Monday, 11th November 2024

ತನಿಖಾ ಸಂಸ್ಥೆಗಳ ಮೇಲೆ ಅಪನಂಬಿಕೆ ಹುಟ್ಟಲು ಕಾರಣ ಯಾರು?

ಒಂದೆಡೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ
ಜಾರಿ ನಿರ್ದೇಶನಾಲಯ ಕೈಗೊಂಡಿರುವ ವಿಚಾರಣೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಲೇ ಇದೆ.

‘ಇದೊಂದು ದ್ವೇಷ ರಾಜಕಾರಣ, ಅಧಿಕಾರ ದುರುಪಯೋಗ, ಇ.ಡಿ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳು ಆಡಳಿತ ಪಕ್ಷ ಹೇಳಿದಂತೆ ಕುಣಿಯುತ್ತವೆ’ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಇನ್ನೊಂದೆಡೆ ಗುತ್ತಿಗೆದಾರ ಸಂತೋಷ್ ಪಾಟೀಲರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ದೊರೆತಿರುವುದನ್ನು ಕಾಂಗ್ರೆಸ್ ಪಕ್ಷವು ‘ಇದು ಉದ್ದೇಶಪೂರಿತ ಕ್ಲೀಟ್‌ಚಿಟ್, ಇಲ್ಲಿ ಸಚಿವರ, ಮುಖ್ಯಮಂತ್ರಿ ಗಳ ಪ್ರಭಾವ ಕೆಲಸ ಮಾಡಿದೆ’ ಎಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಕಾಂಗ್ರೆಸ್ ಪಕ್ಷದ ನಡೆ ತನಿಖಾ ಸಂಸ್ಥೆಗಳ ಮೇಲೆ ಸಾರ್ವಜನಿಕರಿಗೆ ಅನುಮಾನ ಹುಟ್ಟುವಂತೆ ಮಾಡಿದೆ.

ಹಾಗಾದರೆ ಈ ‘ಬಿ’ ರೀಪೋರ್ಟ್ ಮತ್ತು ಕ್ಲೀನ್‌ಚಿಟ್ ಪರಂಪರೆ ಶುರು ಮಾಡಿದ್ದು ಯಾರು? ಎಲ್ಲ ಪಕ್ಷಗಳ ಆಡಳಿತಾವಧಿ ಯಲ್ಲೂ ‘ಬಿ’ ರಿಪೋರ್ಟ್, ಕ್ಲೀನ್‌ಚಿಟ್ ನಡೆದೇ ಇದೆ. ಬಹುಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ಹೆಸರುವಾಸಿಯಾಗಿತ್ತು. ಎಷ್ಟರಮಟ್ಟಿಗೆ ಎಂದರೆ ಆಗ ಸಿಬಿಐ ಸಂಸ್ಥೆಯನ್ನು ಕಾಂಗ್ರೆಸ್ ಬ್ಯುರೊ ಆಫ್ ಇನ್ವೆಸ್ಟಿಗೇಷನ್ ಎಂದು ಕರೆಯಲಾಗುತ್ತಿತ್ತು. ಅಂದರೆ ವಿವಿಧ ತನಿಖಾ ಸಂಸ್ಥೆಗಳು ಬೇಕಾದವರನ್ನು ಕಾಪಾಡಲು, ಬೇಡದವರನ್ನು ಕಾಡಲು ಅಧಿಕಾರಸ್ಥರ ಬತ್ತಳಿಕೆಯಲ್ಲಿ ಲಭ್ಯವಿರುವ ಅಸಗಳಾಗಿವೆ.

ಎಲ್ಲರಿಗೂ ತಮ್ಮ ಅಧಿಕಾರಾವಧಿಯ ಸಾಂದರ್ಭಿಕ ಲಾಭ-ನಷ್ಟಗಳಷ್ಟೇ ಮುಖ್ಯವಾಗಿವೆ. ತನಿಖಾ ಸಂಸ್ಥೆಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಹರಣಕ್ಕೆ ಕಾರಣವಾಗುವ ಅಧಿಕಾರಸ್ಥರ ಹಸ್ತಕ್ಷೇಪದ ದೀರ್ಘಕಾಲೀನ ಪರಿಣಾಮದ ಬಗ್ಗೆ ಯಾರೂ
ಯೋಚಿಸುತ್ತಿಲ್ಲ. ಹೀಗಾಗಿ ತನಿಖಾ ಸಂಸ್ಥೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪನಂಬಿಕೆ ಹುಟ್ಟಿದೆ. ಇದರ ಪರಿಣಾಮವನ್ನು ತನಿಖಾ ಸಂಸ್ಥೆಗಳು ಎದುರಿಸುವುದಕ್ಕಿಂತ ಹೆಚ್ಚಾಗಿ ಅದರ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡುವವರೇ ಅನುಭವಿಸಿದ್ದಾರೆ, ಮುಂದೆಯೂ ಅನುಭವಿಸಬಹುದು.