Saturday, 27th July 2024

ಬಿಜೆಪಿ ಭೀಷ್ಮನಿಗೆ ಸಂದ ಗೌರವ

ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಡ್ವಾಣಿ ಅವರ ನಿವಾಸದಲ್ಲಿಯೇ ಪ್ರದಾನಿಸಿ ದ್ದಾರೆ. ಇದು ದೇಶದ ರಾಜಕೀಯ ವಲಯದ ಪಾಲಿಗೆ, ಅದರಲ್ಲೂ ನಿರ್ದಿಷ್ಟವಾಗಿ ಭಾರತೀಯ ಜನತಾಪಕ್ಷದ ಹಾಗೂ ಆಡ್ವಾಣಿಯವರ ಅಭಿಮಾನಿಗಳ ಪಾಲಿಗೆ ಸಂತಸದ ಕ್ಷಣ ಎಂದರೆ ಅತಿಶಯೋಕ್ತಿಯಾಗಲಾರದು.

ಬಿಜೆಪಿಯು ಈ ಸಲದ ಲೋಕಸಭಾ ಚುನಾವಣೆಯಲ್ಲಿ ೪೦೦ ಸ್ಥಾನಗಳನ್ನು ದಾಟುವ ಸಂಕಲ್ಪವನ್ನು ತಳೆದಿರಬಹುದು ಮತ್ತು ಅದರ ಸಾಕಾರಕ್ಕೆ ವಿವಿಧ ಕಾರ್ಯತಂತ್ರಗಳ ಮೊರೆಹೋಗಿರಬಹುದು. ಆದರೆ ದೇಶದ ಲೋಕಸಭೆಯಲ್ಲಿ ಬಿಜೆಪಿಗೆ ಹೇಳಿಕೊಳ್ಳು ವಷ್ಟು ಸ್ಥಾನ ಸಂಪಾದನೆಯಾಗದ ಕಾಲದಿಂದಲೂ ಪಕ್ಷದ ಸಿದ್ಧಾಂತಗಳ ಜತೆಜತೆಗೇ ಹೆಜ್ಜೆಹಾಕಿ, ಮತ್ತೊರ್ವ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿಯವರ ಹೆಗಲಿಗೆ ಹೆಗಲು ಕೊಟ್ಟು, ಪಕ್ಷವನ್ನು ಜನರು ತೆರೆದ ತೋಳುಗಳಿಂದ ಸ್ವಾಗತಿಸುವಂತೆ ಸಜ್ಜು ಗೊಳಿಸುವಲ್ಲಿ ಆಡ್ವಾಣಿಯವರ ಮಹಾನ್ ಯೋಗದಾನವಿದೆ.

ರಥಯಾತ್ರೆಯ ಮೂಲದ ದೇಶದ ಉದ್ದಗಲಕ್ಕೂ ಸಂಚರಿಸಿ ಪಕ್ಷದೆಡೆಗೆ ಜನರ ಪ್ರೀತಿ-ವಿಶ್ವಾಸಗಳು ಹರಿಯುವಂತೆ ಮಾಡಿದ ಜನಪ್ರಿಯ ನಾಯಕ ಆಡ್ವಾಣಿ. ಆ ದೃಷ್ಟಿಯಿಂದ ನೋಡಿದರೆ ಅವರದು ದಣಿವರಿಯದ ದುಡಿಮೆಯೇ. ‘ಹೊಸನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋಯಿತು’ ಎಂಬ ಮಾತಿನಂತೆ, ಪಕ್ಷದ ವಿವಿಧ ಸ್ತರಗಳಲ್ಲಿ ಕಂಡುಬಂದ ಬೆಳವಣಿಗೆಗಳು ಮತ್ತು ಬದಲಾವಣೆಗಳಿಂದಾಗಿ, ವಯಸ್ಸಿನ ಕಾರಣದಿಂದಾಗಿ ಆಡ್ವಾಣಿಯವರು ರಾಜಕೀಯದಲ್ಲಿ ಅಪ್ರಸ್ತುತರಾಗಿ ನೇಪಥ್ಯಕ್ಕೆ ಸರಿಯು ವಂತಾಯಿತು. ಆದರೆ ದೇಶದ ಮೂಲೆಮೂಲೆಗೆ ಪಕ್ಷವನ್ನು ಮತ್ತು ಅದರ ಸಿದ್ಧಾಂತವನ್ನು ತಲುಪಿಸುವಲ್ಲಿ ಅಹರ್ನಿಶಿ ದುಡಿದ ಅವರಿಗೆ ದೇಶದ ಪ್ರಧಾನ ಮಂತ್ರಿಯ ಗದ್ದುಗೆ ದಕ್ಕಬೇಕಿತ್ತು.

ಪ್ರಾಯಶಃ ಈ ಕೊರಗು ಅವರ ಮನದ ಮೂಲೆಯಲ್ಲೆಲ್ಲೋ ಸಣ್ಣಗೆ ಕೊರೆಯುತ್ತಿರಬಹುದು, ಹಾಗೆಯೇ ಅವರ ಅಭಿಮಾನಿ ಗಳಿಗೂ. ಸಾಮರ್ಥ್ಯ ಮತ್ತು ಯೋಗ್ಯತೆಯಿದ್ದರೂ ಕೆಲವೊಬ್ಬರಿಗೆ ದಕ್ಕಬೇಕಾದ್ದು ದಕ್ಕದಂತಾಗುವುದಿದೆ. ಅಂಥವರಲ್ಲಿ ಆಡ್ವಾಣಿ ಕೂಡ ಒಬ್ಬರು ಎಂಬುದನ್ನು ಮರೆಯದಿರೋಣ.

Leave a Reply

Your email address will not be published. Required fields are marked *

error: Content is protected !!