ವಿಶ್ವದ ಅತಿದೊಡ್ಡ ಕ್ರೀಡಾಕೂಟ ಎನಿಸಿರುವ ಒಲಿಂಪಿಕ್ಸ್ ಸದ್ಯ ಟೋಕಿಯೊದಲ್ಲಿ ನಡೆಯುತ್ತಿದೆ. ಇದರಲ್ಲಿ ಭಾರತದಿಂದ ನೂರಕ್ಕೂ ಹೆಚ್ಚು ಕ್ರೀಡಾರ್ಥಿಗಳು ಭಾಗವಹಿಸಿದ್ದರೂ, ಭಾರತಕ್ಕೆ ದಕ್ಕಿದ ಪದಕದ ಸಂಖ್ಯೆ ಮಾತ್ರ ಒಂದಕ್ಕಿ ದಾಟಿಲ್ಲ. ಈ ರೀತಿಯಾಗುತ್ತಿರುವುದು ಇದೇ ಮೊದಲಲ್ಲ.
ಪ್ರತಿಬಾರಿಯ ಒಲಿಂಪಿಕ್ಸ್‌ನಲ್ಲಿಯೂ ಭಾರತದ ಕ್ರೀಡಾರ್ಥಿಗಳು ಭಾಗವಹಿಸುವುದೇ ದೊಡ್ಡ ಸಾಧನೆ ಎನ್ನುವಂತಾಗಿದೆ. ಇನ್ನು ಈ ಬಾರಿ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತ ನಾಲ್ಕು ದಶಕದ ಬಳಿಕ ಕಂಚು ಗೆದ್ದಿರುವುದು ಉತ್ತಮ ಸಂಗತಿ. ಇದೇ ರೀತಿ ಬಾಕ್ಸಿಂಗ್, ವೇಟ್‌ಲಿಫ್ಟಿಂಗ್ ಕುಸ್ತಿ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಪದಕದ ಸಾಧನೆ ಮಾಡಿದ್ದಾರೆ. ಆದರೆ ಇನ್ನು ಹೆಚ್ಚಿನ ಪದಕವನ್ನು ಗೆಲ್ಲುವ ಅವಕಾಶ ಭಾರತಕ್ಕಿದ್ದರೂ ಸಾಧ್ಯವಾಗಿಲ್ಲ. ಈ ರೀತಿ ಪದಕದ ಬರ ಎದುರಾಗಲು ಕಾರಣವೇನು ಎನ್ನುವ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ಬಹುಪಾಲು ಕೇಳಿಬರುವ ಒಂದೇ ಆರೋಪ ಎಂದರೆ, ಭಾರತದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹವಿಲ್ಲ.
ಕ್ರೀಡೆ ಎನ್ನುತ್ತಿದ್ದಂತೆ ಕ್ರಿಕೆಟ್ ಎನ್ನುವ ಮನಸ್ಥಿತಿ ಇರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಡಲು ಬೇಕಿರುವ ತರಬೇತಿ, ಸಿದ್ಧತೆ ನಮ್ಮ ಕ್ರೀಡಾಳು ಗಳಿಗೆ ಸಿಗುವುದಿಲ್ಲ. ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಕ್ರೀಡೆ ಯಲ್ಲಿ ಭಾಗವಹಿಸಲು ಹೇಳುವುದು ಸಹ, ಉನ್ನತ್ತ ಶಿಕ್ಷಣದ ಅವಽಯಲ್ಲಿ ಸಿಗುವ ಕ್ರೀಡಾ ಕೋಟಾವನ್ನು ಗಮನ ದಲ್ಲಿರಿಸಿಕೊಂಡು ಎನ್ನುವ ಮಾತುಗಳು ಕೇಳಿ ಬಂದಿದೆ. ಒಂದು ಮಟ್ಟಿಗೆ ಇದು ಸತ್ಯವೂ ಸಹ. ಒಲಿಂಪಿಕ್ಸ್ ಎನ್ನುವ ಕ್ರೀಡಾಕೂಟದಲ್ಲಿ ಭಾಗವಹಿಸು ವವರಿಗೆ ಕೇವಲ ಒಂದೆರಡು ವರ್ಷದ ಪರಿಶ್ರಮದಿಂದ ಸಾಧನೆ ಸಿಗುವುದಲ್ಲ.
ಬದಲಿಗೆ ಹಲವು ವರ್ಷಗಳ ಸಿದ್ಧತೆ, ಮಾನಸಿಕ ಒತ್ತಡ ನಿವಾರಣೆ ಮಾಡುವ ತಾಕತ್ತು ಕ್ರೀಡಾಳುಗಳಲ್ಲಿ ಇರಬೇಕು. ಇದಕ್ಕೆ ಅವರಿಗೆ ನೀಡುವ ತರಬೇತಿ ಮಾತ್ರವಲ್ಲದೇ, ಇಡೀ ದೇಶ ಅವರ ಬೆಂಬಲಕ್ಕೆ ನಿಲ್ಲುವ ಅವಶ್ಯಕತೆ ಇರುತ್ತದೆ. ೨೦೨೦ರ ಟೋಕಿಯೊದಲ್ಲಿ ಪದಕವನ್ನು ಗೆದ್ದಿರುವ ಆಟಗಾರರಿಗೆ ಪ್ರೋತ್ಸಾಹದ ಜತೆಯಲ್ಲಿ ಮುಂದಿನ ಒಲಿಂಪಿಕ್ಸ್‌ಗೆ ಈಗಿನಿಂದಲೇ ತಯಾರಿ ಆರಂಭವಾಗ ಬೇಕಿದೆ.