರುವ ಆರ್‌ಎಸ್‌ಎಸ್ ದೇಶ ಸೇವೆಗಾಗಿ ಹಲವು ಸೇವೆಯನ್ನು ಮಾಡಿದೆ. ಇನ್ನು ಬಡಕುಟುಂಬದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಹಾಗೂ ಉತ್ತೀರ್ಣರಾಗಲು ಸಹಾಯ ಮಾಡಲು ವಿಶೇಷ ಯೋಜನೆ ಯನ್ನು ರೂಪಿಸಿದೆ.

ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ರಾಜಕೀಯ ಕಾರಣಕ್ಕೆ, ಈ ರೀತಿಯ ಸಂಘಟನೆಗಳಿಗೆ ರಾಜಕೀಯ ನಂಟನ್ನು ಬೆರೆಸುವುದು ಅಥವಾ ರಾಜಕೀಯ ಹೇಳಿಕೆ ನೀಡುವುದಕ್ಕೆ ಇಂತಹ ಸಂಸ್ಥೆಗಳ ಹೆಸರನ್ನು ಬಳಸಿಕೊಳ್ಳುವುದು ಶೋಭೆ ತರುವುದಿಲ್ಲ. ಸಂಘ ಪರಿವಾರ ಪೂರ್ಣಾವಧಿ ಕಾರ್ಯ ಕರ್ತ ಹಾಗೂ ಎಡ ಪಂಥೀಯ ಚಿಂತನೆಯಿರುವ ಕಮ್ಯೂಸ್ಟರ ಪೂರ್ಣಾವಧಿಯವರಾಗಲಿ, ಅವರು ಇಂದಿಗೂ ತಮ್ಮ ತತ್ವ ಸಿದ್ಧಾಂತಕ್ಕೆ ಕಟ್ಟಿಬದ್ಧರಾಗಿದ್ದಾರೆ. ರಾಜಕಾರಣಿಗಳ ರೀತಿ, ಸಮಯಕ್ಕೆ ತಕ್ಕಂತೆ ಬದಲಾಗುವ ಮನಸ್ಥಿತಿಯಲ್ಲಿ ಆ ಪೂರ್ಣಾವಧಿ ಕಾರ್ಯಕರ್ತರು ಇರುವುದಿಲ್ಲ. ಆದ್ದರಿಂದ ಯಾವುದೇ ರಾಜಕೀಯ ಪಕ್ಷವಾಗಲಿ, ನಾಯಕರಾಗಲಿ ಈ ರೀತಿಯ ಸಂಸ್ಥೆಯ ವಿರುದ್ಧ ಮಾತನಾಡುವಾಗ ಎಚ್ಚರವಹಿಸಬೇಕು.

ಯಾವುದೇ ಆಧಾರರಹಿತ ಆರೋಪ ಗಳಿಂದ, ಸಂಸ್ಥೆಗಳಿಗೆ ಆಗುವ ನಷ್ಟಕ್ಕಿಂತ, ಸಂಸ್ಥೆಗಳ ವಿರುದ್ಧ ಆಧಾರ ರಹಿತ ಹೇಳಿಕೆ ನೀಡುವವರ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎನ್ನುವುದನ್ನು ಮನಗಾಣಬೇಕು.