Sunday, 15th December 2024

ಬಾಂಬ್ ಸ್ಪೋಟ; ರಾಜಕಾರಣ ಸಲ್ಲ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ಮೇಲೆ ಸಭೆಗಳನ್ನು ಮಾಡುತ್ತಿದ್ದಾರೆ. ಎಫ್ ಎಸ್‌ಎಲ್ ಟೀಂ, ಬಾಂಬ್ ಸ್ಕ್ವಾಡ್ ಮತ್ತು ಸಿಸಿಬಿ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.

ಏಳೆಂಟು ತಂಡಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಆರೋಪಿ ಕುರಿತು ಕೆಲವು ಸುಳಿವು ಸಿಕ್ಕಿವೆ. ಈ ಘಟನೆ ಹಿಂದೆ ಯಾರ ಕೈವಾಡವಿದೆ?
ಅವರ ಉದ್ದೇಶವೇನು ಎಂಬುದು ತಿಳಿಯಬೇಕಿದೆ. ಮುಂದೆ ಇಂಥ ಕೃತ್ಯ ಮಾಡಲು ಬೇರೆಯವರೂ ಭಯಪಡುವಂತೆ, ಆರೋಪಿಗೆ ಶಿಕ್ಷೆ ವಿಧಿಸಬೇಕಿದೆ.
ಈ ಪ್ರಕರಣವನ್ನು ಆದಷ್ಟು ಶೀಘ್ರ ತನಿಖೆ ಮಾಡಿ, ಅಪರಾಧಿಯನ್ನು ಹಾಗೂ ಈ ಸಂಚಿನ ಹಿಂದಿನ ರೂವಾರಿಗಳನ್ನು ಹೆಡೆಮುರಿ ಕಟ್ಟಲು ರಾಜ್ಯದ
ಪೊಲೀಸರ ಯಶಸ್ವಿಯಾಗಲಿದ್ದಾರೆ ಎಂಬ ನಂಬಿಕೆ ಇದೆ. ಈ ಪ್ರಕರಣವನ್ನು ಸಚಿವ ಸಂಪುಟದ ಯಾರೊಬ್ಬರೂ ಸಮರ್ಥಿಸಿಕೊಂಡಿಲ್ಲ. ಆದರೆ ಈ
ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಒತ್ತಾಯಿಸುವ ಮೂಲಕ ಪ್ರತಿಪಕ್ಷಗಳು ವಿನಾಕಾರಣ ರಾಜಕಾರಣಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ.

ಬ್ರ್ಯಾಂಡ್ ಬೆಂಗಳೂರು ಅಲ್ಲ, ಬಾಂಬ್ ಬೆಂಗಳೂರು ಎಂದು ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ನಾಲ್ಕು ಬಾರಿ ಬಾಂಬ್ ಸ್ಫೋಟ ಆಗಿದೆ. ಈ ಸೋಟ ರಾಜ್ಯ ಸರಕಾರದ ವೈಫಲ್ಯವೆಂದರೆ ಕೇಂದ್ರ ಸರಕಾರದ ಅಧೀನದಲ್ಲಿರುವ ಎನ್‌ಐಎ, ಗುಪ್ತಚರ ಇಲಾಖೆ, ಗೂಢಚಾರ ಸಂಸ್ಥೆ ‘ರಾ’ದ ವೈಫಲ್ಯವೂ ಅಲ್ಲವೇ? ಆದ್ದರಿಂದ ಇಂತಹ ಘಟನೆಗಳು ನಡೆದಾಗಿ ಯಾರೂ ರಾಜಕಾರಣ ಮಾಡಬಾರದು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದರೆ, ದುಷ್ಕರ್ಮಿಗಳು ಅದರ ಲಾಭ ಪಡೆಯುತ್ತಾರೆ. ನಿರ್ಭಯ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಬಹುದು. ಜನರು ನೆಮ್ಮದಿಯಿಂದ ಬದುಕು ಸಾಗಿಸಬಹುದು. ಆಡಳಿತ ಮತ್ತು ಪ್ರತಿಪಕ್ಷಗಳು ಅದಕ್ಕೆ ಅವಕಾಶ ಮಾಡಿಕೊಡಬೇಕು.