ದೇಶಾದ್ಯಂತ ಆರು ಹಂತಗಳಲ್ಲಿ ಯಶಸ್ವಿಯಾಗಿ ಚುನಾವಣೆ ನಡೆದಿದ್ದು, ಜೂನ್ ೧ರಂದು ಏಳನೇ ಹಂತದಲ್ಲಿ ಮತದಾನ ಯಶಸ್ವಿಯಾದರೆ ಭಾರತಾ ದ್ಯಂತ ಲೋಕಸಭೆ ಚುನಾವಣೆ ಮುಕ್ತಾಯವಾಗುತ್ತದೆ. ಜೂನ್ ೪ರಂದು ಫಲಿತಾಂಶ ಹೊರಬೀಳಲಿದೆ. ಆದರೆ ಆ ಫಲಿತಾಂಶಕ್ಕೂ ಮುನ್ನ ದೇಶಾದ್ಯಂತ ಬೆಟ್ಟಿಂಗ್ ಭರಾಟೆ ವ್ಯಾಪಕ ಪ್ರಮಾಣದಲ್ಲಿ ನಡೆಯುವುದಂತೂ ಮುಚ್ಚಿಟ್ಟ ಸತ್ಯ.
ಈಗಾಗಲೇ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ಮುಗಿದಾಗ ಯಾವ ಅಭ್ಯರ್ಥಿಗಳು ಗೆಲ್ಲಬಹುದು, ಯಾವ ಅಭ್ಯರ್ಥಿಗಳು ಸೋಲಬಹುದು ಎಂಬ ಲೆಕ್ಕಾಚಾರ ಹಾಕಿ ಲಕ್ಷಾಂತರ ರುಪಾಯಿ ಬೆಟ್ಟಿಂಗ್ ಕಟ್ಟಿದವರು ಅನೇಕರಿದ್ದಾರೆ. ಈ ಬೆಟ್ಟಿಂಗ್ ಭರಾಟೆ ಚುನಾವಣೆಯ ಫಲಿತಾಂಶ ಹೊರಬೀಳು ವವರೆಗೂ ಮತ್ತಷ್ಟು ಹೆಚ್ಚಾಗುವುದನ್ನು ಅಲ್ಲಗಳೆಯುವಂತಿಲ್ಲ. ಇದಕ್ಕಾಗಿ ಈಗಾಗಲೇ ಆನ್‌ಲೈನ್ ಆಪ್‌ಗಳು ಕೂಡ ಹುಟ್ಟಿಕೊಂಡಿದ್ದು, ಮೊಬೈಲ್‌ಗೆ ಕರೆ ಮಾಡಿ ಬೆಟ್ಟಿಂಗ್‌ಗೆ ಹಣ ಹೂಡುವಂತೆ ಕೋರುತ್ತಿದ್ದಾರೆ.
ಹೀಗಾಗಿ ಕೊಟ್ಯಂತರ ರುಪಾಯಿ ಹಣ ಬೆಟ್ಟಿಂಗ್ ಜಾಲವನ್ನು ಸುತ್ತಿಕೊಂಡಿದೆ. ಅತ್ಯಂತ ಒಳ ಒಪ್ಪಂದದಲ್ಲಿ ನಡೆಯುವ ಈ ಬೆಟ್ಟಿಂಗ್ ಪ್ರಕ್ರಿಯೆಯನ್ನು ಪೊಲೀಸರ ಕಣ್ಣು ತಪ್ಪಿಸಿ ಮಾಡಲಾಗುತ್ತಿದೆಯಾದರೂ ಪೊಲೀಸರಿಗೆ ಗೊತ್ತಿಲ್ಲವೇನಲ್ಲ. ಯಾವ ಪಕ್ಷ ಗೆಲ್ಲಬಹುದು ಎಂಬ ಬೆಟ್ಟಿಂಗ್‌ಗೆ ಹೆಚ್ಚು ಪ್ರಾಶಸ್ತ್ಯ ದೊರೆಯದೆ ಅಭ್ಯರ್ಥಿಗಳ ವ್ಯಕ್ತಿಗತ ನಲೆಯ ಮೇಲೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ ಎಂಬ ಸಂಗತಿಯೂ ಗುಪ್ತಚರ ಇಲಾಖೆಗೆ ದೊರೆತಿದೆ. ಲೋಕಸಭೆ ಚುನಾವಣೆಯ ಬೆಟ್ಟಿಂಗ್‌ನಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿರುವ ರೈತರೇ ತೊಡಗಿಸಿಕೊಳ್ಳುತ್ತಿರುವುದು ಆತಂಕದ ಸಂಗತಿ.
ಪ್ರಜಾಪ್ರಭುತ್ವದ ಸೇವಕನ ಆಯ್ಕೆಯ ಪ್ರಕ್ರಿಯೆಯ ಮೇಲೆ ಬೆಟ್ಟಿಂಗ್ ನಡೆಸುವುದು ಅಕ್ಷಮ್ಯವಾದುದು. ಜೂಜಿನಲ್ಲಿ ತೊಡಗಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವುದಾದರೂ ಒಂದು ಪಕ್ಷ ಬಹುಮತ ಪಡೆಯಲೇಬೇಕು, ಮತ್ತೊಂದು ಪಕ್ಷ ಪ್ರತಿಪಕ್ಷದಲ್ಲಿ ಕೂರಲೇಬೇಕು. ಅಲ್ಲದೆ, ಚುನಾವಣೆಯಲ್ಲಿ ಗೆದ್ದವರು ಲೋಕಸಭೆ ಸೇರುತ್ತಾರೆ, ಇಲ್ಲಿ ಬೆಟ್ಟಿಂಗ್‌ನಲ್ಲಿ ಸೋತು ಸಾಲಸೋಲ ಮಾಡಬೇಕಾ ಗುತ್ತದೆ ಎಂಬ ಅರಿವಿರಬೇಕು. ಹಾಗಾಗಿ ಜೀವನಪೂರ್ತಿ ಕಷ್ಟಪಟ್ಟು ದುಡಿದ ಹಣವನ್ನು ಕ್ಷಣಾರ್ಧದಲ್ಲಿ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳಬಾರದು.