Sunday, 15th December 2024

ಶಿಥಿಲಾವಸ್ಥೆ ಕಟ್ಟಡ: ಸಮೀಕ್ಷೆ ಸಫಲವಾಗಲಿ

ಸೆ. 27ರಂದು ಬೆಂಗಳೂರಿನ ಲಕ್ಕಸಂದ್ರದಲ್ಲಿ ಶಿಥಿಲಗೊಂಡಿದ್ದ ಬಹುಮಹಡಿ ಕಟ್ಟಡವೊಂದು ಕುಸಿದ ಮರುದಿನವೇ ಬಮೂಲ ಆವರಣದಲ್ಲಿದ್ದ ಎರಡು ಅಂತಸ್ತು ಗಳ ಕಟ್ಟಡ ಭಾಗಶಃ ಕುಸಿದವು. ಬೈಯಪ್ಪನಹಳ್ಳಿಹಳ್ಳಿ ವಾರ್ಡ್‌ನ ಕಸ್ತೂರಿ ನಗರದಲ್ಲಿ ಅ.7ರಂದು ಕುಸಿಯಿತು.

ಈ ಕಟ್ಟಡಗಳಲ್ಲಿ ವಾಸವಿದ್ದವರನ್ನು ಮೊದಲೇ ತೆರವುಗೊಳಿಸಿದ್ದರಿಂದ ದುರಂತ ಸಂಭವಿಸುವುದು ತಪ್ಪಿದೆ. ಆದರೂ ಅಕ್ಕಪಕ್ಕದ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಬೆಂಗಳೂರಿನಲ್ಲಿ ಇಂತಹ ಅವಘಡಗಳು ಇದೇ ಮೊದಲಲ್ಲ. ಶಿಥಿಲಗೊಂಡ ಕಟ್ಟಡಗಳು ಕುಸಿದ ಅನೇಕ ಪ್ರಕರಣಗಳು ಈ ಹಿಂದೆಯೂ ನಡೆದಿ ದ್ದವು.

2019ರಲ್ಲಿ ಪುಟ್ಟೇನಹಳ್ಳಿಯಲ್ಲಿ ಶಿಥಿಲಗೊಂಡ ಕಟ್ಟಡವೊಂದು ಕುಸಿದಾಗ ಬಿಬಿಎಂಪಿ ಪ್ರತಿ ವಾರ್ಡ್‌ನಲ್ಲಿರುವ ವಾಸಯೋಗ್ಯವಲ್ಲದ ಕಟ್ಟಡಗಳ ಸಮೀಕ್ಷೆ ಕೈಗೊಂಡಿತ್ತು. ಇಂತಹ 185 ಕಟ್ಟಡಗಳನ್ನು ಗುರುತಿಸಿದ್ದ ಬಿಬಿಎಂಪಿ, ಅವುಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಇವುಗಳಲ್ಲಿ ತೆರವಾ ಗಿದ್ದು 10 ಕಟ್ಟಡಗಳು ಮಾತ್ರ.

ಶಿಥಿಲಗೊಂಡ ಕಟ್ಟಡಗಳನ್ನು ಗುರುತಿಸಿದ ಎರಡು ವರ್ಷಗಳ ಬಳಿಕವೂ ಅವುಗಳನ್ನು ತೆರವುಗೊಳಿಸದಿರು ವುದು ಜನರ ಜೀವಕ್ಕೆ ನಮ್ಮ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಮಹತ್ವ ನೀಡುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಈಗಲೂ ಬಿಬಿಎಂಪಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಸಮೀಕ್ಷೆಯನ್ನು 15 ದಿನದಲ್ಲಿ ಪೂರ್ಣ ಗೊಳಿಸುವಂತೆ ಗಡುವನ್ನೂ ನಿಗದಿಪಡಿಸಿದೆ.

ಸಮೀಕ್ಷೆ ಕೈಸೇರಿದ ನಂತರ ಕಟ್ಟಡಗಳ ತೆರವುಕಾರ್ಯ ಎಷ್ಟು ಚುರುಕಾಗಿ ನಡೆಯುತ್ತದೆ ಎಂಬುದು ಯಕ್ಷ ಪ್ರಶ್ನೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಲಕ್ಷಕ್ಕೂ ಅಧಿಕ ಕಟ್ಟಡಗಳಿವೆ. ವಾಸಯೋಗ್ಯವಲ್ಲದ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಪ್ರದರ್ಶಿಸದೇ ಹೋದರೆ ಈ ಸಮೀಕ್ಷೆಯೂ ಮತ್ತೊಂದು ವ್ಯರ್ಥ ಕಸರತ್ತು ಆಗಲಿದೆ.