Thursday, 19th September 2024

ಪ್ರತಿಭಟನೆ ವೇಳೆ ಇರಲಿ ಸಂಯಮ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಶಾಂತಿಯುತವಾಗಿ ಆರಂಭಗೊಂಡ ಪ್ರತಿಭಟನೆ ಇದೀಗ ಉಗ್ರ ಸ್ವರೂಪ ಪಡೆದುಕೊಂಡು ಭಾರಿ ವಿವಾದಕ್ಕೆ ಕಾರಣವಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು. ಆಡಳಿತ ನಡೆಸುವವರು ಪ್ರತಿಭಟನೆಗಳನ್ನು ಹತ್ತಿಕುವುದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಈ ವೇಳೆ ಧರಣಿ ನಡೆಸುವವರು ಹಾಗೂ ಆಡಳಿತ ನಡೆಸುವವರು ಇಬ್ಬರೂ ಸಂಯಮ ತೋರಬೇಕು.

ರೈತರು ತಮ್ಮ ಹಕ್ಕುಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆದಾಗ ಆರಂಭದಲ್ಲಿಯೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದ್ದರೆ, ಈ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿರಲಿಲ್ಲ. ಇನ್ನು ರೈತರು ಸಹ ಅಲ್ಲಿ ತಮ್ಮ ಹಕ್ಕು ಪ್ರತಿಪಾದನೆ ಮಾಡಲು ಸೇರಿದ್ದಾಗ ಪೊಲೀಸರ ಮೇಲೆ ವಾಹನ ಹತ್ತಿಸುವುದು, ಹಲ್ಲೆ ನಡೆಸಿರುವ ಪ್ರಕರಣಗಳು ವರದಿಯಾಗಿವೆ. ಇದು ಚಳವಳಿಯ ಹಾದಿ ತಪ್ಪಿಸುವುದಕ್ಕೆ ಹಾಗೂ ಗಮನ ಬೇರೆಡೆ ಸೆಳೆಯಲು ಕಾರಣವಾಗುತ್ತದೆ. ದೇಶದ ಬೆನ್ನೆಲುಬಾಗಿರುವ ರೈತರ ಹಕ್ಕುಗಳಿಗೆ ಏನಾದರೂ ಸಮಸ್ಯೆಯಾದಾಗ ಅದನ್ನು ಪಡೆಯುವುದು ರೈತರ ಹಕ್ಕು.

ಆದರೆ ರೈತರ ಹೆಸರಲ್ಲಿ ಸಮಾಜ ಘಾತಕ ಶಕ್ತಿಗಳು ನಡೆಸುವ ವಿಧ್ವಂಸ ಕೃತ್ಯಗಳನ್ನು ಒಪ್ಪಲು ಸಾಧ್ಯವಿಲ್ಲ. ದೆಹಲಿಯಲ್ಲಿಯೂ ಇದೇ ಆಗಿದ್ದು, ರೈತರ ಹೆಸರಲ್ಲಿ ಕೆಲವರು ಗಲಾಟೆ ಮಾಡಲು ಮುಂದಾಗಿದ್ದಾರೆ. ಅದನ್ನು ತಡೆಯಲು ಪೊಲೀಸರು ಅನಿವಾರ್ಯ ವಾಗಿ ಲಾಠಿ ಎತ್ತಿದ್ದಾರೆ. ಅಂದ ಮಾತ್ರಕ್ಕೆ ಆಡಳಿತ ನಡೆಸುವವರು ರೈತರ ನಿಯಂತ್ರಣಕ್ಕೆ ದಾಳಿ ಮಾಡಿದ್ದನ್ನು ಒಪ್ಪಲು ಸಾಧ್ಯ ವಿಲ್ಲ. ಇಂತಹ ಸೂಕ್ಷ್ಮ ವಿಚಾರಗಳನ್ನು ರೈತರು ಪ್ರತಿಭಟನೆ ಆರಂಭಿಸಿದಾಗಲೇ ಸ್ಥಳೀಯ ಆಡಳಿತ ಮಂಡಳಿ ಅಥವಾ ರಾಜ್ಯ ಸರಕಾರ ಕೂತು ಸರಿಪಡಿಸಬಹುದಾಗಿತ್ತು. ಆದರೆ ಆರಂಭ ನಿರ್ಲಕ್ಷ್ಯ ಇದೀಗ ಪರಿಸ್ಥಿತಿ ಹತೋಟಿ ತಪ್ಪುವಂತಾಗಿದೆ. ಈಗಲೂ ಕಾಲ ಮುಂಚಿಲ್ಲ. ಸರಕಾರ ಹಾಗೂ ರೈತರು ಮಾತುಕತೆಗೆ ಮುಂದಾಗಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು.

Leave a Reply

Your email address will not be published. Required fields are marked *