ಪ್ರಸ್ತುತ ಭಾರಿ ಚರ್ಚೆಯಲ್ಲಿರುವ ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ನಡುವೆ ದಿನೇ ದಿನೆ ನಡೆಯುತ್ತಿರುವ ವಾಕ್ಸಮರ ತಾರಕಕ್ಕೇರಿದೆ. ವಸೂಲಿ ರಾಜ, ಬಿಟ್ ಕಾಯಿನ್ ರಾಜ, ಬಿಟ್ ಕಾಯಿನ್ ಕಿಂಗ್ ಎಂಬ ಬಿರುದಾವಲಿಗಳು ಹುಟ್ಟಿಕೊಂಡಿವೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೆಣ್ಣೋ ಗಂಡೋ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ನಾಯಕರು ಪ್ರತಾಪ್ ಸಿಂಹ ವಿರುದ್ಧ ತಿರುಗಿ ಬಿದ್ದಿದ್ದಾರೆ. ಎರಡೂ ಪಕ್ಷದವರು ಪರಸ್ಪರ ಕೆಸರೆರಚಾಟ ಮಾಡುವ ಮೂಲಕ ಬಿಟ್ ಕಾಯಿನ್ ಪ್ರಕರಣವನ್ನು ದಾರಿ ತಪ್ಪಿಸುತ್ತಿರುವುದಂತೂ ನಿಜ. ಅಷ್ಟಕ್ಕೂ ಬಿಟ್ ಕಾಯಿನ್ ಪ್ರಕರಣದಲ್ಲಿ ಇವರ‍್ಯಾರಿಗೂ ನಷ್ಟವಾಗಿಲ್ಲ. ಹ್ಯಾಕರ್ ಶ್ರೀಕಿಯಿಂದ ಸರಕಾರ ಮತ್ತು ಸಾರ್ವಜನಿಕರಿಗೆ ನಷ್ಟ ಆಗಿದೆ.
ಆದರೆ ಯಾರೊಬ್ಬರೂ ಆದ ನಷ್ಟಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಪರಸ್ಪರ ವಾಕ್ಸಮರ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದ. ರಾಜಕೀಯ ಸವಾಲುಗಳನ್ನು ಘನತೆಯಿಂದ ಎದುರಿಸುವ ಪರಿಪಾಠ ರಾಜ್ಯದಲ್ಲಿ ಮಾಯವಾಗುತ್ತಿದೆ ಎಂಬುದಕ್ಕೆ ಈ ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ರಾಜಕಾರಣಿಗಳು ಮಾಡುತ್ತಿರುವ ಆರೋಪ ಪತ್ಯಾರೋಪಗಳೇ ಸಾಕ್ಷಿ. ಮುಂದಿನ ಪೀಳಿಗೆಗೆ ಮಾದರಿ ರಾಜಕಾರಣಿಗಳಾಗಬೇಕಾದ ಪ್ರಿಯಾಂಕ್ ಖರ್ಗೆ, ಪ್ರತಾಪ್ ಸಿಂಹ ಅವರಂಥ ಯುವ ಜನ ಪ್ರತಿ ನಿಧಿಗಳು ಬೇಕಾಬಿಟ್ಟಿಯಾಗಿ ಹೀಗೆ ತಮ್ಮ ನಾಲಗೆ ಹರಿಬಿಡುವುದು ಎಷ್ಟು ಸರಿ ಎಂಬುದನ್ನು ಪರಾಮರ್ಶಿಸಬೇಕಿದೆ.
ಮತ್ತೊಂದೆಡೆ, ಆರೋಪಿ ಶ್ರೀಕೃಷ್ಣನನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಇದರಿಂದ ರಾಜ್ಯದ ರಾಜಕೀಯ ವ್ಯವಸ್ಥೆ ಎಷ್ಟು ಅಧೋಗತಿಗೆ ಇಳಿದಿದೆ ಎಂದು ಸಾಮಾನ್ಯರಿಗೂ ತಿಳಿಯುತ್ತಿದೆ. ಶ್ರೀಕೃಷ್ಣನ ಜೀವಕ್ಕೆ ಆಪತ್ತು ಇರುವುದರಿಂದ ಆತನಿಗೆ ಭದ್ರತೆ ಒದಗಿಸಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿರುವುದು ವಿಪರ್ಯಾಸ. ವಂಚನೆ ಆರೋಪ ಹೊತ್ತವರಿಗೆ ಭದ್ರತೆ ಒದಗಿಸುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆಯಲ್ಲವೇ? ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಜವಾಬ್ದಾರಿ ಮೆರೆಯಬೇಕು. ಆ ಮೂಲಕ ಅಪರಾಧ ಕೃತ್ಯಗಳಿಗೆ ಕರ್ನಾಟಕದಲ್ಲಿ ಸ್ಥಾನ ಇಲ್ಲ ಎಂಬ ಸಂದೇಶವನ್ನು ದೇಶಕ್ಕೇ ರವಾನಿಸಬೇಕು. ಇಲ್ಲವಾದಲ್ಲಿ ಸೈಬರ್ ಕೃತ್ಯಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗಲು ರಾಜಕಾರಣಿಗಳೇ ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಎಂಬ ಎಚ್ಚರಿಕೆ ಇರಲಿ.