Thursday, 12th December 2024

ಬಿಲ್‌ಬೋರ್ಡ್‌ಗಳ ಬಗ್ಗೆ ಎಚ್ಚರ ಇರಲಿ

ಮಹಾರಾಷ್ಟ್ರ ರಾಜಧಾನಿ, ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಸೋಮವಾರ ಸುರಿದ ಬಿರುಗಾಳಿ ಮಳೆಯಿಂದಾಗಿ ಬಿಲ್‌ಬೋರ್ಡ್‌ವೊಂದು ಬಿದ್ದು ೧೪ ಮಂದಿ ಸಾವಿಗೆ ಕಾರಣವಾಗಿದೆ. ಮಧ್ಯಾಹ್ನ ದಿಢೀರನೇ ಧೂಳಿನಿಂದ ಕೂಡಿದ ಬಿರುಗಾಳಿಯಿಂದ ಆರಂಭವಾದ ಮಳೆಯು ಅಪಾರ ಪ್ರಮಾಣದ ಹಾನಿ ಸೃಷ್ಟಿಸಿದೆ. ಮುಂಬೈನಲ್ಲಿ ಇದು ಮೊದಲ ಮಳೆಯಾಗಿದ್ದು, ಇಡೀ ನಗರವನ್ನೇ ಆತಂಕಕ್ಕೆ ದೂಡಿದ್ದು ಸುಳ್ಳಲ್ಲ.

ಇದರ ಮಧ್ಯೆಯೇ, ಘಾಟ್ ಕೋಪರ್ ಎಂಬ ಪ್ರದೇಶದಲ್ಲಿ ಅತ್ಯಂತ ದೊಡ್ಡ ಬಿಲ್‌ಬೋರ್ಡ್ ಬಿದ್ದು, ೧೪ ಮಂದಿ ಸಾವು, ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಬಿಲ್‌ಬೋರ್ಡ್‌ಗಳನ್ನು ಅತ್ಯಂತ ಎಚ್ಚರಿಕೆಯಲ್ಲೇ ನಿರ್ಮಾಣ ಮಾಡಲಾಗಿರುತ್ತದೆ. ಇವು ಎಂಥದ್ದೇ ಬಿರುಗಾಳಿಯನ್ನೂ ತಡೆಯಬಹುದಾದ ಸಾಮರ್ಥ್ಯ ಹೊಂದಿರುತ್ತವೆ. ಆದರೆ, ಮುಂಬೈನಲ್ಲಿ ಈ ಬಿಲ್‌ಬೋರ್ಡ್ ಹೇಗೆ ಬಿತ್ತು ಎಂಬುದೇ ಸಂಶಯಕ್ಕೆ ಕಾರಣವಾಗಿದೆ. ವಿಚಿತ್ರವೆಂದರೆ, ಈ ಬಿಲ್‌ಬೋರ್ಡ್‌ನ ಮಾಲೀಕನ ವಿರುದ್ಧ ಅಕ್ರಮವಾಗಿ ಬಿಲ್‌ಬೋರ್ಡ್ ಅಳವಡಿಸಿರುವ ೨೧ ಪ್ರಕರಣ ಗಳಿವೆ.

ಆದರೂ, ವ್ಯವಸ್ಥೆಯ ಲೋಪದಿಂದ ಈತ ಬೇರೆ ಬೇರೆ ಪ್ರದೇಶಗಳಲ್ಲಿ ಇಂಥ ಬಿಲ್‌ಬೋರ್ಡ್‌ಗಳನ್ನು ಹಾಕಿಕೊಂಡೇ ಬಂದಿದ್ದಾನೆ. ಈಗ ಈತನ ತಪ್ಪಿಗೆ ಏನೂ ಅರಿಯದ ೧೪ ಮಂದಿ ಪ್ರಾಣ ತೆತ್ತಿದ್ದಾರೆ. ಒಂದು ಲೆಕ್ಕಾಚಾರದಲ್ಲಿ ನೋಡುವುದಾದರೆ ಇದಕ್ಕೆ ಮುಂಬೈನ ಮಹಾನಗರ ಪಾಲಿಕೆಯೇ ಕಾರಣ ಎಂದು ಹೇಳಬೇಕಾಗುತ್ತದೆ. ಇದು ಕೇವಲ ಮುಂಬೈನಂಥ ನಗರಗಳಿಗೆ ಮಾತ್ರ ಸೀಮಿತವಾಗಲ್ಲ. ಇಂಥ ಬಿಲ್‌ಬೋರ್ಡ್‌ಗಳು ಎಲ್ಲ ನಗರಗಳಲ್ಲೂ ಕಾಣಿಸುತ್ತವೆ. ಬೆಂಗಳೂರಿನಂಥ ಮಹಾನಗರಗಳಲ್ಲಿಯೂ ಜಾಹೀರಾತು ನೀಡುವ ಉದ್ದೇಶದಿಂದ ಬಿಲ್‌ಬೋರ್ಡ್‌ಗಳನ್ನು ಹಾಕಲಾಗಿರುತ್ತದೆ.

ಮುಂಬೈನಲ್ಲಿನ ಪ್ರಕರಣವನ್ನು ಮುಂದಿಟ್ಟುಕೊಂಡು ಇಲ್ಲಿಯೂ ಮಹಾನಗರ ಪಾಲಿಕೆ ಅದಿಕಾರಿಗಳು ಬಿಲ್‌ಬೋರ್ಡ್‌ಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಬೇಕು. ಯಾರಾದರೂ ಅಕ್ರಮವಾಗಿ ಅಳವಡಿಕೆ ಮಾಡಿದ್ದರೆ ಅಂಥವುಗಳನ್ನು ತೆರವು ಮಾಡುವ ಕೆಲಸ ಮಾಡಬೇಕು. ಈಗಷ್ಟೇ ಮಳೆಗಾಲ ಆರಂಭ ವಾಗಿದ್ದು, ಬೆಂಗಳೂರಿನಲ್ಲೂ ಗಾಳಿ ಮಳೆ ಹೆಚ್ಚಾಗಿದೆ. ಎಲ್ಲಿಯೂ ಮಳೆ ಸಂಬಂಽ ಅನಾಹುತಗಳು ಆಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾ ನಗರ ಪಾಲಿಕೆ ಎಚ್ಚರಿಕೆ ವಹಿಸಬೇಕು. ಜತೆಗೆ, ಮಳೆಯಿಂದಾಗಿ ಮರಗಳು ಬೀಳುವುದು ಸಾಮಾನ್ಯವಾಗಿದ್ದು ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಬೇಕು. ರಸ್ತೆಯತ್ತ ಹೆಚ್ಚು ಪಾಲಿರುವ ಅಥವಾ ಬೀಳಬಹುದಾದ ಮರಗಳ ತೆರವು ಮಾಡುವತ್ತಲೂ ಚಿಂತನೆ ನಡೆಸಬೇಕು.