Sunday, 15th December 2024

ಜೋಡೋ ಉದ್ದೇಶವೇ ಪ್ರಶ್ನಾರ್ಹ

ಮೊದಲನೇ ‘ಭಾರತ್ ಜೋಡೋ ಯಾತ್ರೆ’ಯಿಂದ ಕಾಂಗ್ರೆಸ್‌ಗೆ ಸಿಕ್ಕಿದೆ ಎನ್ನಲಾಗಿರುವ ಯಶಸ್ಸಿನಿಂದ ಪ್ರೇರಿತರಾದ ಪಕ್ಷದ ಅನಭಿಷಿಕ್ತ ನಾಯಕ ರಾಹುಲ್ ಗಾಂಧಿ ಅವರು ಮತ್ತೊಂದು ‘ಜೋಡೋ ಯಾತ್ರೆ’ ನಡೆಸುತ್ತಿದ್ದಾರೆ. ಈ ಬಾರಿಯ ಯಾತ್ರೆಯ ಮಾರ್ಗ ಲಂಬದ ಬದಲು ಸಮತಲವಾಗಿ ಬದಲಾಗಿದೆ.

ಮೊದಲಿನದ್ದು ಕೆಳಗಿನಿಂದ ಮೇಲೆ ಸಾಗಿದ್ದರೆ, ಈಗ ದೇಶದ ಪೂರ್ವ ಭಾಗದಿಂದ ಪಶ್ಚಿಮದತ್ತ ಸಾಗುತ್ತಿದೆ. ಮಾತ್ರವಲ್ಲ ಯಾತ್ರೆಯ ಹೆಸರು ಮತ್ತು ಶೈಲಿ ಯಲ್ಲೂ ಒಂದಷ್ಟು ಬದಲಾವಣೆ ಮಾಡಲಾಗಿದೆ. ‘ಜೋಡೊ’ದ ಜತೆಗೆ ‘ನ್ಯಾಯ’ವೂ ಸೇರಿದೆ. ಹೊರ ನೋಟಕ್ಕೆ ಯಾತ್ರೆಯ ಉದ್ದೇಶ ದೇಶದಲ್ಲಿನ ನಿರು ದ್ಯೋಗ, ಆರ್ಥಿಕ ಅಸಮಾನತೆ, ಸಾಮಾಜಿಕ ದೌರ್ಜನ್ಯ ಪ್ರಕರಣಗಳಂಥ ಸಮಸ್ಯೆಗಳ ವಿರುದ್ಧದ ಜಾಗೃತಿ ಎನ್ನಲಾಗುತ್ತಿದ್ದರೂ ಇತ್ತೀಚಿನ ದಿನಗಳ ಚುನಾವಣೆಗಳಲ್ಲಿ ನೆಲ ಕಚ್ಚಿರುವ ಕಾಂಗ್ರೆಸ್‌ಗೆ ಪುನರ್‌ಜೀವ ಕಲ್ಪಿಸಿ, ಸಂಘಟಿಸುವುದು ಎಂಬುದು ಸ್ಪಷ್ಟ.

ಆದರೆ, ನಿಜಕ್ಕೂ ಈ ಯಾತ್ರೆ ಚುನಾವಣೆಗಳಲ್ಲಿ ಪಕ್ಷಕ್ಕೆ ಲಾಭ ತಂದುಕೊಡುವುದೇ? ಹಾಗೊಂದೊಮ್ಮೆ ಆಗುವುದೇ ಇದ್ದಿದ್ದರೆ ಮೊದಲ ಯಾತ್ರೆ ಸಾಗಿದ ಕರ್ನಾಟಕ ಮತ್ತು ತೆಲಂಗಾಣ ಬಿಟ್ಟರೆ ಬೇರೆ ಯಾವುದೇ ಇತರ ರಾಜ್ಯಗಳಲ್ಲಿ ಗೆಲುವು ದಕ್ಕಿಲ್ಲ. ಬದಲಾಗಿ ಛತ್ತೀಸ್‌ಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನ ದಲ್ಲಿ ಹೀನಾಯ ಸೋಲು ಕಂಡಿತು. ಇದೀಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಎರಡನೇ ‘ಜೋಡೋ’ ಸಾಗಿದೆ. ಇದರ ಉದ್ದೇಶದ ಈಡೇರಿಕೆಯ ಬಗ್ಗೆಯೂ ಅನುಮಾನಗಳೆದ್ದಿವೆ.

‘ಇಂಡಿಯ’ ಒಕ್ಕೂಟದ ಮೂಲಕ ರಾಜಕೀಯ ಧ್ರುವೀಕರಣಕ್ಕೆ ಕಾಂಗ್ರೆಸ್ ಮುಂದಾಗಿದ್ದರೂ, ಒಕ್ಕೂಟದ ನಾಯಕತ್ವ, ಸ್ಥಾನ ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಸದಸ್ಯ ಪಕ್ಷಗಳಲ್ಲಿ ಒಮ್ಮತ ಮೂಡದಿರುವುದು ಈಗಾಗಲೇ ಸ್ಪಷ್ಟವಾಗಿದೆ. ಒಂದೊಮ್ಮೆ ಜೋಡೋ ಯಾತ್ರೆ ರಾಹುಲ್ ವರ್ಚಸ್ಸನ್ನು ಹೆಚ್ಚಿಸಿರುವುದೇ ಆದಲ್ಲಿ, ಇಂಡಿಯದ ಸದಸ್ಯರಿಂದಲೂ ಯಾತ್ರೆಗೆ ಬೆಂಬಲ ವ್ಯಕ್ತವಾಗಬೇಕಿತ್ತು. ಆದರೆ, ಅದಾಗಿಲ್ಲ. ಅಂದರೆ ರಾಹುಲ್ ನಾಯಕತ್ವ ವನ್ನು ಈಗಲೂ ಬೇರೆ ಪ್ರತಿಪಕ್ಷಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲವೆಂದಾಯಿತು.

ಹೀಗಾಗಿ ಬಿಜೆಪಿ ವಿರುದ್ಧ ಸಂಘಟಿತ ಹೋರಾಟದ ಮೂಲ ಕಾರ್ಯತಂತ್ರ, ಉದ್ದೇಶವೇ ಈಡೇರುವುದು ಅನುಮಾನ.