Saturday, 14th December 2024

Buldozer break: ಬುಲ್ಡೋಜರ್‌ ನ್ಯಾಯಕ್ಕೆ ಬ್ರೇಕ್

ಉತ್ತರದ ರಾಜ್ಯಗಳಲ್ಲಿ ಇತ್ತೀಚೆಗೆ ಬುಲ್ಡೋಜರ್ ಸದ್ದು ಜೋರಾಗಿದೆ. ಆರೋಪಿಯೊಬ್ಬ ಹಲವು ಪ್ರಕರಣಗಳಲ್ಲಿ ಭಾಗಿಯಾದ ದೂರು ಬಂದರೆ ಅಥವಾ ಹೀನ ಅಪರಾಧ ಎಸಗಿದ್ದು ಕಂಡುಬಂದರೆ ಆತನನ್ನು ನ್ಯಾಯಾ ಲಯ ದೋಷಿ ಎಂದು ಪರಿಗಣಿಸುವ ಮೊದಲೇ ಆತನ ಮನೆ, ಮಳಿಗೆಗಳನ್ನು ಧ್ವಂಸಗೊಳಿಸುವ ಈ ಪ್ರಕ್ರಿಯೆ ಉತ್ತರಪ್ರದೇಶ, ಹರಿಯಾಣ, ಅಸ್ಸಾಂ, ಉತ್ತರಾಖಂಡ್, ಬಿಹಾರ,ರಾಜಸ್ತಾನ, ಮಧ್ಯಪ್ರದೇಶ, ಆಂಧ್ರ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಇತ್ತೀಚೆಗೆ ಚಾಲ್ತಿಯಲ್ಲಿದೆ.

ಇದೀಗ ಸುಪ್ರೀಕೋರ್ಟ್ ಆಡಳಿತ ವ್ಯವಸ್ಥೆಯ ಈ ನ್ಯಾಯ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಗಳಾದ ಮಾತ್ರಕ್ಕೆ ಅವರ ಮನೆಗಳನ್ನು ಕೆಡವಲು ಹೇಗೆ ಸಾಧ್ಯ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರ ಪೀಠ ಈ ಸಂಬಂಧ ರಾಷ್ಟ್ರ ಮಟ್ಟದಲ್ಲಿ ಮಾರ್ಗಸೂಚಿ ರೂಪಿಸಲು ನಿರ್ಧರಿಸಿ, ‘ಯಾವುದೇ
ಪ್ರಕರಣದಲ್ಲಿ ಒಬ್ಬ ವ್ಯಕ್ತಿ ತಪ್ಪಿತಸ್ಥನೆಂದು ಕಂಡುಬಂದರೂ, ಕಾನೂನು ರೀತಿಯಲ್ಲಿ ಮಾತ್ರ ಅವನಿಗೆ ಶಿಕ್ಷೆ ನೀಡಬೇಕು. ಅದು ಬಿಟ್ಟು ಆತನ ಮನೆ ಕೆಡಹುವುದಲ್ಲ. ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಬಗ್ಗೆ
ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ’ ಎಂದು ತಿಳಿಸಿದೆ. ನೆಲಸಮ ಕಾರ‍್ಯಾಚರಣೆ ಆರಂಭದಲ್ಲಿ ಉತ್ತರಪ್ರದೇಶದಲ್ಲಿ ಆರಂಭವಾಗಿತ್ತು.

ಕೊಲೆ, ಅತ್ಯಾಚಾರ, ಅಪಹರಣ, ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮನೆ ಮೇಲೆ ಯೋಗಿ ಆದಿತ್ಯನಾಥ್ ಸರಕಾರ ಬುಲ್ಡೋಜರ್ ಹತ್ತಿಸಿತ್ತು. ನಂತರ ಹಲವು ರಾಜ್ಯ ಸರಕಾರಗಳು ಅನುಕೂಲಕ್ಕೆ
ತಕ್ಕಂತೆ ಬುಲ್ಡೋಜರ್ ನೀತಿಯನ್ನು ಬಳಸಲಾರಂಭಿಸಿದವು. ಕಳೆದ ವರ್ಷ ಹರಿಯಾಣದಲ್ಲಿ ನಡೆದ ಘರ್ಷಣೆ ನಂತರ, ಗಲಭೆಕೋರರಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಅಧಿಕಾರಿಗಳು ಕೆಡವಿದ್ದರು. ಆರೋಪಿ
ಯನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸುವ ಮೊದಲೇ ಪೊಲೀಸರು, ಸ್ಥಳೀಯ ಅಧಿಕಾರಿಗಳು ಸೇರಿ ಆತನನ್ನು ದೋಷಿ ಎಂದು ಗುರುತಿಸಿ ಕ್ರಮಕ್ಕೆ ಮುಂದಾಗುವ ‘ಖಾಜಿ ನ್ಯಾಯ’ ಪ್ರಜಾಪ್ರಭುತ್ವಕ್ಕೆ
ತಕ್ಕುದ್ದಲ್ಲ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ.