ಕೇಂದ್ರ ಸರಕಾರ ಈ ವರ್ಷ ಮತ್ತೆ ಮೂವರಿಗೆ ಭಾರತ ರತ್ನ ಘೋಷಣೆ ಮಾಡಿದೆ. ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್, ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರಿಗೆ ಇತ್ತೀಚೆಗಷ್ಟೇ ಭಾರತ ರತ್ನ ಘೋಷಿಸಿದ್ದ ಪ್ರಧಾನಿ ಮೋದಿ, ಇದೀಗ ದಿವಂಗತ ಪ್ರಧಾನಿ ಗಳಾದ ಪಿ.ವಿ.ನರಸಿಂಹರಾವ್, ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದ್ದಾರೆ.
ಇವರೆಲ್ಲರೂ ಅರ್ಹರೇ, ಇವರಿಗೆ ಯಾವತ್ತೋ ಪ್ರಶಸ್ತಿ ಸಲ್ಲಬೇಕಿತ್ತು ಎಂಬುದು ನಿಜವಾದರೂ, ಈ ಮೂಲಕ ಚುನಾವಣೆ ಹೊಸ್ತಿಲಲ್ಲಿ ಭಾರಿ ತಂತ್ರಗಾರಿಕೆ ಮೆರೆದಿರುವುದು ಸ್ಪಷ್ಟ. ಕರ್ಪೂರಿ ಠಾಕೂರ್ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದವರು. ಬಿಹಾರ ಸಿಎಂ ನಿತೀಶರನ್ನು ಎನ್‌ಡಿಎ ತೆಕ್ಕೆಗೆ ಸೆಳೆಯುವ ಹಂತದಲ್ಲೇ ಕರ್ಪೂರಿಯವರಿಗೆ ಗೌರವ ಸಲ್ಲಿಸಿ, ಬಿಹಾರಿಗಳ ಹಾಗೂ ಹಿಂದುಳಿದವರ ಮತ ಸೆಳೆಯುವ ತಂತ್ರ ರೂಪಿಸಲಾಗಿದೆ. ಇನ್ನು ಚರಣ್‌ಸಿಂಗ್‌ಗೆ ಪ್ರಶಸ್ತಿ ಘೋಷಿಸುವ ಹೊತ್ತಿಗೇ, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಚರಣ್‌ಸಿಂಗ್ ಮೊಮ್ಮೊಗ ಜಯಂತ್ ಸಿಂಗ್ ಅವರ ಆರ್‌ಎಲ್‌ಡಿ ಮೈತ್ರಿ ಒಪ್ಪಂದಕ್ಕೆ ಬಂದಿವೆ. ಈ ಮೂಲಕ ಬಿಜೆಪಿ ‘ಇಂಡಿಯ’ ಮೈತ್ರಿಕೂಟದಲ್ಲಿದ್ದ ಇನ್ನೊಂದು ಪಕ್ಷವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅಂತೆಯೇ, ಕಾಂಗ್ರೆಸ್‌ನಿಂದ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ಘೋಷಣೆ ಮಾಡಿ, ಆಂಧ್ರ ಮತ್ತು ತೆಲಂಗಾಣದಲ್ಲಿ ನೆಲೆಯೂರುವ ಬಿಜೆಪಿ ಯತ್ನಕ್ಕೆ ಇಂಬು ನೀಡಲಾಗಿದೆ. ಮೊನ್ನೆಯಷ್ಟೇ ಚಂದ್ರಬಾಬು ನಾಯ್ಡು ಅವರು, ದೆಹಲಿಯಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಬಂದಿದ್ದರು. ಇದರ ನಡುವೆಯೇ, ಶುಕ್ರವಾರ ಆಂಧ್ರ ಸಿಎಂ ಜಗನ್‌ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಯವರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ, ಪ್ರಾದೇಶಿಕ ಮೈತ್ರಿ ಮೂಲಕ ಬಿಜೆಪಿಗೆ ಅಡಿಪಾಯಕ್ಕೆ ಯೋಜಿಸಲಾಗಿದೆ.
ಅತ್ತ ತಮಿಳುನಾಡಿಗೆ ಸೇರಿದ ಎಂ.ಎಸ್.ಸ್ವಾಮಿನಾಥನ್ ಅವರಿಗೂ ಭಾರತ ರತ್ನ ಘೋಷಿಸಿ, ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬರುವ, ಮಾಜಿ ಐಪಿಎಸ್ ಅಣ್ಣಾಮಲೈ ನೇತೃತ್ವದ ಬಿಜೆಪಿಗೆ ಬಲ ತುಂಬಿರುವುದು ಸ್ಪಷ್ಟ.