Saturday, 14th December 2024

ಹಕ್ಕಿಜ್ವರ: ಇರಲಿ ಎಚ್ಚರ

ರಾಜ್ಯವನ್ನು ರಾಷ್ಟ್ರದಲ್ಲಿಯೇ ಮಾದರಿ ರಾಜ್ಯವನ್ನಾಗಿಸಲಾಗುವುದು ಎಂಬುದು ಮುಖ್ಯಮಂತ್ರಿಗಳ ಭರವಸೆ. ಆದರೆ ನಿರೀಕ್ಷಿತ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೋವಿಡ್, ಪ್ರವಾಹ, ಅತಿವೃಷ್ಟಿ, ಆರ್ಥಿಕ ಹಿಂಜರಿತಗಳು ಅಡ್ಡಿಯಾಗಿವೆ.

ಆದರೂ ಕರ್ನಾಟಕ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿರುವುದು ಉತ್ತಮ ಬೆಳವಣಿಗೆ. ೨೦೧೮ರ ನೀತಿ ಆಯೋಗದ ಶ್ರೇಯಾಂಕದ ಪ್ರಕಾರ ಕೇರಳ, ತಮಿಳುನಾಡು ಹೊರತುಪಡಿಸಿದರೆ ಅತ್ಯುತ್ತಮ ಆರೋಗ್ಯ ಸೇವೆ
ನೀಡುವ ರಾಜ್ಯ ಕರ್ನಾಟಕ ಎನ್ನಲಾಗುತ್ತದೆ. ಆದರೆ ಪ್ರಾದೇಶಿಕವಾಗಿ ಹಾಗೂ ಸಮೀಪದ ರಾಜ್ಯಗಳಿಂದ ಅಗಾಗ್ಗೆ ಹರಡುವ ಸೋಂಕುಗಳು ರಾಜ್ಯವನ್ನು ಆತಂಕಕ್ಕೆ ಸಾಗುತ್ತಲೇ ಸಾಗಿದೆ.

ಕಳೆದ ವರ್ಷ ಕೇರಳದಲ್ಲಿ ಕಾಣಿಸಿಕೊಂಡಿದ್ದ ಇಲಿಜ್ವರ (ನಿಫಾ ಜ್ವರ) ರಾಜ್ಯಕ್ಕೂ ಹರಡಿತ್ತು. ೧೧೦ ಡಿಗ್ರಿಯವರೆಗೆ ಸುಡುವ ಜ್ವರ, ಮಾಂಸಖಂಡಗಳಲ್ಲಿ ನೋವು, ಅತಿಯಾದ ತಲೆನೋವು, ಚರ್ಮರೋಗ ಸೇರಿದಂತೆ ಇತರ ಲಕ್ಷಣಗಳು ಕಾಣಿಸಿಕೊಂಡಿದ್ದಲ್ಲದೆ ನಲವತ್ತಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಇದೀಗ ಕೇರಳದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದರಿಂದ ರಾಜ್ಯಕ್ಕೂ ಸೋಂಕು
ಹರಡಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇದೇ ವೇಳೆ ಕೇರಳ ಮಾತ್ರವಲ್ಲದೆ ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶಗಳಲ್ಲಿಯೂ ಹಕ್ಕಿಜ್ವರ ಕಾಣಿಸಿಕೊಂಡು
ಬಹಳಷ್ಟು ಪಕ್ಷಿಗಳು ಮತಪಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಟ್ಟೆಚ್ಚರವಹಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ವ್ಯಾಪ್ತಿಯಲ್ಲಿ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ರೀತಿ ಹಲವು ಆರೋಗ್ಯ ಸಮಸ್ಯೆಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಜಾಗತಿಕವಾಗಿ ಆತಂಕ ಸೃಷ್ಟಿಸಿದ ಕರೋನಾದಂತೆಯೇ ಅಗಾಗ್ಗೆ ಪ್ರಾದೇಶಿಕವಾಗಿ ಸಮಸ್ಯೆ ಸೃಷ್ಟಿಸುತ್ತಿರುವ ಇಲಿಜ್ವರ, ಹಕ್ಕಿಜ್ವರ, ಮಂಗನ ಕಾಯಿಲೆಗಳಂಥ ಸಮಸ್ಯೆಗಳು ಎದುರಾದರೂ ಅವುಗಳೆಲ್ಲವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಸಾಗುತ್ತಿರುವ ರಾಜ್ಯದ ಆರೋಗ್ಯ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ.