Sunday, 15th December 2024

ಈ ಬರ್ಬರತೆ ಸಲ್ಲದು

ಈ ಬೇಸಗೆಯ ತಾಪದ ನಡುವೆ, ವಿವಿಧ ರೀತಿಯ ವಾದ ವಿವಾದಗಳು ಮಾಧ್ಯಮಗಳಲ್ಲಿ ಬಹುಚರ್ಚೆಗೆ ಒಳಗಾಗುತ್ತಿರುವ ಈ ಸಂದರ್ಭ
ದಲ್ಲಿ, ನಮ್ಮ ರಾಜ್ಯವೇ ಬೆಚ್ಚಿ ಬೀಳುವಂತಹ ಒಂದು ಸುದ್ದಿ ತಲ್ಲಣ ಹುಟ್ಟಿಸಿದೆ.

ಕೋಪಕ್ಕೆ ಒಳಗಾದ ತಂದೆಯೊಬ್ಬರು ತನ್ನ ಮಗನಿಗೆ ಬೆಂಕಿಹಚ್ಚಿದ್ದು, ಅದರಿಂದ ಸುಟ್ಟ ಗಾಯಗಳಿಗೊಳಗಾದ ಆ ದುರ್ದೈವಿ ಮಗನು ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟ ಸುದ್ದಿ ಅದು. ಪೊಲೀಸರಿಂದ ತನಿಖೆಗೆ ಒಳಪಟ್ಟಿರುವ ಈ ಪ್ರಕರಣದ ಪ್ರಾಥಮಿಕ ವಿವರ ಗಳನ್ನು ಮತ್ತು ಆರೋಪ ಗಳನ್ನು ಗಮನಿಸಿದರೆ, ನಾಗರಿಕ ಸಮಾಜವು ಎತ್ತ ಸಾಗಿದೆ ಎಂದು ಎಲ್ಲರೂ ಚಿಂತಿಸುವಂತಾಗಿದೆ.

ಸಿಸಿಟಿವಿಯಲ್ಲೂ ಸೆರೆಯಾಗಿರುವ ಈ ಘಟನೆ ಮತ್ತು ಹೊರಿಸಲಾಗಿರುವ ಆರೋಪವು ನಿಜವಾಗಿದ್ದ ಪಕ್ಷದಲ್ಲಿ, ಈ ವಿದ್ಯಮಾನವು ದಿಗ್ಭ್ರಮೆ ಹುಟ್ಟಿಸುವಂತಿದೆ. ಹಣಕಾಸಿನ ವ್ಯವಹಾರದಲ್ಲಿ ಉಂಟಾದ ವಾದವಿವಾದವು ತಂದೆಯ ಕೋಪಕ್ಕೆ ಕಾರಣವಾಗಿ, ತಂದೆಯು ಥಿನ್ನರ್ ದ್ರವವನ್ನು ಮಗನ ಮೇಲೆ ಎರಚಿ ಬೆಂಕಿ ಹಚ್ಚಿದ್ದಾರೆ ಎಂಬುದು ಆರೋಪ. ಮಗನ ಮೇಲೆ ಬೆಂಕಿ ಹಚ್ಚುವಂತಹ ಮಾನಸಿಕ ಸ್ಥಿತಿಯಲ್ಲಿರುವ ಆ ತಂದೆಯ ಕೃತ್ಯವನ್ನು ಯಾವ ರೀತಿ ಅರ್ಥೈಸಬಹುದು? ಬೆಂಗಳೂರಿನಂತಹ ಐಟಿ ರಾಜಧಾನಿಯಲ್ಲಿ ಇದೆಂತಹ ಬರ್ಬರತೆ? ಈಚಿನ ದಿನಗಳಲ್ಲಿ ಒಟ್ಟೂ ನಾಗರಿಕ ಸಮಾಜವು ಹೆಚ್ಚು ಹೆಚ್ಚು ಕ್ರೂರವಾಗುತ್ತಾ ಸಾಗಿದೆಯೆ ಎಂಬ ಅನುಮಾನ ಹಲವರಲ್ಲಿ ಹುಟ್ಟಿದರೆ ಅಚ್ಚರಿಯಿಲ್ಲ.

ಎರಡು ದಿನಗಳ ಮುಂಚೆ ನಡೆದ ಸಣ್ಣ ಅಪಘಾತವು ಕೊಲೆಯಲ್ಲಿ ಪರ್ಯಾವಸನಗೊಂಡ ವಿವರವೂ ಸಹ ಇಂತಹದೇ ಬೆಚ್ಚಿ ಬೀಳಿಸುವ ಘಟನೆ. ರಸ್ತೆಯಲ್ಲಿ ಚಲಿಸುವಾಗ ಪರಸ್ಪರ ತಾಗಿಸಿಕೊಂಡ ವಾಹನ ಸವಾರರಲ್ಲಿ ಒಬ್ಬನು, ತಕ್ಷಣ ಹರಿತವಾದ ಆಯುಧ ಹಿಡಿದು ಇನ್ನೊಬ್ಬನನ್ನು ಚುಚ್ಚಿ, ಸಾಯಿಸಿದ ವಿದ್ಯಮಾನವೂ ಸಹ ಇದೇ ರೀತಿ ಆವೇಶದಲ್ಲಿ ನಡೆದ ದುರ್ಘಟನೆ. ಸಣ್ಣ ಅಪಘಾತವು ಕೊಲೆಯಲ್ಲಿ ಪರ್ಯಾವಸನಗೊಳ್ಳುವಂತಹ ಮನಸ್ಥಿತಿಯನ್ನು ನಮ್ಮ ಜನರು ತಲುಪಿದ್ದಾರೆ ಎಂಬ ವಿಚಾರ ಸಹ ದಿಗ್ಭ್ರಮೆ ಹುಟ್ಟಿಸುವಂತಹದ್ದು.

ದಿನಗಳೆಂದತೆಲ್ಲಾ ಹೆಚ್ಚು ಹೆಚ್ಚು ಆಧುನಿಕ ಸವಲತ್ತುಗಳು ನಮ್ಮ ಸಮಾಜದ ನಾಗರಿಕರಿಗೆ ಲಭ್ಯವಾಗುತ್ತಿದ್ದರೂ, ಅದೇ ನಾಗರಿಕರು ಹೆಚ್ಚು ಹೆಚ್ಚು ಅನಾಗರಿಕ ಮನೋಭಾವವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಶಂಕೆಯನ್ನು ಇಂತಹ ಘಟನೆಗಳು ಹುಟ್ಟುಹಾಕಿವೆ.
ಇಂತಹದ್ದು ಆಗಬಾರದು.