ಉಡುಪಿಯ ಜಾತ್ರೆಯೊಂದರಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಹಾಕಿರುವ ಕೆಟ್ಟ ಘಟನೆ ಸಾಂಕ್ರಾಮಿಕದ ರೀತಿ ರಾಜ್ಯದ ಎಲ್ಲ ಕಡೆಗೂ ವ್ಯಾಪಿಸುತ್ತಿದೆ. ಮುಸ್ಲಿಮರಲ್ಲಿ ಹೆಚ್ಚಿನವರು ವ್ಯಾಪಾರವನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ.
ಆ ಸಮುದಾಯದಲ್ಲಿ ಸರಕಾರಿ ನೌಕರಿಯಲ್ಲಿ ಇರುವವರು ಹಾಗೂ ಭೂ ಒಡೆತನ ಹೊಂದಿ ರುವವರು ಕಡಿಮೆ. ಹೀಗಿರುವಾಗ, ಜೀವನಾ ಧಾರವಾದ ವ್ಯಾಪಾರ ವೃತ್ತಿಗೆ ನಿರ್ಬಂಧ ಹೇರುವುದು ಒಂದು ರೀತಿಯಲ್ಲಿ ಅವರ ಅನ್ನವನ್ನು ಕಸಿದುಕೊಂಡಂತೆ ಅಲ್ಲವೇ? ನಿರ್ಬಂಧ ಹೇರುವವರು ಈ ಬಗ್ಗೆ ಮಾನವೀಯತೆಯಿಂದ ವಿಚಾರ ಮಾಡಬೇಕು. ಈ ರೀತಿ ಒಂದು ಸಮುದಾಯವನ್ನು ಹೊರಗಿಡುವ ಬೆಳವಣಿಗೆಯು ಸಮಾಜದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಸೂಚನೆಯಲ್ಲ. ಈ ಬಗೆಯ ಭೇದಭಾವದ ನಡೆ ಜನರಲ್ಲಿ ಬಿರುಕು ಮೂಡಿಸುತ್ತದೆ. ಸಮಾಜದಲ್ಲಿ ಶಾಂತಿ ಕದಡಲು ಕಾರಣವಾಗುತ್ತದೆ.
ದೇಗುಲದ ಆಡಳಿತ ಮಂಡಳಿಯವರು ಧರ್ಮಭೇದ ಮಾಡಬಾರದು. ಶಾಂತಿ- ಸುವ್ಯ ವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಜಾತ್ರೆ ವೇಳೆ ವ್ಯವಸ್ಥಾಪನಾ ಸಮಿತಿ ಯವರೇ ಅಂಗಡಿಗಳನ್ನು ಗುತ್ತಿಗೆ ಆಧಾರದಲ್ಲಿ ನೀಡುತ್ತಾರೆ. ಹೀಗಾಗಿ, ಇದು ನೇರವಾಗಿ ಸರಕಾರದ ವ್ಯಾಪ್ತಿಗೆ ಬರುವ ವಿಷಯವಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದು ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ವಿಚಾರ. ಈ ರೋಗಕ್ಕೆ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಇದನ್ನೂ ಚುನಾ ವಣೆಯ ಅಸ್ತ್ರವಾಗಿ ಬಳಸಿಕೊಂಡು ಆಟವಾಡಹೋದರೆ ಇದು ದೇಶದ ವಿದೇಶಾಂಗ ನೀತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ತರ್ಕ, ಕಾನೂನನ್ನು ಮೀರಿದ್ದು ಮಾನವೀಯತೆ. ಈ ನೆಲೆಯಿಂದ ನೋಡಿದರೆ ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳು ನಾಗರಿಕ ಸಮಾಜಕ್ಕೆ ಶೋಭೆ ತರುವಂಥದ್ದಲ್ಲ. ಮುಖ್ಯಮಂತ್ರಿಯವರೇ ಮೊದಲು ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕವನ್ನು ನಾಡಗೀತೆಯ ಆಶಯದಂತೆ ಸಂರಕ್ಷಿಸಿ. ಇದರಲ್ಲಿ ಎಲ್ಲರ ಹಿತ ಅಡಗಿದೆ.
ರಾಜ್ಯದಲ್ಲಿ ನಡೆಯುವ ಜಾತ್ರೆ, ಉರುಸ್‌ಗಳು ಸರ್ವ ಜನಾಂಗದ ಆಚರಣೆಗಳಾಗಿವೆ. ಈ ಆಚರಣೆಗಳಿಗೆ ಭಂಗ ತರುವವರ ವಿರುದ್ಧ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಶಾಂತಿ, ಸುವ್ಯವಸ್ಥೆ ಪಾಲನೆ ಆಗುವಂತೆ ನೋಡಿಕೊಳ್ಳಬೇಕಿದೆ.